ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ನೆಲದಲ್ಲಿ ಚಿನ್ನದ ಬಾಳೆ

Last Updated 6 ನವೆಂಬರ್ 2017, 10:13 IST
ಅಕ್ಷರ ಗಾತ್ರ

ಶಹಾಪುರ: ದುಡಿಯುವ ಛಲ, ಸಾಧಿಸುವ ಗುರಿ ಕಣ್ಣು ಮುಂದೆ ಇದ್ದರೆ ಜೀವನದಲ್ಲಿ ಸಾಧನೆ ಸಾಧ್ಯ ಎನ್ನುವುದಕ್ಕೆ ತಾಲ್ಲೂಕಿನ ಹೊಸಕೇರಾ ಗ್ರಾಮದ ರೈತ ಮಹಿಳೆ ಸುಧಾ ಕುಲಕರ್ಣಿ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿಕೊಂಡು ಬರಡು ನೆಲದಲ್ಲಿ ಚಿನ್ನದ ಬೆಳೆ ಬಾಳೆ ಬೆಳೆದು ರೈತಾಪಿ ವರ್ಗಕ್ಕೆ ಮಹಿಳೆ ಸ್ಫೂರ್ತಿಯಾಗಿದ್ದಾರೆ.

‘2015–16ನೇ ಸಾಲಿನ ಉದ್ಯೋಗ ಖಾತರಿ ಯೋಜನೆ ಅಡಿ ₹3.34 ಲಕ್ಷ ವೆಚ್ಚದಲ್ಲಿ ನಾಲ್ಕು ಎಕರೆ ಬೀಳು ಹೊಲವನ್ನು ಸ್ವಚ್ಛಗೊಳಿಸಿದೆ. ಕೆರೆಯ ಮಣ್ಣಿನಿಂದ ಹೊಲವನ್ನು ಸಮತಟ್ಟು ಮಾಡಿದೆ. ಹೊಲದ ಬದುವಿನಲ್ಲಿ ಕೊರೆಸಿದ ಬಾವಿಯಲ್ಲಿ ಸಮೃದ್ಧ ಲಭಿಸಿದೆ. ಆಗ ಖುಷಿ ಇಮ್ಮಡಿಸಿತು. ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆ ಬೆಳೆಯಲು ಮುಂದಾದೆ’ ಎಂದು ಸುಧಾ ಕುಲಕರ್ಣಿ ಕೃಷಿ ಅನುಭವ ಬಿಚ್ಚಿಟ್ಟರು.

‘ಜಿ–9 ತಳಿಯ ಬಾಳೆಯ 4,600 ಗಿಡಗಳನ್ನು ತಂದು ನಾಟಿ ಮಾಡಿದ್ದೇನೆ. ಬ್ಯಾರಲ್‌ನಲ್ಲಿ ಕ್ರಿಮಿನಾಶಕ ಔಷಧಿಯನ್ನು ಹಾಕಿ ಹನಿ ನೀರಿನ ಮೂಲಕ ಗಿಡಗಳಿಗೆ ಹಾಯಿಸಿರುವೆ. ಜೊತೆಗೆ ದನದ ಸೆಗಣಿಯನ್ನು ಹೆಚ್ಚಾಗಿ ಮೇಲುಗೊಬ್ಬರವಾಗಿ ನೀಡುತ್ತಾ ಬಂದೆ. ಈಗ ಬಾಳೆ ಗೊನೆ ಬಿಟ್ಟು ಮಾರಾಟಕ್ಕೆ ಸಿದ್ಧವಾಗಿದೆ. ಒಂದು ಗೊನೆಗೆ ₹200 ನಿಗದಿಪಡಿಸಿರುವೆ. ಸದ್ಯ ಎಕರೆಗೆ ₹20ರಿಂದ ₹25 ಸಾವಿರ ಖರ್ಚು ಮಾಡಿರುವೆ. ಎಕರೆಗೆ ₹1 ಲಕ್ಷ ಲಾಭ ಬರುವ ನಿರೀಕ್ಷೆ ಇದೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಅವರು.

‘ಪತಿ ವ್ಯವಸಾಯ ಸಹಕಾರ ಸಂಘದ ಕಾರ್ಯದರ್ಶಿ. ಒಬ್ಬಳೇ ಮಗಳ ಮದುವೆ ಆಗಿದೆ. ಮನೆಯಲ್ಲಿ ಆರಾಮವಾಗಿ ಕುಳಿತು ಉಣ್ಣಲು ತೊಂದರೆ ಇಲ್ಲ. ಆದರೆ ಇದಕ್ಕೆ ಒಪ್ಪದ ಮನಸ್ಸು ಕೃಷಿಯತ್ತ ಸಾಗಿತು. ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗುವುದರಿಂದ ದೈಹಿಕ ಶ್ರಮದ ಉತ್ಸಾಹದಿಂದ ಇರುತ್ತೇನೆ’ ಎಂದರು.

ಸಾಲದ ಹೊರೆಗೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ಭೂಮಿತಾಯಿ ಮೇಲೆ ಭರವಸೆ ಇಟ್ಟು ಶ್ರಮವಹಿಸಿ ದುಡಿದರೆ ನಷ್ಟ ಎಂಬುವುದು ಸುಳಿಯುವುದಿಲ್ಲ ಎನ್ನುವುದು ಅವರ ಅಚಲ ನಿರ್ಧಾರ. ಮಾಹಿತಿಗಾಗಿ ಮೊ:95353 95895 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT