ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕ ಭವನ ನಿರ್ಮಾಣಕ್ಕೆ ಕ್ರಮ: ಎಂ.ಬಿ.ಪಾಟೀಲ

Last Updated 7 ನವೆಂಬರ್ 2017, 9:49 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ ಭವ್ಯವಾದ ಕನಕ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಡೆದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ₨ 2 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕನಕದಾಸರು ಒಂದು ಸಮಾಜದ ಆಸ್ತಿಯಲ್ಲ. ಇಡೀ ಮನುಕುಲದ ಆಸ್ತಿ. ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳ ವಿರುದ್ಧ ಕನಕರು ಚಾಟಿ ಬೀಸಿದರು. ಇವರ ಆದರ್ಶ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ವಿಜಯಪುರದಲ್ಲಿ ಕನಕದಾಸರ ವೃತ್ತ, ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಹಾಲುಮತ ಸಮಾಜದವರು ಹಲ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ನಿಯೋಜಿತ ಸ್ಥಳದಲ್ಲಿ ವೃತ್ತ ನಿರ್ಮಾಣಕ್ಕೆ ಕೆಲ ತಾಂತ್ರಿಕ ತೊಂದರೆ ಎದುರಾಗಿವೆ. ಇದರ ಸಮೀಪವೇ ಸರ್ಕಾರಿ ಜಾಗ ಗುರುತಿಸಿ, ಭವ್ಯವಾದ ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗುವುದು, ಈ ಎಲ್ಲ ಖರ್ಚನ್ನು ಬಿಎಲ್‌ಡಿಇ ಸಂಸ್ಥೆ ಭರಿಸಲಿದೆ ಎಂದು ಘೋಷಿಸಿದರು.

ಭಕ್ತಿ ಸಾರ ರಚನೆ: ಕನಕದಾಸರು ‘ಭಕ್ತಿ ಸಾರ’ ರಚಿಸಿದರು. ಕಾಲಾಂತರದಲ್ಲಿ ಇದನ್ನು ವೈಷ್ಣವ ಸಾಹಿತಿಗಳು ‘ಹರಿ ಭಕ್ತಿಸಾರ’ ಎಂದು ಕರೆದಿದ್ದಾರೆ, ಕನಕದಾಸರು ರಚಿಸಿದ್ದು ಭಕ್ತಿಸಾರ ಹೊರತು ಹರಿಭಕ್ತಿಸಾರವಲ್ಲ ಎಂದು ಸಂಶೋಧಕ ಚಂದ್ರಕಾಂತ ಬಿಜ್ಜರಗಿ ಅಭಿಪ್ರಾಯಪಟ್ಟರು.

‘ದಾಸಶ್ರೇಷ್ಠ ಕನಕದಾಸರು ರಚಿಸಿದ ಕೃತಿಯ ಶೀರ್ಷಿಕೆಯನ್ನೇ ತಿದ್ದುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ನನ್ನ ಸಂಶೋಧನಾ ಲೇಖನದಲ್ಲಿ ಬೆಳಕು ಚೆಲ್ಲಿದ್ದೇನೆ’ ಎಂದು ತಮ್ಮ ಉಪನ್ಯಾಸದಲ್ಲಿ ಹೇಳಿದರು.

‘ಕುರುಬ ಸಮಾಜ ಎಲ್ಲ ಶುಭ ಕಾರ್ಯಗಳಿಗೆ ಬೇಕು. ಚುನಾವಣೆ ಸಂದರ್ಭದಲ್ಲಿಯೂ ಕುರುಬ ಸಮಾಜದವರನ್ನು ಹುಡುಕಿಕೊಂಡು ಹೋಗಿ ಪ್ರಥಮ ಮತ ಹಾಕಿಸಲಾಗುತ್ತದೆ. ಆದರೆ ಚುನಾವಣೆ ನಂತರ ಸಮಾಜವನ್ನು ರಾಜಕೀಯ ನೇತಾರರು ತಿರುಗಿ ನೋಡಲ್ಲ. ಸಮಾಜವನ್ನು ಕೇವಲ ಬೋಣಗಿ ಕಾರ್ಯಕ್ಕೆ ಮಾತ್ರ ಸೀಮಿತಗೊಳಿಸಬೇಡಿ’ ಎಂದು ಬಿಜ್ಜರಗಿ ಮನವಿ ಮಾಡಿದರು.

ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಮಖಣಾಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಸಂಗೀತಾ ಪೋಳ, ವಿಡಿಎ ಅಧ್ಯಕ್ಷ ಆಜಾದ್ ಪಟೇಲ್, ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಜಿ.ಪಂ. ಸದಸ್ಯೆ ಸುಜಾತಾ ಕಳ್ಳಿಮನಿ, ಜಿ.ಪಂ. ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಸಮಾಜದ ಮುಖಂಡರಾದ ರಾಜು ಕಂಬಾಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT