ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಮಹಾರಥೋತ್ಸವಕ್ಕೆ ಕ್ಷಣಗಣನೆ

Last Updated 6 ನವೆಂಬರ್ 2017, 5:15 IST
ಅಕ್ಷರ ಗಾತ್ರ

ಬೈಲಹೊಂಗಲ: ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಬೈಲಹೊಂಗಲ ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 6ರಿಂದ 10ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ದೇವಸ್ಥಾನ ಆವರಣದಲ್ಲಿ ಸಂಭ್ರಮ ಮನೆ ಮಾಡಿದೆ.
ದೇವಸ್ಥಾನಕ್ಕೆ ಸುಣ್ಣ ಬಣ್ಣ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರದಿಂದ ದೇಗುಲ ಕಂಗೊಳಿಸುತ್ತಿದೆ.

ಸುತ್ತಮುತ್ತ ಹಾಕಿರುವ ಆಟಿಕೆಗಳ ಅಂಗಡಿಗಳು, ಉಯ್ಯಾಲೆಗಳು ಜನರನ್ನು ಆಕರ್ಷಿಸುತ್ತಿವೆ. ಮರಡಿ ಬಸವೇಶ್ವರನ ಮಹಾರಥೋತ್ಸವ ಎಳೆಯಲು ಭಕ್ತರು ಕಾತರದಿಂದ್ದಾರೆ.
ಐದು ದಿನಗಳವರೆಗೆ ನಡೆಯುವ ಜಾತ್ರೆಯಲ್ಲಿ ಮೊದಲ ದಿನದ ಮಹಾರಥೋತ್ಸವ ಎಲ್ಲರ ಕೇಂದ್ರ ಬಿಂದು. ಸರ್ವಧರ್ಮೀಯರೂ ಸಾವಿರಾರು ಸಂಖ್ಯೆಯಲ್ಲಿ ಸೇರಿ ರಥೋತ್ಸವದಲ್ಲಿ ಭಾಗಿಯಾಗಿ ಬಸವೇಶ್ವರನಿಗೆ ನಮಿಸುತ್ತಾರೆ.

ಜಾತ್ರೆಯ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಗುರು ಬಸವಣ್ಣ, ಶರಣೆ ನೀಲಮ್ಮ ತಾಯಿ ಮತ್ತು ವಚನ ಸಾಹಿತ್ಯ ಗ್ರಂಥವನ್ನು ರಥದಲ್ಲಿಟ್ಟು ಎಳೆಯುವುದು ಇಲ್ಲಿನ ವಾಡಿಕೆ. ಪ್ರಸಿದ್ಧ ಪೈಲ್ವಾನರ ಜಂಗಿ ನಿಕಾಲಿ ಕುಸ್ತಿ, ಚಕ್ಕಡಿ ಶರ್ಯತ್ತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸುತ್ತವೆ. ಸುಪ್ರಸಿದ್ಧ ‘ಸಂಗ್ಯಾಬಾಳ್ಯಾ’ ನಾಟಕದ ಪ್ರದರ್ಶನವೂ ಇದೆ.

ದೇವಸ್ಥಾನದ ಇತಿಹಾಸ: ವಚನ ಸಾಹಿತ್ಯ ರಕ್ಷಣೆ ಮಾಡುವುದಕ್ಕಾಗಿ 12ನೇ ಶತಮಾನದಲ್ಲಿ ಕಲ್ಯಾಣ ತೊರೆದು ಛಿದ್ರವಾದ ಶರಣರಲ್ಲಿ, ಚನ್ನಬಸವಣ್ಣನವರ ನೇತೃತ್ವದ ಶರಣರ ತಂಡ ಬೈಲಹೊಂಗಲ ಹೊರವಲಯದ ಮರಡಿಯಲ್ಲಿ ಬಂದು ವಾಸ್ತವ್ಯ ಹೂಡಿತ್ತು ಎಂದು ಹೇಳುತ್ತಾರೆ ಹಿರಿಯರು. ಆಗ 15 ದಿನಗಳ ಕಾಲ ತಂಗಿ ಅನುಸ್ಠಾನ ದಾಸೋಹ ಮಾಡಿದ ಶರಣದಿಂದ ಮರಡಿಯು ಪಾವನ ಕ್ಷೇತ್ರವಾಗಿ ಬೆಳೆಯಿತು.

ಅಂದಿನಿಂದ ಇಲ್ಲಿವರೆಗೆ ಮರಡಿ ಬಸವೇಶ್ವರ ದೇವಸ್ಥಾನವಾಗಿ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟಿದೆ. ಜಾತ್ರೆ ಮುನ್ನಾ ದಿನ ರುದ್ರ ಊಟ ಮಾಡುವುದರಿಂದ ರೋಗರುಜಿನಗಳು ಪರಿಹಾರವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ದೇವಸ್ಥಾನದ ಧರ್ಮದರ್ಶಿ ಗಂಗಪ್ಪ ಬೋಳಣ್ಣವರ, ವರ್ತಿಸಿದ್ಧ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಮಲಕಾಜಪ್ಪ ಕೋತಂಬ್ರಿ, ಬಸವಪ್ರಭು ಬೆಳಗಾವಿ, ಕೊಪ್ಪದ, ಹೋಟಿ, ಹೊಸೂರ, ಕೋತಂಬ್ರಿ ಕುಟುಂಬದವರು ಜಾತ್ರೆಯ ಯಶಸ್ಸಿಗೆ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ರವಿ ಎಂ. ಹುಲಕುಂದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT