ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಂಠಿ ಬೆಳೆದು ಭರವಸೆ ಮೂಡಿಸಿದ ರೈತ

Last Updated 7 ನವೆಂಬರ್ 2017, 9:25 IST
ಅಕ್ಷರ ಗಾತ್ರ

ಕನಕಪುರ: ಮಲೆನಾಡಿನ ಸೀಮೆಗೆ ಸೀಮಿತವಾಗಿದ್ದು ಶುಂಠಿ ಬೆಳೆಯನ್ನು ಬಯಲು ಸೀಮೆಯಲ್ಲೂ ಬೆಳೆಯಬಹುದೆಂಬ ನಂಬಿಕೆಯ ಮೇಲೆ ತಾಲ್ಲೂಕಿನ ಪ್ರಕಾಶ್‌ ಬೆಳೆದು ಜನರಲ್ಲಿ  ಭರವಸೆ ಮೂಡಿಸಿದ್ದಾರೆ. ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವಡಕೆಕಟ್ಟೆ ಗ್ರಾಮದ 36 ವರ್ಷದ ಯುವರೈತ ಮೂರು ಎಕರೆ ಪ್ರದೇಶದಲ್ಲಿ ‘ರಿಗೋಡಿ’ ತಳಿ ಶುಂಠಿಯನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಅವರು 10ನೇ ತರಗತಿ ವ್ಯಾಸಂಗ ಮುಗಿಸಿ ಉದ್ಯೋಗ ಅರಸಿ ಬೆಂಗಳೂರಿಗೆ ಪ್ರಯಾಣ ಬೆಳಸಿದರು.

ಅಲ್ಲಿ ಗ್ಯಾಸ್‌ ಏಜೆನ್ಸಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದರು. ಬಳಿಕ ಹಾಸನ ಕಡೆಯ ಮದುವೆ ಸಂಬಂಧ ಬೆಳೆದು ಮದುವೆಯಾಗಿ ಹಾಸನದಲ್ಲೇ ಉಳಿದುಕೊಂಡರು.
ಅಲ್ಲಿ ಒಂದು ವರ್ಷ ಶುಂಠಿ ಮಂಡಿಯಲ್ಲಿ ಕೆಲಸ ಮಾಡಿದರು. ಶುಂಠಿ ಬೆಳೆಯುತ್ತಿದ್ದ ರೈತರ ಸಂಪರ್ಕ ಪಡೆದು ಆ ಬೇಸಾಯದ ಬಗ್ಗೆ ಅನುಭವ ಪಡೆದುಕೊಂಡಿದ್ದಾರೆ. ನಂತರ ತಾವು ತಮ್ಮ ಗ್ರಾಮದಲ್ಲಿ ಅದನ್ನು ಏಕೆ ಬೆಳೆಯಬಾರದೆಂದು ಯೋಚಿಸಿ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿ ಸ್ವಗ್ರಾಮ ವಡಕೆಕಟ್ಟೆಗೆ ಕುಟುಂಬ ಸಮೇತ ಬಂದರು.

ಮೊದಲಿಗೆ ಗ್ರಾಮದಲ್ಲಿ ಒಂದು ಎಕರೆಯಷ್ಟು ಭೂಮಿಯನ್ನು ಭೋಗ್ಯಕ್ಕೆ ಪಡೆದು ಶುಂಠಿ ಬೆಳೆಯಲು ಪ್ರಾರಂಭಿಸಿದರು. ಹದಿನೈದು ಚೀಲದಷ್ಟು ಬಿತ್ತನೆಯನ್ನು ಮಾಡಿ ಸುಮಾರು 315 ಚೀಲದಷ್ಟು ಶುಂಠಿಯನ್ನು ಉತ್ಕೃಷ್ಟವಾಗಿ ಬೆಳೆದು ಮೊದಲ ಬೆಳೆಯಲ್ಲೇ ₹ 6 ಲಕ್ಷ ಸಂಪಾಧಿಸಿದ್ದಾರೆ.

ಇದರಿಂದ ವಿಶ್ವಾಸ ಇಮ್ಮಡಿಯಾಗಿ ಎಂಟು ವರ್ಷಗಳಿಂದ ಶುಂಠಿ ಬೆಳೆಯುತ್ತಿದ್ದಾರೆ. ಈ ವರ್ಷ ಮೂರು ಎಕರೆಯಷ್ಟು ಪ್ರದೇಶದಲ್ಲಿ ಬೆಳೆ  ಬೆಳೆದಿದ್ದು ಅದು ಸೊಂಟದ ಎತ್ತರಕ್ಕೆ ಬೆಳೆದು ನಿಂತಿದೆ. ಉತ್ತಮ ದರ ಸಿಕ್ಕರೆ ಲಕ್ಷಾಂತರ ರೂಪಾಯಿ ಸಂಪಾದಿಸುವ  ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚುಖರ್ಚು: ಈ ಬೆಳೆಗೆ ದುಬಾರಿ ಖರ್ಚು ಎಂಬ ಅಪವಾದವಿದೆ, ಬಿತ್ತನೆ ಬೀಜಕ್ಕೆ ಸಿಂಹಪಾಲು ವಿನಿಯೋಗಿಸಬೇಕು, ಅಧಿಕ ರಸಗೊಬ್ಬರ, ಔಷಧಿಗಳ ಹೆಚ್ಚು ಬಳಕೆ ಹೀಗೆ ಬೆಳೆ ಬೆಳೆಯಲು ಅಧಿಕ ಖರ್ಚಾಗುತ್ತದೆ. ಆದರೆ ಇವರು ಕೋಳಿಗೊಬ್ಬರ, ಅದರ ಜತೆಗೆ ಬೇವಿನ ಹಿಂಡಿಯನ್ನು ಬಳಸುವುದರಿಂದ ರೋಗಬಾಧೆಯಿಂದ ಮುಕ್ತವಾಗಿದ್ದು ಕಡಿಮೆ ಖರ್ಚಿನಲ್ಲಿ ಬೆಳೆ ಬೆಳಯುತ್ತಿದ್ದಾರೆ.

ದರ ಸಮಸ್ಯೆ: ಮಾರುಕಟ್ಟೆಯಲ್ಲಿ ಕೆಲವು ಬಾರಿ ಇದ್ದಕ್ಕಿಂದ್ದಂತೆ ಶುಂಠಿ ಬೆಲೆಯ ಧಾರಣೆ ಕುಸಿಯುತ್ತದೆ. ಆಗ ಅರ್ಧಕ್ಕರ್ಧ ಬೆಲೆಯು ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಶುಂಠಿ ಕೀಳುವುದನ್ನು ಮುಂದೂಡಿ ಮಾರುಕಟ್ಟೆಯಲ್ಲಿ ಬೆಲೆ ನೋಡಿಕೊಂಡು ಕಿತ್ತು ಹದಗೊಳಿಸಬಹುದೆಂಬುದನ್ನು ಪ್ರಕಾಶ್‌ ಮನಗಂಡಿದ್ದಾರೆ.

ಮಲೆನಾಡಿಗೆ ಸೀಮತ: ಶುಂಠಿ ಮತ್ತು ಕಾಫಿ ಬೆಳೆಯಲು ಮಲೆನಾಡು ಹೊರತುಪಡಿಸಿ ಬೇರೆ ಪ್ರದೇಶದಲ್ಲಿ ಸಾಧ್ಯವಿಲ್ಲ ಎಂಬುದು ಕೆಲವರ ಲೆಕ್ಕಾಚಾರ, ಆದರೆ ಬಯಲು ಪ್ರದೇಶದಲ್ಲಿ ಶುಂಠಿ ಬೆಳೆಗೆ ಪೂರಕವಾದ ವ್ಯವಸಾಯ ಮಾಡಿದರೆ ಖಂಡಿತ ಬೆಳೆಯನ್ನು ಬೆಳಯಬಹುದು, ಜತೆಗೆ ಮಲೆನಾಡಿನಲ್ಲಿ ಕೊಳರೋಗದ ಸಮಸ್ಯೆ ಹೆಚ್ಚು, ಬಯಲು ಸೀಮೆಯಲ್ಲಿ ಅದರಿಂದಲೂ ಪಾರಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT