ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಹೃದಯವಂತರ ಗುಂಪು

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅದೊಂದು ಹೃದಯವಂತರ ಗುಂಪು. ಅಲ್ಲಿ ನಾನು, ನನ್ನಿಂದ ಎನ್ನುವ ಸ್ವಾರ್ಥವಿಲ್ಲ. ಅಲ್ಲಿರುವ ಎಲ್ಲರೂ ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕೆ ತಮ್ಮಿಂದ ಏನಾದರೂ ಸಹಾಯವಾಗಲಿ ಎಂಬ ಮನೋಭಾವ ಹೊಂದಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುವ ಸಲುವಾಗಿ ಸಂಸ್ಥೆಯೊಂದನ್ನು ಕಟ್ಟಿಕೊಂಡಿದ್ದಾರೆ. ಆ ಸಂಸ್ಥೆಯೇ ಅಮೃತಬಿಂದು. ಸಂಸ್ಥೆಯನ್ನು 2015ರ ಫೆಬ್ರುವರಿಯಲ್ಲಿ ಪ್ರಶಾಂತ್‌ ರಾವ್ ಆರಂಭಿಸಿದರು.

ಡಿಗ್ರಿ ಓದುತ್ತಿದ್ದ ಪ್ರಶಾಂತ್‌ ಕಾಯಿಲೆಯೊಂದಕ್ಕೆ ತುತ್ತಾಗಿದ್ದರು. ಕಾಯಿಲೆಯ ನೋವು ಅವರನ್ನು ಖಿನ್ನತೆಗೆ ದೂಡಿತ್ತು. ಜೀವನವೇ ದುಸ್ತರ ಎಂದುಕೊಂಡಿದ್ದ ಅವರಿಗೆ ಒಂದು ದಿನ ಜೀವನ ಇಷ್ಟೇ ಅಲ್ಲ, ಇದಕ್ಕೂ ಮೀರಿದ್ದೇನೋ ಇದೆ ಅನ್ನಿಸಿತು.

ಅಂದು, ಪ್ರಶಾಂತ ಅವರ ಸ್ನೇಹಿತನ ಹುಟ್ಟುಹಬ್ಬ. ಆತ ದಿನ ಇವರನ್ನು ಅನಾಥಾಶ್ರಮಕ್ಕೆ ಕರೆದೊಯ್ದಿದ್ದರು. ಅಲ್ಲಿ ಅನಾಥಮಕ್ಕಳನ್ನು ನೋಡಿ, ಅವರ ಕತೆಗಳನ್ನು ಕೇಳಿ, ಅವರೊಂದಿಗೆ ಸಮಯ ಕಳೆದ ಮೇಲೆ ‘ಇಷ್ಟೆಲ್ಲಾ ನೋವುಂಡ ಇವರೆಲ್ಲ ಇಷ್ಟು ಸಂತೋಷದಿಂದಿರುವಾಗ ನಾನೇಕೆ ಒಂದು ಕಾಯಿಲೆಗಾಗಿ ಇಷ್ಟು ಕೊರಗುತ್ತಿದ್ದೇನೆ’ ಎನ್ನಿಸಿತ್ತು. ಖಿನ್ನತೆಯಿಂದ ಬಳಲುತ್ತಿದ್ದ ಪ್ರಶಾಂತ್ ಮನಸ್ಸಿಗೆ ಅಂದು ನಿರಾಳ ಎನ್ನಿಸಿತು. ಅನಾಥಾಶ್ರಮಗಳಲ್ಲಿರುವ ಮಕ್ಕಳಿಗಾಗಿ ಕೈಲಾದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡರು.

ಪ್ರಶಾಂತ್‌ ಮಾಡಿದ ಕೆಲಸಗಳಿಗೆ ಅವರ ಸಮಾನ ಮನಸ್ಕ ಸ್ನೇಹಿತರು ಕೈ ಜೋಡಿಸಿದರು. ಈ ಸಂಖ್ಯೆ ಕ್ರಮೇಣ ಹೆಚ್ಚಾಯಿತು, ನೂರಾರು ಮಂದಿ ಪ್ರಶಾಂತ್‌ ಅವರಿಗೆ ಜೊತೆಯಾದರು. ಅದೊಂದು ಸಂಸ್ಥೆಯಾಗಿ, ಅಮೃತಬಿಂದುವಾಗಿ ಬೆಳೆಯಿತು.

ಮೊದಲು ಅನಾಥಾಶ್ರಮಗಳಿಗಷ್ಟೇ ಸಹಾಯಹಸ್ತ ಚಾಚುತ್ತಿದ್ದ ಅಮೃತಬಿಂದು ಮುಂದೆ ತನ್ನ ಸಹಾಯದ ಪರಿಧಿಯನ್ನು ವಿಸ್ತರಿಸಿತು. ವೃದ್ಧಾಶ್ರಮ, ಸರ್ಕಾರಿ ಶಾಲೆ, ದೃಷ್ಟಿಯಿಲ್ಲದ ಮಕ್ಕಳಿಗೆ ನೆರವು ನೀಡಲೂ ಅಮೃತಬಿಂದು ಮುಂದಾಯಿತು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕ, ಬ್ಯಾಗ್‌, ಪೆನ್ನು ಸೇರಿದಂತೆ ಅವಶ್ಯಕ ವಸ್ತುಗಳನ್ನು ನೀಡುತ್ತಿದೆ. ಶಾಲೆಗಳಲ್ಲಿ ಗಿಡ ನೆಡುವುದು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದೆ. ರಕ್ತದಾನಿಗಳನ್ನು ಹುಡುಕಿ ಅವಶ್ಯಕತೆ ಇರುವವರಿಗೆ ರಕ್ತ ಒದಗಿಸುವ ಕಾರ್ಯವನ್ನು ಮಾಡುತ್ತಿದೆ ಈ ಸಂಸ್ಥೆ. ಸುಮಾರು 2,500ಕ್ಕೂ ಅಧಿಕ ರಕ್ತದಾನಿಗಳ ಸಂಪರ್ಕ ಸಂಸ್ಥೆಗಿದೆ.

ಪ್ರತಿ ಭಾನುವಾರ ಅನಾಥಶ್ರಮಗಳಿಗೆ ಭೇಟಿ ನೀಡುವ ಸಂಸ್ಥೆಯ ಕಾರ್ಯಕರ್ತರು ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಲ್ಲಿನ ಮಕ್ಕಳಿಗೆ ಹಣ್ಣು– ಹಂಪಲುಗಳನ್ನು ವಿತರಿಸಿ ಸಮಯ ಕಳೆಯುತ್ತಾರೆ. ಹೀಗೆ ಮಾಡುವ ಮೂಲಕ ಆ ಮಕ್ಕಳಲ್ಲಿರುವ ಅನಾಥ ಪ್ರಜ್ಞೆ ಕಡಿಮೆಯಾಗುವಂತೆ ಮಾಡಲು ಶ್ರಮಿಸುತ್ತಾರೆ. ವೃದ್ಧರ ನೆರವಿಗೂ ವ್ಯವಸ್ಥೆ ಕಲ್ಪಿಸಿದ್ದಾರೆ.

ಕಣ್ಣಿಲ್ಲದ ಅದೆಷ್ಟೋ ಮಂದಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿದೆ ಈ ಸಂಸ್ಥೆ. ಸುಮಾರು 150 ಮಂದಿ ಈ ತಂಡದಲ್ಲಿದ್ದು ಕಣ್ಣಿಲ್ಲದ ವಿದ್ಯಾರ್ಥಿಗಳು ಇವರ ತಂಡವನ್ನು ಸಂಪರ್ಕಿಸಿ ಅವರ ಮೂಲಕ ತಮ್ಮ ಪರೀಕ್ಷೆಗಳನ್ನು ಬರೆಸಿ, ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ.

ಸಂಸ್ಥೆಯ ನಯನಾ ಎಂಬ ಕಾರ್ಯಕರ್ತೆಯೊಬ್ಬರು ನಿಧನರಾಗಿದ್ದರು. ಅವರ ನೆನಪಿಗಾಗಿ ಪ್ರಾಜೆಕ್ಟ್ ನಯನಾ ಹೆಸರಿನ ಕಾರ್ಯಕ್ರಮವನ್ನು ಸಂಸ್ಥೆ ನಡೆಸುತ್ತಿದೆ. ದೃಷ್ಟಿದೋಷದ ನಡುವೆಯೂ ವಿಶಿಷ್ಟ ಸಾಧನೆ ಮಾಡಿದ ರಜನಿ ಗೋಪಾಲಕೃಷ್ಣ, ಅಶ್ವಿನಿ ಅಂಗಡಿ ಅವರಂಥವರನ್ನು ಕರೆಸಿ ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತದೆ. ಆ ಮೂಲಕ ದೃಷ್ಟಿ ಇಲ್ಲದ ಎಷ್ಟೋ ಮಂದಿಯ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ ಅಮೃತಬಿಂದು.

'ಇಲ್ಲಿಯವರೆಗೆ ನಾವು ಸರ್ಕಾರ ಹಾಗೂ ಜನರಿಂದ ಯಾವುದೇ ದೇಣಿಗೆ ಪಡೆದಿಲ್ಲ. ಸದಸ್ಯರೇ ಸ್ವಂತ ಖರ್ಚಿನಿಂದ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ' ಎನ್ನುತ್ತಾರೆ ಸಂಸ್ಥೆಯ ಸದಸ್ಯೆ ವೀಣಾ.

ಆಸಕ್ತರು ಮೊ- 8553840709 ಸಂಪರ್ಕಿಸಬಹುದು.

**

‘ಬಡತನ ಹಾಗೂ ನೊಂದ ಅದೆಷ್ಟೋ ಜೀವಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿ, ಸಾಂತ್ವಾನ ಹೇಳಿದ ಖುಷಿ ನನಗಿದೆ. ಮುಂದೆ ಒಂದು ಆಶ್ರಮ ಸ್ಥಾಪಿಸಬೇಕು, ಅಲ್ಲಿ ವಯಸ್ಸಾದವರು, ಅನಾಥರು, ಸಮಾಜದಲ್ಲಿ ನೊಂದ ಜೀವಿಗಳಿಗೆ ಆಶ್ರಯ ನೀಡಬೇಕು. ಅಲ್ಲದೇ ಸ್ಟಡಿ ಸೆಂಟರ್ ಒಂದನ್ನು ಆರಂಭಿಸಿ ಅದರಲ್ಲಿ ಬಡ ಹಾಗೂ ಸ್ಲಂಗಳ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ನೀಡುವ ಗುರಿಯನ್ನು ಇರಿಸಿಕೊಂಡಿದ್ದೇನೆ. ನಮ್ಮ ಅಮೃತಬಿಂದುವಿನೊಂದಿಗೆ ಕರ್ನಾಟಕದ ಎಲ್ಲಾ ಭಾಗದ ಜನರು ಕೈ ಜೋಡಿಸಬೇಕು. ಆ ಮೂಲಕ ಸಮಾಜಕ್ಕೆ ನೆರವಾಗಬೇಕು ಎಂಬುದು ನನ್ನ ಆಶಯ.

–ಪ್ರಶಾಂತ್ ರಾವ್, ತಂಡದ ಸ್ಥಾಪಕ

**

ನಿವೃತ್ತಿ ನಂತರ ನಾನು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನನ್ನನ್ನು ತೊಡಗಿಸಿಕೊಂಡೆ. ಅವುಗಳಲ್ಲಿ ಕೆಲವು ನನಗೆ ತೃಪ್ತಿ ನೀಡಿದ್ದವು. ಈಗ ನಾನು ಅಮೃತಬಿಂದು ತಂಡದ ಸದಸ್ಯನಾಗಿದ್ದೇನೆ. ನನಗೆ 87 ವರ್ಷ, ಆದರೂ ನನಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಹಮಸ್ಸಿದೆ. ಅಮೃತಬಿಂದು ತಂಡದಲ್ಲಿನ ಯುವಕರು ಮಾಡುತ್ತಿರುವ ಸಾಮಾಜ ಸೇವೆಯಲ್ಲಿ ನನ್ನದು ಒಂದು ಪಾಲಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ. ಮಾನವೀಯ ನೆಲೆಯಲ್ಲಿ ಸ್ಥಾ‍ಪಿತವಾಗಿರುವ ಈ ಸಂಸ್ಥೆ ಇನ್ನಷ್ಟು ಸಮಾಜ ಸೇವೆ ಮಾಡಲಿ ಎಂಬುದು ನನ್ನ ಹಾರೈಕೆ

ಗೋಪಿನಾಥ್ ಆರ್‌. ಚಳ್ಳಕೆರೆ

ನಿವೃತ್ತ ಜನರಲ್ ಮ್ಯಾನೇಜರ್ ಎಚ್‌ಎಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT