ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗಿದರೆ ವಿಧಾನಸೌಧ ನಡುಗುವ ಶಕ್ತಿಯಾಗಿ

Last Updated 7 ನವೆಂಬರ್ 2017, 6:23 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ವೀರಶೈವ ಲಿಂಗಾಯತ ಧರ್ಮದ ಪ್ರತಿನಿಧಿಗಳು ಗುಡುಗಿದರೆ, ವಿಧಾನಸೌಧ ನಡುಗುವಂತಹ ಶಕ್ತಿಯಾಗಿ ಬೆಳೆಯಬೇಕು. ಅಂಥ ವಾತಾರವಣವನ್ನು ಜಿಲ್ಲೆಯಲ್ಲಿ ಸೃಷ್ಟಿಸಿಕೊಳ್ಳಬೇಕು’ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಸಲಹೆ ನೀಡಿದರು. ನಗರದಲ್ಲಿ ಸೋಮವಾರ ಸಂಜೆ ನಡೆದ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ವೀರಶೈವ ಲಿಂಗಾಯತ ಸಮುದಾಯದವರು ರಾಜ್ಯದಲ್ಲಿ ಬಹುಸಂಖ್ಯಾತರು. ಆದರೂ ಶಾಸಕರು, ಸಂಸದರು, ಸಚಿವರು, ಕಾರ್ಪೊರೇಟರ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ನಾವು ಬೇರೆಯವರನ್ನು ಗೆಲ್ಲಿಸಿ, ಅವರೆದುರು ಸಹಾಯಕ್ಕಾಗಿ ಕೈಚಾಚುವ ಪರಿಸ್ಥಿತಿ ಇದೆ. ಇವನ್ನು ನಿವಾರಿಸಿಕೊಳ್ಳಬೇಕಾದರೆ, ನಾವು ರಾಜಕೀಯವಾಗಿ ಬೆಳೆಯಬೇಕು. ಅದಕ್ಕಾಗಿ ಒಗ್ಗಟ್ಟಾಗಬೇಕು’ ಎಂದು ಸಲಹೆ ನೀಡಿದರು.

‘ಹಳೇ ಮೈಸೂರು ಭಾಗದಲ್ಲಿ ನಮ್ಮವರು ಮಾತನಾಡಲು ಹೆದರುತ್ತಾರೆ. ನಾವು ಹೆದರಬೇಕಾಗಿಲ್ಲ. ನಮ್ಮ ರಾಷ್ಟ್ರದಲ್ಲಿ ಕಾನೂನು ಬಲವಾಗಿದೆ. ನಮ್ಮನ್ನು ಯಾರು ಏನೂ ಮಾಡಲು ಆಗುವುದಿಲ್ಲ’ ಎಂದರು.

‘ಮೊದಲು ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಒಕ್ಕೂಟ ಜಿಲ್ಲಾ ಸಮಿತಿ ರಚಿಸಿಕೊಳ್ಳಿ. ಯಾವ ತಾಲ್ಲೂಕಿನಲ್ಲಿ ನಮ್ಮ ಧರ್ಮದವರ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಅಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕುರಿತು ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಿ. ಸಮಿತಿ ತೀರ್ಮಾನವೇ ಅಂತಿಮ.

ಹೀಗೆ ಮಾಡಿದರೆ, ಪಕ್ಷಗಳ ನಾಯಕರು ನಿಮ್ಮ ಬಳಿಗೆ ಬರುತ್ತಾರೆ’ ಎಂದು ತಿಳಿಸಿದರು. ‘ನಮ್ಮ ಹೋರಾಟ ಯಾವ ಧರ್ಮ, ಜಾತಿ, ಪಕ್ಷದ ವಿರುದ್ಧವಲ್ಲ. ನಮ್ಮ ಉಳಿವಿಗಾಗಿ ಅಷ್ಟೇ. ನಮಗೆ ಯಾರು ನೆರವಾಗುತ್ತಾರೋ, ಅವರನ್ನು ಬೆಂಬಲಿಸೋಣ.

ಅಂಥವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡೋಣ. ಮುಂದಿನ ಚುನಾವಣೆಯಲ್ಲಿ ಚಿತ್ರದುರ್ಗ, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ನಮ್ಮ ಜನಾಂಗದವರು ಸ್ಪರ್ಧಿಸಲು ಅವಕಾಶ ಕೊಡಿ ಎಂದು ರಾಜಕೀಯ ಪಕ್ಷದವರನ್ನು ಧೈರ್ಯವಾಗಿ ಕೇಳಿ. ಬೇರೆ ಕಡೆ ನಮ್ಮವರು ಬೆಂಬಲಿಸುತ್ತಾರೆ ಎಂದು ಭರವಸೆ ಕೊಡಿ. ಯಾವುದಕ್ಕೂ ಹಿಂಜರಿಯುವುದು ಬೇಡ’ ಎಂದು ತಿಳಿಸಿದರು.

‘ನಮ್ಮ ಸಮಾಜದಲ್ಲಿ ಗೊಂದಲ ಇರುವುದರಿಂದ ಅದನ್ನು ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಗೆ ಭದ್ರವಾದ ಭವಿಷ್ಯವನ್ನು ರೂಪಿಸಬೇಕಾಗಿರುವುದರಿಂದ ಎಲ್ಲರೂ ಜಗಳ ಬಿಟ್ಟು ಒಂದಾಗಿ’ ಎಂದು ತಿಳಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ಮಾಜಿ ಶಾಸಕ ಎಂ.ಬಿ.ತಿಪ್ಪೇರುದ್ರಪ್ಪ, ಕಾಂಗ್ರೆಸ್ ಮುಖಂಡ ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಕಸಾಪ ಮಾಜಿ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ಹುರುಳಿ ಬಸವರಾಜು, ಟಿ.ಎ.ಟಿ.ಪ್ರಭು, ವಿಶ್ವನಾಥ್, ನ್ಯಾಯವಾದಿ ವೀರಣ್ಣ, ನಾಗರಾಜ್ ಸಂಗಂ, ಮೋಕ್ಷರುದ್ರಸ್ವಾಮಿ, ಮಹಡಿಶಿವಮೂರ್ತಿ, ಶಿವಮೂರ್ತಿ, ಜಿತೇಂದ್ರ, ಶಂಕರಮೂರ್ತಿ, ಸುರೇಶ್ ಬಾಬು, ಅಲ್ಲಾಡಿ ವಿಜಯ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT