ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯರೋದನಕ್ಕೆ ಕಿವಿಯಾದವರು...

ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ
Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಮೈತ್ರಿ ಎಸ್.

*

ಮುಂಗಾರಿನ ಮೋಡಗಳು ಕವಿದಿದ್ದ ಮಧ್ಯಾಹ್ನ ಅದು. ಸ್ಫೂರ್ತಿಯ ಚಿಲುಮೆಯಾದ ಮಹದೇವಸ್ವಾಮಿ ಎಂಬ ಯುವಕ ಬಂಡೀಪುರ ಸಮೀಪದ ಹಾದನೂರು ಗ್ರಾಮಕ್ಕೆ ಮಹದೇವ ಎಂಬ ಕೃಷಿಕರನ್ನು ಭೇಟಿಯಾಗಲು ಹೊರಟಿದ್ದರು. ಅವರಿಗೇ ಕಾತರದಿಂದ ಕಾಯುತ್ತಿದ್ದ ಮಹದೇವ ತಮ್ಮ ಮುಂಜಾನೆಯ ಮೊಬೈಲ್‌ ಕರೆ ಕುರಿತು ವಿವರಣೆ ಕೊಡಲು ಪ್ರಾರಂಭಿಸಿದರು.

ಕೆಲವು ವಾರಗಳ ಹಿಂದೆ ಬಿತ್ತಿದ, ಆಗ ತಾನೇ ಚಿಗುರಿದ್ದ ಹತ್ತಿಯ ಬೆಳೆಯನ್ನು ಒಂಟಿ ಸಲಗವೊಂದು ಹಿಂದಿನ ರಾತ್ರಿ ತಿಂದು ಹೋಗಿತ್ತು. ಚಿಗುರುಗಳನ್ನು ಮಾತ್ರ ಮುರಿದು ತಿಂದಿದ್ದ ಆ ಆನೆ, ಮೂರು ಎಕರೆಯ ಉಳಿದ ಭಾಗದಲ್ಲಿ ಏನನ್ನೂ ತುಳಿದು ಹಾಳು ಮಾಡಿರಲಿಲ್ಲ. ಕಾಡಿನ ‘ಡಿ’ ಲೈನ್‌ನಿಂದ ಹೊರಬಂದಿದ್ದ ಆನೆ, ಸಮೀಪದಲ್ಲಿದ್ದ ತಂಬಾಕು ಬೆಳೆಯನ್ನು ಸುತ್ತು ಹಾಕಿ, ಒಂದು ಕೊಳದ ಸಮೀಪ ಹೋಗಿತ್ತು. ಸುತ್ತ ಚೆಲ್ಲಿದ್ದ ನೀರು, ಹೆಜ್ಜೆ ಗುರುತುಗಳಿಂದ ಆನೆಯು ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿದೆ ಎಂದು ತಿಳಿಯುತ್ತಿತ್ತು. ಆನೆಯ ಈ ನಡುರಾತ್ರಿಯ ಚಟುವಟಿಕೆ, ಅದು ಬೀಳಿಸಿದ್ದ ಬೇಲಿಯ ಕಂಬದ ಬೆಲೆಯನ್ನೂ ಸೇರಿಸಿ ಸುಮಾರು ₹ 5,000ದಷ್ಟು ನಷ್ಟವನ್ನು ಮಹದೇವ ಅವರಿಗೆ ಉಂಟು ಮಾಡಿತ್ತು.

ವೈಲ್ಡ್ ಸೇವೆ: ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ಸಂರಕ್ಷಣಾ ವಿಜ್ಞಾನಿ ಡಾ. ಕೃತಿ ಕಾರಂತ ಅವರ ಮುತುವರ್ಜಿಯಿಂದ ಪ್ರಾರಂಭಗೊಂಡ, ಭಾರತದಲ್ಲಿಯೇ ವಿನೂತನವಾದ ಸ್ವಯಂ ಸೇವಾ ಕಾರ್ಯಕ್ರಮವೇ ‘ವೈಲ್ಡ್‌ ಸೇವೆ’. ವನ್ಯ ಜೀವಿಗಳಿಂದ ನಷ್ಟಕ್ಕೆ ಒಳಗಾಗುವ ರೈತರು ಸರಕಾರದಿಂದ ಪರಿಹಾರ ಕೇಳಲು ಸಲ್ಲಿಸಬೇಕಾಗುವ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವಲ್ಲಿ ಈ ವೈಲ್ಡ್ ಸೇವೆ ನೆರವು ನೀಡುತ್ತದೆ. ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆಯ ಹುಲಿಧಾಮಗಳ ಅಂಚಿನಲ್ಲಿ ವಾಸಿಸುವ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ಸೇತುವೆಯಾಗಿ ಸಹಕರಿಸುತ್ತದೆ.

(ಆನೆಗಳ ದಾಳಿಗೆ ತುತ್ತಾದ ಬಾಳೆ ತೋಟ)

ಡಾ. ಕೃತಿ ಅವರು 2013ರಲ್ಲಿ ಪಶ್ಚಿಮ ಘಟ್ಟಗಳ ಹುಲಿಧಾಮಗಳ ಸುತ್ತಮುತ್ತಲಿನ ಸುಮಾರು 2,000 ಕುಟುಂಬಗಳನ್ನು ಕುರಿತು ನಡೆಸಿದ ಸಂಶೋಧನೆಯಿಂದ ನಷ್ಟಕ್ಕೆ ಒಳಗಾದವರ ಪೈಕಿ, ತೀರಾ ಕಡಿಮೆ – ಅಂದರೆ ಶೇ 31ರಷ್ಟು ಕುಟುಂಬಗಳು ಮಾತ್ರ – ನಷ್ಟವಾದ ಬೆಳೆಗೆ ಪರಿಹಾರವನ್ನು ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದವು. ಅಧಿಕಾರಶಾಹಿ ವ್ಯವಸ್ಥೆ, ಪಾರದರ್ಶಕದ ಕೊರತೆ ಹಾಗೂ ವಿಳಂಬದ ಸಮಸ್ಯೆಗಳಿಂದಾಗಿ ಆಗುತ್ತಿದ್ದ ತೊಂದರೆಯನ್ನು ಬಗೆಹರಿಸಲು ಡಾ. ಕೃತಿ ಅವರು ಮುಂದಾದರು. ವನ್ಯಜೀವಿಗಳ ಜೊತೆಗಿನ ಸಂಘರ್ಷದಿಂದ ಸಂಕಷ್ಟಕ್ಕೀಡಾದ ಜನರ ನೋವಿಗೆ ತಕ್ಷಣದಲ್ಲಿ ಸ್ಪಂದಿಸುವ ಪ್ರಯತ್ನ ಮಾಡಿದರು.

ಬಂಡೀಪುರ ಮತ್ತು ನಾಗರಹೊಳೆ ಹುಲಿಧಾಮಗಳ ವ್ಯಾಪ್ತಿಯಲ್ಲಿರುವ ಸುಮಾರು 600 ಹಳ್ಳಿಗಳಲ್ಲಿ ವೈಲ್ಡ್ ಸೇವೆ ಸಂಘಟನೆಯು ಕಾರ್ಯ ನಿರ್ವಹಿಸುತ್ತದೆ. ಸಂಘರ್ಷದ ಪ್ರಕರಣ ಗಳನ್ನು ರೈತರು ಮೊಬೈಲ್ ಕರೆಯಿಂದ ದಾಖಲಿಸಿದ್ದಲ್ಲಿ, ವೈಲ್ಡ್ ಸೇವೆ ಪ್ರತಿನಿಧಿಗಳು ಕೆಲವೇ ತಾಸುಗಳಲ್ಲಿ ಸ್ಪಂದಿಸುತ್ತಾರೆ. ಮೇಲೆ ಉಲ್ಲೇಖಿಸಲಾದ ಮಹದೇವಸ್ವಾಮಿ ಇಂತಹ ಒಬ್ಬ ಪ್ರತಿನಿಧಿ.

ಸ್ಥಳಕ್ಕೆ ಭೇಟಿ ನೀಡಿದ ನಂತರ ಪರಿಹಾರ ಕೋರಲು ಬೇಕಾಗುವ, ಜಿಲ್ಲಾ ಆಡಳಿತದಿಂದಲೇ ನಿಗದಿಯಾದ ರೀತಿಯಲ್ಲಿ ಅರ್ಜಿಗಳನ್ನು ತುಂಬುವ, ದಾಖಲೆಗಳ ಸಮೇತ ಅರ್ಜಿ ಸಲ್ಲಿಸುವ ಕೆಲಸವನ್ನು ವೈಲ್ಡ್ ಸೇವೆ ಪ್ರತಿನಿಧಿಗಳು ಮಾಡು ತ್ತಾರೆ. ಅರ್ಜಿ ಸಲ್ಲಿಸುವಿಕೆ, ಮಹಜರ್ ವರದಿ ತಯಾರಿಕೆ, ಖಾತೆಯ ವಿವರ ಸಂಗ್ರಹಿಸುವಿಕೆ ಕಾರ್ಯಗಳ ಜೊತೆಗೆ ಪರಿಹಾರ ಮೊತ್ತದ ಪಾವತಿ ತನಕ ರೈತರ ಪರವಾಗಿ ಇವರು ಓಡಾಡುತ್ತಾರೆ.

‘ಈ ಮುಂಚೆ ದಾಖಲೆಗಳನ್ನು ಜೋಡಿಸುವುದಕ್ಕೇ ಒಂದು ವಾರ ಹಿಡಿಯುತ್ತಿತ್ತು. ಈಗ ವೈಲ್ಡ್ ಸೇವೆ ನೆರವಿನಿಂದ ಒಂದೇ ಭೇಟಿಯಲ್ಲಿ ಎಲ್ಲವೂ ಮುಗಿಯುತ್ತಿದೆ’ ಎನ್ನುತ್ತಾರೆ ನಾಗನಪುರದ ರೈತ ಶಂಕರಪ್ಪ.

ಆನೆಗಳು ವಂಶಪಾರಂಪರ್ಯವಾಗಿ ರೂಢಿಯಾದ ದಾರಿಯಲ್ಲಿಯೇ ಸಾಗುತ್ತವೆ. ಈ ದಾರಿಯಲ್ಲಿ ಬೆಳೆಯಿರುವ ಜಮೀನುಗಳು ಇದ್ದರೆ, ಸ್ಥಳೀಯ ರೈತರು ಅಪಾರ ನಷ್ಟವನ್ನು ಅನುಭವಿಸುತ್ತಾರೆ. ಹುಲಿ, ಚಿರತೆಗಳಂತೂ ದನ-ಕರು, ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುತ್ತವೆ. ಆನೆ, ಜಿಂಕೆ ಮತ್ತು ಕಾಡುಹಂದಿಗಳು ಅಮೂಲ್ಯವಾದ ಬೆಳೆಯನ್ನು ನಾಶ ಮಾಡುತ್ತವೆ. ಅಪರೂಪದ ಪ್ರಕರಣಗಳಲ್ಲಿ ಮನುಷ್ಯರೂ ಸಾವಿಗೀಡಾಗಬಹುದು.

ಡಾ. ಕೃತಿ ಅವರ ಅಧ್ಯಯನದ ಪ್ರಕಾರ 2000–2010ರ ಅವಧಿಯಲ್ಲಿ 44 ಸಾವಿರಕ್ಕೂ ಹೆಚ್ಚು ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ವರದಿಯಾಗಿದ್ದವು. ಹೀಗೆ ವನ್ಯಜೀವಿ-ಮಾನವ ಸಂಘರ್ಷಗಳಿಂದ ಬೆಳೆನಾಶ ಹಾಗೂ ದನ-ಕರು, ಸಾಕುಪ್ರಾಣಿಗಳ ಸಾವಿನಿಂದ ನಷ್ಟವಾಗುವುದು ಇತ್ತೀಚಿನ ಬೆಳವಣಿಗೆಗಳೇನಲ್ಲ.

(‘ವೈಲ್ಡ್ ಸೇವೆ’ ಸಂಘಟನೆಯ ಸದಸ್ಯರು)

ನಾಗರಹೊಳೆಯ ಸಮೀಪ ಜ್ಯೋತಿ ಎಂಬುವರ ಕುಟುಂಬ ದೊಡ್ಡ ಸಂಖ್ಯೆಯ ದನ-ಕರು, ಮೇಕೆಗಳನ್ನು ಸಾಕಿಕೊಂಡಿತ್ತು. ಜ್ಯೋತಿ ಅವರ ಪ್ರಕಾರ ಹಿಂದಿನ 20 ವರ್ಷಗಳಿಂದ ಪ್ರತಿ ವರ್ಷ ಕನಿಷ್ಠ ಎರಡು ಪ್ರಾಣಿಗಳು ಚಿರತೆಯ ಬಾಯಿಗೆ ಗುರಿಯಾಗುತ್ತಿದ್ದವು. ಈಗ ಅವರ ಎರಡು ಮೇಕೆಗಳ ಸಾವಿನಿಂದಾದ ನಷ್ಟಕ್ಕೆ ಪರಿಹಾರವನ್ನು ಪಡೆಯುವಲ್ಲಿ ಅವರಿಗೆ ವೈಲ್ಡ್ ಸೇವೆ ನೆರವಾಗಿದೆ.

ನಾಗನಪುರದ ಪ್ರಭುಸ್ವಾಮಿ ಅವರ ಪ್ರಕಾರ ಅವರ ತಂದೆಯ ಕಾಲದಲ್ಲಿ ಜಮೀನಿನ ಸುತ್ತ ಆನೆಗಳ ಹಿಂಡು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಓಡಿಸಲು ಎಷ್ಟೇ ಪ್ರಯತ್ನ ಮಾಡಿದರೂ, ಅವು ತಮ್ಮ ಹೊಟ್ಟೆ ತುಂಬುವವರೆಗೆ ಕದಲುತ್ತಿರಲಿಲ್ಲ.

ಅವರ ಜಮೀನು ಮೂರು ಕಡೆಗಳಿಂದ ಬಂಡೀಪುರ ಅರಣ್ಯದಿಂದ ಸುತ್ತುವರೆದಿದ್ದ ಕಾರಣ ಅಲ್ಲಿಗೆ ಆನೆಗಳು ಪದೇ ಪದೇ ದಾಳಿಯಿಡುವುದು ಸಾಮಾನ್ಯವಾಗಿ ಬಿಟ್ಟಿತ್ತು. ಆನೆಗಳನ್ನು ದೂರವಿಡಲು ಬೆಳಕು ಸೂಸುವ, ಶಬ್ದ ಮಾಡುವ ಬಲವಾದ ವಾಸನೆ ಸೂಸುವ ಉಪಕರಣಗಳನ್ನೇ ಅಲ್ಲದೆ, ತಂತಿ ಬೇಲಿ, ಸೌರಶಕ್ತಿಯ ಬೇಲಿಗಳನ್ನು ಬಳಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇವುಗಳನ್ನು ಮೀರಿ ತಮ್ಮ ಕೆಲಸ ಮಾಡಿಕೊಳ್ಳುವ ಚಾಕಚಕ್ಯತೆಯನ್ನು ಆನೆಗಳು ಪ್ರದರ್ಶಿಸು ತ್ತಿದ್ದವು ಎನ್ನುತ್ತಾರೆ ಪ್ರಭುಸ್ವಾಮಿ.

ಸಾಂಪ್ರದಾಯಿಕವಾಗಿ ಭಾರತೀಯರು ವನ್ಯಜೀವಿಗಳ ಜೊತೆ ಸಹಾನುಭೂತಿ ಹೊಂದಿದ್ದು, ಅವರ ಜೀವನ ಅವುಗಳ ಜೊತೆಗೆ ಹಾಸುಹೊಕ್ಕಾಗಿದೆ.

ನಷ್ಟ ಅನುಭವಿಸಿದರೂ ಪ್ರಾಣಿಗಳ ಸ್ಥಿತಿಗೆ ಕಾಳಜಿ ತೋರಿ ಪ್ರಾಣಿಗಳನ್ನು ಕ್ಷಮಿಸುವುದು ಸಾಮಾನ್ಯ.

(ಸಂಘಟನೆ ಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿರುವ ರೈತ)

ವೀರಂಬಾಡಿ ಗ್ರಾಮದಲ್ಲಿ ಕಟ್ಟಿ ಹಾಕಿದ್ದ ಕೆಲವು ಮೇಕೆಗಳನ್ನು ಚಿರತೆಯೊಂದು ಸಾಯಿಸಿತ್ತು. ‘ತಾಯಿ, ಮರಿ ಚಿರತೆಗಳು ಇಲ್ಲಿಯೇ ಓಡಾಡುವುದನ್ನು ನೋಡಿದ್ದೆವು. ಬಹುಶಃ ತಾಯಿ ಚಿರತೆ ತನ್ನ ಮರಿಗೆ ಬೇಟೆಯಾಡುವುದನ್ನು ಕಲಿಸುತ್ತಿತ್ತೇನೋ’ ಎಂಬ ಸಹಾನುಭೂತಿಯ ಪದಗಳನ್ನು ಹೇಳುತ್ತಾರೆ ಕಾಳನಾಯಕ. ವೈಲ್ಡ್ ಸೇವೆಯ ನೆರವಿನಿಂದ ಕಾಳನಾಯಕ ಅವರಿಗೆ ₹ 9,500 ಪರಿಹಾರ ಪಡೆಯುವುದು ಸಾಧ್ಯವಾಯಿತು.

ಇಂತಹ ದಾಳಿಗಳನ್ನು ತಡೆಯುವ ಸಲುವಾಗಿ ಕೊಟ್ಟಿಗೆಯನ್ನು ಭದ್ರ ಮಾಡಲು ಕಂಬಿಗಳನ್ನೂ, ಮೇಲ್ಚಾವಣಿಯನ್ನೂ ನಿರ್ಮಿಸಿ ಸಾಕುಪ್ರಾಣಿಗಳಿಗೆ ರಕ್ಷಣೆ ಕೊಡುವ ಸಲಹೆಯನ್ನು ವೈಲ್ಡ್ ಸೇವೆ ಕಾಳನಾಯಕ ಅವರಿಗೆ ಕೊಟ್ಟಿತು. ಸಲಹೆಯನ್ನು ಸ್ವೀಕರಿಸಿದ ಕಾಳನಾಯಕ ಸ್ವತಃ ಇಟ್ಟಿಗೆಗಳನ್ನು ಸುಟ್ಟು, ಕೊಟ್ಟಿಗೆಯನ್ನು ತಾವೇ ನಿರ್ಮಿಸಿದರು. ಅದಕ್ಕೆ ವೈಲ್ಡ್ ಸೇವೆ ಸಹ ಧನಸಹಾಯ ಮಾಡಿತು.

ಅದನ್ನು ಕಟ್ಟಲು ಬೇಕಾದ ಹಣವನ್ನು ಹೊಂದಿಸಿಕೊಳ್ಳಲು ತಡ ಮಾಡುವುದರ ಬದಲಿಗೆ ನಾವೇ ಮಾಡಿಕೊಂಡರೆ ಒಂದಷ್ಟು ಉಳಿತಾಯವೂ ಆಗುತ್ತದೆ ಎನಿಸಿ ನಾವೇ ಕಟ್ಟಿದೆವು ಎನ್ನುತ್ತಾರೆ ಅವರು. ‘ನಮ್ಮ ಪ್ರಾಣಿಗಳು ಈಗ ಸುರಕ್ಷಿತವಾಗಿವೆ ಎಂಬ ನಂಬಿಕೆಯಿಂದಾಗಿ ನಾವು ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡುವುದು ಸಾಧ್ಯವಾಯಿತು’ ಎನ್ನುತ್ತಾರೆ ಕಾಳನಾಯಕ.

(ಹೊಸ ಶೆಡ್‌ ನಿರ್ಮಿಸಿಕೊಂಡಿರುವ ಕುಟುಂಬ)

ವನ್ಯಜೀವಿ-ಮಾನವ ಸಂಘರ್ಷದ ವಿವಿಧ ಆಯಾಮಗಳನ್ನು ಗುರುತಿಸಿ, ನಷ್ಟವನ್ನು ಕಡಿಮೆ ಮಾಡುವ ಪ್ರಯತ್ನಕ್ಕೆ ಭಾರತದಲ್ಲಿ ಸಂರಕ್ಷಣಾ ಯೋಜನೆಗಳು ಆದ್ಯತೆ ಕೊಡಬೇಕಾಗಿದೆ. ವಾಸ್ತವ ಸನ್ನಿವೇಶವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು, ಸಂಬಂಧಪಟ್ಟವರೆಲ್ಲರ ಜೊತೆ ಚರ್ಚಿಸಿ, ವನ್ಯಜೀವಿಗಳ ನಡವಳಿಕೆಯನ್ನು ಗುರುತಿಸಿ ವೈಜ್ಞಾನಿಕ ಪರಿಹಾರಗಳನ್ನು ರೂಪಿಸಿ ಅನ್ವಯಿಸುವುದು ತುರ್ತು ಅಗತ್ಯವಾಗಿದೆ.

ವನ್ಯಜೀವಿ ಮಾನವ ಸಂಘರ್ಷಗಳನ್ನು ಕಡಿಮೆ ಮಾಡುವ ವಿವಿಧ ಪರಿಹಾರೋಪಾಯಗಳ ಪೈಕಿ ಕ್ಷಿಪ್ರವಾಗಿ ಪರಿಹಾರ ಹಣವನ್ನು ವಿತರಿಸುವುದು ಒಂದು. ಭಾರತದ ವನ್ಯಜೀವಿ ವಿಜ್ಞಾನಿಗಳು ಮತ್ತು ಸಂರಕ್ಷಣಾಗಾರರು ತಿಳಿವಳಿಕೆ ಮೂಡಿಸುವ ಆಂದೋಲನಗಳು, ಮುನ್ನೆಚ್ಚರಿಕೆ ನೀಡುವ ಉಪಕರಣಗಳು ಮತ್ತು ವಿಮಾ ಯೋಜನೆಗಳ ಮೂಲಕ ಸಂಘರ್ಷಕ್ಕೆ ಸಿಲುಕಿಕೊಂಡವರಿಗೆ ಶಕ್ತಿ ತುಂಬುತ್ತಿದ್ದಾರೆ.

ವನ್ಯಜೀವಿ ಮಾನವ ಸಂಘರ್ಷಗಳಿಂದ ಉಂಟಾಗುವ ಅಸಹನೆಯನ್ನು ಕಡಿಮೆ ಮಾಡಿ, ಮಾನವರ ಜೊತೆ ವನ್ಯಜೀವಿಗಳ ಸಹಜೀವನವನ್ನು ಉತ್ತೇಜಿಸುವ ಸಲುವಾಗಿ ಅರಣ್ಯ ಇಲಾಖೆಯ, ಜನರ, ವಿಜ್ಞಾನಿಗಳ, ಸಂರಕ್ಷಣಾಗಾರರ ಮತ್ತು ಸ್ವಸಹಾಯ ಸಂಸ್ಥೆಗಳ ನಡುವೆ ಸಮನ್ವಯ ಪೂರ್ಣ ಸಂಬಂಧ ಇರುವುದು ಎಷ್ಟು ಮುಖ್ಯ ಎಂಬುದನ್ನು ವೈಲ್ಡ್ ಸೇವೆ ತೋರಿಸಿಕೊಟ್ಟಿದೆ.

(ಹೊಸ ಶೆಡ್‌ ನಿರ್ಮಿಸಿಕೊಂಡಿರುವ ಕುಟುಂಬ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT