ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪಾಠದ ಟೀಚರ್‌

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಇದೊಂದು ಬೆಂಕಿಯಲ್ಲಿ ಅರಳಿದ ಹೂವಿನ ಕಥೆ. ಕಥಾ ನಾಯಕಿಗೆ ತಂದೆ ಇಲ್ಲ. ತಾಯಿ ಹಾಗೂ ಇಬ್ಬರು ತಂಗಿಯರು. ಡಿ.ಎಡ್, ಓದು ಮುಗಿಸಿ ಶಿಕ್ಷಕಿಯಾಗುವ ಅವಕಾಶವಿದ್ದರೂ ಮನೆ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆ. ವೃತ್ತಿ ಹಾಗೂ ಮನೆಯೊಡೆತನದ ಆಯ್ಕೆ ಪ್ರಶ್ನೆ ಬಂದಾಗ ವೃತ್ತಿಗೆ ವಿದಾಯ ಹೇಳುವ ತೀರ್ಮಾನ.

ತಂಗಿಯರಿಬ್ಬರ ಮದುವೆ ಮಾಡಿಸಿ ದಡ ಸೇರಿಸಿದ ನೆಮ್ಮದಿ. ಪಾಳು ಬಿದ್ದು ವರ್ಷಕ್ಕೆ ₹10 ಸಾವಿರ ಆದಾಯವನ್ನೂ ತರದ ಹೊಲವನ್ನು ₹10 ಲಕ್ಷ ಆದಾಯ ತರುವಂತೆ ಪಳಗಿಸಿದ ಕೃಷಿ ಶಿಕ್ಷಕಿ ಅರುಣಾಳ ಕಥೆ ಇದು. ಸಿನಿಮಾ ಅಲ್ಲ, ಕಣ್ಣೆದುರಿನ ವಾಸ್ತವ.

ಗುಬ್ಬಿ ತಾಲ್ಲೂಕು ಯರಬಳ್ಳಿಯಲ್ಲಿರುವ ಇವರ ನಾಲ್ಕೂವರೆ ಎಕರೆ ತೋಟ ವೈವಿಧ್ಯಮಯ ಬೆಳೆಗಳ ತಾಣ. ಅಲ್ಪಾವಧಿ ಬೆಳೆಗಳಷ್ಟೇ ದೀರ್ಘಾವಧಿ ಬೆಳೆಗಳಿಗೂ ಇಲ್ಲಿ ಪ್ರಾಧಾನ್ಯ. 1200 ಅಡಿಕೆ, 250 ತೆಂಗಿನ ಮರಗಳು ಇಲ್ಲಿವೆ. ಕಾಳು ಮೆಣಸು, ಬಾಳೆ, ವೆನಿಲ್ಲಾ, ನುಗ್ಗೆ, ಹಲಸು, ದಾಳಿಂಬೆ, ಹರಳು, ಅಗಸೆ, ರಾಗಿ ಹಾಗೂ ವಿವಿಧ ರೀತಿಯ ಹೂ ಬೆಳೆಗಳು, ಐದಾರು ರೀತಿಯ ತರಕಾರಿಗಳ ಸಂಯೋಜನೆಯನ್ನು ಇಲ್ಲಿ ಕಾಣಬಹುದು.

ಇವರ ತಂದೆ ಇದ್ದಾಗ ಇಷ್ಟೂ ಹೊಲವನ್ನು ಹತ್ತು ವರ್ಷಗಳ ಅವಧಿಗೆ ಕೇವಲ ₹ 80 ಸಾವಿರಕ್ಕೆ ಭೋಗ್ಯಕ್ಕೆ ಕೊಟ್ಟಿದ್ದರು. ಕಳೆದ ಒಂದು ದಶಕದಲ್ಲಿ ತಾಯಿ ಲಕ್ಷ್ಮಮ್ಮ ಹಾಗೂ ಮೂವರು ಹೆಣ್ಣು ಮಕ್ಕಳ ಕೈಯಲ್ಲಿ, ಅದೂ ಅರುಣಾಳ ಮುಂದಾಳತ್ವದಲ್ಲಿ ನಾಲ್ಕು ಜನ ನಿಂತು ನೋಡುವಂತೆ ಬದಲಾಗಿದೆ.

ಮುಚ್ಚಿಗೆಗೆ ಪ್ರಾಶಸ್ತ್ಯ: ಈ ಭಾಗದಲ್ಲಿ ನೀರಿನ ಕೊರತೆ ವಿಪರೀತ. ಅಂತರ್ಜಲ ಕುಸಿದು ಬಹುತೇಕ ಕೊಳವೆಬಾವಿಗಳೆಲ್ಲಾ ಒಣಗಿವೆ. ಅರುಣಾ ಜಮೀನಿನಲ್ಲಿ ಎರಡು ಕೊಳವೆಬಾವಿಗಳಿದ್ದು ಆ ನೀರನ್ನೇ ಇಡೀ ತೋಟಕ್ಕೆ ಬಳಸುತ್ತಾರೆ. ಹನಿ ನೀರಾವರಿಗೆ ಆದ್ಯತೆ. ಹೆಚ್ಚು ನೀರು ಕೇಳುವ ಭತ್ತಕ್ಕೆ ಜಾಗವಿಲ್ಲ. ಜೊತೆಗೆ ಇಡೀ ತೋಟದಲ್ಲಿ ಎದ್ದು ಕಾಣುವ ಅಂಶ ಮುಚ್ಚಿಗೆ. ಒಣಗಿದ ಗರಿ, ಎಲೆ, ಬಳ್ಳಿ, ಅಡಿಕೆ ಪಟ್ಟೆಗಳನ್ನು ಮುಚ್ಚಿಗೆಯಾಗಿ ಬಳಸಲಾಗಿದೆ. ಅಲಸಂದೆ, ಹುರುಳಿಯಂತಹ ದ್ವಿದಳ ಧಾನ್ಯಗಳನ್ನೂ ಜೀವಂತ ಮುಚ್ಚಿಗೆ ಬೆಳೆಯಾಗಿ ಹಾಕುತ್ತಾರೆ. ಗಿಡಗಳ ಬುಡಕ್ಕಷ್ಟೇ ಅಲ್ಲದೆ ಹೂವಿನ ಬೆಳೆಗಳ ಸಾಲುಗಳ ನಡುವೆಯೂ ಮುಚ್ಚಿಗೆ ಹಾಕಿ ನೀರುಳಿಸಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಿದೆ.

ಕೊಟ್ಟಿಗೆಯ ತ್ಯಾಜ್ಯವನ್ನು ಹಾಗೆಯೇ ತಂದು ಗಿಡಗಳ ಬುಡಕ್ಕೆ ಹಾಕುವುದು ಇವರ ವಿಶೇಷ. ಮುಚ್ಚಿಗೆ ಮಾಡುವುದರಿಂದ ಕಳೆ ತೆಗೆಸುವ ಶ್ರಮದಲ್ಲಿಯೂ ಉಳಿತಾಯವಾಗಿರುವುದನ್ನು ಇವರು ಗಮನಿಸಿದ್ದಾರೆ. ಮುಚ್ಚಿಗೆಯ ಮಹತ್ವವನ್ನು ಅರಿತಿರುವ ಅರುಣಾ ಅದರಲ್ಲಿ ಹಲವು ಪ್ರಯೋಗಗಳಿಗೂ ಮುಂದಾಗಿದ್ದಾರೆ. ತೆಂಗಿನ ಚಿಪ್ಪನ್ನು ಸುಟ್ಟು ಇದ್ದಿಲು ಮಾಡಿ ಗಿಡಗಳ ಬುಡದಲ್ಲಿ ಹೂಳುವ ‘ಬಯೋಚೆರ್’ ಅನ್ನು ಇತ್ತೀಚೆಗೆ ಬಳಸುತ್ತಿದ್ದಾರೆ. ಐಡಿಎಫ್ ಸಂಸ್ಥೆ ರಚಿಸಿರುವ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ. ಸಂಸ್ಥೆ ನೀಡುವ ಸುಸ್ಥಿರ ಕೃಷಿ ಮಾಹಿತಿಗಳು ಇವರ ಕೃಷಿಗೆ ಪೂರಕವಾಗಿದ್ದು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಕೈಮುಟ್ಟಿ ಕೆಲಸ: ಹೂವು, ತರಕಾರಿಗಳನ್ನು ಪ್ರತಿ ವಾರ ಅರುಣಾ ಅವರೇ ನೇರವಾಗಿ ಮಾರುಕಟ್ಟೆಗೆ ಒಯ್ಯುತ್ತಾರೆ. ಬಸ್ಸು ಅಥವಾ ಆಟೋಗಳನ್ನಿಡಿದು ಗುಬ್ಬಿ, ಶಿರಾ ಇಲ್ಲವೇ ದೂರದ ತುಮಕೂರಿಗೂ ಹೋಗುವುದುಂಟು. ಅಂಜಿಕೆಯಾಗಲೀ, ಮುಜುಗರವಾಗಲೀ ಇಲ್ಲ. ಯಾರ ಮೇಲೂ ಅವಲಂಬನೆಯಾಗದೆ, ಮಧ್ಯವರ್ತಿಗಳ ಜಾಲಕ್ಕೆ ಬೀಳದಿರುವುದೇ ಇವರ ಕೃಷಿ ಯಶಸ್ಸಿನ ಮೂಲ. ಕಿರಿಯ ತಂಗಿ ಸರೋಜಮ್ಮ ಹಾಗೂ ಆಕೆಯ ಪತಿ ಸುರೇಶ್ ಇದೇ ಗ್ರಾಮದಲ್ಲಿದ್ದು ಕೃಷಿ ಕೆಲಸಗಳಲ್ಲಿ ಕೈಜೋಡಿಸುತ್ತಾರೆ.

ಕಳೆ ತೆಗೆಯುವುದು, ಹೂ ಬಿಡಿಸುವುದು, ಔಷಧಿ ಸಿಂಪರಣೆ, ಗೊಬ್ಬರ ಚೆಲ್ಲುವುದು, ಬೇಲಿ ಹಾಕುವುದು ಇತ್ಯಾದಿ ಬಹುತೇಕ ಹೊಲಗೆಲಸಗಳನ್ನು ಇವರೇ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಕೆಲಸವಿದ್ದಾಗ ಮಾತ್ರ ಕೂಲಿಯವರ ಅವಲಂಬನೆ.

ಆರಂಭದಲ್ಲಿ ಉಳುಮೆಯನ್ನೂ ಅರುಣಾ ಮಾಡುತ್ತಿದ್ದರಂತೆ, ‘ಆ ಕಷ್ಟವನ್ನು ನೋಡಲಾಗದೆ ನಾನೇ ಅದನ್ನು ಬಿಡಿಸಿದೆ’ ಎನ್ನುತ್ತಾರೆ ಅಮ್ಮ. ಎರಡು ಹಸು ಹಾಗೂ ಹಲವು ಕುರಿಗಳಿದ್ದು ಸಗಣಿ ಗೊಬ್ಬರಕ್ಕೇನೂ ಕೊರತೆ ಇಲ್ಲ. ಕಳೆದ ಮೂರು ವರ್ಷಗಳಿಂದ ರಾಸಾಯನಿಕ ಆಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯತ್ತ ಹೊರಳಿದ್ದಾರೆ. ಇದರಿಂದ ಖರ್ಚಿನಲ್ಲಿ ಮತ್ತಷ್ಟು ಉಳಿತಾಯ.

‘ನನ್ ಮಗಳು ಅಷ್ಟೊಂದು ಓದಿ ಯವಸಾಯ ಮಾಡಕ್ಕೆ ಬಂದಾಗ ನೆಂಟರು ಇಷ್ಟರು ತಲಾಕೊಂದೊಂದು ಮಾತಾಡಿದರು, ಅದುಕ್ಕೆಲ್ಲಾ ಕ್ಯಾರೆ ಅನ್ನಲಿಲ್ಲ, ಈಗ ಎಲ್ರೂ ಚೆನಾಗ್ ನೋಡ್ತರೆ’ ಎನ್ನುತ್ತಾರೆ ತಾಯಿ ಲಕ್ಷ್ಮಮ್ಮ. ಹೈಸ್ಕೂಲು ಹುಡುಗಿಯಂತೆ ತೆಳ್ಳಗಿರುವ ಅರುಣಾ ಮಾನಸಿಕವಾಗಿ ಸದೃಢ. ಆಕೆಗೊಂದು ದೂರದೃಷ್ಟಿ ಇದೆ.

ಗ್ರಾಮದ ಯುವಕರೆಲ್ಲಾ ವ್ಯವಸಾಯ ನಂಬಿದರೆ ಸುಖವಿಲ್ಲವೆಂದು ನಗರಗಳತ್ತ ಮುಖ ಮಾಡಿರುವಾಗ ಈ ಕುಟುಂಬವೊಂದು ಅಪವಾದ. ಕಳೆದ ಹತ್ತು ವರ್ಷಗಳಿಂದ ನಷ್ಟವನ್ನೇ ಅನುಭವಿಸಿಲ್ಲ ಇವರು. ಬದಲಿಗೆ ವಾರ್ಷಿಕ ಎರಡು ಲಕ್ಷದಿಂದ ಆರಂಭವಾದ ಆದಾಯ ಇಂದು ಹತ್ತು ಲಕ್ಷ ದಾಟಿದೆ. ಅದರಲ್ಲಿ ಸುಮಾರು ಎರಡೂವರೆ ಲಕ್ಷ ಕೂಲಿ, ಬೀಜ, ಸಾಗಾಣಿಕೆ, ಗೊಬ್ಬರ ಇತ್ಯಾದಿಗಳ ಖರ್ಚು ಬರುತ್ತದೆ. ಉಳಿದಿದ್ದು ನಿವ್ವಳ ಲಾಭ. ಹಾಗೆಂದು ಇವರೇನೂ ಅತ್ಯಾಧುನಿಕ ಕೃಷಿ ಮಾಡುತ್ತಿಲ್ಲ. ಕನಿಷ್ಠ ಟಿಲ್ಲರ್ ಸಹ ಇವರ ಬಳಿ ಇಲ್ಲ. ಅದ್ಭುತ ಬೆಳೆ ಸಂಯೋಜನೆ, ಕೈಮುಟ್ಟಿ ಕೆಲಸ, ಕನಿಷ್ಠ ಅವಲಂಬನೆ ಇವರ ಕೃಷಿಯಲ್ಲಿದೆ. ಅರುಣಾ ಸಂಪರ್ಕಕ್ಕೆ: 8762576207.

**

ತೆಂಗಿನ ರೋಗಕ್ಕೆ ಸ್ವಯಂವೈದ್ಯ

ತೋಟದ ನೂರಕ್ಕೂ ಹೆಚ್ಚು ತೆಂಗಿನ ಮರಗಳ ಕಾಂಡದಲ್ಲಿ ರಸ ಸೋರುವ ಸಮಸ್ಯೆ ಕಾಣಿಸಿಕೊಂಡಿತು. ಇದಕ್ಕೆ ತುತ್ತಾದ ಮರಗಳು ನಿಧಾನವಾಗಿ ಒಣಗಿ ಸಾಯುತ್ತಿದ್ದವು. ಅಲ್ಲಿ ಇಲ್ಲಿ ಮಾಹಿತಿ ಸಂಗ್ರಹಿಸಿದ ಅರುಣಾ ತಾವೇ ಒಂದು ಔಷಧಿ ತಯಾರಿಸಿ ಹಚ್ಚುತ್ತಿದ್ದಾರೆ.

ಸಗಣಿ, ಗಂಜಲ ಮತ್ತು ಸುಣ್ಣವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಪೇಸ್ಟ್‌ನಂತೆ ಮಾಡಿಕೊಂಡು ರಸ ಸೋರುವ ಭಾಗಕ್ಕೆ ಬ್ರಶ್ ಬಳಸಿ ಲೇಪಿಸುತ್ತಾರೆ. ಲೇಪನಕ್ಕೆ ಮುನ್ನ ರಸ ಸೋರುವ ಕಾಂಡದ ಬಳಿ ಸ್ವಲ್ಪ ಕೆತ್ತಿ ಗಾಯ ಮಾಡಿಕೊಳ್ಳಬೇಕು. ಮೂರು ತಿಂಗಳಿಂದ ಹೀಗೆ ಮಾಡುತ್ತಿದ್ದು ಈಗ ರಸ ಸೋರುವಿಕೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT