ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ನಿರ್ಮಿಸುವುದು ಸೇನಾಪಡೆಯ ಕೆಲಸ ಅಲ್ಲ

Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸೇನೆ ಇರುವುದು ಯಾವುದಕ್ಕೆ? ಮುರಿದುಬಿದ್ದ ರೈಲ್ವೆ ಸೇತುವೆಯನ್ನು ಕಟ್ಟುವುದಕ್ಕಾ? ಅದೂ ದೊಡ್ಡ ಸೇತುವೆಯೇನೂ ಅಲ್ಲ. ಪ್ರಯಾಣಿಕರು ಬಳಸುವ ಸಾಮಾನ್ಯವಾದ ಒಂದು ಕಾಲ್ಸೇತುವೆ. ಅದನ್ನು ಕಟ್ಟಲು ಸೇನಾ ಸಹಾಯ ಪಡೆಯುವ ಅಗತ್ಯ ಇದೆಯಾ? ಇಂತಹ ಅನುಮಾನವೊಂದು ನಾಗರಿಕರಲ್ಲಿ ಮೂಡಿದೆ. ಮುಂಬೈಯ ಎಲ್ಫಿನ್‌ಸ್ಟನ್‌ ರೈಲು ನಿಲ್ದಾಣದಲ್ಲಿ ಸೆಪ್ಟೆಂಬರ್‌ 29ರಂದು ಕುಸಿದು ಬಿದ್ದು 23 ಜನರನ್ನು ಬಲಿ ತೆಗೆದುಕೊಂಡಿದ್ದ ಕಾಲ್ಸೇತುವೆಯ ಮರು ನಿರ್ಮಾಣಕ್ಕೆ ಸೇನೆಯ ಸಹಾಯ ಪಡೆಯುವ ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಯ ತೀರ್ಮಾನ ಈಗ ವಿವಾದದ ಕಿಡಿ ಹೊತ್ತಿಸಿದೆ.

ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅದೊಂದೇ ಅಲ್ಲ. ಅಲ್ಲಿ ಇನ್ನೂ ಎರಡು ಕಡೆ ರೈಲ್ವೆ ನಿಲ್ದಾಣಗಳ ಬಳಿ ಅಂತಹುದೇ ಕಿರು ಕಾಲ್ಸೇತುವೆಗಳನ್ನು ನಿರ್ಮಿಸುವ ಕೆಲಸಕ್ಕೆ ಸೇನೆಯ ಸಹಾಯ ಪಡೆಯಲು ನಿರ್ಧರಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಮತ್ತು ರೈಲ್ವೆಯ ಕೋರಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಂದಿಸಿದ್ದಾರೆ. ಈಗಾಗಲೇ ಸೇನೆಯ ಎಂಜಿನಿಯರಿಂಗ್‌ ವಿಭಾಗದ ತಜ್ಞರು ಮೂರೂ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ನಿರ್ಮಾಣದ ಎಲ್ಲ ಹಂತಗಳಲ್ಲೂ ಉಸ್ತುವಾರಿ ನಡೆಸಲಿದ್ದಾರೆ. ಬರುವ ಫೆಬ್ರುವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಿದ್ದಾರೆ. ಅಂದರೆ ನಾಗರಿಕ ಸೇವೆಯ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಇಲಾಖೆಗಳ ಎಂಜಿನಿಯರ್‌ಗಳಿಗೆ ಇಂತಹ ಒಂದು ಸಾಧಾರಣ ಸೇತುವೆ ಕಟ್ಟಿಸುವ ಪರಿಣತಿಯೂ ಇಲ್ಲ ಎಂದು ಸರ್ಕಾರವೇ ಹೇಳಿದಂತಾಯಿತು. ಆದರೆ ವಾಸ್ತವದಲ್ಲಿ ಸೇತುವೆ ನಿರ್ಮಾಣ ತಂತ್ರಜ್ಞಾನದಲ್ಲಿ ರೈಲ್ವೆಯ ಎಂಜಿನಿಯರ್‌ಗಳು ತುಂಬ ಮುಂದಿದ್ದಾರೆ. ಎಲ್ಲ ಬಗೆಯ ಸೇತುವೆಗಳನ್ನೂ ನಿರ್ಮಿಸಿದ್ದಾರೆ.

ರಾಜ್ಯ ಸರ್ಕಾರಗಳ ಲೋಕೋಪಯೋಗಿ ಇಲಾಖೆಗಳು ನಿರ್ಮಿಸುವ ಸೇತುವೆಗಳಿಗೆ ಹೋಲಿಸಿದರೆ ರೈಲ್ವೆ ಸೇತುವೆಗಳ ಗುಣಮಟ್ಟದ ಬಗ್ಗೆ ತಕರಾರುಗಳು ಸಹ ಕಡಿಮೆ. ಅವರಲ್ಲೂ ಸಾಮರ್ಥ್ಯ, ದಕ್ಷತೆ ಇರುವಾಗ ಅದನ್ನು ಕಡೆಗಣಿಸಿ ಸೇನೆಗೆ ಈ ಕೆಲಸ ಒಪ್ಪಿಸುವುದು ಅಪೇಕ್ಷಣೀಯ ಅಲ್ಲ. ಅದು ಸೇನೆಯ ಕರ್ತವ್ಯದ ಸ್ವರೂಪವನ್ನೇ ಬದಲಿಸುತ್ತದೆ, ರೈಲ್ವೆ ಎಂಜಿನಿಯರುಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಮಹಾರಾಷ್ಟ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಈ ಸಂಗತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು.

ಸೇನೆಯ ಕರ್ತವ್ಯ, ಹೊಣೆಗಾರಿಕೆ, ಅದಕ್ಕೆ ದೊರೆಯುತ್ತಿರುವ ತರಬೇತಿ... ಎಲ್ಲವೂ ದೇಶದ ಗಡಿ ರಕ್ಷಣೆಗೆ ಸಂಬಂಧಪಟ್ಟದ್ದು. ಸೈನಿಕರು ಆ ಕೆಲಸವನ್ನೇ ಮಾಡಬೇಕು. ಶತ್ರು ದಾಳಿಯಿಂದ ದೇಶವನ್ನು ಕಾಪಾಡುವ ಕಾರ್ಯಕ್ಕೆ ನಿರಂತರ ಜಾಗೃತಿಯ ಅವಶ್ಯಕತೆಯಿದೆ. ಅದಕ್ಕಾಗಿ ಹಗಲು– ಇರುಳು, ಮಳೆ–ಚಳಿ–ಗಾಳಿ ಎಂಬ ಪರಿವೆಯಿಲ್ಲದೆ ಸದಾಕಾಲವೂ ಸೇನೆ ಸನ್ನದ್ಧ ಸ್ಥಿತಿಯಲ್ಲಿಯೇ ಇರಬೇಕಾಗುತ್ತದೆ. ಆದರೆ ಒಂದು ವೇಳೆ ಭೂಕಂಪ, ಪ್ರವಾಹದಂತಹ ಅನಿರೀಕ್ಷಿತ ನೈಸರ್ಗಿಕ ಪ್ರಕೋಪಗಳು ಉಂಟಾದಾಗ ಪರಿಹಾರ ಕಾರ್ಯಗಳಿಗೆ ಸೇನೆಯನ್ನು ಬಳಸುವ ಪರಿಪಾಟವಿದೆ. ವ್ಯಾಪಕ ಗಲಭೆ, ನಿಯಂತ್ರಣ ಮೀರಿದ ಹಿಂಸಾಚಾರ ನಡೆದಾಗ ನಾಗರಿಕ ಆಡಳಿತಕ್ಕೆ ನೆರವಾಗಲು ಸೇನೆಯನ್ನು ಕರೆಸಲಾಗುತ್ತಿದೆ. ಆದರೆ, ‘ಇದೂ ಸರಿಯಲ್ಲ.

ಬಾಹ್ಯ ಶತ್ರುಗಳನ್ನು ಸದೆಬಡಿಯಲು ತರಬೇತಾದ ಸಶಸ್ತ್ರ ಪಡೆಯನ್ನು ದೇಶದೊಳಗಿನ ನಾಗರಿಕರನ್ನು ನಿಯಂತ್ರಿಸಲು ಬಳಸುವುದು ತಪ್ಪು’ ಎಂಬ ಅಭಿಪ್ರಾಯ ದಟ್ಟವಾಗಿದೆ. ಹೀಗಿರುವಾಗ, ಸಣ್ಣ ಸೇತುವೆ ಕಟ್ಟಲು ಕೂಡ ಸೇನೆ ಬರಬೇಕು ಎಂಬ ಧೋರಣೆಯೇ ಸುತರಾಂ ಸರಿಯಲ್ಲ. ಇದೇ ಸ್ಥಿತಿ ಮುಂದುವರಿದರೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ಸೇನೆ ಬರಬೇಕಾಗಬಹುದು. ಅಲ್ಲಿಗೆ ನಾಗರಿಕ ವ್ಯವಸ್ಥೆಯೊಂದರ ಘನತೆ, ಗೌರವಗಳು ಮಣ್ಣುಪಾಲಾದಂತೆಯೇ ಸರಿ. ಸೇನೆಯ ಅನೇಕ ನಿವೃತ್ತ ಅಧಿಕಾರಿಗಳು, ಪ್ರತಿಪಕ್ಷಗಳ ರಾಜಕಾರಣಿಗಳು ಸಹ ಸೇತುವೆಗೆ ಸೇನೆ ಬಳಸುವುದನ್ನು ಕಟುವಾಗಿ ಟೀಕಿಸಿದ್ದಾರೆ. ಅವರ ಆಕ್ಷೇಪದಲ್ಲಿ ತರ್ಕ ಇದೆ. ಹಿಂದೆ ಯುಪಿಎ ಸರ್ಕಾರ ಇದ್ದಾಗ 2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಯದಲ್ಲೂ ಕಿರುಸೇತುವೆಯೊಂದರ ದುರಸ್ತಿ ಕೆಲಸವನ್ನು ಸೇನೆಗೆ ವಹಿಸಲಾಗಿತ್ತು. ಕಳೆದ ವರ್ಷ ದೆಹಲಿಯ ಯಮುನಾ ದಂಡೆಯಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಕಾರ್ಯಕ್ರಮಕ್ಕೆ ತೇಲುವ ಸೇತುವೆ, ಏಪ್ರಿಲ್‌ನಲ್ಲಿ ಕೇರಳದಲ್ಲಿ ಪುಟ್ಟ ಸೇತುವೆ ನಿರ್ಮಾಣದಲ್ಲೂ ಸೇನೆಯನ್ನು ತೊಡಗಿಸಲಾಗಿತ್ತು. ಈ ಚಾಳಿ ತಪ್ಪು. ನಾಗರಿಕ ಆಡಳಿತ ಮಾಮೂಲಾಗಿ ನಿಭಾಯಿಸಬೇಕಾದ ಕೆಲಸಕ್ಕೆ ಸೇನೆ ಬಳಕೆಯನ್ನು ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT