ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ ನಾವಿಕನಿಲ್ಲದ ನಾವೆ; ‘ದಳ’ಪತಿ ಬಿಕ್ಕಟ್ಟು

Last Updated 7 ನವೆಂಬರ್ 2017, 9:45 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು, ಮುಖಂಡರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ಸಮರ್ಥ ‘ದಳ’ಪತಿಯ ಕೊರತೆ ಜಾತ್ಯತೀತ ಜನತಾದಳದ ವರಿಷ್ಠರನ್ನು ಹಲ ವರ್ಷಗಳಿಂದ ಕಾಡುತ್ತಿದೆ. ಹಿಂದೊಮ್ಮೆ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತಗೊಂಡಿದ್ದ ಜಿಲ್ಲೆಯ ವ್ಯಾಪ್ತಿಯಲ್ಲಿ ಇದೀಗ ಸಮರ್ಥ ನಾಯಕನ ಕೊರತೆ ಬೆಂಬಿಡದೆ ಕಾಡುತ್ತಿದೆ. ಇದು ಪಕ್ಷದ ಸಂಘಟನೆ, ಚುನಾವಣೆ ಗೆಲುವಿನ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮನಗೂಳಿ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಎಂಬ ದೂರು ಕಾರ್ಯಕರ್ತರಿಂದಲೇ ಹಲ ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಹೈಕಮಾಂಡ್‌ ಸ್ಪಂದಿಸದಿರುವುದು ತಳ ಹಂತದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ. ಪಕ್ಷಕ್ಕೆ ಸೇರ್ಪಡೆಯಾಗಲಿರುವ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸಹ ಮುದ್ದೇಬಿಹಾಳ, ದೇವರ ಹಿಪ್ಪರಗಿಗೆ ಸೀಮಿತಗೊಂಡಿದ್ದು ಕಾರ್ಯಕರ್ತರ ಉತ್ಸಾಹವನ್ನು ಅಡಗಿಸಿದೆ.

ನಾಯಕತ್ವದ ಕೊರತೆ: 2008ರ ವಿಧಾನಸಭಾ ಚುನಾವಣೆಯ ಸಾರಥ್ಯವನ್ನು ಬಸನಗೌಡ ಪಾಟೀಲ ಯತ್ನಾಳ ವಹಿಸಿಕೊಂಡರೂ ಯಶಸ್ಸು ದೊರೆತಿರಲಿಲ್ಲ. ಸ್ವತಃ ಯತ್ನಾಳ ದೇವರಹಿಪ್ಪರಗಿಯಲ್ಲಿ ಸೋತಿದ್ದರು. 2013ರ ಚುನಾವಣೆಯಲ್ಲಿ ಜಿಲ್ಲೆಯ ಸಿಂದಗಿ, ನಾಗಠಾಣ, ಬಸವನಬಾಗೇವಾಡಿ, ಬಬಲೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಎರಡನೇ ಸ್ಥಾನ ಗಳಿಸುವ ಜತೆ, ಅತ್ಯಲ್ಪ ಮತದಿಂದ ಪರಾಭವಗೊಂಡಿದ್ದರು.

ಬಬಲೇಶ್ವರ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಬಹುತೇಕ ಆಯಾ ಮತಕ್ಷೇತ್ರದಿಂದಲೇ 2018ರ ವಿಧಾನಸಭಾ ಚುನಾವಣೆಯಲ್ಲೂ ಕಣಕ್ಕಿಳಿಯಲಿದ್ದು, ಇದೇ 14ರಂದು ಪಕ್ಷ ಸೇರ್ಪಡೆಯಾಗಲಿರುವ ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಈಗಾಗಲೇ ಹೈಕಮಾಂಡ್‌ನಿಂದ ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸ್ವಾತಂತ್ರ್ಯವನ್ನು ತಾವೇ ಪಡೆದಿದ್ದಾರೆ.

‘ನಿರೀಕ್ಷೆಯಂತೆ ಮುದ್ದೇಬಿಹಾಳದಿಂದ ನಡಹಳ್ಳಿ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ನಡಹಳ್ಳಿ ಸಹೋದರ ಸ್ಪರ್ಧಿಸಲಿದ್ದಾರೆ. ಈ ವಿಷಯದಲ್ಲಿ ಜಿಲ್ಲಾ ಘಟಕ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಹೈಕಮಾಂಡ್‌ ಸಹ ಅವರ ಜತೆಗೆ ನೇರವಾಗಿ ಸಂಪರ್ಕದಲ್ಲಿದೆ. ಇದುವರೆಗೂ ನಮ್ಮನ್ನು ಪರಿಗಣಿಸಿಲ್ಲ’ ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಲಿಂಗಾಯತರಿಗೆ ಟಿಕೆಟ್‌ ನೀಡಿದರೆ ಕಾಂಗ್ರೆಸ್‌ ಅಭ್ಯರ್ಥಿಗೆ ಅನುಕೂಲವಾಗಲಿದೆ. ಮುಸ್ಲಿಮರಿಗೆ ಟಿಕೆಟ್‌ ನೀಡಿದರೆ ಬಿಜೆಪಿಗೆ ಅನುಕೂಲವಾಗಲಿದೆ. ಯಾರನ್ನು ಅಂತಿಮ ಅಭ್ಯರ್ಥಿಯನ್ನಾಗಿಸಬೇಕು ಎಂಬ ಚಿಂತನೆ ವರಿಷ್ಠರ ಹಂತದಲ್ಲಿ ನಡೆದಿದೆ’ ಎಂದು ಇದೇ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು, ಇಂಡಿ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗದವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಇಂಡಿಯಿಂದ ಬಿ.ಡಿ.ಪಾಟೀಲ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ,ಮನಗೂಳಿ ತಿಳಿಸಿದರು.

‘ಚುನಾವಣೆಗೆ ಆರು ತಿಂಗಳು ಸಮಯವಿದೆ. ಹೈಕಮಾಂಡ್‌ ಸೂಚನೆ ನೀಡಿದಂತೆ ಜಿಲ್ಲಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ವರಿಷ್ಠರಿಗೆ ಜಿಲ್ಲೆಯ ಮಾಹಿತಿಯಿದೆ. ಪ್ರಸ್ತುತ ಕ್ಷೇತ್ರದಲ್ಲೇ ಹೆಚ್ಚಿನ ಸಮಯ ವಿನಿಯೋಗಿಸುತ್ತಿರುವೆ. ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT