ಸೆಲೆಬ್ರಿಟಿ ಅ-ಟೆನ್ಷನ್

ಪ್ರಾಮಾಣಿಕತೆ ಇರುವ ಕಡೆ ಒತ್ತಡವಿರುವುದಿಲ್ಲ

ಯಾವುದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದುಕೊಳ್ಳುತ್ತೇವೋ ಅದನ್ನು ನಿಭಾಯಿಸುವ ಶಕ್ತಿ ನಮಗಿರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ರೀತಿ ನಮಗೆ ತಿಳಿದಿರಬೇಕಷ್ಟೆ! ಆಗ ಒತ್ತಡಗಳು ನಮ್ಮತ್ತ ಸುಳಿಯುವುದಿಲ್ಲ ಎನ್ನುತ್ತಾರೆ, ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್‌ (ಎಎಸ್‌ಜಿ) ಕೃಷ್ಣ ಎಸ್‌. ದೀಕ್ಷಿತ್‌...

ಪ್ರಾಮಾಣಿಕತೆ ಇರುವ ಕಡೆ ಒತ್ತಡವಿರುವುದಿಲ್ಲ

ಜೀವನದಲ್ಲಿ ಎದುರಾಗುವ ಕೆಲವು ಸನ್ನಿವೇಶಗಳನ್ನು ನಮ್ಮಿಂದ ನಿಭಾಯಿಸಲು ಸಾಧ್ಯವಿಲ್ಲ ಎನ್ನುವ ಮನೋಭಾವವೂ ನಮ್ಮಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ. ಉದಾ: ಒಂದು ಕಡೆ ಹೋಗಬೇಕಿರುವಾಗ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದೋ ಇಲ್ಲವೋ, ಸಂದರ್ಶನ ಎದುರಿಸುವ ಮೊದಲು ಇಷ್ಟೊಂದು ಜನ ಇದ್ದಾರೆ, ನನಗೆ ಇಲ್ಲಿ ಕೆಲಸ ಸಿಗುತ್ತದೋ ಇಲ್ಲವೋ – ಈ ರೀತಿಯ ಪೂರ್ವಭಾವಿ ಯೋಚನೆಗಳು ನಮ್ಮ ಮನಸ್ಸಿನ ಮೇಲೆ ಭಯ ಹಾಗೂ ಒತ್ತಡವನ್ನು ಹೇರುತ್ತವೆ.

ಯಾವುದೇ ಕೆಲಸವನ್ನಾಗಲಿ ಪ್ರಾರಂಭಿಸುವ ಮೊದಲೇ ನನ್ನ ಕೈಯಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಮೂಡಿದರೆ ಒತ್ತಡ ಆವರಿಸುತ್ತದೆ. ನನ್ನಿಂದ ಇದನ್ನು ಮಾಡಲು ಸಾಧ್ಯ ಎಂದುಕೊಂಡು ಮುಂದುವರಿದರೆ ಖಂಡಿತ ಆ ಕೆಲಸವನ್ನು ಯಶಸ್ವಿಯಾಗಿ ಮುಗಿಸಲು ಸಾಧ್ಯ. ಸಾವಿರ ಮೈಲುಗಳ ಪ್ರಯಾಣವಾದರೂ ಅದು ಆರಂಭವಾಗುವುದು ಮೊದಲ ಹೆಜ್ಜೆಯಿಂದಲೇ. ಹಾಗೆಯೇ ಅನೇಕ ಕಡತಗಳು ನಮ್ಮ ಟೇಬಲ್ ಮೇಲೆ ಇದ್ದರೂ ಸಮಯಪ್ರಜ್ಞೆಯೊಂದಿಗೆ ಒಂದೊಂದನ್ನೇ ಮುಗಿಸುತ್ತಾ ಬಂದರೆ ಒತ್ತಡವಿಲ್ಲದೇ ಎಲ್ಲವನ್ನೂ ಆರಾಮವಾಗಿ ಮುಗಿಸಬಹುದು ಎಂಬುದು ನನ್ನ ಅನಿಸಿಕೆ.

ವಿನ್ಸೆಂಟ್ ಪೀಲೆಯವರಂತಹ ಚಿಂತಕರು ಹೇಳುವಂತೆ ನಮ್ಮ ಕೈಯಲ್ಲಿ ಇರುವ ಕೆಲಸವನ್ನು ಮಾಡಿ ಮುಗಿಸಿದರೆ, ಉಳಿದ ಕೆಲಸಗಳು ತಾನಾಗಿಯೇ ಆಗುತ್ತದೆ. ಆದ್ದರಿಂದ ಮೊದಲು ಕೈಯಲ್ಲಿ ಇರುವ ಕೆಲಸವನ್ನು ಮನಸ್ಸಿಟ್ಟು ಮಾಡಬೇಕು. 

ಸಂಸ್ಕೃತಸುಭಾಷಿತವೊಂದು –

ಗತೇ ಶೋಕಂ ನ ಕುರ್ವೀತ ಭವಿಷ್ಯಂ ನೈವ ಚಿಂತಯೇತ್ |
ವರ್ತಮಾನೇಷು ಕಾಲೇಷು ವರ್ತಯಂತಿ ವಿಚಕ್ಷಣಾಃ ||

ಎನ್ನುತ್ತದೆ. ಎಂದರೆ, ಮನಸ್ಸು ಹಿಂದೆ ಸರಿದಾಗ (ಭೂತಕಾಲಕ್ಕೆ) ಸಮಸ್ಯೆಯಾಗುತ್ತದೆ. ಮನಸ್ಸು ಭವಿಷ್ಯಕ್ಕೆ ತಿರುಗಿದಾಗ ಭಯವಾಗುತ್ತದೆ, ಅದೇ ಮನಸ್ಸು ವರ್ತಮಾನಕ್ಕೆ ತಿರುಗಿ ಬಿಡ್ತು ಅಂದರೆ ನಾವು ಅಂದುಕೊಂಡಿದ್ದನ್ನು ಮಾಡೇ ಮಾಡುತ್ತೇವೆ. ಬಹುಶಃ ಈ ತತ್ತ್ವವನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಂಡರೆ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.

ದಿನಾ ಬೆಳಿಗ್ಗೆ ಎದ್ದ ಕೂಡಲೇ, ಊಟ ಮಾಡಬೇಕಾದರೆ, ಮಲಗಬೇಕಾದ್ರೇ –  ಹೀಗೆ ಎಲ್ಲ ಸಮಯದಲ್ಲೂ ಒತ್ತಡ, ಚಿಂತೆ ಇದ್ದರೆ ಜೀವನ ಅರಳುವುದಾದ್ರೂ ಹೇಗೆ? ಎಂದು ಅನ್ನಿಸುತ್ತದೆ.

ನಮಗೂ ಒತ್ತಡ ಬರುತ್ತೆ. ನನ್ನಂತಹ ಕೇಂದ್ರ ಸರ್ಕಾರದ ಲಾಯರ್‌ಗಳಿಗಿರುವ ಪ್ರಮುಖ ಒತ್ತಡವೆಂದರೆ ನಾವು ಇಂತಿಂಥ ಕೇಸ್‌ನ ಕಡತಗಳನ್ನು ತಂದುಕೊಡಿ, ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಹೇಳುತ್ತೇವೆ. ಆದರೆ ಅವರು ಸರಿಯಾದ ಸಮಯಕ್ಕೆ ಕಡತವನ್ನು ತಲುಪಿಸುವುದಿಲ್ಲ. ಅವರಿಗೂ ಅದನ್ನು ಎಲ್ಲಿಂದ ತರಿಸಿಕೊಡಬೇಕು ಸಮಸ್ಯೆ ಕಾಡುತ್ತಿರುತ್ತದೆ. ಇನ್ನೂ ಕೆಲವೊಮ್ಮೆ ಅನೇಕ ಕೋರ್ಟ್‌ಗಳಿದ್ದಾಗ ಮೂರು, ನಾಲ್ಕು ಕೇಸ್‌ಗಳನ್ನು ಬೇರೆ ಬೇರೆ ಕೋರ್ಟ್‌ನಲ್ಲಿ ಒಂದೇ ಸಮಯಕ್ಕೆ ವಾದಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೇಸ್‌ನ ಪ್ರಾಮುಖ್ಯವನ್ನು ಕಂಡುಕೊಳ್ಳಬೇಕಾದ ಒತ್ತಡ ಕಾಣಿಸಿಕೊಳ್ಳುತ್ತದೆ. ಈ ಥರದ ಒತ್ತಡ ಬಂದಾಗ ಬುದ್ಧಿವಂತಿಕೆಯಿಂದ ನಿಭಾಯಿಸಬೇಕು.

ಆದರೆ ಆ ಸಮಯದಲ್ಲೆಲ್ಲಾ ನಮ್ಮನ್ನು ರಕ್ಷಿಸುವುದು ನಮ್ಮ ಪ್ರಾಮಾಣಿಕತೆ. ‘ಇವನು ಇಂದು ಬಂದಿಲ್ಲ, ನಾಳೆಯಾದರೂ ಬಂದು ಕೇಸ್‌ನ ಮಂಡನೆ ಮಾಡೇ ಮಾಡುತ್ತಾನೆ’ ಎಂದು ನ್ಯಾಯಧೀಶರಿಗೆ ಅನ್ನಿಸಿದರೆ ನಮಗೆ ಇನ್ನೊಂದು ಅವಕಾಶ ನೀಡೇ ನೀಡುತ್ತಾರೆ. ‘ಇವನು ಖಾಲಿ ಕುಳಿತಿರುತ್ತಾನೆ, ಬಂದು ವಾದ ಮಾಡೋಲ್ಲ’ ಅಂತೆಲ್ಲಾ ಅವರ ಮನಸ್ಸಿಗೆ ಅನ್ನಿಸಿದರೆ ನಮಗೆ ತೊಂದರೆ ಕೊಡುತ್ತಾರೆ. ಜನ ನಮ್ಮನ್ನು ನಂಬುವ ಹಾಗೇ ನಡೆದುಕೊಂಡರೆ ಒತ್ತಡ ಕಾಣಿಸುವುದಿಲ್ಲ. ನಂಬಿಕೆ ಹಾಗೂ ಪ್ರಮಾಣಿಕತೆ ಒತ್ತಡವನ್ನು ನಮ್ಮಿಂದ ಮರೆಮಾಚುತ್ತದೆ.

ನಾವೆಲ್ಲಾ ಭಗವಂತನ ಮಕ್ಕಳು. ಇಡೀ ಸೃಷ್ಟಿ ಭಗವಂತನ ನಿಯಮದಂತೆ ನಡೆಯುತ್ತಿದೆ. ಇಲ್ಲಿ ಎಲ್ಲವೂ ಅವನ ಇಚ್ಛೆಯಂತೆ ನಡೆಯುತ್ತದೆ. ಭೂಕಂಪ, ಸುನಾಮಿಯಂತಹ ಯಾವುದೇ ಅಚಾತುರ್ಯ ಉಂಟಾದರು ಅದು ಭಗವಂತನಿಗೆ ತಿಳಿದೇ ಆಗಿರುತ್ತದೆ. ಅದರ ಎಲ್ಲಾ ಸಾಧಕ–ಬಾಧಕಗಳಿಗೆ ಅವನೇ ಹೊಣೆ. ‘ಭಗವಂತ ನೀಡಿದ ನೋವನ್ನು ಅನುಭವಿಸುವವರಲ್ಲಿ ನಾನೂ ಒಬ್ಬ, ನನಗೆ ಮಾತ್ರವೇ ಈ ನೋವು ಬಾಧಿಸುವುದಲ್ಲ’ ಎಂದು ನಮ್ಮೊಳಗೆ ನಾವು ಸಮಾಧಾನ ತಂದುಕೊಳ್ಳಬೇಕು.

ನನ್ನ ಜೀವನದಲ್ಲೂ ತುಂಬ ಒತ್ತಡದ ದಿನಗಳಿದ್ದವು.  ನನ್ನ ಹೆಂಡತಿ ಹೆರಿಗೆ ನೋವಿನಿಂದ ಆಸ್ಪತ್ರೆ ಸೇರಿದ್ದಳು. ಆದರೆ ಅವಳಿಗೆ ಅವಧಿಗೆ ಮುನ್ನವೇ ನೋವು ಆರಂಭವಾಗಿತ್ತು. ಆ ಸಮಯದಲ್ಲಿ ಸಂಬಂಧಿಕರು ಕೂಡ ಮನೆಯಲ್ಲಿ ಇರಲಿಲ್ಲ. ಆಗ ಕೋರ್ಟ್‌ನಲ್ಲಿ ಶಿಸ್ತಿನ ನ್ಯಾಯಾಧೀಶರೊಬ್ಬರಿದ್ದರು. ನಾನು ಕೋರ್ಟ್‌ಗೆ ಹೋಗಲೇಬೇಕಿತ್ತು. ಆಗ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿ ಕೋರ್ಟ್‌ಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ನಾನು ಆ ಕಡೆ ಆಸ್ಪತ್ರೆ, ಈ ಕಡೆ ಕೋರ್ಟ್‌, ಇನ್ನೊಂದು ಕಡೆ ಮನೆ – ಹೀಗೆ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಅವಧಿಗೆ ಮುನ್ನ ಜನಿಸಿದ ಮಗುವಾದ ಕಾರಣ ಆ ಮಗುವು ಸಾವನ್ನಪ್ಪಿತ್ತು. ಆ ದಿನ ಡಾಕ್ಟರ್ ಫೋನ್‌ ಮಾಡಿ ‘ಅರ್ಜೆಂಟ್ ಬನ್ನಿ, ಈ ರೀತಿ ಆಗಿದೆ’ ಎಂದರು. ದುಡ್ಡು ಬೇಕಿತ್ತು. ಆದರೆ ಆ ದಿನ ಬ್ಯಾಂಕ್ ಬಂದ್‌. ಮನೆಯಿಂದ ಹೊರಗೆ ಬಂದರೆ ಕಾರಿನ ಎರಡು ಟಯರ್ ಪಂಕ್ಚರ್. ಆಗ ನನಗೆ ತುಂಬಾ ಒತ್ತಡ ಮತ್ತು ಮನಸ್ಸಿನ ನೋವಾಗಿತ್ತು. ಏನೂ ಮಾಡಲು ತೋಚಲಿಲ್ಲ. ಹದಿನೈದು ನಿಮಿಷ ದೀರ್ಘ ಉಸಿರಾಟ ಮತ್ತು ಭಗವಂತನ ಪ್ರಾರ್ಥನೆ ಮಾಡಿದೆ. ಆಗ ಎಲ್ಲೋ ಒಂದು ಕಡೆ ನನಗೆ ಮನಸ್ಸಿಗೆ ಸಮಾಧಾನ ಆಗಿತ್ತು.

ಒತ್ತಡಕ್ಕೆ ಮುಖ್ಯವಾದ ಕಾರಣ ಹೃದಯಬಡಿತದ ಏರಿಳಿತ. ಆದ್ದರಿಂದ ಹೃದಯಕ್ಕೆ ಆರೋಗ್ಯ ನೀಡುವ ಯೋಗ–ಧ್ಯಾನ, ಲಾಂಗ್ ವಾಕ್ ಮತ್ತು ರಿವರ್ಸ್ ವಾಕ್‌ನಿಂದ ಅದು ಸಾಧ್ಯವಾಗುತ್ತದೆ. ದೀರ್ಘವಾದ ಉಸಿರಾಟದಿಂದ ಕೂಡ ಒತ್ತಡ ಕಡಿಮೆಯಾಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾಯಿಲೆಗೆ ಮದ್ದಲ್ಲದ ಔಷಧಗಳು!

ಉತ್ತಮ ಆರೋಗ್ಯ
ಕಾಯಿಲೆಗೆ ಮದ್ದಲ್ಲದ ಔಷಧಗಳು!

20 Jan, 2018
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

ವರದಿ
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

20 Jan, 2018
ವ್ಯಾಯಾಮಕ್ಕೂ ಇದೆ ನಿಯಮ!

ಆರೋಗ್ಯ
ವ್ಯಾಯಾಮಕ್ಕೂ ಇದೆ ನಿಯಮ!

20 Jan, 2018

ಆರೋಗ್ಯ
ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ...

17 Jan, 2018
‘ಶ್ರದ್ಧೆಯೇ ಮದ್ದು’

ಆರೋಗ್ಯ
‘ಶ್ರದ್ಧೆಯೇ ಮದ್ದು’

17 Jan, 2018