ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದು ಬಂದೀತು ನದಿ, ನಾಲೆ ಸ್ವಚ್ಛತೆಯ ದಿನ?

Last Updated 6 ನವೆಂಬರ್ 2017, 6:06 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಹರಿದು ಹೋಗುತ್ತಿರುವ ವೇದಾವತಿ ಮತ್ತು ಸುವರ್ಣಮುಖಿ ನದಿಗಳು ಅಕ್ಷರಶಃ ಕೊಳಚೆಯನ್ನೇ ಸಾಗಿಸುತ್ತಿವೆ. ಎರಡೂ ಜಲಮೂಲಗಳು ನಿರ್ವಹಣೆಯ ಕೊರತೆಯಿಂದ ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿವೆ. ಆರೋಗ್ಯ ಇಲಾಖೆ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲಿ ಚಿಕೂನ್ ಗುನ್ಯಾ ಪೀಡಿತರು 35 ಮಂದಿ. ಡೆಂಗಿಯಿಂದ ಬಳಲುತ್ತಿರುವವರು 32 ಹಾಗೂ ಮಲೇರಿಯಾಗೆ ಒಳಗಾದವರು ಕೇವಲ ಆರು ಎಂದು ಹೇಳುತ್ತವೆ. ಆದರೆ, ವಾಸ್ತವ ಬೇರೆಯದೇ ಇದೆ ಎನ್ನುವುದು ಇಲ್ಲಿನ ನಾಗರಿಕರ ಆರೋಪ.

ನಗರದ ಯಾವುದೇ ಬಡಾವಣೆಗೆ ಹೋಗಿ ಕೇಳಿದಾಗ ಪ್ರತಿ ಐದು ಮನೆಗಳಲ್ಲಿ ಒಬ್ಬರಾದರೂ ಚಿಕೂನ್ ಗುನ್ಯಾ, ಡೆಂಗಿ, ಮಲೇರಿಯಾ ಇಲ್ಲವೇ ಟೈಫಾಯ್ಡ್‌ಗೆ ತುತ್ತಾಗಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಕಾಯಿಲೆ ಬಂದಿರುವ ಮನೆಯವರು ಇದಕ್ಕೆ ಕಾರಣವೆಂದು ನೇರವಾಗಿ ನಗರಸಭೆಯ ಕಡೆ ಬೆರಳು ತೋರಿಸುತ್ತಾರೆ. ಜತೆಗೆ ಮಾಧ್ಯಮದವರನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಉದ್ಯಮಿ ಗುಲಾಬ್ ಚಂದ್ ಮಾತನಾಡಿ, ‘ನಗರಸಭೆಯವರಿಗೆ ಪ್ರವಾಸಿ ಮಂದಿರ ವೃತ್ತದ ಸಮೀಪ ಹಾಗೂ ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ವಿ.ವಿ ನಾಲೆಗಳನ್ನು ತೋರಿಸಿ. ಅದೇರೀತಿ, ನಗರದ ಮಧ್ಯದಲ್ಲಿ ಹರಿಯುತ್ತಿರುವ ವೇದಾವತಿ ನದಿಯನ್ನು ನೋಡಲು ಹೇಳಿ. ಇವು ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ ಹಬ್ಬಿಸುವ ತ್ರಿವೇಣಿ ಸಂಗಮಗಳು’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನನಗೆ ಚಿಕೂನ್ ಗುನ್ಯಾ ಬಂದು ಎರಡು ತಿಂಗಳಾಯಿತು. ಇನ್ನೂ ಸರಿಯಾಗಿ ಓಡಾಡಲು ಆಗುತ್ತಿಲ್ಲ. ಸೊಳ್ಳೆಗಳಿಂದಲೇ ಈ ರೋಗ ಬರುತ್ತದೆ ಎಂದು ತಿಳಿದಿದ್ದರೂ ನಗರಸಭೆ ಏನು ಮಾಡುತ್ತಿದೆ? ಮಾಧ್ಯಮದವರು ಇಂತಹವನ್ನೆಲ್ಲ ಯಾಕೆ ಹೈಲೈಟ್ ಮಾಡುತ್ತಿಲ್ಲ’ ಎಂದು ಖಾರವಾಗಿ ಪ್ರಶ್ನಿಸುತ್ತಾರೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಆರ್.ಶಂಕರ್, ‘ನಗರದ ಎಲ್ಲ ಕೊಳೆಯನ್ನೂ ವೇದಾವತಿ ನದಿಗೆ ಬಿಡಲಾಗುತ್ತಿದೆ. ವೇದಾವತಿ ಬಡಾವಣೆಯ ತ್ಯಾಜ್ಯವನ್ನು ಪ್ರವಾಸಿ ಮಂದಿರ ವೃತ್ತದ ಪಕ್ಕದಲ್ಲಿರುವ ವಿ.ವಿ ನಾಲೆಗೆ ಸುರಿಯಲಾಗುತ್ತಿದೆ.

ಶ್ರೀನಿವಾಸನಗರ, ಗಾಡಿ ಬಸಣ್ಣ ಬಡಾವಣೆಯ ತ್ಯಾಜ್ಯವನ್ನು ಹುಳಿಯಾರು ರಸ್ತೆಯಲ್ಲಿನ ವಿ.ವಿ ನಾಲೆಗೆ ಹರಿಸಲಾಗುತ್ತಿದೆ. ಇದರಿಂದ ಈ ನಾಲೆಗಳು ಸೊಳ್ಳೆಗಳನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ’ ಎನ್ನುತ್ತಾರೆ. ‘ಪಲ್ಸ್ ಪೋಲಿಯೊ ಅಭಿಯಾನದ ಮಾದರಿಯಲ್ಲಿ ಸೊಳ್ಳೆಗಳ ನಾಶಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಬೇಕು. ಕೇವಲ ಬೀದಿ ಕಸ ಗುಡಿಸಿ ಹಾಕಿದರೆ ಸಾಲದು. ತ್ಯಾಜ್ಯ ಹರಿಯುವ ಮೂಲಗಳ ಶುದ್ಧೀಕರಣದ ಕಡೆ ಗಮನ ಕೊಡಬೇಕು’ ಎಂಬ ಸಲಹೆ ಅವರದ್ದು.

ಪ್ರವಾಸಿ ಮಂದಿರ ವೃತ್ತದ ಪಕ್ಕದಲ್ಲಿ ಹರಿಯುವ ನಾಲೆಯು ನ್ಯಾಯಾಲಯದ ಹಿಂಭಾಗದಲ್ಲಿ ಹಾದು ಹೋಗುತ್ತದೆ. ಅಲ್ಲಿ ತ್ಯಾಜ್ಯದ ದುರ್ವಾಸನೆ ಸಹಿಸಲು ಅಸಾಧ್ಯ ಎಂಬಂತಿದೆ. 10 ವರ್ಷಗಳ ಹಿಂದೆ ನ್ಯಾಯಾಧೀಶರೊಬ್ಬರು ಅಂದಿನ ಪುರಸಭೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆಸಿ ಮಾತಿನ ಚಾಟಿ ಬೀಸಿದ್ದರು. ಆಗ ದಿನ ಬೆಳಗಾಗುವುದರ ಒಳಗೆ ನಾಲೆ ಸ್ವಚ್ಛವಾಗಿತ್ತು. ಅವರ ವರ್ಗಾವಣೆ ನಂತರ ತ್ಯಾಜ್ಯ ವಿಲೇವಾರಿ ಆಗಿಲ್ಲ.

ವಿ.ವಿ ಜಲಾಶಯದ ನಾಲೆಗಳನ್ನು ಶುದ್ಧಗೊಳಿಸಬೇಕಾದುದು ನೀರಾವರಿ ಇಲಾಖೆ ಹೊಣೆಗಾರಿಕೆ ಎಂದು ನಗರಸಭೆಯವರ ವಾದ. ನಾಲೆಗಳಿಗೆ ಬಡಾವಣೆಯ ತ್ಯಾಜ್ಯ ಬಿಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವವರು ನಗರಸಭೆಯವರು. ಅವರೇ ಇದನ್ನು ಸರಿಪಡಿಸಬೇಕು ಎನ್ನುವುದು ನೀರಾವರಿ ಇಲಾಖೆಯವರ ವಾದ. ಈ ವಾದಗಳ ನಡುವೆ ನಾಲೆಗಳು ಹಾಗೂ ವೇದಾವತಿ ನದಿ ಯಾವಾಗ ಶುದ್ಧವಾಗುತ್ತದೆ ಎಂದು ನಾಗರಿಕರು ಕಾಯುತ್ತಿದ್ದಾರೆ.

ಸುವರ್ಣಾ ಬಸವರಾಜ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT