ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಬದುಕು ಕಂಡ ನೇಗಿಲಯೋಗಿ

Last Updated 6 ನವೆಂಬರ್ 2017, 8:33 IST
ಅಕ್ಷರ ಗಾತ್ರ

ಕೆರಗೋಡು: ಸಮೀಪದ ಬಿ. ಹೊಸೂರು ಗ್ರಾಮದ ರೈತರಿಬ್ಬರು ವಾರ್ಷಿಕ ಬೆಳೆಗೆ ತಿಲಾಂಜಲಿ ಇಟ್ಟು ತರಕಾರಿ ಬೆಳೆಯತೊಡಗಿದ ಮೇಲೆ ಆರ್ಥಿಕ ಉನ್ನತಿ ಸಾಧಿಸಿ, ರೈತರಿಗೆ ಬೇಸಾಯದಲ್ಲಿ ಬದಲಾದರೆ ಬದುಕು ಉಜ್ವಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಆ ರೈತರೇ ಗ್ರಾಮದ ಎಚ್.ಕೆ. ಕೃಷ್ಣೇಗೌಡ ಮತ್ತು ಪುಟ್ಟ.

ಕೃಷ್ಣೇಗೌಡ ಕಳೆದ ಹತ್ತು ವರ್ಷಗಳಿಂದ ಟೊಮೆಟೊ, ಬದನೆ, ಹುರುಳಿಕಾಯಿ, ಸೌತೆಕಾಯಿ, ಬಜ್ಜಿ ಮೆಣಸಿನಕಾಯಿ, ಕಾರದ ಮೆಣಸಿನಕಾಯಿ, ಹೂ ಕೋಸು, ಎಲೆಕೋಸು, ಈರುಳ್ಳಿ ಸೇರಿದಂತೆ ಇನ್ನಿತರ ತರಕಾರಿಗಳನ್ನು ಬೆಳೆಯುವುದೇ ಇವರ ಕಾಯಕ.

ಕಬ್ಬು ಬೆಳೆದರೆ ಕೈ ಹಣ ನೋಡಬೇಕಾದರೆ ಎರಡು ವರ್ಷ ಕಾಯಬೇಕು. ಅಲ್ಲಿಯವರೆಗೆ ಸಾಲ ಸೂಲ ಮಾಡಿ ಪರದಾಡಿ ಜೀವನ ನಡೆಸಬೇಕಾದ ಸನ್ನಿವೇಶ ಬರುತ್ತದೆ. ಆದರೆ ಇದೀಗ ನೆಮ್ಮದಿಯಾಗಿದ್ದೆವೆ ಎನ್ನುತ್ತಾರೆ.

ಈ ಬಗ್ಗೆ ಮಾತನಾಡಿದ ರೈತ ಎಚ್. ಕೆ. ಕೃಷ್ಣೇಗೌಡ, ಒಮ್ಮೆ ಗ್ರಾಮದ ರೈತರು ಟೊಮೆಟೊ ಬೆಳೆಯುತ್ತಿದ್ದುದನ್ನು ನೋಡಿದೆ. ನಾನೂ ಟೊಮೆಟೊ ಹಾಕಿದೆ. ಮೂರು ತಿಂಗಳಲ್ಲೇ ಅಸಲಿನ ಜತೆಗೆ ಆದಾಯವೂ ಬಂತು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. ಬಳಿಕ ಕಬ್ಬು, ಭತ್ತಕ್ಕೆ ನಮಸ್ಕಾರ ಹೇಳಿದೆ.

ಇದೀಗ ವಿವಿಧ ಬಗೆಯ ತರಕಾರಿ ಬೇಸಾಯದಿಂದ ಬ್ಯಾಚ್‌ವೊಂದರಲ್ಲಿಯೇ ಲಕ್ಷಾಂತರ ಆದಾಯ ಸಿಗುತ್ತಿದ್ದು, ನೆಮ್ಮದಿ ಜೀವನ ನಡೆಸುತ್ತಿದ್ದೇನೆ ಎಂದು ಸಂತಸದಿಂದ ಹೇಳಿದರು. ಈಗ ತಮ್ಮ ಒಂದು ಎಕರೆಯಲ್ಲದೇ ಇನ್ನೂ 2 ಎಕರೆಯಲ್ಲಿ ತರಕಾರಿ ಬೆಳೆಯುತ್ತಿದ್ದಾರೆ.

ಕಣ್ಸೆಳೆಯುವ ಪಪ್ಪಾಯಿಗ್ರಾಮದ ಯುವಕ ತಮ್ಮ ಅಲ್ಪ ಭೂಮಿಯಲ್ಲಿ ಬೆಳೆದಿರುವ ಫಸಲುಭರಿತ ಪಪ್ಪಾಯಿ ಬೆಳೆ ದಾರಿಹೋಕರ ಕಣ್ಸೆಳೆಯುತ್ತಿದೆ. ಒಮ್ಮೆ ಕುರಿಕೊಪ್ಪಲು ಗ್ರಾಮಕ್ಕೆ ಸ್ನೇಹಿತನನ್ನು ನೋಡಲು ಹೋಗಿದ್ದಾಗ ಗದ್ದೆಯಲ್ಲಿ ಪಪ್ಪಾಯಿ ಬೆಳೆದಿದ್ದನ್ನು ನೋಡಿ ಆಸಕ್ತಿ ತಳೆದು ಇದೀಗ ತನ್ನ ಒಂದು ಎಕರೆಯಲ್ಲಿ 800 ರೆಡ್‌ಲೇಡಿ ತಳಿಯ ಪಪ್ಪಾಯಿ ಗಿಡಗಳನ್ನು ನೆಟ್ಟು ಬೇಸಾಯ ಮಾಡಿದ್ದಾರೆ.

ಉತ್ತಮ ಕೊಟ್ಟಿಗೆ ಗೊಬ್ಬರ ಹಾಕಿ 8/8 ಅಡಿ ವಿಸ್ತೀರ್ಣದಲ್ಲಿ ಗಿಡ ನೆಟ್ಟು ಬೇಸಾಯ ಮಾಡಿದ್ದಾರೆ. ಇದೀಗ 8 ತಿಂಗಳ ಬೆಳೆ ಉತ್ತಮ ಬೆಳವಣಿಗೆ ಕಂಡು ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಿಟ್ಟಿರುವುದನ್ನು ನೋಡುವುದೇ ಚಂದ.

ಈಗಾಗಲೇ 6 ಬಾರಿ ಕಟಾವು ಮಾಡಿದ್ದು ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದನೆ ಮಾಡಿದ್ದಾರೆ. ಇನ್ನೂ 2 ವರ್ಷಗಳವರೆಗೆ ಉತ್ತಮ ಗೊಬ್ಬರ, ಔಷಧಿ ಸಿಂಪಡಿಸಿ ಬೇಸಾಯ ಮಾಡಿದರೆ ಹೆಚ್ಚು ಪ್ರಮಾಣದಲ್ಲಿ ಫಸಲು ನೀಡುವ ನಿರೀಕ್ಷೆ ಇದ್ದು ₹ 4 ಲಕ್ಷಕ್ಕೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತ ಪುಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT