ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಧಾನ್ಯ ಸ್ವಚ್ಛತೆ:ಸಂಚಾರಕ್ಕೆ ಸಮಸ್ಯೆ

Last Updated 6 ನವೆಂಬರ್ 2017, 5:36 IST
ಅಕ್ಷರ ಗಾತ್ರ

ಬೀದರ್: ನಗರದ ಗಾಂಧಿಗಂಜ್‌ನಲ್ಲಿ ರಸ್ತೆ ಮೇಲೆಯೇ ಧಾನ್ಯಗಳನ್ನು ಗುಡ್ಡೆ ಹಾಕಿ ಸ್ವಚ್ಛಗೊಳಿಸುತ್ತಿರುವ ಕಾರಣ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆ ಆಗಿರುವ ಕಾರಣ ವಿವಿಧೆಡೆಯಿಂದ ರೈತರು ವಾಹನಗಳಲ್ಲಿ ಆಹಾರ ಧಾನ್ಯಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡುತ್ತಾರೆ. ಆದರೆ, ಅಡತ್ ಅಂಗಡಿಯವರು ರಸ್ತೆ ಮೇಲೆ ರಾಶಿ ರಾಶಿ ಧಾನ್ಯ ಸ್ವಚ್ಛಗೊಳಿಸುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.

‘ ವಾಹನಗಳಲ್ಲಿ ಆಹಾರಧಾನ್ಯ ತುಂಬಿಕೊಂಡು ಬರುವ ರೈತರು ತಮಗೆ ಬೇಕಾದ ಅಂಗಡಿಗಳನ್ನು ತಲುಪಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಹಿಂದೆ–ಮುಂದೆ ಸಾಗಲು ಆಗದೆ ಗಂಟೆಗಟ್ಟಲೆ ಒಂದೆಡೆ ನಿಲ್ಲಬೇಕಾಗಿದೆ ’ ಎಂದು ರೈತ ಚಂದ್ರಕಾಂತ ದೂರುತ್ತಾರೆ.

‘ಅಂಗಡಿಯವರು ರೈತರಿಂದ ಖರೀದಿಸಿದ ಧಾನ್ಯಗಳನ್ನು ಆಯಾ ಅಂಗಡಿಗಳಲ್ಲೇ ಶೇಖರಿಸಿ ಸ್ವಚ್ಛ ಮಾಡಿಕೊಳ್ಳಬೇಕು. ರಸ್ತೆ ಮೇಲೆ ಕಾಳು ಸುರಿದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ಸರಿಯಲ್ಲ. ಇಲ್ಲಿ ಜಾತಿಗಳ ಹೆಸರಲ್ಲಿ ಗುಂಪುಗಳು ಸೃಷ್ಟಿ ಆಗಿವೆ. ವೈಯಕ್ತಿಕ ಲಾಭಕ್ಕಾಗಿ ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ’ ಎಂದು ಹೇಳುತ್ತಾರೆ.

‘ಗಾಂಧಿಗಂಜ್‌ ಮಾರುಕಟ್ಟೆ ಪ್ರವೇಶಿಸಲು ನಾಲ್ಕು ಮಾರ್ಗಗಳಿವೆ. ಯಾವ ಮಾರ್ಗದಲ್ಲಿ ಹೋದರೂ ಇದೇ ಸಮಸ್ಯೆ ಇದೆ. ಕೆಲವರು ವಾಹನಗಳನ್ನು ಅಂಗಡಿಗಳ ಮುಂದೆ ನಿಲ್ಲಿಸುತ್ತಾರೆ. ವಾಹನ ಸಂಚಾರ ದಟ್ಟಣೆ ಹೆಚ್ಚಾದರೂ ಶೆಡ್‌ ಒಳಗಡೆ ತಮ್ಮ ವಾಹನಗಳನ್ನು ನಿಲ್ಲಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಗಾಂಧಿಗಂಜ್‌ನಲ್ಲಿ 200 ಅಧಿಕೃತ ಏಜೆಂಟರು ಇದ್ದಾರೆ. ಒಟ್ಟು 420 ಅಂಗಡಿಗಳಿವೆ. ಅಡತ್ ವ್ಯಾಪಾರಿಗಳು ರೈತರಿಂದ ಖರೀದಿಸಿದ ಆಹಾರಧಾನ್ಯಗಳನ್ನು ತಮ್ಮ ಅಂಗಡಿಯೊಳಗೆ ಇಟ್ಟುಕೊಂಡರೆ ಯಾವುದೇ ಸಮಸ್ಯೆ ಇರದು. ಕೊನೆಯ ಅಂಚಿನಲ್ಲಿರುವ ಏಜೆಂಟರ ಅಂಗಡಿಗೆ ರೈತರು ಹೋಗದಿರಲಿ ಎನ್ನುವ ದುರುದ್ದೇಶದಿಂದ ಕೆಲವರು ಸಂಚಾರಕ್ಕೆ ತಡೆ ಉಂಟು ಮಾಡುತ್ತಿದ್ದಾರೆ’ ಎಂದು ಕೆಲ ವ್ಯಾಪಾರಸ್ಥರು ಆರೋಪಿಸುತ್ತಾರೆ.

‘ನಿಯಮ ಉಲ್ಲಂಘನೆ ಮಾಡಿದ ಅನೇಕ ಏಜೆಂಟರಿಗೆ ನೋಟಿಸ್‌ ನೀಡಲಾಗಿದೆ. ಗಂಜ್‌ನಲ್ಲಿ ಸಂಚಾರ ಒತ್ತಡ ನಿಯಂತ್ರಿಸಲು 29 ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಗಾರ್ಡ್‌ಗಳು ತಾಕೀತು ಮಾಡಿ ಬಂದರೂ ಕೆಲವರು ರಸ್ತೆ ಮೇಲೆ ಕಾಳು ಸುರಿಯುತ್ತಿದ್ದಾರೆ. ಸಿಮೆಂಟ್‌ ರಸ್ತೆ ನಿರ್ಮಾಣ ಮಾಡುವ ಮುಂಚೆ ಅಂಗಡಿಗಳಲ್ಲೇ ಧಾನ್ಯ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದರು. ಈಗ ಕೆಲವರು ಸೌಲಭ್ಯದ ದುರುಪಯೋಗ ಪಡೆಯುತ್ತಿದ್ದಾರೆ’ ಎಂದು ಎಪಿಎಂಸಿ ಕಾರ್ಯದರ್ಶಿ ಶಿವಶರಣಪ್ಪ ಮಜಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಏಜೆಂಟರ ಲೈಸನ್ಸ್‌ ರದ್ದು ಮಾಡುವುದು ಅಥವಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದು ನಮಗೆ ಉಳಿದಿರುವ ದಾರಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಶೀಘ್ರ ಪತ್ರ ಬರೆಯಲಾಗುವುದು’ ಎನ್ನುತ್ತಾರೆ ಅವರು.

‘ಸಂಚಾರ ದಟ್ಟಣೆ ಉಂಟು ಮಾಡಿದರೆ ಅನಾನುಕೂಲ ಹೆಚ್ಚು. ಎಲ್ಲ ವ್ಯಾಪಾರಿಗಳ ಸಭೆ ಕರೆದು ತಿಳಿವಳಿಕೆ ನೀಡಲಾಗುವುದು. ರಸ್ತೆ ಮಧ್ಯೆ ವ್ಯಾಪಾರಿಗಳು ಧಾನ್ಯ ರಾಶಿ ಸಂಗ್ರಹ ಮಾಡದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT