ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ನಿರೀಕ್ಷೆಯಲ್ಲಿ ತಿಪ್ಪನಾಳ

Last Updated 7 ನವೆಂಬರ್ 2017, 8:40 IST
ಅಕ್ಷರ ಗಾತ್ರ

ಕನಕಗಿರಿ: ‘ಸಮೀಪದ ತಿಪ್ಪನಾಳದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. ಊರಲ್ಲಿ ಸಮರ್ಪಕ ಸಿ.ಸಿ ರಸ್ತೆ, ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿ 1,600 ಜನಸಂಖ್ಯೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದ ಕುರುಬ, ಉಪ್ಪಾರ, ಎಸ್‌.ಸಿ ಹಾಗೂ ಲಿಂಗಾಯತರು ಇದ್ದಾರೆ.

‘ಎರಡು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ತೆಗೆದ ಬುನಾದಿ ಜಾಗದಲ್ಲಿ ಜಾಲಿಗಿಡಗಳು ಬೆಳೆದಿವೆ. ಬುನಾದಿಯಲ್ಲಿ ಗಲೀಜು ನೀರು ಸಂಗ್ರಹಗೊಂಡಿದ್ದು, ಸೊಳ್ಳೆಗಳ ತಾಣವಾಗಿದೆ’ ಎಂದು ವಿರುಪಣ್ಣ, ದ್ಯಾಮಣ್ಣ ತಿಳಿಸಿದರು.

‘ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಕೊಳವೆಬಾವಿ ನೀರಲ್ಲಿ ಕಪ್ಪೆಜೊಂಡು ಬರುತ್ತಿದ್ದು, ಕೊಡಗಳಿಗೆ ಬಟ್ಟೆ ಹಾಕಿ ನೀರನ್ನು ಶುದ್ಧೀಕರಿಸಿ ಉಪಯೋಗಿಸುವಂತಾಗಿದೆ. ಪ್ಲೋರೈಡ್‌ ನೀರು ಸರಬರಾಜು ಆಗುವುದರಿಂದ ಮಕ್ಕಳು, ವೃದ್ಧರು ಕೀಲು, ಹಲ್ಲು ನೋವಿನಿಂದ ಬಳಲುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ಸ್ವಾತಂತ್ರ್ಯ ಲಭಿಸಿ 70 ವರ್ಷಗಳು ಕಳೆದರೂ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲ. ಕನಕಗಿರಿ–ಗಂಗಾವತಿ ರಸ್ತೆವರೆಗೆ ಜನ ನಡೆದುಕೊಂಡು ಹೋಗುತ್ತಾರೆ. ಕ್ರಾಸ್‌ನಲ್ಲಿ ಬಸ್‌ ನಿಲುಗಡೆ ಆಗುತ್ತಿಲ್ಲ. ವಿದ್ಯಾರ್ಥಿಗಳು ಸಾವಿರಾರು ರೂಪಾಯಿ ಕೊಟ್ಟು ಬಸ್‌ ಪಾಸ್‌ ತೆಗೆದುಕೊಂಡರೂ ಉಪಯೋಗವಾಗುತ್ತಿಲ್ಲ. ಕನಕಗಿರಿ ಶಾಲೆ –ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಐದು ಕಿ.ಮೀ ನಡೆದು ಹೋಗಬೇಕಾಗಿದೆ. ಗಂಗಾವತಿಗೆ ಹೋಗಲು ಖಾಸಗಿ ವಾಹನಗಳನ್ನು ಅವಲಂಭಿಸಬೇಕಿದೆ’ ಎಂದು ವಿದ್ಯಾರ್ಥಿ ಮುಖಂಡ ಬಾಲರಾಜ ಅಳಲು ತೋಡಿಕೊಂಡರು.

‘ಬಸ್‌ ಓಡಿಸುವಂತೆ ಬೀದಿಗಿಳಿದು ಹೋರಾಟ ನಡೆಸಿದರೂ ಅಧಿಕಾರಿಗಳು ನಮ್ಮ ಕೂಗು ಕೇಳಿಸಿಕೊಂಡಿಲ್ಲ’ ಎಂದು ದೂರಿದರು. ‘ಸಮರ್ಪಕ ಬೀದಿದೀಪ ಇಲ್ಲ. ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಲ್ಲಿ ಗ್ರಾಮದಿಂದ ಕನಕಗಿರಿ–ಗಂಗಾವತಿ ರಸ್ತೆಯವರೆಗೆ ರಸ್ತೆ ಡಾಂಬರೀಕರಣಕ್ಕೆ ₹33.70 ಲಕ್ಷ ಮಂಜೂರಾಗಿದ್ದು, ನಿರ್ವಹಣೆ ಮಾಡದ ಕಾರಣ ಅಲ್ಲಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಗುತ್ತಿಗೆ ಪಡೆದವರು ಈ ಕಡೆಗೆ ಗಮನ ಹರಿಸಿಲ್ಲ’ ಎಂದು ಸ್ಥಳೀಯರು ದೂರಿದರು.

‘ದಲಿತ ಕಾಲೊನಿ ಸೇರಿದಂತೆ ಇತರೆ ಕಡೆಗಳಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ಇಲ್ಲದೆ ಕೆಲವೆಡೆ ಕೈಗೊಂಡ ಸಿ.ಸಿ ರಸ್ತೆಗಳಲ್ಲಿ ಗಲೀಜು ನೀರು ಹರಿಯುತ್ತಿದೆ’ ಎಂದು ಬಸವರಾಜ ಹೇಳಿದರು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 198 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಏಳು ಹುದ್ದೆಗಳಲ್ಲಿ ನಾಲ್ಕು ಜನ ಶಿಕ್ಷಕರ ಸಮಸ್ಯೆ ಇದೆ. ವಿಶೇಷವಾಗಿ ವಿಜ್ಞಾನ ಮತ್ತು ಇಂಗ್ಲಿಷ್ ಶಿಕ್ಷಕರ ಕೊರತೆ ಕಾಡುತ್ತಿದೆ. ಅತಿಥಿ ಶಿಕ್ಷಕರ ಸೇವೆಯಿಂದ ಪಾಠ ಪ್ರವಚನಗಳು ನಡೆಯುತ್ತಿವೆ.

ಮೆಹಬೂಬಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT