ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಸರ್ಕಾರಿ ಪ್ರೌಢಶಾಲೆ

Last Updated 6 ನವೆಂಬರ್ 2017, 5:45 IST
ಅಕ್ಷರ ಗಾತ್ರ

ಯಳಂದೂರು: ಶಾಲಾ ಆವರಣದಲ್ಲಿ ಹಳ್ಳಬಿದ್ದ ಮೈದಾನ, ಆರ್ಧಕ್ಕೆ ನಿಂತಿರುವ ಕಟ್ಟಡ ಕಾಮಗಾರಿ, ಮಳೆಗಾಲದಲ್ಲಿ ತುಂಬುವ ನೀರ ನಡುವೆ ಶಾಲೆಗೆ ಮಕ್ಕಳು ತೆರಳಬೇಕಾದ ಪರಿಸ್ಥಿತಿ, ಇಲ್ಲಿನ ಹೊಂಡದಲ್ಲಿ ಹೊರಳಾಡುವ ಎಮ್ಮೆಗಳು, ಆಟ ಮತ್ತು ಪಾಠಕ್ಕಾಗಿ ಆಶ್ರಯಿಸಬೇಕಾದ ವಿದ್ಯಾರ್ಥಿಗಳ ಪರಿಸ್ಥಿತಿ..,

ಇವು ತಾಲ್ಲೂಕಿನ ಮದ್ದೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರಸ್ತುತ ಸ್ಥಿತಿ. ಗ್ರಾಮದ ರಾಷ್ಟ್ರೀಯ ಹೆದ್ದಾರಿ 209ರ ಬಳಿ ಇರುವ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿ ಪ್ರೌಢಶಾಲೆ ನಿರ್ಮಾಣಕ್ಕೆ, ಆರ್ಐಡಿಎಫ್ ಯೋಜನೆಯಡಿ 2017-08ನೇ ಸಾಲಿನಲ್ಲಿ ₹ 20 ಲಕ್ಷ ಮಂಜೂರು ಮಾಡಲಾಗಿತ್ತು. ಆದರೆ, ಇಲ್ಲಿ ಗುರುತಿಸಿರುವ ಸ್ಥಳ ಮುಸ್ಲಿಮರ ಸ್ಮಶಾನವಾಗಿತ್ತು ಎಂಬ ಹಿನ್ನೆಲೆಯಲ್ಲಿ ವಿವಾದ ಸುತ್ತಿಕೊಂಡಿತ್ತು. ನಂತರ 2014-15 ನೇ ಸಾಲಿನಲ್ಲಿ ಸಮಸ್ಯೆ ಬಗೆಹರಿದು ಶಾಲೆಗೆ 27 ಗುಂಟೆ ಜಾಗವನ್ನು ನೀಡಲಾಯಿತು.

‘ನಾಲ್ಕು ಕೊಠಡಿಗಳ ಕಾಮಗಾರಿ ಆರಂಭವಾದರೂ, ನಿಗಧಿಯಾಗಿದ್ದ ಹಣದಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ 110 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಹಾಲಿ ಇರುವ 3 ಕೊಠಡಿಗಳಲ್ಲಿ ಮುಖ್ಯಶಿಕ್ಷಕ, ಸಿಬ್ಬಂದಿ ಕಚೇರಿ, ವಾಚನಾಲಯ ಹಾಗೂ ತರಗತಿಗಳನ್ನು ನಡೆಸುವ ಅನಿವಾರ್ಯತೆ ಇದೆ. ಕೆಲಸ ಪೂರ್ಣಗೊಳಿಸಲು ಸಂಸದ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ ಎಂದು ಪೋಷಕ ಸೋಮಣ್ಣ, ಚಕ್ರವರ್ತಿ ದೂರುತ್ತಾರೆ.

ಸುತ್ತು ಗೋಡೆ ಇಲ್ಲ. ಹಾಗಾಗಿ, ಮೈದಾನದ ತುಂಬಾ ಹಳ್ಳಕೊಳ್ಳಗಳಿದ್ದು ಮಳೆ ಬಂದರೆ ನೀರು ನಿಲ್ಲುತ್ತದೆ. ಅಲ್ಲೇ ಅಡ್ಡಾಡುವ ರಾಸುಗಳು ವಿರಮಿಸುತ್ತವೆ. ರಾತ್ರಿ ವೇಳೆ ಕೆಲ ದುಷ್ಕರ್ಮಿಗಳು ಅನೈತಿಕ ಚಟುವಟಿಕೆಗಳಿಗೂ ಶಾಲಾ ಕೊಠಡಿಗಳನ್ನು ಬಳಸಿಕೊಳ್ಳುತ್ತಾರೆ ಎಂಬುದು ಗ್ರಾಮಸ್ಥರ ಆರೋಪ.

ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದಲ್ಲಿ ಪ್ರೌಢಶಾಲೆಯೂ ನಡೆಯುತ್ತಿತ್ತು. ಆದರೆ ಈಗಿರುವ 3 ಕೊಠಡಿಗಳಲ್ಲೇ ಶಾಲೆ ನಡೆಯುತ್ತಿದ್ದು ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. 4 ಕೊಠಡಿಗಳ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಸಿ. ಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದ್ದೂರು ಶಾಲೆಗೆ ಅನುದಾನದ ಕೊರತೆ ಇರುವ ಮಾಹಿತಿ ಈಗ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ವಿಧಾನ ಪರಿಷತ್ತಿನ ಅನುದಾನ ನೀಡುವ ಮೂಲಕ ಶಾಲಾ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT