ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಕನಸು ಆದೀತೆ ನನಸು!

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಕಟ್ಟಿಟ್ಟ ಬುತ್ತಿ ಎಂಬ ವಾತಾವರಣ ಈಗ ಇದೆ
Last Updated 6 ನವೆಂಬರ್ 2017, 19:30 IST
ಅಕ್ಷರ ಗಾತ್ರ

* ಆರ್‌.ಪಿ. ಜಗದೀಶ್‌

ರಾಜ್ಯದ ರಾಜಕೀಯ ಭವಿಷ್ಯ ಅತಂತ್ರ ಸ್ಥಿತಿಯಲ್ಲಿರುವಂತೆ ಕಾಣುತ್ತದೆ. ಪ್ರಮುಖ ಮೂರೂ ಪಕ್ಷಗಳಲ್ಲಿ ಯಾವ ಪಕ್ಷಕ್ಕೆ ನಿಚ್ಚಳ ಬಹುಮತ ಸಿಗಬಹುದು ಎಂಬುದರ ಸ್ಪಷ್ಟ ಚಿತ್ರಣ ಕಾಣುತ್ತಿಲ್ಲ. ಮೇಲ್ನೋಟಕ್ಕೆ ತ್ರಿಶಂಕು ಸ್ಥಿತಿ ಕಟ್ಟಿಟ್ಟ ಬುತ್ತಿ ಎಂಬಂತಿದೆ. ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿ ಹಾಗೂ ಮತ್ತೊಂದು ಪ್ರಬಲ ಪಕ್ಷವಾದ ಜೆಡಿಎಸ್‌ನಲ್ಲಿ ಜನಾಕರ್ಷಕ ವ್ಯಕ್ತಿಗಳು ಹಾಗೂ ಶಕ್ತಿ ಎಂದರೆ ಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು. ‘ಅಹಿಂದ’ ಕಾಂಗ್ರೆಸ್ ಪರ; ಒಕ್ಕಲಿಗರು ಜೆಡಿಎಸ್‌ನ ಕಟ್ಟಾ ಬೆಂಬಲಿಗರು ಎಂಬ ಭಾವನೆ ಇದೆ. ಲಿಂಗಾಯತರು–ವೀರಶೈವರು ವಿಶೇಷವಾಗಿ ಬಿಜೆಪಿಯ ಬೆನ್ನೆಲುಬು. ಆದರೆ ಇವರ ನಡುವಿನ ಜಗಳ ಚುನಾವಣೆ ವೇಳೆಗೆ ಯಾವ ತಿರುವು ಪಡೆಯಬಹುದೋ ನೋಡಬೇಕು.

ಆದರೆ ಈ ತ್ರಿಮೂರ್ತಿಗಳು ಹಿಂದಿನಂತೆ ಈಗ ಆಯಾ ಪಕ್ಷದ ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ. ಇವರ ಪ್ರತೀ ಹೆಜ್ಜೆ ಹಾಗೂ ನಿರ್ಧಾರಗಳನ್ನು
ಪ್ರಶ್ನಿಸಲಾಗುತ್ತಿದೆ. ಈ ಕಾರಣದಿಂದ ಆಯಾ ಪಕ್ಷದ ಉಳಿದ ನಾಯಕರನ್ನು ಹಾಗೂ ಇತರ ಜಾತಿಗಳನ್ನು ಪರಿಗಣಿಸುವುದು ಅನಿವಾರ್ಯ. ಮೂರೂ ಪಕ್ಷ
ಗಳೂ ಜನರ ಮನಗೆಲ್ಲುವಲ್ಲಿ ವಿಫಲವಾಗಿವೆ. ‘ಯಾರೇ ಅಧಿಕಾರಕ್ಕೆ ಬರಲಿ, ಅವರ ಹಣೆಬರಹ ಗೊತ್ತಿದೆ. ನಮ್ಮ ಗೋಳು, ಸಮಸ್ಯೆ ಕೇಳಲು ಅವರಿಗೆ ಸಮಯವಿರುವುದಿಲ್ಲ’ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಜೊತೆಗೆ ಮೂರೂ ಪಕ್ಷಗಳಲ್ಲೂ ಗುಂಪುಗಾರಿಕೆ, ಕಿತ್ತಾಟ, ಸ್ವಜಾತಿ ಪ್ರೇಮ, ಅಹಂ, ಅಧಿಕಾರದಲ್ಲಿದ್ದಷ್ಟೂ ದಿನ ದೋಚುವ ಪ್ರವೃತ್ತಿ ತಾಂಡವವಾಡುತ್ತಿದೆ.

ಇದರ ಮಧ್ಯೆ ಅತಿವೃಷ್ಟಿ, ಅನಾವೃಷ್ಟಿಯ ಅನಾಹುತ ಬೇರೆ. ಈ ಪರಿಸ್ಥಿತಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಬದಲು, ಆರು ತಿಂಗಳ ನಂತರ ಬರಲಿರುವ ಚುನಾವಣೆಗೆ ಜಿದ್ದಿಗೆ ಬಿದ್ದವರಂತೆ ಇಂದೇ ಆತುರ ತೋರಿಸುತ್ತಿರುವುದು ಅವರಲ್ಲಿರುವ ಆತಂಕಕ್ಕೆ ನಿದರ್ಶನ.

ನಾನಾ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು ಸಿದ್ದರಾಮಯ್ಯ ಅವರಿಗೆ ವರವಾಯಿತು. ಹೈಕಮಾಂಡ್ ಅನ್ನು ತೃಪ್ತಿಪಡಿಸುವ ಕಲೆಯನ್ನೂ ಕರಗತ ಮಾಡಿಕೊಂಡರು. ಕ್ರಮೇಣ ಆಡಳಿತ ಹಾಗೂ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಗಟ್ಟಿ ನಿರ್ಧಾರಗಳ ಮೂಲಕ ತಮ್ಮ ನಿಜರೂಪ ಪ್ರದರ್ಶಿಸಲಾರಂಭಿಸಿದರು. ‘ಅಹಿಂದ ನಾಯಕ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡು ಬಡವರ ಪರ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪಕ್ಷದೊಳಗಿನ ಹಾಗೂ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು.

ಆದರೆ ಇದು ಅವರ ಸರ್ವಾಧಿಕಾರಿ ಧೋರಣೆಗೂ ದಾರಿ ತೆಗೆಯಿತು. ಅವರ ಈ ನಡವಳಿಕೆಯಿಂದ ನೊಂದ ಮೂಲ ಕಾಂಗ್ರೆಸ್ಸಿಗರು ಹಾಗೂ ಪಕ್ಷದ ಹಿರಿಯರಾದ ಎಸ್.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್, ವಿಶ್ವನಾಥ್... ಹೀಗೆ ಹಲವರು ಪಕ್ಷ ತ್ಯಜಿಸಿದರು. ಆದರೂ ಇದಕ್ಕೆಲ್ಲ ಸೊಪ್ಪು ಹಾಕದ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಹಾಗೂ ತಾವೇ ಮುಂದೆಯೂ ಮುಖ್ಯಮಂತ್ರಿ ಎಂದು ಸ್ವಯಂ ಘೋಷಿಸಿಕೊಂಡಿರುವುದನ್ನು ಆತ್ಮವಿಶ್ವಾಸ ಎನ್ನಬೇಕೋ ಅಥವಾ ಅಹಂ ಎನ್ನಬೇಕೋ ಗೊತ್ತಿಲ್ಲ. ಆದರೆ ಈ ಮೂಲಕ ಹೈಕಮಾಂಡ್‌ಗೂ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಅವರ ಈ ವರ್ತನೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ಪಕ್ಷದ ಹಿರಿಯ ನಾಯಕರ ನಿದ್ದೆ ಕೆಡಿಸಿದೆ. ಮೊದಲೇ ಬೂದಿ ಮುಚ್ಚಿದ ಕೆಂಡದಂತಿರುವ ಗುಂಪುಗಾರಿಕೆಗೆ ಈಗ ಚಾಲನೆ ದೊರೆತಂತಾಗಿದೆ.

ಇನ್ನು ಟಿಕೆಟ್ ಹಂಚಿಕೆ ಸಮಯದಲ್ಲಿ ಭಿನ್ನಮತ ಉಲ್ಬಣಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅಲ್ಲದೇ ಸಚಿವರು ಹಾಗೂ ಪಕ್ಷದವರ ಮನೆ ಮೇಲೆ ಐ.ಟಿ. ದಾಳಿ, ಭ್ರಷ್ಟಾಚಾರದ ಆರೋಪ, ಸರ್ಕಾರದ ವೈಫಲ್ಯಗಳ ಸರಮಾಲೆ ಕಾಂಗ್ರೆಸ್ ಬೆನ್ನಿಗೆ ಅಂಟಿಕೊಂಡಿದೆ. ಇಷ್ಟರ ನಡುವೆಯೂ ಸಿದ್ದರಾಮಯ್ಯ ಹೇಗೆ ಬಹುಮತ ಗಳಿಸುತ್ತಾರೆ ಎಂಬುದನ್ನು ನೋಡಬೇಕು.

ಇನ್ನು ಬಿಜೆಪಿಯ ಸಾರಥ್ಯ ವಹಿಸಿಕೊಂಡಿರುವ ಯಡಿಯೂರಪ್ಪನವರ ಮೇಲೆ ಹಲವು ಗುರುತರ ಆರೋಪಗಳಿವೆ. ‘ಇವರು ಜೈಲಿಗೆ ಹೋಗಿ ಬಂದವರು’ ಎಂದು ಸಿದ್ದರಾಮಯ್ಯ ಪದೇ ಪದೇ ಹೀಯಾಳಿಸುತ್ತಿದ್ದಾರೆ. ಇದು ಅವರಿಗೇ ತಿರುಗುಬಾಣ ಆದರೂ ಆಶ್ಚರ್ಯವಿಲ್ಲ. ಆದರೂ ಯಡಿಯೂರಪ್ಪ ಅವರ ರಾಜಕೀಯ ಶಕ್ತಿ, ಹಟ, ಛಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷ ಸಂಘಟಿಸುವ ಸಾಮರ್ಥ್ಯವನ್ನು ಯಾರೂ ಅಲ್ಲಗಳೆಯಲಾರರು. ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಬಿಜೆಪಿಯನ್ನು ಹೇಗೆ ನೆಲಕಚ್ಚಿಸಿದರು ಎಂಬುದು ಅವರ ರಾಜಕೀಯ ಸಾಮರ್ಥ್ಯಕ್ಕೆ ಸಾಕ್ಷಿ. ಇದೆಲ್ಲವನ್ನೂ ನೋಡಿಯೇ ಬಿಜೆಪಿ ವರಿಷ್ಠರು ಅವರಿಗೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ಹೊರಿಸಿ, ‘ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸಿದ್ದಾರೆ. ಇದು ಅವರಿಗೆ ಆನೆಬಲ ತಂದುಕೊಟ್ಟಿದೆ.

ಈ ನಡುವೆ ಬಿಜೆಪಿಯಲ್ಲೂ ಎಲ್ಲವೂ ನೆಟ್ಟಗಿಲ್ಲ. ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ರಾಜ್ಯದ ಜನರು ಬಿಜೆಪಿ ಆಡಳಿತ ಅವಧಿಯ ಗೊಂದಲ ಮರೆತಿಲ್ಲ. ಉಳಿದ ಪಕ್ಷಗಳಂತೆ ಬಿಜೆಪಿಯೂ ಒಂದು ರಾಜಕೀಯ ಪಕ್ಷವೇ ಹೊರತು ವಿಭಿನ್ನ ಏನಲ್ಲ ಎಂಬುದು ಮತದಾರರಿಗೆ ಮನದಟ್ಟಾಗಿದೆ. ಗುಂಪುಗಾರಿಕೆ, ಪರಸ್ಪರ ಕಾಲೆಳೆಯುವುದು, ದ್ವೇಷ ರಾಜಕಾರಣ, ಸ್ವಜನ ಪಕ್ಷಪಾತ ಬಿಜೆಪಿಯಲ್ಲೂ ಮುಂದುವರೆದಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್‌ ಷಾ ಜೋಡಿ ಏನು ಮೋಡಿ ಮಾಡಿ ‘ಮಿಷನ್‌ 150’ರ ಗುರಿ ತಲುಪಲು ನೆರವಾಗುತ್ತದೆ ಎಂಬುದನ್ನು ಕಾದುನೋಡಬೇಕು. ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಹಲವು ಮಂದಿ ಬಿಜೆಪಿಯತ್ತ ಪಕ್ಷಾಂತರ ಮಾಡುತ್ತಿದ್ದಾರೆ. ಚುನಾವಣೆ ವೇಳೆಗೆ ಇದು ಅಲೆಯಂತಾಗಿ, ಟಿಕೆಟ್ ನೀಡುವುದೇ ಕಗ್ಗಂಟಾಗುವ ಸಾಧ್ಯತೆ ಹೆಚ್ಚು.

ಇನ್ನೊಂದು ಪ್ರಮುಖ ಪಕ್ಷವಾದ ಜಾತ್ಯತೀತ ಜನತಾದಳ ತನ್ನ ಹೆಸರಿಗೆ ತದ್ವಿರುದ್ಧವಾಗಿ ಸ್ವಜಾತಿ ರಾಜಕಾರಣ ಮಾಡುತ್ತಿದೆ. ಅದರ ನೆಲೆ ರಾಜ್ಯಕ್ಕೆ ಸೀಮಿತವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ರಾಜ್ಯದ 30 ಜಿಲ್ಲೆಗಳ ಪೈಕಿ ಜೆಡಿಎಸ್ 10-12 ಜಿಲ್ಲೆಗಳಲ್ಲಿ ಮಾತ್ರ ಹೆಚ್ಚು ಪ್ರಭಾವ ಹೊಂದಿದೆ. ಆದರೂ ಬಹುಮತ ಗಳಿಸಿ ಸ್ವತಂತ್ರವಾಗಿ ಸರ್ಕಾರ ರಚಿಸುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ ಆ ಪಕ್ಷದ ಮುಖಂಡರು. ಅವರ ಆತ್ಮವಿಶ್ವಾಸವನ್ನು ಮೆಚ್ಚಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಸಮನಾಗಿ 40 ಸ್ಥಾನ ಗಳಿಸಿದ್ದು ಜೆಡಿಎಸ್‌ನ ಈ ವಿಶ್ವಾಸಕ್ಕೆ ಕಾರಣವಿರಬಹುದು. ಹಾದಿ ಬೀದಿಯಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಪರಸ್ಪರ ತಿಪ್ಪೆ ಕೆದಕುವ ಕೆಲಸದಲ್ಲಿ ಮೈಮರೆತಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಈ ಜಗಳದ ಲಾಭ ಪಡೆದು ತಾವು ಅಧಿಕಾರಕ್ಕೆ ಬರಬಹುದೆಂಬುದು ದೇವೇಗೌಡ, ಕುಮಾರಸ್ವಾಮಿ ಲೆಕ್ಕಾಚಾರ ಇರಬಹುದು.ಪ್ರಾದೇಶಿಕ ಪಕ್ಷವಾದರೂ ಜಗಳ, ಸ್ವಜಾತಿ ಪ್ರೇಮ, ಸರ್ವಾಧಿಕಾರಿ ಧೋರಣೆ ಇತ್ಯಾದಿ ವಿಚಾರಗಳಲ್ಲಿ ಇವರೂ ರಾಷ್ಟ್ರೀಯ ಪಕ್ಷಗಳಿಗಿಂತ ಹಿಂದೆ ಬಿದ್ದಿಲ್ಲ. ತಂದೆ–ಮಗನ ತೀರ್ಮಾನವನ್ನು ಯಾರೂ ಪ್ರಶ್ನಿಸುವಂತೆಯೇ ಇಲ್ಲ. ತಮ್ಮ ಮಾತಿಗೆ ವಿರುದ್ಧ ನಡೆದುಕೊಂಡ ಆರೋಪ ಹೊರಿಸಿ ಏಳು ಶಾಸಕರಿಗೆ ಗೇಟ್‌ಪಾಸ್ ಕೊಟ್ಟಿದ್ದಾರೆ.

ಆದರೆ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಲ್ಲಿ ‘ಸೂಟ್‌ಕೇಸ್‌ ಸಂಸ್ಕೃತಿ ಹಾಗೂ ಬಕೆಟ್ ಹಿಡಿಯುವ ಸಂಸ್ಕೃತಿ ಇದೆ’ ಎಂದು ಬಹಿರಂಗವಾಗಿ ಹೇಳುವ ಮೂಲಕ ಮನೆಯಲ್ಲೇ ಬಂಡಾಯದ ಬಾವುಟ ಹಾರಿಸಿದ್ದಾರೆ. ಇಷ್ಟಾದರೂ ರೇವಣ್ಣ–ಭವಾನಿ ದಂಪತಿಯ ಒತ್ತಡಕ್ಕೆ ಮಣಿದು ಮೊಮ್ಮಗನಿಗೆ ಟಿಕೆಟ್‌ ನೀಡಲು ಮುಂದಾಗಿದ್ದಾರೆ. ಇದು ಜೆಡಿಎಸ್‌ನ ದ್ವಿಮುಖ ನೀತಿ. ಹೀಗೆ ಮೂರೂ ಪಕ್ಷಗಳೂ ಚುನಾವಣೆಗೆ ಸಜ್ಜಾಗಿವೆ. ಆಡಳಿತ ಪಕ್ಷ ‘ಜನಾಶೀರ್ವಾದ ಯಾತ್ರೆ’ಗೆ ಸಜ್ಜಾಗಿದ್ದರೆ, ಬಿಜೆಪಿ ‘ಪರಿವರ್ತನಾ ಯಾತ್ರೆ’ ಹಮ್ಮಿಕೊಂಡಿದೆ. ಇನ್ನು ಕುಮಾರಸ್ವಾಮಿ ಅವರು ಹೈಟೆಕ್ ಬಸ್ಸಿನಲ್ಲಿ ಪ್ರವಾಸ ಆರಂಭಿಸಲಿದ್ದಾರೆ. ಜೊತೆಗೆ ‘ಗ್ರಾಮ ವಾಸ್ತವ್ಯ’ ಮತ್ತೆ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.

ಸ್ವತಂತ್ರವಾಗಿ ಅಧಿಕಾರದ ರುಚಿ ಅನುಭವಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಭೂಮಿ-ಆಕಾಶ ಒಂದು ಮಾಡುವಂತೆ ಅಬ್ಬರದ ಪ್ರಚಾರ-ಅಪಪ್ರಚಾರದಲ್ಲಿ ಮುಳುಗಿವೆ. ಯಾವ ಪಕ್ಷಕ್ಕೂ ಬಹುಮತ ಬರಬಾರದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರು ತ್ರಿಶಂಕು ಸ್ಥಿತಿ ನಿರ್ಮಾಣದ ಕನಸು ಕಾಣುತ್ತಿದ್ದಾರೆ.

ಲೇಖಕ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT