ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಇಲಾಖೆ ಹಗರಣ: ಕ್ರಮಕ್ಕೆ ಆಗ್ರಹ

Last Updated 6 ನವೆಂಬರ್ 2017, 5:13 IST
ಅಕ್ಷರ ಗಾತ್ರ

ಆನೇಕಲ್‌: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿದ್ದ ಹಗರಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಕಾಲಹರಣ ಮಾಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಅವರು ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯಲ್ಲಿ ಕರ್ನಾಟಕ ಜನಪರ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೂನಿಟ್‌ಗೆ ₹3.50ರಂತೆ ಟೆಂಡರ್‌ ಮೂಲಕ ವಿದ್ಯುತ್ ಖರೀದಿಸಲಾಗಿತ್ತು. ನಂತರ ಅದೇ ಕಂಪೆನಿಯಿಂದ ಯೂನಿಟ್‌ಗೆ ₹5.70ರಂತೆ ಹೆಚ್ಚುವರಿ ಹಣನೀಡಿ ಖರೀದಿಸಲಾಗಿದೆ. ಪ್ರತಿ ಯೂನಿಟ್‌ಗೆ ₹2.20 ಹೆಚ್ಚುವರಿ ಹಣ ನೀಡಿದ್ದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ಸಂಬಂಧ ಎಲ್ಲಾ ದಾಖಲೆಗಳನ್ನು ನೀಡಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ ‘ಹೊಂದಾಣಿಕೆ ರಾಜಕಾರಣ ಮಾಡುವ ಪ್ರಮೇಯ ಜೆಡಿಎಸ್‌ಗೆ ಬಂದಿಲ್ಲ. ಕಳೆದ ಬಾರಿ ಸೋತರೂ ಚನ್ನಪಟ್ಟಣದಲ್ಲಿ ಈಗಲೂ ಪಕ್ಷ ಬಲಿಷ್ಠವಾಗಿದೆ ಎಂದು ತಿರುಗೇಟು ನೀಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ಸಂಸದ ಪುಟ್ಟರಾಜು, ಬಿಬಿಎಂಪಿ ನಾಮನಿರ್ದೇಶಿತ ಸದಸ್ಯ ಜಿ.ಆರ್.ಸುನೀಲ್‌ಕುಮಾರ್, ಕರ್ನಾಟಕ ಜನಪರ ರಕ್ಷಣಾ ವೇದಿಕೆಯ ಅಧ್ಯಕ್ಷ ಭಾಸ್ಕರ್‌ ಹಳ್ಳಿಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಘವೇಂದ್ರ ಹಾಜರಿದ್ದರು.

ರಾಜ್ಯೋತ್ಸವದಲ್ಲಿ ಜನಪದ ಕಲಾತಂಡಗಳು ಕಲಾ ಪ್ರದರ್ಶನ ಮಾಡಿದವು. ಅನ್ಯಭಾಷಿಕರೂ ಪಾಲ್ಗೊಂಡು ಕನ್ನಡ ಪ್ರೇಮ ಮೆರೆದರು. ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಅನ್ಯಭಾಷಿಕರಿಗು ಕನ್ನಡ ಕಲಿಸುವ ಮೂಲಕ ರಾಜ್ಯೋತ್ಸವವನ್ನು ಅರ್ಥ ಪೂರ್ಣ ಮಾಡಬೇಕು. ನೆಲೆ ಜಲ ವಿಷಯ ದಲ್ಲಿ ನಾಡಿನ ಸಮಸ್ತ ಜನತೆ ಹೋರಾಟ ಮಾಡಿ ಅಭಿವೃದ್ಧಿಗೆ ಪಣತೊಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT