ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರ ಆದಾಯಕ್ಕೆ ಪೆಟ್ಟು

Last Updated 30 ಆಗಸ್ಟ್ 2019, 19:01 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಚಿತ್ರಮಂದಿರಗಳಲ್ಲಿ ಬರೀ ಕನ್ನಡ ಸಿನಿಮಾ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಜಿಲ್ಲಾಡಳಿತದ ಆದೇಶದ ಚಿತ್ರಮಂದಿರಗಳ ಆದಾಯಕ್ಕೆ ಭಾರಿ ಹೊಡೆತ ಕೊಟ್ಟಿದೆ. ಗಡಿಭಾಗದ ಈ ಜಿಲ್ಲೆಯಲ್ಲಿ ವರ್ಷಪೂರ್ತಿ ಪೈಪೋಟಿಯಲ್ಲಿ ದಾಂಗುಡಿ ಇಡುವ ತೆಲುಗು ಚಿತ್ರಗಳಿಗೆ ನವೆಂಬರ್‌ ಬರುತ್ತಿದ್ದಂತೆ ಜಾಗೃತಗೊಳ್ಳುವ ಕನ್ನಡದ ‘ಪ್ರಜ್ಞೆ’ ಒಂದು ತಿಂಗಳು ತಡೆ ಒಡ್ಡುತ್ತದೆ.

ಆದರೆ ಈ ಬಲವಂತದ ನಿರ್ಬಂಧಕ್ಕೆ ತೆಲುಗು ಸಿನಿಮಾ ಪ್ರಿಯರು ಬೇಸರಗೊಳ್ಳುತ್ತಿದ್ದಾರೆ ವಿನಾ ಕನ್ನಡಿಗರು ಅಭಿಮಾನವಿಟ್ಟು ಕನ್ನಡ ಚಿತ್ರಗಳನ್ನು ವೀಕ್ಷಿಸಲು ಚಿತ್ರಮಂದಿರಗಳತ್ತ ಇಣುಕಿ ಕೂಡ ನೋಡುತ್ತಿಲ್ಲ. ಪರಿಣಾಮ, ತೆಲುಗು ಚಿತ್ರಗಳಿಗೆ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರಗಳನ್ನು ಇವತ್ತು ಇಣುಕಿದರೆ ಬರೀ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ.

ಪ್ರೇಕ್ಷಕರ ‘ಬರ’ದಿಂದಾಗಿ ನಿತ್ಯದ ನಾಲ್ಕು ಆಟಗಳ ಪೈಕಿ ಎರಡು ಪ್ರದರ್ಶನಗಳು ಅನಿವಾರ್ಯವಾಗಿ ರದ್ದಾಗುತ್ತಿವೆ. ಚಿತ್ರಕ್ಕೆ ಹಾಕಿದ ಬಂಡವಾಳ ಕೂಡ ನಮಗೆ ಹಿಂತಿರುಗಿಲ್ಲ ಎನ್ನುವ ನೋವನ್ನು ನಗರದಲ್ಲಿರುವ ಬಾಲಾಜಿ, ವಾಣಿ ಮತ್ತು ಕೃಷ್ಣಾ ಥೇಟರ್‌ ಮಾಲೀಕರು, ಸಿಬ್ಬಂದಿ ತೋಡಿಕೊಳ್ಳುತ್ತಾರೆ. ‘ನಾವೂ ಕನ್ನಡಿಗರೇ, ನಮ್ಮಲ್ಲಿ ಭಾಷಾಭಿಮಾನಕ್ಕೇನು ಕೊರತೆ ಇಲ್ಲ. ಹಾಗಾಗಿಯೇ ನಾವು ತೆಲುಗು ಚಿತ್ರಗಳ ಜತೆ ಜತೆಗೆ ಕನ್ನಡ ಚಿತ್ರಗಳನ್ನು ಕೂಡ ಪ್ರದರ್ಶಿಸುತ್ತ ಬಂದಿದ್ದೇವೆ.

ನಮ್ಮ ಥೇಟರ್‌ನಲ್ಲಿ ವರ್ಷದಲ್ಲಿ 24 ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದ್ದೇವೆ. ಆದರೆ ಇವತ್ತು ತೆಲುಗು ಚಿತ್ರಗಳಿಲ್ಲ ಎನ್ನುವ ಏಕೈಕ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ. ಇದರಿಂದ ನಾವು ನಷ್ಟ ಅನುಭವಿಸುವಂತಾಗಿದೆ’ ಎಂದು ಬಾಲಾಜಿ ಚಿತ್ರಮಂದಿರದ ವ್ಯವಸ್ಥಾಪಕ ವೇಣುಗೋಪಾಲ್ ಅಳಲು ತೋಡಿಕೊಂಡರು.

‘ನಮ್ಮಲ್ಲಿ ನಿತ್ಯ ನಾಲ್ಕು ಆಟಗಳನ್ನು ಪ್ರದರ್ಶಿಸಲಾಗುತ್ತದೆ. ಈ ತಿಂಗಳಲ್ಲಿ ಪ್ರೇಕ್ಷಕರಿಲ್ಲದ ಕಾರಣಕ್ಕೆ ಎರಡು ಆಟಗಳು ಮಾತ್ರ ನಡೆಯುತ್ತಿವೆ. 630 ಆಸನಗಳಿವೆ. ಆ ಪೈಕಿ ಇವತ್ತು 30 ಆಸನಗಳು ಕೂಡ ಭರ್ತಿಯಾಗುತ್ತಿಲ್ಲ. ಕಾನೂನು ಎಂದರೆ ಎಲ್ಲರಿಗೂ ಒಂದೇ ಇರಬೇಕು ತಾನೆ? ಆದರೆ ಚಿಂತಾಮಣಿ, ಗೌರಿಬಿದನೂರು, ನೆರೆಯ ವಿಜಯಪುರದಲ್ಲಿ ತೆಲುಗು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಇದು ಅನ್ಯಾಯವಲ್ಲವೇ’ ಎಂದು ಪ್ರಶ್ನಿಸಿದರು.

‘ನವೆಂಬರ್‌ನಲ್ಲಿ ಕನ್ನಡ ಚಿತ್ರಗಳಷ್ಟೇ ಕಡ್ಡಾಯವಾಗಿ ಪ್ರದರ್ಶನಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ಬೊಬ್ಬೆ ಹಾಕುತ್ತವೆ. ಇದನ್ನು ಒಪ್ಪೋಣ. ಆದರೆ ಇವತ್ತು ಅದೇ ಸಂಘಟನೆಗಳ ಎಷ್ಟು ಕಾರ್ಯಕರ್ತರು ಕನ್ನಡಾಭಿಮಾನದಿಂದ ಥೇಟರ್‌ಗಳಿಗೆ ಬಂದು ಚಿತ್ರ ನೋಡಿದ್ದಾರೆ ಕೇಳಿ ನೋಡಿ. ಇವತ್ತು ನಾವು ಅನುಭವಿಸುತ್ತಿರುವ ನಷ್ಟವನ್ನು ಯಾರು ಭರಿಸುತ್ತಾರೆ’ ಎಂದು ಬೇಸರದಿಂದಲೇ ಕೇಳಿದರು.

‘ತೆಲಗು ಚಿತ್ರ ಎಂದರೇ ಸಾಕು ಚಿತ್ರಮಂದಿರದ ಆವರಣದಲ್ಲಿ ವಾಹನಗಳು ತುಂಬಿ ತುಳುಕುತ್ತಿರುತ್ತವೆ. ಈಗ ನೋಡಿ ಥೇಟರ್‌ ಭಣಗುಡುತ್ತದೆ. ಪ್ರತಿ ನವೆಂಬರ್‌ನಲ್ಲೂ ಇದೇ ಪರಿಸ್ಥಿತಿ. ಇದಕ್ಕೆ ನಾವು ಹೊಣೆಯೇ? ಇದೆಲ್ಲ ಯಾವ ಪುರುಷಾರ್ಥಕ್ಕೆ. ಹೀಗಾದರೆ ನಮ್ಮ ಬಂಡವಾಳ ಯಾರು ವಾಪಸ್‌ ಕೊಡುತ್ತಾರೆ’ ಎಂದು ಕೃಷ್ಣ ಚಿತ್ರಮಂದಿರದ ಟಿಕೆಟ್‌ ವಿತರಕ ಸುಬ್ರಮಣ್ಯ ಪ್ರಶ್ನಿಸಿದರು.

‘ಬೆಳಗಿನ ಆಟಕ್ಕೆ ಕೇವಲ 11, ಎರಡನೇ ಆಟಕ್ಕೆ ಬರೀ 14 ಜನರಿದ್ದರು. ನಿತ್ಯ ನಮಗೆ ಸುಮಾರು ₹ 10 ಸಾವಿರ ಖರ್ಚಿದೆ. 10 ಪ್ರೇಕ್ಷಕರೂ ಬರದಿದ್ದರೆ ನಾವು ಎಲ್ಲಿ ಹೋಗೋಣ? ಚಿತ್ರಮಂದಿರ ಬಾಗಿಲು ಹಾಕಬೇಕಾಗುತ್ತದೆ. ಪ್ರೇಕ್ಷಕರ ಇಷ್ಟವನ್ನು ನಾವು ಗೌರವಿಸಬೇಕೆ ವಿನಾ ಬಲವಂತದಿಂದ ಕನ್ನಡಾಭಿಮಾನ ಬೆಳೆಸುತ್ತೇವೆ ಎನ್ನುವುದು ಒಪ್ಪಲಾಗದು’ ಎಂದು ಹೇಳಿದರು.

‘ಇವತ್ತು ನಗರದವರು ಥೇಟರ್‌ಗಳತ್ತ ತಲೆ ಹಾಕುತ್ತಿಲ್ಲ. ಹಳ್ಳಿಯ ಜನರಿಂದಲೇ ಚಿತ್ರಮಂದಿರಗಳು ಉಸಿರು ಹಿಡಿದಿರುವುದು. ಅದರಲ್ಲೂ ಹೀಗೆ ಮಾಡಿದರೆ ನಮ್ಮ ಗತಿ ಏನು? ಇಂತಹ ಹೊತ್ತಿನಲ್ಲಿ ಕನ್ನಡಪರ ಸಂಘಟನೆಗಳು ಕನ್ನಡದ ಪ್ರೇಕ್ಷಕರನ್ನಾದರೂ ಚಿತ್ರಮಂದಿರಕ್ಕೆ ಕರೆ ತರುವ ಕೆಲಸ ಮಾಡಿದರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಆ ಬಗ್ಗೆ ಯಾರು ಚಕಾರ ಎತ್ತುವುದಿಲ್ಲ’ ಎಂದು ದೂರಿದರು.

‘ಕನ್ನಡ ಕಡ್ಡಾಯಕ್ಕೆ ನಮ್ಮದೇನು ಅಭ್ಯಂತರವಿಲ್ಲ. ವರ್ಷಕ್ಕೆ 12 ವಾರ ಕನ್ನಡ ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಬೇಕು ಎಂಬ ಕಡ್ಡಾಯ ನಿಯಮವಿದೆ. ಅದನ್ನು ಪಾಲಿಸಿದ್ದೇವೆ. ಆದರೆ ನಮಗೆ ಈಗಾಗುವ ನಷ್ಟವನ್ನು ಯಾರು ಬರಿಸುತ್ತಾರೆ’ ಎಂದು ವಾಣಿ ಚಿತ್ರಮಂದಿರದ ವ್ಯವಸ್ಥಾಪಕ ನಾರಾಯಣಸ್ವಾಮಿ ಪ್ರಶ್ನಿಸುತ್ತಾರೆ.
–ಕೆಂಪೇಗೌಡ ಎನ್‌.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT