ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಹುಟ್ಟುಹಬ್ಬ

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅನುಷ್ಕಾ ಶೆಟ್ಟಿ

ಬಾಹುಬಲಿಯಲ್ಲಿ ಪ್ರಭಾಸ್‌ ಹೆಗಲ ಮೇಲೆ ಕಾಲಿಟ್ಟು ಬಳುಕುತ್ತಾ ನಡೆದು ದೋಣಿಯಲ್ಲಿ ಕುಳಿತ ದೇವಸೇನಾ ಗೊತ್ತಾ? ಅವರೇ ಅನುಷ್ಕಾ ಶೆಟ್ಟಿ (ಜನನ: 1981). ಮಂಗಳೂರು ಮೂಲದ ಅನುಷ್ಕಾ ಕನ್ನಡದಲ್ಲಿ ಬಣ್ಣಹಚ್ಚುವ ಆಸೆ ಇಟ್ಟುಕೊಂಡಿದ್ದರು. ಆದರೆ ಮಿಂಚಿದ್ದು ಮಾತ್ರ ತೆಲುಗು ಸಿನಿರಂಗದಲ್ಲಿ.

ಇವರ ಅಭಿನಯ ಸಾಮರ್ಥ್ಯವನ್ನು ಸಾರಿಹೇಳಿದ ಸಿನಿಮಾ ‘ವೇದಂ’ (2010), ಇವರ ಮೈಮಾಟವನ್ನು ತೆರೆದಿಟ್ಟ ಸಿನಿಮಾ ‘ಬಿಲ್ಲಾ’ (2009). ‘ರುದ್ರಮಾದೇವಿ’, ‘ಬಾಹುಬಲಿ’ ಚಿತ್ರಗಳ ರಾಜಕುಮಾರಿ ಲುಕ್‌ಗೆ ಮುನ್ನುಡಿ ಬರೆದದ್ದು ‘ಅರುಂಧತಿ’ (2009). ಈ ಚಿತ್ರದ ಅಭಿನಯಕ್ಕಾಗಿ ಹತ್ತಾರು ಪ್ರಶಸ್ತಿಗಳ ಗೌರವವೂ ಸಿಕ್ಕಿತ್ತು. ಪ್ರಭಾಸ್-ಅನುಷ್ಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಈಚೆಗಷ್ಟೇ ದೊಡ್ಡ ಸದ್ದು ಮಾಡಿತ್ತು.

**

ಕಮಲ್ ಹಾಸನ್

ಕಮಲ್‌ ಹಾಸನ್ ಸಿನಿಮಾ ಕ್ಷೇತ್ರದ ದೈತ್ಯ ಶಕ್ತಿ. ಅಭಿನಯ, ನಿರ್ದೇಶನ, ಚಿತ್ರಕಥೆ, ನಿರ್ಮಾಣ, ಗಾಯನ, ಗೀತ ರಚನೆ ಹೀಗೆ ಇವರು ಮಾಡದ ಕೆಲಸವಿಲ್ಲ. ತಮಿಳು ಚಿತ್ರರಂಗಕ್ಕೂ ಮೀರಿ ಇವರು ಮಾಡಿದ ಹೆಸರು ದೊಡ್ಡದು. ಮೂರು ರಾಷ್ಟ್ರೀಯ ಪ್ರಶಸ್ತಿ ಸೇರಿ 19 ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ. ರಾಜ್‌ಕಮಲ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಹಲವು ಉತ್ತಮ ಸಿನಿಮಾಗಳ ಕೊಡುಗೆ ನೀಡಿದರು.

1960ರಲ್ಲಿ ಬಾಲ ಕಲಾವಿದನಾಗಿ ‘ಕಲತುರ್ ಕಣ್ಣಮ್ಮಾ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬಂದರು.  ಇದೇ ಸಿನಿಮಾಕ್ಕೆ ರಾಷ್ಟ್ರಪತಿ ಚಿನ್ನದ ಪದಕ ಪಡೆದರು. ಕಮಲ್ ಹಾಸನ್ ಅವರಿಗೆ ಅಭಿನಯ ಕಲಿಸಿದ್ದು ನಿರ್ದೇಶಕ ವಾರಣಮ್ ವಿಜಯ್. ‘ಅಪೂರ್ವ ರಾಗಂಗಲ್’ (1975) ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಅಲ್ಲಿಂದ ಶುರುವಾದ ಇವರ ಸಿನಿ ಪಯಣ ವಿಶ್ವರೂಪಂ, ದಶಾವತಾರದಂಥ ಅದ್ಭುತ ಸಿನಿಮಾಗಳನ್ನು ನೀಡಿದರು. ಕಲೈಮಾಮಣಿ (1979), ಪದ್ಮಶ್ರೀ (1990), ಪದ್ಮಭೂಷಣ್ (2014) ಪ್ರಶಸ್ತಿಗಳನ್ನು ಪಡೆದಿದ್ದಾರೆ.

**

ನಂದಿತಾ ದಾಸ್

ಅಭಿನಯ ಮತ್ತು ನಿರ್ದೇಶನ ಎರಡರಲ್ಲೂ ಅಪ್ರತಿಮ ಪ್ರತಿಭಾವಂತೆ ನಂದಿತಾ ದಾಸ್. ಕಲಾವಿದ ಜೀತಿನ್ ದಾಸ್‌ ಮತ್ತು ಬರಹಗಾರ್ತಿ ವರ್ಷಾ ಅವರ ಪುತ್ರಿ ನಂದಿತಾ ದಾಸ್. ಇವರು ಹುಟ್ಟಿದ್ದು 7 ನವೆಂಬರ್ 1969ರಲ್ಲಿ. ಮುವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹತ್ತು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ನಂದಿತಾ. ಫೈರ್ (1996) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಂದಿತಾ ಅದ್ಭುತ ಅಭಿನಯವನ್ನೂ ತೊರಿದರು. ನಂತರ ಅರ್ತ್‌ (1998), ಬವಂಧರ್ (2000), ಕಣ್ಣತಿಲ್ ಮುಥಮಿತ್ತಲ್ (2002) ಅಜಾಗಿ ಬಿಫೋರ್ ರೇನ್ (2007) ಸಿನಿಮಾಗಳ ಮೂಲಕ ಹೆಸರು ಮಾಡಿದರು. ಅವರು ನಿರ್ದೇಶಿಸಿದ ಫಿರಾಕ್ 2008ರ ಟೊರೊಂಟೊ ಸಿನಿಮೋತ್ಸವದಲ್ಲಿ ಪ್ರದರ್ಸನಗೊಂಡು ಹೆಚ್ಚು ಜನಪ್ರಿಯವಾಗಿ ನಂತರ ಸುಮಾರು 50 ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು 20 ಪ್ರಶಸ್ತಿಗಳನ್ನು ಪಡೆದುಕೊಂಡಿತು. 2005 ಹಾಗೂ 2013 ಕಾನ್‌ ಸಿನಿಮೋತ್ಸವದಲ್ಲಿ ಜೂರಿ ಆಗಿ ಭಾಗವಹಿಸಿದ್ದರು ನಂದಿತಾ. ಇವರ ಕಲಾಸಕ್ತಿಯೂ ವಿಶ್ವಮಟ್ಟದ ವೇದಿಕೆಯಲ್ಲಿ ಮನ್ನಣೆ ಪಡೆಯಿತು.

ಮಕ್ಕಳ ಆಡಿಯೊ ಸಿಡಿಗಳ ನಿರ್ಮಾನದಲ್ಲೂ ಮಹತ್ವದ ಪಾತ್ರವಹಿಸಿದರು ನಂದಿತಾ. ‘ಆಲದದ ಮರದ ಕೆಳಗೆ’, ‘ಚರಕ’ ಆಡಿಯೊ ಹೊತ್ತಿಕೆಗಳಿಗೆ ನಿರೂಪಣಾ ದ್ವನಿ ನೀಡಿದ್ದರು. 2002 ಸೋಮ್ಯಾ ಸೇನ್‌ (Saumya Sen) ಎಂಬುಬಬರ ಜತೆ ಮದುವೆಯಾಗಿ 2007ರಲ್ಲಿ ವಿಚ್ಛೇದನ ಪಡೆದರು. ನಂತರ 2010ರಲ್ಲಿ ಸುಬೋಧ ಮಸ್ಕರಾ ಎಂಬ ಉದ್ಯಮಿಯನ್ನು ಮದುವೆಯಾದರು. ಸಮಾಜ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಇರುವ ವರ್ಣಬೇಧದ ವಿರುದ್ಧ ಹೋರಾಡುತ್ತಲೇ ಇದ್ದಾರೆ. ‘Stay Unfair, Stay Beautiful' ಎಂಬ ಅಭಿಯಾನದಲ್ಲೂ ತೊಡಗಿಕೊಂಡಿದ್ದಾರೆ.

**

ರೈಮಾ ಸೇನ್

ಬೆಂಗಾಲಿ ಚೆಲುವೆ ರೈಮಾ ಸೇನ್ ಹುಟ್ಟಿದ್ದು 7 ನವೆಂಬರ್ 1979. ಗಾಡ್‌ ಮದರ್‌ ಸಿನಿಮಾದಲ್ಲಿ ಮಾಡಿದ ಪುಟ್ಟಪಾತ್ರದಲ್ಲೇ ಸಾಕಷ್ಟು ಗಮನ ಸೆಳೆದ ಚೆಲುವೆ ರೈಮಾ. ರಿತುಪರ್ಣೊ ಘೋಷ್ ನಿರ್ದೇಶನದ ‘ಚೋಖರ್ ಬಾಲಿ’ ಸಿನಿಮಾ ಈಕೆಗೆ ಬ್ರೇಕ್ ನೀಡಿದ ಸಿನಿಮಾ. ನಂತರ ವಿದ್ಯಾಬಾಲನ್ ಅವರೊಂದಿಗೆ ಮಾಡಿದ ‘ಪರಿಣೀತ’ ಸಿನಿಮಾ ಒಳ್ಳೆಯ ಹೆಸರು ನೀಡಿತು. ‘ದಸ್’, ‘ಅಂತರ್‌ ಮಹಲ್’ ಸಿನಿಮಾಗಳೂ ಈಕೆಯ ಅಭಿನಯಕ್ಕೆ ಸಾಣೆಹಿಡಿದವು. ತಮ್ಮ ಸಿನಿ ಪಯಣದಲ್ಲಿ ಹೆಚ್ಚಾಗಿ ಪೋಷಕ ಪಾತ್ರವನ್ನೇ ಮಾಡಿದ್ದರೂ ಅವು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದು ಹೋದವು. ವಿಲಿಯಂ ಶೇಕ್ಸ್‌ಪೇಯರ್‌ ಅವರ ನಾಟಕ, ಕವಿತೆಗಳನ್ನು ಆಧರಿಸಿ ಮಾಡಿದ ‘ಹಿದ್ದ್ ಮಜ್ಹರೆ’ ಸಿನಿಮಾದಲ್ಲಿ ಪ್ರಯೋಗತ್ಮಾಕ ಪಾತ್ರದಲ್ಲಿ ಕಾಣಿಸಿಕೊಂಡರು.

ಬೆಂಗಾಲಿ ಸಿನಿಮಾಕ್ಷೇತ್ರದಲ್ಲಿ ಮಿಂಚಿದ ಈ ಚೆಲುವೆಗೆ 2016ರ ನಂತರ ಬಾಲಿವುಡ್‌ನಲ್ಲೂ ಒಳ್ಳೆಯ ಪಾತ್ರಗಳು ಸಿಗಲಾರಂಭಿಸಿದವು. ಬಾಲಿವುಡ್‌ನಲ್ಲಿ ಮಾಡುತ್ತಿರುವ ಸಣ್ಣಪುಟ್ಟ ಪಾತ್ರಗಳೇ ಆಕೆಗೆ ಒಳ್ಳೆಯ ಹೆಸರು ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT