ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳಾಗಿದ್ದಳು ನನ್ನಕ್ಕ

Last Updated 8 ನವೆಂಬರ್ 2017, 4:46 IST
ಅಕ್ಷರ ಗಾತ್ರ

ಬದುಕಿನಲ್ಲಿ ಯಾವ ಯಾವ ಪಾತ್ರಗಳು ಹೇಗೆ ಬದಲಾಗುತ್ತಾ ಹೋಗುತ್ತವೆಂದು ಹೇಳುವುದು ಕಷ್ಟ. ಆದರೆ, ನನ್ನ ಅಕ್ಕ ಊಹೆಗೂ ಸಿಗದಂತೆ ಬದಲಾಗಿ ಈಗ ನೆನಪಾಗಿ ಅಷ್ಟೇ ಉಳಿದುಕೊಂಡಿದ್ದಾಳೆ. ಅವಳನ್ನು, ಅವಳ ಕೊನೆಯ ದಿನಗಳನ್ನು ನೆನೆದರೆ ಎದೆ ಭಾರವಾಗುತ್ತದೆ. ಅವಳನ್ನು ಲೋಕವೆಲ್ಲಾ ಹುಚ್ಚಿ ಎಂದು ಕರೆದರೂ ನನ್ನ ಪಾಲಿಗೆ ಅವಳು ಮಗುವಿನ ಹಾಗೆಯೇ ಇದ್ದಳು. ನಾನು ನನ್ನ ಮಕ್ಕಳು ಬೇರೆ, ಅವಳು ಬೇರೆ ಎಂದು ಯಾವತ್ತೂ ಎಣಿಸಲಿಲ್ಲ.

ಅಕ್ಕ ನನಗಿಂತ ಎರಡು ವರ್ಷ ದೊಡ್ಡವಳು. ಅವಳು ಮಗುವಾಗಿದ್ದಾಗ ತೊಟ್ಟಿಲಿನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು ಎಂದು ಮನೆಯವರು ಹೇಳುತ್ತಿದ್ದರು. ಅದರಿಂದಲೋ ಏನೋ ಅವಳ ವರ್ತನೆಯಲ್ಲಿ ವಿಚಿತ್ರ ಬದಲಾವಣೆಗಳಾಗುತ್ತಿದ್ದವು. ಅಕ್ಕ ಏಕಾಏಕಿ ಕೋಪಗೊಳ್ಳುತ್ತಿದ್ದಳು. ಕೈಗೆ ಏನು ಸಿಗುತ್ತದೆಯೋ ಅದರಲ್ಲೇ ಹೊಡೆದು ಬಿಡುತ್ತಿದ್ದಳು. ಅಕ್ಕ- ನಾನು ಏಳನೇ ತರಗತಿಯವರಗೆ ಒಂದೇ ಶಾಲೆಗೆ ಹೋಗುತ್ತಿದ್ದೆವು. ಅಕ್ಕನ ಓದು- ಬರಹ ಸಾಮಾನ್ಯವಾಗೇ ಇತ್ತು. ಅವಳ ಪಾಠವನ್ನು ಓದಿಕೊಳ್ಳುವುದು, ಶಾಲೆಯಲ್ಲಿ ಕೊಟ್ಟ ಮನೆಪಾಠವನ್ನು ಬರೆದುಕೊಳ್ಳುವುದು ಇವೆಲ್ಲವನ್ನೂ ಸಹಜವಾಗೇ ಮಾಡುತ್ತಿದ್ದಳು.

ಅವಳ ವರ್ತನೆಯಲ್ಲಿನ ಬದಲಾವಣೆ ಕಂಡು ಶಾಲೆಯಲ್ಲಿ ಸಹಪಾಠಿಗಳು ಅವಳನ್ನು ಅಣಕಿಸುತ್ತಿದ್ದರು. ಕೆಲವು ಹುಡುಗಿಯರು ಹುಚ್ಚಿ ಎಂದು ಅಣಕಿಸಿದ್ದನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಅಕ್ಕ ಒಂದು ದಿನ ಊಟಕ್ಕೆಂದು ಆ ಹುಡುಗಿಯರನ್ನು ಮನೆಗೆ ಕರೆದುಕೊಂದು ಬಂದು ಚೆನ್ನಾಗಿ ಹೊಡೆದಿದ್ದಳು. ಈ ವಿಷಯವನ್ನು ಶಾಲೆ ಮತ್ತು ಆ ಹುಡುಗಿಯರ ಪೋಷಕರು ಗಂಭೀರವಾಗಿ ತೆಗೆದುಕೊಂಡರು. ಇದರಿಂದಾಗಿ ಏಳನೇ ತರಗತಿಯ ಬಳಿಕ ಅಕ್ಕ ಬೇರೆ ಶಾಲೆ ಸೇರಬೇಕಾಯಿತು.

ದಿನಗಳು ಕಳೆಯುತ್ತಿದ್ದಂತೆ ಅಕ್ಕನ ವರ್ತನೆ ವಿಪರೀತವಾಗುತ್ತಾ ಹೋಯಿತು. ಊರಿನ ಯಾವ ಬಾವಿ ಕಂಡರೂ ಅದಕ್ಕೆ ಹೋಗಿ ಬೀಳುತ್ತಿದ್ದಳು. ಬಾವಿಗೆ ಬಿದ್ದರೂ ಅವಳು ಮುಳುಗುತ್ತಿರಲಿಲ್ಲ. ಅವಳು ಬಾವಿಗೆ ಹಾರಿದಳೆಂದರೆ ಮೊದಮೊದಲು ಅವಳನ್ನು ಕಾಪಾಡಲು ಸೇರುತ್ತಿದ್ದ ಜನ ಆ ಮೇಲೆ ಅವಳು ನೀರಿನಲ್ಲಿ ಮುಳುಗದೆ ತೇಲುತ್ತಾಳೆ ಎಂಬುದನ್ನು ಸೋಜಿಗವೆಂಬಂತೆ ನೋಡಲು ಸೇರುತ್ತಿದ್ದರು. ಹತ್ತನೇ ತರಗತಿಯವರೆಗೂ ಶಾಲೆಗೆ ಹೋದ ಅಕ್ಕ ಪರೀಕ್ಷೆ ಪಾಸಾಗದೆ ಮನೆಯಲ್ಲಿ ಉಳಿದಳು.

ಮನೆಯಲ್ಲೇ ಇರುತ್ತಿದ್ದ ಅಕ್ಕ ದಿನಕಳೆದಂತೆ ಮನೆಯವರು ತನ್ನನ್ನು ಕಡೆಗಣಿಸುತ್ತಿದ್ದಾರೋ ಹೇಗೆ ಎಂಬುದನ್ನು ಪರೀಕ್ಷೆ ಮಾಡುವವಳಂತೆ ವರ್ತಿಸುತ್ತಿದ್ದಳು. ಮನೆಯಲ್ಲಿ ಎಲ್ಲೆಂದರಲ್ಲಿ ಮಲ, ಮೂತ್ರ ಮಾಡುತ್ತಿದ್ದಳು. ನಾನೇ ಅದನ್ನೆಲ್ಲಾ ಸ್ವಚ್ಛಗೊಳಿಸುತ್ತಿದ್ದೆ. ಅಪ್ಪ-ಅಮ್ಮ ಅವಳನ್ನು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಿಂದಲೂ ಗುಣವಾಗದಿದ್ದಾಗ ದರ್ಗಾ, ದೇವಸ್ಥಾನ, ಮಠ ಎಲ್ಲಾ ಕಡೆಯೂ ಕರೆದುಕೊಂಡು ಹೋದರು. ಬಾಳಿನಲ್ಲಿ ದಿಕ್ಕುಗೆಟ್ಟಾಗ ಬೇರೆಯವರು ಹೇಳುವ ಸಣ್ಣ ಸಲಹೆಗಳೂ ಹೊಸ ಭರವಸೆಯ ಬೆಳಕಿನ ದಾರಿಯ ಹಾಗೆ ಕಾಣುತ್ತವೆ. ಅಪ್ಪ-ಅಮ್ಮನಿಗೂ ಹಾಗೇ ಆಗಿರಬೇಕು. ಯಾರು ಯಾರು ಎಲ್ಲೆಲ್ಲಿಗೆ ಕರೆದುಕೊಂಡು ಹೋಗಿ ಎಂದರೋ ಅಲ್ಲೆಲ್ಲಾ ಅಕ್ಕನನ್ನು ಕರೆದುಕೊಂಡು ಹೋದರು. ಆದರೆ, ಅಕ್ಕನ ಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿತ್ತು.

ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆ ಪುನರ್ವಸತಿ ಕೇಂದ್ರವೊಂದಕ್ಕೆ ಅಕ್ಕನನ್ನು ಸೇರಿಸಿದ್ದೆವು. ಸುಮಾರು ಆರು ತಿಂಗಳು ಅಲ್ಲಿದ್ದ ಅಕ್ಕ ತೀರಾ ಬಡಕಲಾಗಿಬಿಟ್ಟಳು. ಅಲ್ಲಿಂದ ಬಿಡಿಸಿ ಅವಳನ್ನು ಮನೆಗೆ ಕರೆದುಕೊಂಡು ಬಂದೆವು. ಈ ಮಧ್ಯೆ ಅಮ್ಮನಿಗೆ ಸಂಧಿವಾತ ಶುರುವಾಯಿತು. ಅಕ್ಕನ ಸ್ಥಿತಿಯ ಜತೆಗೆ ಅಮ್ಮನ ಹೊಸ ನೋವೂ ಮನೆಗೆ ಬಂದಿತ್ತು.

(ಸುಮಂಗಲಾ)

ಅಕ್ಕನಿಗೆ ಮದುವೆ ಮಾಡಿದರೆ ಅವಳು ಗುಣವಾಗಬಹುದು ಎಂದು ಯಾರೋ ಸಲಹೆ ನೀಡಿದ್ದರು. ಈ ಸ್ಥಿತಿಯಲ್ಲಿರುವವಳನ್ನು ಯಾರು ಮದುವೆಯಾಗುತ್ತಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ, ಎಲ್ಲಾ ವಿಷಯ ಗೊತ್ತಿದ್ದರೂ ಸಂಬಂಧಿಯೊಬ್ಬರು ಅಕ್ಕನನ್ನು ಮದುವೆಯಾಗಲು ಮುಂದೆ ಬಂದರು. ಮದುವೆ ದಿನಗಳಲ್ಲಿ ಅಕ್ಕ ಸಂಪೂರ್ಣ ಚೇತರಿಸಿಕೊಂಡಳು. ಅವಳು ಆ ಮೊದಲು ಇದ್ದ ಸ್ಥಿತಿಯನ್ನೇ ಮರೆತವಳಂತೆ ಅಕ್ಕ ಗುಣವಾಗಿದ್ದಳು. ಆದರೆ, ಗಂಡನ ಮನೆಯವರು ಅವಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಮದುವೆಯಾದ ಸ್ವಲ್ಪ ದಿನದಲ್ಲೇ ಅಕ್ಕ ನಮ್ಮ ಮನೆಗೆ ಮರಳಿದಳು.

ಗಂಡನ ಮನೆ ಬಿಟ್ಟು ಬಂದ ಮೇಲೆ ಅಕ್ಕನ ವರ್ತನೆ ವಿಪರೀತವಾಗಿ ಹೋಯಿತು. ಬಹಳಷ್ಟು ಸಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಮ್ಮನಿಗೆ ಹೊಡೆಯುತ್ತಿದ್ದಳು. ಮಹಡಿಯಿಂದ ಕೆಳಕ್ಕೆ ಬೀಳುತ್ತಿದ್ದಳು. ಅವಳನ್ನು ಸಂಭಾಳಿಸುವುದು ಸವಾಲಾಗುತ್ತಿತ್ತು. ಇತ್ತ ಅಮ್ಮನಿಗೆ ಸಂಧಿವಾತ ಹೆಚ್ಚಾಗಿತ್ತು. ಅಮ್ಮನ ಸೇವೆಯ ಜತೆಗೆ ಅಕ್ಕನ ಸೇವೆಯನ್ನೂ ಮಾಡುತ್ತಿದ್ದೆ. ಇದನ್ನೆಲ್ಲಾ ಎಂದೂ ನಾನು ಹಿಂಸೆ ಎಂದುಕೊಂಡು ಮೂಗು ಮುರಿಯಲಿಲ್ಲ, ಅಸಹ್ಯ ಪಟ್ಟುಕೊಳ್ಳಲಿಲ್ಲ.

ಅಕ್ಕನ ವರ್ತನೆಯಿಂದ ಕೆಲವೊಮ್ಮೆ ಕೋಪವೂ ಬರುತ್ತಿತ್ತು. ಕೋಪ ಬಂದಾಗ ಅಕ್ಕನಿಗೆ ಹೊಡೆದು ಬಿಡುತ್ತಿದ್ದೆ. ಆದರೆ, ಆ ಮೇಲೆ ಅದರ ಬಗ್ಗೆ ನಾನೇ ಒಂಟಿಯಾಗಿ ನೋವು ತಿನ್ನುತ್ತಿದ್ದೆ. ಅವಳ ವರ್ತನೆ ಅವಳ ಕೈಮೀರಿದ್ದಾಗಿತ್ತು. ಅವಳಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಾಗುತ್ತಿರಲಿಲ್ಲ. ಹೊಡೆದರೆ ಅವಳು ಇನ್ನಷ್ಟು ಕೋಪಗೊಳ್ಳುತ್ತಿದ್ದಳು. ನನ್ನ ಅಕ್ಕನಿಗೇ ಏಕೆ ಹೀಗಾಯಿತು ಎಂದು ಅದೆಷ್ಟೋ ದಿನ ನಾನು ಕಣ್ಣೀರು ಹಾಕಿದ್ದೇನೆ.

ನಮ್ಮ ಮನೆಯ ಈ ಸ್ಥಿತಿ ಕಂಡು ಸಂಬಂಧಿಕರು ಯಾರೂ ಹತ್ತಿರ ಸುಳಿಯುತ್ತಿರಲಿಲ್ಲ. ಇದೇ ಕಾರಣಕ್ಕೆ ನನಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಮಾತುಕತೆ ಮುಗಿದ ಮೇಲೂ ನನಗೆ ಹೆಣ್ಣು ಕೊಡಲು ಹಲವರು ಹಿಂದೇಟು ಹಾಕಿದ್ದರು. ಕೊನೆಗೆ ನನ್ನ ಕೈ ಹಿಡಿದ ಸಂಗಾತಿ ಮನೆಯ ಸ್ಥಿತಿಯನ್ನು ಕಂಡು ಅಸಹ್ಯಪಡದೆ ನಮ್ಮೊಳಗೆ ಒಂದಾದಳು, ನಮ್ಮ ಕಷ್ಟಗಳನ್ನು ಹಂಚಿಕೊಂಡಳು. ನಮ್ಮ ಇಬ್ಬರು ಮಕ್ಕಳ ಜತೆಗೆ ಅಕ್ಕನನ್ನೂ ಮಗುವಿನಂತೆ ನೋಡಿಕೊಂಡಳು ನನ್ನ ಪತ್ನಿ.

ಅಕ್ಕ ಕೊನೆಕೊನೆಗೆ ಮೈಮೇಲೆ ಬಟ್ಟೆ ಇಲ್ಲದಂತೆ ಬೀದಿಗೆ ಓಡಿ ಹೋಗುತ್ತಿದ್ದಳು. ಮನೋರೋಗಿಗಳ ಆಸ್ಪತ್ರೆಗೆ ತೋರಿಸಿದ್ದರೂ ಅವಳ ಸ್ಥಿತಿ ಸುಧಾರಿಸಲಿಲ್ಲ. ತನ್ನ ಮಗಳ ಸ್ಥಿತಿ ಹೀಗಾಯಿತಲ್ಲಾ ಎಂದು ಮರುಗುತ್ತಲೇ ಅಮ್ಮ ನಮ್ಮನ್ನು ಅಗಲಿದರು. ಅಮ್ಮನನ್ನು ಕಳೆದುಕೊಂಡ ಒಂದು ವರ್ಷದಲ್ಲೇ ಅಕ್ಕನೂ ನಮ್ಮಿಂದ ದೂರವಾದಳು. ಗಂಟಲಲ್ಲಿ ಆಗಿದ್ದ ಗಾಯ ಮಾಯದೆ ಅಕ್ಕ ತನ್ನ 40ನೇ ವಯಸ್ಸಿನಲ್ಲಿ ತೀರಿಕೊಂಡಳು. ಕೊನೆಯ ಬಾರಿಗೆ ಅವಳ ಮುಖ ನೋಡಲೂ ಅವಳ ಗಂಡನ ಮನೆಯವರು ಬರಲಿಲ್ಲ. ಅವಳ ಶವವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದೆವು. ಕಣ್ಣ ಮುಂದೆಯೇ ಪ್ರೀತಿಯ ಮಗಳನ್ನು ಕಳೆದುಕೊಂಡ ಅಪ್ಪ ತುಂಬಾ ನೋವು ತಿಂದರು.

ಅಕ್ಕ ಸಾಯುವ ದಿನ ನನ್ನ ಜತೆಗೇ ರೊಟ್ಟಿ ತಿಂದಿದ್ದಳು. ಅಕ್ಕನಿಗೆ ನಾನು ತಿನ್ನಿಸುವ ಕೊನೆಯ ತುತ್ತು ಅದಾಗುತ್ತದೆ ಎಂದುಕೊಂಡಿರಲಿಲ್ಲ ನಾನು. ಅಕ್ಕ ಇನ್ನೆಂದೂ ಮರಳಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಆದರೆ, ಅವಳ ಜತೆಗೆ ಕಳೆದ ದಿನಗಳು, ಅವಳ ನೋವನ್ನು ಹಂಚಿಕೊಂಡ ನೆನಪುಗಳು ಮಾತ್ರ ಎದೆಯೊಳಗೆ ಕಂಬನಿಯಾಗಿ ಹನಿಗೂಡುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT