ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿರಹಿತ ಸಮಾಜದ ಕನಸು ಕಂಡಿದ್ದ ಕನಕ’

Last Updated 7 ನವೆಂಬರ್ 2017, 9:13 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಸಂತ ಶ್ರೇಷ್ಠ ಕನಕದಾಸರು ಜಾತಿ ರಹಿತ ಸಮಾಜದ ಕನಸು ಕಂಡಿದ್ದರು. ಆದರೆ, ರಾಜಕಾರಣಿಗಳು ಕನಕದಾಸರ ಆದರ್ಶಕ್ಕೆ ಕಪ್ಪುಮಸಿ ಬಳಿಯುತ್ತಿದ್ದಾರೆ’ ಎಂದು ನಿವೃತ್ತ ಮುಖ್ಯ ಶಿಕ್ಷಕ ಸಂಗಣ್ಣ ಬಯ್ಯಾಪುರ ಹೇಳಿದರು.

ಸೋಮವಾರ ಕನಕದಾಸರ 530ನೇ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ಶ್ರೀಶೈಲ ಪೀಠದಲ್ಲಿ ಶಿಕ್ಷಣ ಪಡೆದ ಕನಕದಾಸರು ಕೀರ್ತನೆಗಳು, ಮಹಾನ್‌ ಕಾವ್ಯಗಳು, ಮಂಡಗಿಗೆಗಳ ಮೂಲಕ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಮಹಾನ್‌ ಕೊಡುಗೆ ನೀಡಿದ್ದಾರೆ. ಅವರ ಉದಾತ್ತ ಚಿಂತನೆಗಳು ನಮಗೆಲ್ಲ ಮಾದರಿಯಾಗಿವೆ. ದಾರ್ಶನಿಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಕರೆ ನೀಡಿದರು.

ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ಮಾತನಾಡಿ, ‘ಕನಕದಾಸರು ಶ್ರದ್ಧೆ, ಭಕ್ತಿಗಳಿಂದ ನಾನು ಎಂಬ ಅಹಂಭಾವ ಅಳಿಸಿ ಹಾಕುವ ಮೂಲಕ ದಾಸ ಪರಂಪರೆಗೆ ನಾಂದಿ ಹಾಡಿದರು. ಮನುಷ್ಯ, ಮನುಷ್ಯರನ್ನು ಪರಸ್ಪರ ಪ್ರೀತಿಸಿ ಸುಂದರ ಬದುಕು ಕಟ್ಟಿಕೊಳ್ಳಲು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅಂತಹ ವಿಚಾರಧಾರೆ ಅಧ್ಯಯನ ಮಾಡಲು ಯುವ ಸಮೂಹ ಮುಂದಾಗಬೇಕು’ ಎಂದು ಮನವಿ ಮಾಡಿದರು.

ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ‘ರಾಜ್ಯದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಬಲಿಷ್ಠವಾದ ಕುರುಬ ಸಮಾಜ ಇಂದಿಗೂ ಪ್ರಾಮಾಣಿಕತೆ, ವಿಶ್ವಾಸಾರ್ಹತೆಗೆ ಹೆಸರಾಗಿದೆ’ ಎಂದರು.

ಅದ್ಧೂರಿ ಮೆರವಣಿಗೆ: ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಹಾಲುಮತ ಸಮಾಜದ ಸಹಯೋಗದಲ್ಲಿ ಕನಕದಾಸರ ಜಯಂತಿ ನಿಮಿತ್ತ ಸೋಮವಾರ ಬೆಳಿಗ್ಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಾಲ್ಕು ಗಂಟೆಗೂ ಹೆಚ್ಚು ಸಮಯ ನಡೆದ ಮೆರವಣಿಗೆಯಲ್ಲಿ ಯುವಕರು ಹಾಡುಗಳಿಗೆ ಹೆಜ್ಜೆ ಹಾಕಿದ್ದು, ಡೊಳ್ಳು ಕುಣಿತ ನಾಗರಿಕರ ಗಮನ ಸೆಳೆಯಿತು. ತಹಶೀಲ್ದಾರ್‌ ಚಾಮರಾಜ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖಾದರಪಾಷ, ಎಪಿಎಂಸಿ ಅಧ್ಯಕ್ಷೆ ಶಾಂತಲಾ ಹನುಮಂತಪ್ಪ ಕಂದಗಲ್ಲ, ಸಿಪಿಐ ವಿ.ಎಸ್‌. ಹಿರೇಮಠ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಾಲುಮತ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪುರಸಭೆ: ಪುರಸಭೆಯಲ್ಲಿ ಕನಕದಾಸರ ಜಯಂತಿ ನಿಮಿತ್ತ ಸೋಮವಾರ ಪುರಸಭೆ ಅಧ್ಯಕ್ಷ ಖಾದರಪಾಷ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಖಾದರಪಾಷ, ಮುಖ್ಯಾಧಿಕಾರಿ ಗುಂಡಪ್ಪ ಸಾಲಗುಂದ, ಸದಸ್ಯರಾದ ಬಾಬಾಖಾಜಿ, ಎಂ.ಡಿ. ರಫಿ, ಮುಖಂಡರಾದ ಪೋಷಣ್ಣ ನಾಯಕ, ಮುದುಕಪ್ಪ ನಾಯಕ, ಮೊಹಿನುದ್ದೀನ್‌ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT