ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತಗೊಂಡ ಗೋಕರ್ಣದ ಕೋಟಿತೀರ್ಥ

Last Updated 6 ನವೆಂಬರ್ 2017, 7:09 IST
ಅಕ್ಷರ ಗಾತ್ರ

ಗೋಕರ್ಣ: ಸಿದ್ಧಿ ಕ್ಷೇತ್ರ ಮತ್ತು ಮುಕ್ತಿ ಕ್ಷೇತ್ರ ಎಂದು ಹೆಸರು ಪಡೆದ ಗೋಕರ್ಣದ ಪುರಾಣ ಪ್ರಸಿದ್ಧ ಕೋಟಿತೀರ್ಥದಲ್ಲಿ ಕಮಲದ ಬಳ್ಳಿ ಹಾಗೂ ಪಾಚಿಗಳ ರಾಶಿ ಬೆಳೆದು ನಿಂತಿವೆ. ಇದು ಸ್ಥಳೀಯರು ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ಬರುವ ಪ್ರವಾಸಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ.

ಕೋಟಿತೀರ್ಥದ ನಿರ್ವಹಣೆ ವಹಿಸಿಕೊಂಡವರು ಅಲ್ಪ ಸ್ವಲ್ಪ ಕಮಲದ ಬಳ್ಳಿ, ಪಾಚಿಯನ್ನು ತೆಗೆದಿದ್ದಾರೆ. ಆದರೆ ಅದನ್ನು ಮರಳಿ ಅಲ್ಲಿಯ ಮೆಟ್ಟಿಲುಗಳ ಮೇಲೆಯೇ ರಾಶಿ ಹಾಕಿದ್ದು, ಅದು ಕೊಳೆತು ನಾರುತ್ತಿದೆ. ಕಲುಷಿತಗೊಂಡಿರುವ ಈ ಕೊಳವೀಗ ಗೋಕರ್ಣದ ಐತಿಹ್ಯಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

ಫಲ ಸಿಕ್ಕಿಲ್ಲ: ಕೊಳದ ನೀರನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯ ಸಂಘ ಸಂಸ್ಥೆಗಳು ಕಳೆದ ಎರಡು ವರ್ಷಗಳಿಂದ ಆಗ್ರಹಿಸುತ್ತಿವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಜಲ ಸಂರಕ್ಷಣಾ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಶಾಸಕರಿಗೆ ಇಲ್ಲಿಯ ಪರಿಸ್ಥಿತಿ ವಿವರಿಸಿದರೂ ಕೂಡ ಫಲಿತಾಂಶ ಮಾತ್ರ ಶೂನ್ಯವಾಗಿದೆ.

‘ಕೋಟಿತೀರ್ಥದ ಸ್ವಚ್ಛತೆಯನ್ನು ನಿರ್ವಹಿಸಲು ಬೇರೆಯವರಿಗೆ ಗುತ್ತಿಗೆ ನೀಡಲಾಗಿದೆ. ಅದು ಗುತ್ತಿಗೆ ಪಡೆದವರ ಜವಾಬ್ದಾರಿ’ ಎನ್ನುತ್ತಾರೆ ಗೋಕರ್ಣ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶ್ರೀಧರ ಭೋಮ್ಕರ್.

ಪ್ರವಾಸೋದ್ಯಮದ ಹಣ ದುರ್ಬಳಕೆ: ‘ಪ್ರವಾಸೋದ್ಯಮ ಅಭಿವೃದ್ಧಿಯ ನೆಪದಲ್ಲಿ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಮೂಲಸೌಕರ್ಯ ಕಲ್ಪಿಸುವ ಬದಲು ಪ್ರವಾಸಿಗರ ಮನರಂಜನೆಗೆಂದು ಯಕ್ಷಗಾನ ಆಡಿಸಲಾಗುತ್ತಿದೆ. ಇಲ್ಲಿಯ ಮುಖ್ಯ ಕಡಲತೀರದಲ್ಲಿ ಖಾಸಗಿಯವರ ಸ್ಥಳದಲ್ಲಿ ಸರ್ಕಾರಿ ಹಣದಿಂದ ಸಿಮೆಂಟ್ ಬ್ಲಾಕ್‌ಗಳನ್ನು ಹಾಕಿಕೊಡಲಾಗಿದೆ. ನಿರ್ಮಿತಿ ಕೇಂದ್ರ ನಿರ್ಮಿಸಿದ ಪಾರ್ಕ್ ನಿರ್ವಹಣೆ ಇಲ್ಲದೇ ಹಾಳು ಬಿದ್ದಿದೆ.

ಯಾವುದೇ ಗೊತ್ತು ಗುರಿಯಿಲ್ಲದೇ ಪ್ರವಾಸೋದ್ಯಮದ ಹೆಸರಿನಲ್ಲಿ ಹಣ ವ್ಯಯವಾಗುತ್ತಿದೆ. ಈ ಮೊತ್ತದಿಂದ ಕೋಟಿತೀರ್ಥವನ್ನು ಸ್ವಚ್ಛಗೊಳಿಸಬಹುದಿತ್ತು’ ಎಂದು ಚಿಗುರು ಮಿತ್ರ ಮಂಡಳಿಯ ಅಧ್ಯಕ್ಷ ತಿಮ್ಮಪ್ಪ ಉಪಾಧ್ಯಾಯ ತಿಳಿಸಿದರು.

ದೇವಾಲಯ ಅಭಿವೃದ್ಧಿ ಸಮಿತಿ ಕೂಡ ಕೊಳದ ಸ್ವಚ್ಛತೆ ಹಾಗೂ ಹೂಳೆತ್ತುವ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದು, ಕೊಳವು ಕಾಯಕಲ್ಪಕ್ಕೆ ಕಾದಿದೆ.

ರವಿಸೂರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT