ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡಬೇಕು

Last Updated 6 ನವೆಂಬರ್ 2017, 9:18 IST
ಅಕ್ಷರ ಗಾತ್ರ

ಕೂಟಗಲ್‌ (ರಾಮನಗರ): ‘ಬೆಂಗಳೂರಿನ ಪೊಲೀಸ್ ಕಮಿಷರ್ ಅವರನ್ನು ಬದಲಿಸಿದ ಕೀರ್ತಿ ಟಿ.ಎ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಗೆ ಸಲ್ಲುತ್ತದೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು. ಇಲ್ಲಿನ ಕೂಟಗಲ್ ಗ್ರಾಮದಲ್ಲಿ ಭಾನುವಾರ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಮೆಟ್ರೋದಲ್ಲಿ ಹಿಂದೆ ಏರಿಕೆಯನ್ನು ವಿರೋಧಿಸಿ ನಡೆದ ಕನ್ನಡಪರ ಹೋರಾಟದ ಶಕ್ತಿ ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನೇ ಬದಲಾಯಿಸಿದೆ. ಕನ್ನಡಪರ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದೇ ಅವರನ್ನು ಬದಲಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಕನ್ನಡಪರ ಹೋರಾಟಗಳನ್ನು ದಮನಿಸುವವರಿಗೆ ಇದೊಂದು ಎಚ್ಚರಿಕೆ’ ಎಂದರು.

‘ಸರ್ಕಾರ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸರೋಜಿನಿ ಮಹಿಷಿ ವರದಿಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು. ಕನ್ನಡ ಆಡಳಿತ ಭಾಷೆಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ ‘ಮಹಿಷಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಡಿಸೆಂಬರ್‌ 16 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ 85 ಮೀಸಲಾತಿ ಜಾರಿಯಾಗಬೇಕು ಎಂಬುದು ನಮ್ಮ ಪ್ರತಿಭಟನೆಯ ಮುಖ್ಯ ಉದ್ದೇಶ’ ಎಂದು ತಿಳಿಸಿದರು.

ನಾಡಿನಾದ್ಯಂತ ಇದೇ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ ಬೆಳಗಾವಿಯಲ್ಲಿ ಮಾತ್ರ ಕರಾಳ ದಿನಾಚರಣೆಯನ್ನು ನಾಡದ್ರೋಹಿ ಎಂಇಎಸ್ ಸಂಘಟನೆ ಆಚರಿಸಿ ವಿಕೃತಿ ಮೆರೆಯುತ್ತಿದೆ. ಮುಂದಿನ ವರ್ಷದಿಂದ ಪ್ರತಿ ನವೆಂಬರ್ 1 ರಂದು ಬೆಳಗಾವಿಯಲ್ಲಿ ಕರವೇಯಿಂದ ಅದ್ದೂರಿ ರಾಜ್ಯೋತ್ಸವ ಆಚರಿಸುವ ಮೂಲಕ ಎಂಇಎಸ್ ಗೂಂಡಾಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ಎಲ್.ಸಿ.ರಾಜು, ಮತ್ತಿಕೆರೆ ಜಯರಾಮ್‌ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್‌.ಪಿ. ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ಬೆಟ್ಟೆಗೌಡ, ಪದಾಧಿಕಾರಿಗಳಾದ ಜಿ. ಶಿವಣ್ಣ ಕೊತ್ತಿಪುರ, ಬಸವರಾಜು ಪಡುಕೋಟಿ, ಸಣ್ಣೀರಪ್ಪ, ಎ.ಎಸ್. ನಾಗರಾಜು, ಸತೀಶ್‌್ ಗೌಡ, ಬಿಡದಿ ಪಾಪಣ್ಣ, ಸಾಗರ್, ಕಬ್ಬಾಳೇಗೌಡ, ಟಿ.ಆರ್. ದೇವರಾಜು, ಮಹೇಶ್‌, ವಿನೋದ್‌, ರೇಣುಕಪ್ಪ, ರಮಾನಂದ್‌ಗೌಡ, ರಾಮಾಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT