ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸಾರಿಗೆ ಸಂಸ್ಥೆಗೆ ವಿಶ್ವದಲ್ಲೇ 2ನೇ ಸ್ಥಾನ

Last Updated 6 ನವೆಂಬರ್ 2017, 5:59 IST
ಅಕ್ಷರ ಗಾತ್ರ

ಹೊಸದುರ್ಗ: ‘ರಾಜ್ಯದ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಪ್ರಪಂಚದ ಸಾರಿಗೆ ವ್ಯವಸ್ಥೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ 2ನೇ ಸ್ಥಾನದಲ್ಲಿದೆ’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು. ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರಿಗೆ ಸಚಿವನಾಗಿ ಈ ಕಾರ್ಯದಲ್ಲಿ ನಾನು ಭಾಗಿಯಾಗಲು ಶಾಸಕ ಬಿ.ಜಿ.ಗೋವಿಂದಪ್ಪ ಕಾರಣರಾಗಿದ್ದಾರೆ. ಇಲ್ಲಿ ಡಿಪೊ ಹಾಗೂ ಬಸ್‌ನಿಲ್ದಾಣ ನಿರ್ಮಾಣಕ್ಕೆ ನಮ್ಮ ಸರ್ಕಾರ ₹ 10 ಕೋಟಿ ಅನುದಾನ ನೀಡಿದೆ. ತಾಲ್ಲೂಕಿನ 125 ಹಳ್ಳಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಮೂರು ತಿಂಗಳ ಒಳಗೆ ಇನ್ನೂ 25 ಹೊಸ ಬಸ್‌ ಮಾರ್ಗ ರೂಪಿಸಲಾಗುವುದು. ಇಲ್ಲಿಂದ ಬೆಂಗಳೂರು, ಶ್ರವಣಬೆಳಗೊಳ, ಮಣಿಪಾಲಕ್ಕೆ ರಾಜಹಂಸ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಸಾರಿಗೆ ವಿಭಾಗ ಸ್ಥಾಪಿಸಲು ಕನಿಷ್ಠ ನಾಲ್ಕು ಘಟಕಗಳು ಇರಬೇಕು. ಜಿಲ್ಲೆಯ ಜನರ ಬೇಡಿಕೆಯಂತೆ ಚಿತ್ರದುರ್ಗ ಸಾರಿಗೆ ವಿಭಾಗ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕೆಲವೇ ತಿಂಗಳಲ್ಲಿ ನಾನೇ ಬಂದು ಈ ವಿಭಾಗ ಉದ್ಘಾಟಿಸುತ್ತೇನೆ.

ಸಿದ್ದರಾಮಯ್ಯ ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ಜನಸ್ನೇಹಿ ಮಾಡಲು ಸಾಕಷ್ಟು ಅನುದಾನ ಬಳಕೆ ಮಾಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ನಮ್ಮ ಸರ್ಕಾರ ₹ 1,200 ಕೋಟಿ ಖರ್ಚು ಮಾಡಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಜಿ.ಗೋವಿಂದಪ್ಪ, ‘ಬಸ್‌ ಡಿಪೊ ಹಾಗೂ ನಿಲ್ದಾಣ ಉದ್ಘಾಟನೆಯೊಂದಿಗೆ ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡಲಾಗಿದೆ. ಗ್ರಾಮೀಣ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗುವುದು. ₹ 2.50 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಾಣವಾಗಿದೆ. ತಡೆಗೋಡೆ, ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ₹ 2.50 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

ರಾಜ್ಯ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದುಲ್‌ ಖುದೂಸ್‌, ‘ರಾಜ್ಯ ಸಾರಿಗೆ ಸಂಸ್ಥೆ ಜನರ ಜೀವನಾಡಿ. ದಾವಣಗೆರೆ ವಿಭಾಗವು ಆರು ಘಟಕಗಳನ್ನು ಹೊಂದಿದೆ. ಹೊಸದುರ್ಗ ಘಟಕದಿಂದ ನಿತ್ಯ 140 ಬಸ್‌ಗಳು ಸಂಚರಿಸುತ್ತಿವೆ. ಇದರಲ್ಲಿ 82 ತಡೆ ರಹಿತ ಬಸ್‌ಗಳಿವೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಲಾ, ಉಪಾಧ್ಯಕ್ಷೆ ನೇತ್ರಾವತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅನಂತ್‌, ಅಜ್ಜಪ್ಪ, ವಿಜಯಲಕ್ಷ್ಮಿ, ವಿಶಾಲಾಕ್ಷಿ, ಮಮತಾ, ಮಾಜಿ ಶಾಸಕ ಇಲ್ಕಲ್‌ ವಿಜಯಕುಮಾರ್‌, ಪುರಸಭೆ ಉಪಾಧ್ಯಕ್ಷೆ ಸವಿತಾ, ಸದಸ್ಯೆ ನಾಗರತ್ನಾ, ಎಚ್‌.ಪಿ.ಉಮೇಶ್‌, ಡಾ.ಎಂ.ಎಚ್‌.ಕೃಷ್ಣಮೂರ್ತಿ, ಕೆ.ಸಿ.ನಿಂಗಪ್ಪ, ಅಲ್ತಾಫ್‌ ಪಾಷಾ, ಕೆ.ಎಸ್‌.ಆರ್‌.ಟಿ.ಸಿ ವಿಭಾಗದ ಹಿರಿಯ ಅಧಿಕಾರಿ ಉಮೇಶ್‌, ನಿಂಗರಾಜು, ಜಗದೀಶ್‌, ತಹಶೀಲ್ದಾರ್‌ ಮಲ್ಲಿಕಾರ್ಜುನ್‌, ಇಒ ಮಹಾಂತೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT