ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಪ್ರಭುತ್ವದ ಮೌಲ್ಯ ಉಳಿಸಲು ಅರ್ಹರ ಆಯ್ಕೆ ಮುಖ್ಯ’

Last Updated 7 ನವೆಂಬರ್ 2017, 8:45 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಣೆ ಮಾಡುವ ದಿಕ್ಕಿನಲ್ಲಿ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಂಸದೀಯ ಸರ್ಕಾರದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕಸಾಪ ತಾಲ್ಲೂಕು ಘಟಕದ ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ‘ಅಣಕು ಸಂಸತ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಣಕ್ಕಾಗಿ ಮತ ಮಾರಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಸಂಸದೀಯ ಮೌಲ್ಯಗಳು ಮಾಯವಾಗಿ ಅಯೋಗ್ಯರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಸಂಸತ್ತಿನಲ್ಲಿ ಮತ್ತು ಶಾಸನಸಭೆಗಳಲ್ಲಿ ಯೋಗ್ಯ ಚರ್ಚೆಯಾಗದೆ ವೈಯಕ್ತಿಕ ವಿಷಯಗಳಿಗೆ ಪಕ್ಷದ ಬಲವರ್ಧನೆಯ ಪ್ರಚಾರಕ್ಕಾಗಿ ಸಂಸತ್ತಿನ ಸಮಯ ವ್ಯರ್ಥವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಣವಿದ್ದವರಿಗೆ ಅಧಿಕಾರ ಎಂಬ ಭಾವನೆಯು ಮೂಡುತ್ತಿದೆ. ಈ ಅಪವಾದ ತಪ್ಪಬೇಕಾದರೆ ಯುವಕರು ‘ಯೋಗ್ಯರಿಗೆ ಮಾತ್ರ ಮತ ಚಲಾಯಿಸಿ’ ಎಂಬ ಅಭಿಯಾನ ಆರಂಭಿಸಿ ಪ್ರಜಾಪ್ರಭುತ್ವದ ಉಳಿವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವದ ತತ್ವ ಸಂದೇಶಗಳು ಕಣ್ಮರೆಯಾಗುತ್ತಿವೆ. ಅಧಿಕಾರದ ದರ್ಪ, ದೌರ್ಜನ್ಯ, ಸ್ವಜನ ಪಕ್ಷಪಾತ, ಗುಂಪುಗಾರಿಕೆಯು ಮೇಳೈಸುತ್ತಿದೆ. ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬಡಜನರ ಬಗ್ಗೆ ಕಾಳಜಿ ತೋರಿಸುವ ಯೋಗ್ಯರಿಗೆ ಮಾತ್ರ ನಮ್ಮ ಮತ ಎಂಬ ಗಟ್ಟಿ ನಿರ್ಧಾರ ನಮ್ಮೆಲ್ಲರದ್ದಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಕೃಷ್ಣಮೂರ್ತಿ , ಸಂಸತ್ತು ಮತ್ತು ವಿಧಾನಸಭೆಗೆ ಸಾರ್ವಜನಿಕ ಚರ್ಚೆಗಳನ್ನು ನಡೆಸದೆ ಟಿ.ಎ, ಡಿ.ಎಗಾಗಿ ಹೋಗುವ , ಹಣಕ್ಕಾಗಿ ವಾದ ಮಂಡಿಸುವವರ, ಮತ ಚಲಾಯಿಸಲು ಹಣ ಕೇಳುವವರನ್ನು ತಿರಸ್ಕರಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಸಿಬಿಸಿ ಸದಸ್ಯ ಕೆ.ಎಸ್.ರಾಜೇಶ್, ತೆಂಡೇಕೆರೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಲ್ಲೇನಹಳ್ಳಿ ಮಂಜುನಾಥ್, ಉಪನ್ಯಾಸಕರಾದ ಬಿ.ಎಲ್ ಮಂಜುನಾಥ್, ದೊದ್ದನಕಟ್ಟೆ ಮಂಜುನಾಥ್, ಶಫಿ, ಎಂ.ಚಂದ್ರಶೇಖರ್, ಅನುರಾಧಾ, ಭಾಗ್ಯ, ಗ್ರಂಥಪಾಲಕ ಶಂಭು, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀನಿವಾಸ್.ಆರ್.ಸಜ್ಜನ್ ಇದ್ದರು. ತಾಲ್ಲೂಕಿನ ತೆಂಡೇಕೆರೆ, ಹರಿಹರಪುರ, ಸಂತೇಬಾಚಹಳ್ಳಿ, ಶೀಳನೆರೆ, ಕೆ.ಆರ್.ಪೇಟೆ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಲಾಪದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT