ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಸೊಬಗಿನ ಅಕ್ಕಮಹಾದೇವಿ ಉದ್ಯಾನ

Last Updated 6 ನವೆಂಬರ್ 2017, 7:04 IST
ಅಕ್ಷರ ಗಾತ್ರ

ಕಲಬುರ್ಗಿ: ಒಂದು ಎಕರೆ ವಿಶಾಲವಾದ ಜಾಗ. ಎಲ್ಲಿ ನೋಡಿದರೂ ಚಿಗುರೊಡೆದ ಹಸಿರು. ಉದ್ಯಾನದ ನಡುವೆ ಆಕರ್ಷಕ ಕಟ್ಟಡ. ಗುಲಾಬಿ, ಕನಕಾಂಬರ ಹೂವಿನ ಪರಿಮಳ. ತಿರುಗಾಡಲು ಹುಲ್ಲುಹಾಸು, ವಿಶ್ರಾಂತಿ ಪಡೆಯಲು ಆರಾಮ ಖುರ್ಚಿ.

ಅಕ್ಕಮಹಾದೇವಿ ನಗರದಲ್ಲಿನ ನವೀಕೃತ ಉದ್ಯಾನದ ಚಿತ್ರಣವಿದು. ಈ ಉದ್ಯಾನವನ್ನು ಪಾಲಿಕೆ ₹85 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಹಸಿರೀಕರಣ ಕಾಮಗಾರಿ ಅಂತಿಮ ಘಟಕ್ಕೆ ಬಂದಿದೆ. ವಿಶಾಲವಾದ ಆವರಣದಲ್ಲಿ ಸುತ್ತಲಿನ ಬಡಾವಣೆಗಳ ನಿವಾಸಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

ಕೆಲವೇ ತಿಂಗಳ ಹಿಂದೆ ಇದೊಂದು ಪಾಳು ಉದ್ಯಾನವಾಗಿತ್ತು. ಆಟವಾಡಲು ಚಿಣ್ಣರಿಗೆ ಸೂಕ್ತ ಪರಿಕರಗಳು ಇರಲಿಲ್ಲ. ಒಳಗೆ ಕುಳಿತುಕೊಳ್ಳಲು ಆಸನಗಳು ಇರಲಿಲ್ಲ. ಹೀಗಾಗಿ ಸ್ಥಳೀಯರು ಉದ್ಯಾನದಲ್ಲಿ ಕಾಲಿಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಉದ್ಯಾನದ ಚಿತ್ರಣವೇ ಬದಲಾಗಿದ್ದು, ವಿರಾಮ–ವಿಹಾರದ ತಾಣವಾಗಿ ರೂಪುಗೊಂಡಿದೆ.

ಸುಸಜ್ಜಿತ ವಿಹಾರ ಪಥ, ಆವರಣ ಗೋಡೆ, ಮಕ್ಕಳ ಆಟಿಕೆಗಳು ಇಲ್ಲಿವೆ. ಆವರಣದಲ್ಲಿಯೇ ಕಬ್ಬಡ್ಡಿ ಮೈದಾನ, ಯೋಗ ಕೇಂದ್ರವಿದೆ. ವಿಶಾಲವಾದ ವಿಹಾರಪಥ ಇದರ ವಿಶೇಷ. ವಿಶಿಷ್ಠ ಆಕಾರದ ಗೋಪುರ ನಿರ್ಮಾಣ ಆಗುತ್ತಿದೆ. ಗೋಪುರ ಮುಂದಿನ ಅಷ್ಟ ಕೋನಾಕೃತಿಯ ರಚನೆಯ ಒಳಗೆ ಹಸಿರು ಬೆಳೆಸಲಾಗಿದೆ.

ಉದ್ಯಾನದ ನಾಲ್ಕು ಮೂಲೆಯಲ್ಲಿ ಬಗೆ ಬಗೆಯ ಹೂವಿನ ಸಸಿಗಳಿವೆ. ರಣ ಬಿಸಿಲಿಗೂ ಹೊಂದಿಕೊಳ್ಳುವ ಸಸಿಗಳನ್ನು ನೆಡಲಾಗಿದೆ. ಖಾಸಗಿ ವ್ಯಕ್ತಿಗಳ ಸಹಯೋಗದಲ್ಲಿ ಇಲ್ಲಿನ ಗಿಡಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಜಾನುವಾರುಗಳ ಪ್ರವೇಶ ತಡೆಯಲು ಸುಸಜ್ಜಿತ ತಂತಿಬೇಲಿ ಹಾಗೂ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ.

‘ನಗರದ ನಾಲ್ಕು ಮೂಲೆಗಳಲ್ಲಿ ಸುಂದರ ಉದ್ಯಾನ ನಿರ್ಮಿಸುವ ಯೋಜನೆಯ ಭಾಗವಾಗಿ ಈ ಉದ್ಯಾನ ಸಿದ್ಧವಾಗಿದೆ. ಒಳಭಾಗದ ಹಸಿರೀಕರಣ ಕಾಮಗಾರಿಗಳೆಲ್ಲ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಪಿ.ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ಮಾದರಿಯಲ್ಲಿ ಐದು ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸ್ವಸ್ತಿಕ್‌ ನಗರ, ಧನ್ವಂತರಿ ಕಾಲೊನಿ, ಮನ್ಸಬ್ದಾರ್ ಲೇಔಟ್, ರೇವಣಸಿದ್ಧೇಶ್ವರ ನಗರದಲ್ಲೂ ಇಂಥ ಪಾರ್ಕ್ ನಿರ್ಮಾಣವಾಗಲಿದೆ’ ಎನ್ನುತ್ತಾರೆ ಅವರು.

‘ನಗರದಲ್ಲಿ 420ಕ್ಕೂ ಹೆಚ್ಚು ಸಾರ್ವಜನಿಕ ಉದ್ಯಾನಗಳಿವೆ. ಅವುಗಳಲ್ಲಿ ಸಾಕಷ್ಟು ಉದ್ಯಾನಗಳು ಅಭಿವೃದ್ಧಿ ಕಂಡಿಲ್ಲ. ನೀರು, ನೆರಳು ಅಲ್ಲಿ ಮರೀಚಿಕೆಯಾಗಿದೆ. ಬಹುತೇಕ ಉದ್ಯಾನಗಳು ಹಂದಿಗಳ ವಾಸದ ತಾಣವಾಗಿವೆ. ಇವುಗಳ ಪಟ್ಟಿಯಲ್ಲಿದ್ದ ನಮ್ಮ ಬಡಾವಣೆಯೂ ಈಗ ಹೊಸ ಮೆರುಗು ಪಡೆದುಕೊಂಡಿದೆ’ ಎಂದು ಖುಷಿ ಹಂಚಿಕೊಂಡರು ಸ್ಥಳೀಯರಾದ ಭಾಗ್ಯಶ್ರೀ ನೀಲೂರ.

ಉದ್ಯಾನಗಳ ಅಭಿವೃದ್ಧಿಗೆ ಒತ್ತು
5 ಮಾದರಿ ಪಾರ್ಕ್‌ಗಳ ನಿರ್ಮಾಣ
₹3.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
₹85 ಲಕ್ಷ ವೆಚ್ಚದಲ್ಲಿ ಅಕ್ಕಮಹಾದೇವಿನಗರದ ಉದ್ಯಾನ ಅಭಿವೃದ್ಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT