ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಆರೈಕೆಗೇ ಬದುಕು ಮೀಸಲಿಟ್ಟ ಯುವಕರು

Last Updated 6 ನವೆಂಬರ್ 2017, 9:27 IST
ಅಕ್ಷರ ಗಾತ್ರ

ಶಿವಮೊಗ್ಗ: ಉನ್ನತ ವ್ಯಾಸಂಗ ಪಡೆದ ಹಲವು ಯುವಕರು ಕೈತುಂಬಾ ಹಣ ಗಳಿಸಬೇಕು, ಜೀವನದಲ್ಲಿ ಉತ್ತಮ ನೆಲೆ ಕಂಡುಕೊಳ್ಳಬೇಕು. ಬಿಡುವು ಸಿಕ್ಕಾಗ ಮೋಜು ಮಾಡಬೇಕು ಎಂದು ಬಯಸುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿರುವ ಇವರು ಮೂಕ ಪ್ರಾಣಿಗಳ ಆರೈಕೆಯಲ್ಲೇ  ಬದುಕು ಕಟ್ಟಿಕೊಂಡಿದ್ದಾರೆ.

ಬಿ.ಟೆಕ್‌ ಮುಗಿಸಿರುವ ಶರವಣ ಸಂತೋಷ್ ಹಾಗೂ ಎಂ.ಟೆಕ್‌ ಮುಗಿಸಿರುವ ಪ್ರಸಾದ್ ಸಾವಿರಾರು ರೂಪಾಯಿ ಸಂಬಳ ಬರುತ್ತಿದ್ದ ಕೆಲಸಕ್ಕೆ ವಿರಾಮ ಹೇಳಿ   ಶಿವಮೊಗ್ಗದಲ್ಲಿ ಹಲವು ಮೂಕ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಇತರೆ ಯುವಕರಿಗಿಂತ ಭಿನ್ನ ಎಂದು ಸಾಬೀತು ಪಡಿಸುತ್ತಿದ್ದಾರೆ.

ಸಾವಿರ ಪ್ರಾಣಿಗಳಿಗೂ ಅಧಿಕ: 2014ರಲ್ಲಿ ದಾರಿ ಮಧ್ಯೆದಲ್ಲಿ ಗಾಯಗೊಂಡು ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಬೀದಿ ನಾಯಿಗೆ ಚಿಕಿತ್ಸೆ ಕೊಡಿಸುವುದರಿಂದ ಆರಂಭವಾದ ಇವರಿಬ್ಬರ ಮೂಕ ಪ್ರಾಣಿಗಳ ಸೇವೆ ಇದೀಗ ಸಾವಿರಕ್ಕಿಂತ ಹೆಚ್ಚಿನ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಇದರಲ್ಲಿ ಹಸು, ಎಮ್ಮೆ, ಕತ್ತೆ, ಕುದುರೆ, ಮಂಗ, ಅಳಿಲು, ಬೆಕ್ಕು, ಹಾವು, ಬಾವುಲಿ, ಮೈನಾ, ಕಾಗೆ ಹೀಗೆ ಪಟ್ಟಿಯೇ ಸಾಗುತ್ತದೆ.

ಆರೈಕೆಯಲ್ಲಿಯೇ ಸಂತೃಪ್ತ ಭಾವ: ಗಾಯ, ಕಾಯಿಲೆ, ಅಂಗವೈಕಲ್ಯದಿಂದ ನರಳುವ ಪ್ರಾಣಿಗಳಿದ್ದರೆ ಪ್ರಾಥಮಿಕ ಚಿಕಿತ್ಸೆ ನೀಡುತ್ತೇವೆ. ತುರ್ತು ಇದ್ದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೇವೆ. ನಂತರ ಅವುಗಳ ಆರೈಕೆಯಲ್ಲಿ ತೊಡಗುತ್ತೇವೆ. ಅವುಗಳು ಗುಣವಾದರೆ ತೃಪತ್ತಿ ಸಿಗುತ್ತದೆ ಎನ್ನುತ್ತಾರೆ ಶರವಣ ಹಾಗೂ ಪ್ರಸಾದ್‌.

ಉಚಿತ ಸೇವೆ: ತರಕಾರಿ ಮಂಡಿ ನಡೆಸುತ್ತಿರುವ ಶರವಣ ಹಾಗೂ ಮನೆ ವ್ಯವಹಾರ ನೋಡಿಕೊಂಡಿರುವ ಪ್ರಸಾದ್ ಕೊಂಚ ಮಟ್ಟಿಗೆ ಆರ್ಥಿಕವಾಗಿ ಸಬರಾಗಿದ್ದಾರೆ.  ದುಡಿಮೆಯ ಬಹುಪಾಲು ಹಣ ಪ್ರಾಣಿಗಳಿಗಾಗಿಯೇ ತೊಡಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಾಣಿಗಳ ಹಾರೈಕೆಗಾಗಿ ಜಾಗವನ್ನೂ ಬಾಡಿಗೆ ಪಡೆದಿದ್ದಾರೆ. ಈ ಜಾಗಕ್ಕೆ ಪ್ರತಿ ತಿಂಗಳು 3 ಸಾವಿರ ಬಾಡಿಗೆ ಕಟ್ಟುತ್ತಿದ್ದಾರೆ.

ದಿನಕ್ಕೆ 2ರಿಂದ 3 ಪ್ರಾಣಿಗಳ ಆರೈಕೆ ಮಾಡುವ ಇವರು ಪ್ರಾಥಮಿಕ ಚಿಕಿತ್ಸೆ, ಊಟ, ಮಾತ್ರೆ, ಗ್ಲುಕೋಸ್, ಹಗ್ಗ, ಚೀಲ, ಹೊಲಿಗೆ ಹೀಗೆ ಪ್ರತಿ ಪ್ರಾಣಿಗೆ ಐನೂರಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಇವರ ಕಾರ್ಯ ನೋಡಿದ ಕೆಲವರು ಬೆನ್ನುತಟ್ಟಿ ಅಲ್ಪಸ್ವಲ್ಪ ಧನ ಸಹಾಯ ಮಾಡಿ ಉತ್ತೇಜನ ನೀಡುತ್ತಿದ್ದಾರೆ.

ವಿಶೇಷ ದೀಪಾವಳಿ: ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಂಡು, ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು ಆ ಹಣದಿಂದ ಗಾಯಗೊಂಡ ಮೂಕ ಪ್ರಾಣಿಗಳೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಹಬ್ಬದ ದಿನ ಮೂಕ ಪ್ರಾಣಿಗಳಿಗೆ ಸಿಹಿ ತಿನಿಸು, ಹಾಲು, ಬೆಲ್ಲ ನೀಡಿ ಖುಷಿ ಪಟ್ಟಿದ್ದಾರೆ.

ಮನೆಗೆ ತಿಳಿಯದ ವಿಚಾರ: ‘ಈ ಸೇವೆಯ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ. ನಂತರ ತಿಳಿಯಿತು. ಮೊದಲು ಅಪಸ್ವರ ನಂತರ ಪ್ರೋತ್ಸಾಹ ಸಿಕ್ಕಿತು ಈ ಮೂರು ವರ್ಷದ ಅವಧಿಯಲ್ಲಿ ಸಾಕಷ್ಟು ಸವಾಲು ಎದುರಿಸಿದ್ದೇವೆ. ಚಿಕಿತ್ಸೆ ನೀಡುವಾಗ ಹುಚ್ಚು ನಾಯಿ ಕಡಿದು ಇದಕ್ಕಾಗಿ ₹ 30 ಸಾವಿರ ಖರ್ಚು ಮಾಡಿದ್ದೇವೆ. ಹಸು ಗುದ್ದಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ಆದರೆ ಸೇವೆ ನಿಂತಿಲ್ಲ’ ಎನ್ನುತ್ತಾರೆ  ಪ್ರಸಾದ್.

ತುರ್ತು ಸಮಯದಲ್ಲಿ ಅಂಬುಲೆನ್ಸ್ ಸಿಗದಿದ್ದಾಗ ಪ್ರಾಣಿಗಳು ಕಣ್ಣೆದುರೇ ನರಳಾಡುತ್ತವೆ. ಪ್ರಾಣಿಗೆ ಚಿಕಿತ್ಸೆ ನೀಡುವಾಗ ಸಾರ್ವಜನಿಕರಿಂದ ಪೋನ್ ಬರುತ್ತದೆ. ಬೇಗ ಬಾರದಿದ್ದರೇ ಮನನೋಯಿಸುತ್ತಾಋಎ. ಇಂತಹ ಸಂದರ್ಭದಲ್ಲಿ ಈ ಸೇವೆಯಿಂದ ವಿಮುಖರಾಗಬೇಕು ಎನಿಸುತ್ತದೆ ಎನ್ನುತ್ತಾರೆ ಶರವಣ.

ದತ್ತು ಯೋಜನೆ: ಶಿವಮೊಗ್ಗ ಅನಿಮಲ್ ರೆಸ್ಕ್ಯೂ ಕ್ಲಬ್‌ ಮಾಡಿಕೊಂಡಿರುವ ಇವರು ಸದಸ್ಯತ ಮಾಡಿಕೊಂಡವರಿಗೆ ಪ್ರಾಣಿಗಳನ್ನು ದತ್ತು ನೀಡಿ ಅದರ ಜವಬ್ದಾರಿ ಅವರಿಗೆ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT