ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರು ಇಡೀ ದೇಶದ ಆಸ್ತಿ

Last Updated 7 ನವೆಂಬರ್ 2017, 9:42 IST
ಅಕ್ಷರ ಗಾತ್ರ

ಉಡುಪಿ: ಕನಕದಾಸರು ತಮ್ಮ ಭಕ್ತಿ ಹಾಗೂ ಸಂದೇಶದ ಮೂಲಕ ಇಡೀ ಪ್ರಪಂಚದ ಕಣ್ಣು ತೆರೆಸಿದರು ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಅವರು, ಒಳ್ಳೆಯ ಸಂದೇಶ ಗಳನ್ನು ನೀಡಿದರು. ಅಂತಹ ಕನಕದಾ ಸರು ಕೇವಲ ಕುರುಬ ಸಮಾಜಕ್ಕೆ ಸೀಮಿತರಲ್ಲ, ಅವರು ಇಡೀ ದೇಶದ ಆಸ್ತಿ ಎಂದು ಬಣ್ಣಿಸಿದರು.

ಉಡುಪಿ ಮತ್ತು ಕನಕದಾಸರಿಗೆ ನಿಕಟ ಸಂಬಂಧ ಇದೆ. ಅವರು ಶ್ರೀಕೃಷ್ಣನ ಅನನ್ಯ ಭಕ್ತರಾಗಿದ್ದರು. ಕನಕದಾಸರು ವಾದಿರಾಜರ ಸಮಕಾಲೀನರಾಗಿದ್ದು, ಅವರ ಪ್ರೀತಿಗೆ ಪಾತ್ರರಾಗಿದ್ದರು. ಅವರಿಬ್ಬರ ಸಂಬಂಧವನ್ನು ನೋಡಿ ಹೊಟ್ಟೆಕಿಚ್ಚಿಗೆ ಒಳಗಾದ ಕೆಲವರು ಕನಕದಾಸರ ಬಗ್ಗೆ ಸ್ವಾಮೀಜಿ ಅವರಿಗೆ ದೂರು ನೀಡಿದರು.

ಒಮ್ಮೆ ಕನಕದಾಸರು ಚೀಲದಲ್ಲಿ ಮೀನು ತರುತ್ತಿದ್ದದನ್ನು ನೋಡಿದ ಕೆಲವರು, ಆ ಬಗ್ಗೆ ವಾದಿರಾಜರಿಗೆ ಮಾಹಿತಿ ನೀಡಿದರು. ಆಗ ಚೀಲ ತೆಗೆದು ನೋಡಿದಾಗ ಮೀನಿನ ಬದಲಿಗೆ ಮಲ್ಲಿಗೆ ಹೂಗಳಿದ್ದವು. ಅಂತಹ ಪವಾಡ ನಡೆದಿತ್ತು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ನೆನಪಿಸಿಕೊಂಡರು.

‘1963ರಲ್ಲಿ ಉಡುಪಿ ಶಾಸಕರಾಗಿದ್ದ ನನ್ನ ತಂದೆ ಮಧ್ವರಾಜರು, ಕೃಷ್ಣ ಮಠದ ಎದುರು ಕನಕದಾಸರ ಗುಡಿಯನ್ನು ಕಟ್ಟಿಸಿದರು. ಅದನ್ನು ಅಂದಿನ ಮುಖ್ಯ ಮಂತ್ರಿ ಎಸ್. ನಿಜಲಿಂಗಪ್ಪ ಅವರು ಉದ್ಘಾಟಿಸಿದ್ದರು. ಈಗ ನಾನು ಸಚಿವನಾಗಿದ್ದೇನೆ. ಕುರುಬ ಸಮಾಜದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಬದ್ಧನಾಗಿದ್ದೇನೆ’ ಎಂದರು.

ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ಕನಕ ದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹು ಮಾನ ವಿತರಿಸಲಾಯಿತು. ಕನಕ ದಾಸರ ಕೀರ್ತನೆಗಳನ್ನು ಹಾಡಲಾಯಿತು.

ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ. ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಾಯಕ್ಕ ಮೇಟಿ, ಕನಕದಾಸ ಸೇವಾ ಸಂಘದ ಗೌರವ ಅಧ್ಯಕ್ಷ ಮೇಟಿ ಮುದಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT