ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಇಲಾಖೆಯಲ್ಲಿ ಕಡು ಭ್ರಷ್ಟಾಚಾರ

Last Updated 7 ನವೆಂಬರ್ 2017, 6:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಕ್ರೀಡಾ ಇಲಾಖೆಯಿಂದ ಬರುವ ಲಕ್ಷಾಂತರ ರೂಪಾಯಿ ಅನುದಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮತ್ತು ಹಾಕಿ ತರಬೇತುದಾರ ಮುಸ್ತಾಕ್ ಅಹಮ್ಮದ್‌ ಅವರು ದುರ್ಬಳಕೆ ಮಾಡಿಕೊಂಡು ಕ್ರೀಡಾಪಟುಗಳಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡದೆ ವಂಚನೆ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಅಥ್ಲೆಟಿಕ್‌ ಅಸೋಶಿಯೇಷನ್‌ ಕಾರ್ಯದರ್ಶಿ, ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್‌ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ವಿದ್ಯಾರ್ಥಿ ವಸತಿ ನಿಲಯದಲ್ಲಿ ಈ ಇಬ್ಬರು ಅಧಿಕಾರಿಗಳು ಸೇರಿಕೊಂಡು ಸಾಕಷ್ಟು ಅಕ್ರಮಗಳನ್ನು ಎಸಗುತ್ತ ಬಂದಿದ್ದಾರೆ. ಅನೇಕ ಬಾರಿ ತಿದ್ದಿಕೊಳ್ಳುವಂತೆ ಎಚ್ಚರಿಕೆ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.
‘ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರು ವಸತಿ ನಿಲಯದ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ ವೇಳೆ ಕೂಡ ಸಾಕಷ್ಟು ಅವ್ಯವಸ್ಥೆ ದರ್ಶನವಾಗಿದ್ದು ಮಾಧ್ಯಮಗಳಲ್ಲೇ ಸುದ್ದಿಯಾಗಿತ್ತು’ ಎಂದು ತಿಳಿಸಿದರು.

‘ಕ್ರೀಡಾ ಇಲಾಖೆ ವಸತಿ ನಿಲಯದ ಒಬ್ಬ ವಿದ್ಯಾರ್ಥಿಗೆ ದಿನವೊಂದಕ್ಕೆ ₹ 175 ಹಣ ನೀಡಿದರೂ ವಿದ್ಯಾರ್ಥಿಗಳಿಗೆ ಕಳಪೆ ಊಟ ನೀಡಲಾಗುತ್ತಿದೆ. ಒಂದು ಕೆ.ಜಿ.ಬೆಲ್ಲಕ್ಕೆ ₹ 350 ಬಿಲ್‌ ತೋರಿಸಿದ್ದಾರೆ. ಇದಕ್ಕಿಂತ ವಂಚನೆ ಬೇಕೆ? ತಮ್ಮ ಹಗರಣಗಳು ಬಯಲಾಗುತ್ತಿದ್ದಂತೆ ಈ ಇಬ್ಬರು ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಮನೆಗೆ ಹೋಗಿ ಕೈಕಾಲು ಹಿಡಿದು ಇಲ್ಲೇ ತಳವೂರಲು ಪ್ರಯತ್ನ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅವರು ಇಂತಹ ಕಡು ಭ್ರಷ್ಟರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಮುಸ್ತಾಕ್ ಅಹಮ್ಮದ್‌ ಜಿಲ್ಲೆಯಲ್ಲಿ 12 ವರ್ಷಗಳಿಂದ ಬೇರು ಬಿಟ್ಟಿದ್ದು, ಇಲಾಖೆ ಒಳಗೆ ಹೇಗೆಲ್ಲ ಅಕ್ರಮ ಮಾಡಬಹುದು ಎಂಬುದನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಬಡ್ತಿ ವರ್ಗಾವಣೆ ಬಂದರೂ ಇಲ್ಲಿಂದ ಜಾಗ ಖಾಲಿ ಮಾಡುತ್ತಿಲ್ಲ. ಹೊಸದಾಗಿ ಬರುವ ಸಹಾಯಕ ನಿರ್ದೇಶಕರನ್ನು ಬುಟ್ಟಿಗೆ ಹಾಕಿಕೊಂಡು ಅವರೊಂದಿಗೆ ಶಾಮೀಲಾಗಿ ವಂಚನೆ ಮಾಡುವುದನ್ನೇ ಇವರು ದಂಧೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಕೋಲಾರದಲ್ಲಿ ಅಮಾನತುಗೊಂಡಿದ್ದ ರುದ್ರಪ್ಪ ಅವರು ಇಲ್ಲಿ ಕೂಡ ಹಳೆ ಚಾಳಿ ಮುಂದುವರಿಸಿದ್ದಾರೆ’ ಎಂದು ದೂರಿದರು.

ಅಸೋಶಿಯೇಷನ್‌ ಸದಸ್ಯ ಜಯಂತಿ ಗ್ರಾಮದ ನಾರಾಯಣಸ್ವಾಮಿ ಮಾತನಾಡಿ, ‘ಕ್ರೀಡಾ ಇಲಾಖೆ ಜಿಲ್ಲೆ ಮತ್ತು ಪ್ರತಿ ತಾಲ್ಲೂಕು ಕ್ರೀಡಾಂಗಣ ನಿರ್ವಹಣೆಗೆ ಸಮಿತಿ ರಚನೆ ಮಾಡುವಂತೆ 2016ರ ಜನವರಿಯಲ್ಲಿ ಸುತ್ತೋಲೆ ಹೊರಡಿಸಿದೆ. ಆದರೆ ಈವರೆಗೆ ಜಿಲ್ಲೆಯಲ್ಲಿ ಸಮಿತಿಗಳ ರಚನೆ ಮಾಡಿಲ್ಲ. ಹೀಗಾಗಿ ಕ್ರೀಡಾಂಗಣಗಳು ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿವೆ’ ಎಂದು ಹೇಳಿದರು.

‘ಗ್ರಾಮೀಣ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ಪ್ರತಿ ವರ್ಷ ಖೇಲೊ ಇಂಡಿಯಾ ಕ್ರೀಡಾಕೂಟ ಆಯೋಜನೆಗೆ ಲಕ್ಷಾಂತರ ರೂಪಾಯಿ ಅನುದಾನ ನೀಡಲಾಗುತ್ತದೆ. ಅದರಲ್ಲಿ ಕ್ರೀಡಾಕೂಟ ನಡೆಸಿ ಪ್ರತಿ ಸ್ಪರ್ಧೆಯ ಮೊದಲ ಮೂರು ವಿಜೇತರಿಗೆ ನಗದು ಬಹುಮಾನ ನೀಡಬೇಕು. ಆದರೆ ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಈವರೆಗೆ ನಗದು ಬಹುಮಾನ ನೀಡದೆ ವಂಚಿಸಲಾಗಿದೆ’ ಎಂದು ಆರೋಪಿಸಿದರು.

‘ತಾಲ್ಲೂಕುಮಟ್ಟದ ಕ್ರೀಡಾಕೂಟಕ್ಕೆ ₹ 50 ಸಾವಿರ ಅನುದಾನವಿದ್ದರೂ ಸರಿಯಾಗಿ ಬಹುಮಾನದ ಶಿಲ್ಡ್‌ಗಳನ್ನು ಕೂಡ ಕೊಟ್ಟಿಲ್ಲ. ಡಿಸೆಂಬರ್‌ನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಸಾಹಸ ಕ್ರೀಡೆಗಳನ್ನು ನಡೆಸಲು ಇಲಾಖೆಯು ತಲಾ ₹ 15 ಸಾವಿರದಂತೆ ಅನುದಾನ ನೀಡುತ್ತದೆ. ಆದರೆ ಇವರು ಚಿಕ್ಕಬಳ್ಳಾಪುರ ಹೊರತುಪಡಿಸಿದಂತೆ ಬೇರೆಲ್ಲೂ ಆ ಕ್ರೀಡಾಕೂಟ ನಡೆಸಿಲ್ಲ. ಅದಕ್ಕಾಗಿ ಬಂದ ಅನುದಾನವನ್ನು ಈ ಅಧಿಕಾರಿಗಳೇ ತಿಂದು ಹಾಕಿದ್ದಾರೆ’ ಎಂದು ಹೇಳಿದರು.

‘ಜಿಲ್ಲಾ ಪಂಚಾಯಿತಿ ಪ್ರತಿ ಸದಸ್ಯರ ಕ್ಷೇತ್ರದಲ್ಲಿ ಎರಡು ಶಾಲೆಗಳು ಮತ್ತು ಒಂದು ಯುವಕ ಸಂಘಕ್ಕೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲು ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರತಿ ಕ್ಷೇತ್ರಕ್ಕೆ ತಲಾ ₹ 20 ಸಾವಿರ ಅನುದಾನ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಕಡಿಮೆ ಸಾಮಗ್ರಿಗಳನ್ನು ವಿತರಿಸಿರುವ ಸಹಾಯಕ ನಿರ್ದೇಶಕರು ಅನುದಾನದ ಮೊತ್ತ ₹ 10 ಸಾವಿರ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘ಯುವಕ ಸಂಘಗಳ ಸದಸ್ಯರಿಗೆ ಪ್ರತಿ ವರ್ಷ ಜಿಲ್ಲಾ ಮಟ್ಟದ ಕಾರ್ಯಾಗಾರದ ನಡೆಸಲು ಕ್ರೀಡಾ ಇಲಾಖೆ ₹ 1 ಲಕ್ಷ ಅನುದಾನ ನೀಡುತ್ತದೆ. ಆದರೆ ಈ ಅಧಿಕಾರಿಗಳು ಈ ಬಾರಿ ಕಾರ್ಯಗಾರದ ಬಗ್ಗೆ ಸಂಘಗಳಿಗೆ ಮಾಹಿತಿ ನೀಡಿಲ್ಲ. ಬದಲು ಶಿಡ್ಲಘಟ್ಟದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿ, ಲಘು ಉಪಾಹಾರ ಕೊಟ್ಟು ವಿದ್ಯಾರ್ಥಿಗಳಿಂದ ಸಹಿ ಪಡೆದು ವಂಚನೆ ಮಾಡಿದ್ದಾರೆ. ಶಾಮಿಯಾನಕ್ಕೆ ₹ 8 ಸಾವಿರ ಖರ್ಚಾಗಿದೆ ಎನ್ನುವುದು ಸೇರಿದಂತೆ ಅನೇಕ ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದಾರೆ’ ಎಂದು ದೂರಿದರು.

‘2016–17ನೇ ಸಾಲಿನಲ್ಲಿ ಜಿಲ್ಲೆಯ ಎಂಟು ಕಡೆಗಳಲ್ಲಿ ಗ್ರಾಮೀಣ ಕ್ರೀಡಾಕೂಟ ನಡೆಸಲು ₹ 4 ಲಕ್ಷ ಅನುದಾನ ಮಂಜೂರಾಗಿದೆ. ಆ ಪೈಕಿ ಈವರೆಗೆ ಒಂದು ಕಡೆ ಮಾತ್ರ ಕ್ರೀಡಾಕೂಟ ನಡೆಸಲಾಗಿದೆ. ಒಂದು ವರ್ಷದಿಂದ ಆ ಕ್ರೀಡಾಕೂಟ ನಡೆಸದೆ ಅನುದಾನ ನುಂಗಿ ಹಾಕಿದ್ದಾರೆ. ಅದೇ ಯೋಜನೆಗಾಗಿ 2017–18ನೇ ಸಾಲಿಗೆ ₹ 9 ಲಕ್ಷ ಅನುದಾನ ಬಂದಿದೆ. ಅದನ್ನು ಸಹ ಈವರೆಗೆ ಬಳಕೆ ಮಾಡಿಲ್ಲ’ ಎಂದು ಆರೋಪಿಸಿದರು.

‘ಈ ಬಗ್ಗೆ ವಿಚಾರಿಸಿದರೆ ಅದನ್ನು ಕೇಳಲು ನೀವು ಯಾರು? ಬೇಕಾದರೆ ನಾನು ಅದನ್ನು ಸರ್ಕಾರಕ್ಕೆ ವಾಪಸ್‌ ಮಾಡುತ್ತೇನೆ ಎಂದು ರುದ್ರಪ್ಪ ಅವರು ದರ್ಪದಿಂದ ಮಾತನಾಡುತ್ತಾರೆ. ಈ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ನಾರಾಯಣಸ್ವಾಮಿ ಆಗ್ರಹಿಸಿದರು. ಅಸೋಶಿಯೇಷನ್‌ ಸದಸ್ಯ ಮಂಜುನಾಥ್‌, ಕ್ರೀಡಾಪಟುಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT