ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧವೆಂಬ ಸಮಾನಾಂತರ ರೇಖೆ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶಾಲೆಯಲ್ಲಿ ನಮ್ಮ ಗಣಿತದ ಶಿಕ್ಷಕರು ರೇಖಾಗಣಿತವನ್ನು ಕಲಿಸುತ್ತಿದ್ದರು. ಕಪ್ಪುಹಲಗೆಯ ಮೇಲೆ ಎರಡು ರೇಖೆಗಳನ್ನು ಎಳೆದು, ಸಮಾನಾಂತರ ರೇಖೆಗಳ ಬಗ್ಗೆ ಹೇಳುತ್ತಿದ್ದರು. ಒಂದಕ್ಕೊಂದು ಸಮನಾಗಿ ಅಂತರವನ್ನು ಸದಾ ಕಾಯ್ದುಕೊಂಡಿರುವ ರೇಖೆಗಳು ಸಮಾನಾಂತರ ರೇಖೆಗಳು. ಅವು ಎಷ್ಟು ದೂರ ಎಳೆದರೂ ಅಂತರವನ್ನು ಇಟ್ಟುಕೊಂಡೇ ಇರುತ್ತವೆ. ಎಂದೂ ಒಂದಕ್ಕೊಂದು ಸೇರುವುದೇ ಇಲ್ಲ! ಹಾಗೆ ಸೇರಬೇಕಾದರೆ ಯಾವುದಾದರೂ ಒಂದು ರೇಖೆ ಬಾಗಲೇಬೇಕು. ಈ ಸಮಾನಾಂತರ ರೇಖೆಗಳನ್ನೇ ಆಂಗ್ಲಭಾಷೆಯಲ್ಲಿ ‘ಪ್ಯಾರಲಲ್ ಲೈನ್ಸ್’ ಎಂದು ಕರೆಯುವುದು. ಈ ರೇಖೆಗಳು ಜೊತೆಯಾಗೇ ಇರುತ್ತವೆ, ಆದರೆ ಎಂದಿಗೂ ಒಂದಾಗುವುದಿಲ್ಲ.

ಹಾಗೆಯೇ ಮನುಷ್ಯನ ಜೀವನದಲ್ಲಿಯೂ ಎಷ್ಟೋ ಸಂಬಂಧಗಳು ಅಹಂನಿಂದಾಗಿ ಸಮಾನಾಂತರವಾಗೇ ಉಳಿದುಬಿಡುತ್ತವೆ. ಗಂಡ-ಹೆಂಡತಿ, ಅಪ್ಪ-ಮಕ್ಕಳು, ಅತ್ತೆ-ಸೊಸೆ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು - ಹೀಗೆ ಬಂಧ ಯಾವುದೇ ಆಗಿರಲಿ, ಅವು ಸೌಹಾರ್ದಯುತವಾಗಿ ಇರಬೇಕಾದರೆ, ಹೊಂದಾಣಿಕೆ ಅತ್ಯಗತ್ಯ. ಹಿಂದಿನ ಕಾಲದ ಹಾಗೆ ಈಗ ಹೆಣ್ಣು ಬರೀ ಗೃಹಿಣಿಯಾಗಿ ಉಳಿದಿಲ್ಲ. ಗೃಹಕೃತ್ಯದ ಜೊತೆಗೆ ಮನೆಯಿಂದ ಹೊರಗೆ ಹೋಗಿ ದುಡಿದು ಸಂಪಾದಿಸಬಲ್ಲಳು. ಕೆಲವು ಸಂಸಾರಗಳಲ್ಲಿ ಗಂಡಾಗಲೀ ಹೆಣ್ಣಾಗಲೀ ಕೆಲಸವನ್ನು ಹಂಚಿಕೊಂಡು ಮಾಡಿ ಸಂಸಾರವೆಂಬ ರಥವನ್ನು ಸುಸೂತ್ರವಾಗಿ ಯಾವುದೇ ಅಡೆತಡೆಗಳಿಲ್ಲದಂತೆ ಮುಂದಕ್ಕೆ ಒಯ್ಯುತ್ತಿರುತ್ತಾರೆ. ಮತ್ತೆ ಕೆಲವು ಸಂಸಾರಗಳಲ್ಲಿ ಮನೆಯ ಕೆಲಸಗಳನ್ನು ಹೆಣ್ಣಾದವಳು ಮಾತ್ರ ಮಾಡಬೇಕೆಂಬ ನಿಯಮವನ್ನು ಹಾಕಿಕೊಂಡು ಒದ್ದಾಡುತ್ತಿರುತ್ತಾರೆ. ಇನ್ನೂ ಕೆಲವು ಸಂಸಾರಗಳಲ್ಲಿ ಸಮಾನತೆಗಾಗಿ ಕಿತ್ತಾಟ ನಡೆಯುತ್ತಿರುತ್ತದೆ. ‘ನಾನು ಹೋಗಿದ್ದೇ ದಾರಿ’ ಎನ್ನುವ ಜಾಯಮಾನದವರು. ಇಂತಹ ಕುಟುಂಬಗಳಲ್ಲಿ ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತೆ’ ಎಂಬ ಗಾದೆಮಾತಿನಂತಾಗಿರುತ್ತದೆ. ಅಂದರೆ, ರೈತನೊಬ್ಬ ಬೇಸಾಯ ಮಾಡಲು ಒಂದೇ ಎತ್ತು ಇದ್ದ ಕಾರಣ, ಮತ್ತೊಂದು ಎತ್ತಿನ ಬದಲು ತನ್ನೊಡನಿದ್ದ ಕೋಣವನ್ನು ನೊಗಕ್ಕೆ ಕಟ್ಟಿದನಂತೆ. ಕೋಣ ಯಾವಾಗಲೂ ನೀರನ್ನು ಕಂಡ ಕೂಡಲೇ ಅದರಲ್ಲಿ ಹೋಗಿ ಮಲಗುತ್ತಿತ್ತಂತೆ. ಅದೇ ಎತ್ತು ನೀರಿಲ್ಲದ ಜಾಗಕ್ಕೆ ನೊಗವನ್ನು ಎಳೆಯುತ್ತಿತ್ತಂತೆ. ಹೀಗಾದರೆ ರೈತನ ಸ್ಥಿತಿಯನ್ನು ಊಹಿಸಿಕೊಳ್ಳಿ - ಆತ ಬೇಸಾಯ ಮಾಡಿದ ಹಾಗೇ! ಇದೇ ರೀತಿ ಸಂಸಾರವೆಂಬ ನೊಗವನ್ನು ಹೊತ್ತಿರುವ ಗಂಡ-ಹೆಂಡತಿ ಒಟ್ಟಿಗೆ ಹೋದರೆ ಮಾತ್ರ ಬದುಕೆಂಬ ಬೇಸಾಯವನ್ನು ಮಾಡಿ ಒಳ್ಳೆಯ ಫಲವನ್ನು ಪಡೆಯಬಹುದು. ಇಲ್ಲದಿದ್ದರೆ ಬೇಸಾಯವೂ ಇಲ್ಲ, ಫಲವೂ ಇಲ್ಲ, ಸುಖವೂ ಇಲ್ಲ!

ಒಂದೇ ಮನೋಭಾವವನ್ನು ಹೊಂದಿರುವವರು ಗಂಡ-ಹೆಂಡತಿಯರಾದರೆ ಸುಖವಾಗಿರುತ್ತಾರೆನ್ನುವ ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಿಗಿದೆ. ಒಂದೇ ಮನಃಸ್ಥಿತಿ ಉಳ್ಳವರು, ಸಮಾನ ಅಂಶಗಳನ್ನು ಹೊಂದಿರುವ ಬಹಳಷ್ಟು ಜನರು ಸಮಾನಾಂತರ ರೇಖೆಗಳಂತಿರುತ್ತಾರೆ. ಸಮಾನ ಹಕ್ಕು, ಸಮಾನ ಅಧಿಕಾರ, ಸಮಾನ ನಿಲುವು - ಹೀಗೆ ಎಲ್ಲದರಲ್ಲೂ ಸಮಾನತೆಯನ್ನು ಕಾಯ್ದುಕೊಂಡೆ ಇರುತ್ತಾರೆ. ಸಮಾನತೆಯಲ್ಲಿರುವ ಅಂತರ ಎಂದಿಗೂ ಒಂದಾಗಲು ಬಿಡುವುದೇ ಇಲ್ಲ. ಸಮಾನತೆ ಎನ್ನುವುದು, ಮೇಲು-ಕೀಳು, ಬಡವ-ಬಲ್ಲಿದ, ಬುದ್ಧಿವಂತ-ದಡ್ಡ - ಇವುಗಳಲ್ಲಿ ಇರಬಾರದು. ಸಂಬಂಧವಾಗಲೀ, ಗೆಳೆತನವಾಗಲೀ ಸುಗಮವಾಗಿ ಸಾಗಬೇಕಾದರೆ, ಹೊಂದಾಣಿಕೆ ಅತ್ಯಗತ್ಯ. ಯಾವುದೇ ಒಂದು ಬಂಧ ಗಟ್ಟಿಯಾಗಿ ನಿಲ್ಲಬೇಕಾದರೆ, ಒಬ್ಬರಾದರೂ ಬಾಗಲೇಬೇಕು. ಇದನ್ನು ಬಾಗುವಿಕೆ ಎನ್ನುವುದಕ್ಕಿಂತ, ಒಪ್ಪಂದ, ರಾಜಿ, ಹೊಂದಾಣಿಕೆ ಎಂದರೆ ಹೆಚ್ಚು ಸಮರ್ಪಕವಾಗಿರುತ್ತದೆ.

ಈ ಹೊಂದಾಣಿಕೆ ಮಾಡಿಕೊಳ್ಳಲು ಇರುವ ದೊಡ್ಡ ಅಡ್ಡಿಯೆಂದರೆ, ಅಹಂ! ಇದು ಪ್ರತಿಯೊಬ್ಬರಲ್ಲೂ ಇರುತ್ತದೆ. ಇದನ್ನು ಎಷ್ಟರ ಮಟ್ಟಿಗೆ ನಿಯಂತ್ರಣದಲ್ಲಿಡುತ್ತೇವೆ ಎನ್ನುವುದು ಅವರವರ ಸಾಮರ್ಥ್ಯಕ್ಕೆ ಬಿಟ್ಟದ್ದು! ಯಾವಾಗಲೂ ಮೊದಲು ‘ನಾನೇ’ ಏಕೆ ಹೊಂದಿಕೊಳ್ಳಬೇಕು? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ ‘ನಾನು’ ಎನ್ನುವುದನ್ನು ಬಿಟ್ಟು ಬರೀ ‘ಹೊಂದಿಕೊಳ್ಳುವುದು’ಎಂದು ಯೋಚಿಸಿದರೆ, ಈ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ. ಇಡೀ ಜೀವನವೇ ಒಂದು ಒಪ್ಪಂದ. ಸಂಧಾನರಹಿತ ಬದುಕು ಬದುಕೆನಿಸಿಕೊಳ್ಳುವುದಿಲ್ಲ. ಬದುಕೆಷ್ಟು ಸುಂದರ ಎನ್ನುವುದನ್ನು ಅರಿಯಲು ಪ್ರತಿಯೊಬ್ಬರೂ ಒಮ್ಮೆಯಾದರೂ ‘ನನ್ನತನ’ ಎನ್ನುವ ಅಹಂಕಾರವನ್ನು ಬದಿಗೊತ್ತಿ ಜೀವನದಲ್ಲಿ ರಾಜಿ ಮಾಡಿಕೊಳ್ಳಬೇಕು.

ನಮ್ಮ ಹಸ್ತದ ಐದು ಬೆರಳುಗಳ ಎತ್ತರದಲ್ಲಿ ವ್ಯತ್ಯಾಸವಿದೆ. ಒಂದು ಬೆರಳಿನಿಂದ ಅದರ ಸಾಮರ್ಥ್ಯದ ಕೆಲಸ ಮಾಡಬಹುದು. ದೊಡ್ಡ ಕೆಲಸವಾದರೆ, ಇಡೀ ಹಸ್ತದ ಸಹಾಯ ಬೇಕೇ ಬೇಕು. ಒಮ್ಮೆ ಯೋಚಿಸಿ ನೋಡಿ. ಎಲ್ಲಾ ಬೆರಳುಗಳೂ ಸಮನಾಗಿದ್ದರೆ, ಒಂದೇ ದಿಕ್ಕಿನಲ್ಲಿ ಸಮಾನಾಂತರ ರೇಖೆಗಳಂತಿದ್ದರೆ, ಹೇಗಿರುತ್ತಿತ್ತು? ನಮ್ಮ ಕೈ ಕೆಲಸಕ್ಕೆ ಬಾರದೆ ನಿಷ್ಪ್ರಯೋಜಕವಾಗಿರುತ್ತಿತ್ತು. ಅಂತೆಯೇ ಎಲ್ಲರೂ ಸಮಾನ ಹಕ್ಕಿಗಾಗಿ, ಸಮಾನ ಅಧಿಕಾರಕ್ಕಾಗಿ ಹೊಡೆದಾಡಿದರೆ, ಅನುಬಂಧ ಬಂಧನವಾಗುತ್ತದೆ. ಸಂಬಂಧದ ಕೊಂಡಿ ಕಳಚಿ ಬೀಳುತ್ತದೆ. ಯಾವುದಾದರೂ ಒಂದು ಬದಿಯಿಂದ ಸಂಬಂಧದ ಸೇತುವೆ ಬಾಗಿದರೆ, ಬಂಧ ಮುರಿಯುವುದು ತಪ್ಪುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವುದು ಎಂದರೆ, ರಾಜಿ ಮಾಡಿಕೊಳ್ಳುವವರು ತಪ್ಪಿತಸ್ಥರು ಹಾಗೂ ಮತ್ತೊಬ್ಬರು ಸರಿ ಎಂದಲ್ಲ. ಒಪ್ಪಂದ ಮಾಡಿಕೊಳ್ಳುವವರಿಗೆ, ಅಹಂಗಿಂತ ಸಂಬಂಧದ ಬೆಲೆ ಹೆಚ್ಚು ಎಂದು ತಿಳಿದಿರುತ್ತದೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಎಲ್ಲಕ್ಕೂ ಒಂದು ಮಿತಿಯಿರುತ್ತದೆ. ಬದುಕಿನಲ್ಲಿ ಹೊಂದಾಣಿಕೆ ಮುಖ್ಯವೆಂದು, ಇಡೀ ಜೀವನವೂ ತಿಳಿವಳಿಕೆಯಿಲ್ಲದ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲೇ ನೀವು ಕಳೆದು ಹೋದರೆ ಅದಕ್ಕೆ ಅರ್ಥವಿರುವುದಿಲ್ಲ.

ಸಂಬಂಧಗಳು ಯಾವುದೇ ಅಡೆತಡೆಗಳಿಲ್ಲದೆ, ಸುಗಮವಾಗಿ ಸಾಗಬೇಕಾದರೆ, ಮೂರು ‘ಸ’ಗಳ ಸಾರಥ್ಯವಿರಬೇಕು! ಅವೆಂದರೆ, ‘ಸಂಪರ್ಕ’, ‘ಸಂಧಾನ’ ಹಾಗೂ ‘ಸಮ್ಮತಿ’. ಸಂಬಂಧಗಳಲ್ಲಿ ಒಬ್ಬರಿಗೊಬ್ಬರಿಗೆ ಸಂಪರ್ಕ ಸಂವಹನವಿಲ್ಲದಿದ್ದರೆ ಬಂಧದ ಕಂದರ ದೊಡ್ಡದಾಗುತ್ತಾ ಹೋಗುತ್ತದೆ. ಸಂವಹನವೇ ಇಲ್ಲದಾದಾಗ ಸಂಧಾನವೆಲ್ಲಿಂದ ಬರುತ್ತದೆ? ಸಂಧಾನವಿಲ್ಲದ ಮೇಲೆ ಸಂಬಂಧದ ಸಮ್ಮತಿಯ ಮಾತೇ ಇಲ್ಲ. ಅದೇ ಸಂಪರ್ಕ ಸಂವಹನ ಸರಿಯಾಗಿದ್ದರೆ, ಎಷ್ಟೊಂದು ವಿಷಯಗಳನ್ನು ಮಾತಿನಲ್ಲೇ ಬಗೆಹರಿಸಿಕೊಳ್ಳಬಹುದು. ಪರಸ್ಪರ ಮಾತನಾಡಿದಾಗ, ಒಬ್ಬರಿಗೊಬ್ಬರಿಗಿರುವ ಅಭಿಪ್ರಾಯಗಳು ಸ್ಪಷ್ಟವಾಗುತ್ತವೆ. ಅಭಿಪ್ರಾಯ ಸ್ಪಷ್ಟತೆಯಿಂದ ಒಬ್ಬರಾದರೂ ಸಂಧಾನಕ್ಕೆ ರಾಜಿಯಾಗುತ್ತಾರೆ. ಸಂಧಾನದ ನಂತರ ಸಂಬಂಧಕ್ಕೆ ಎಲ್ಲರೂ ಸಮ್ಮತಿಸುತ್ತಾರೆ!

ಇತ್ತೀಚೆಗಂತೂ ಬಹುಪಾಲು ಎಲ್ಲರೂ ಸಂಬಂಧದ ಉಳಿವಿಗಿಂತ ಸಮಾನತೆಗಾಗಿ ಕಿತ್ತಾಡುತ್ತಾರೆ. ಸಂಬಂಧಗಳಲ್ಲಿ ಸಮಾನತೆ ಇರಬೇಕು ಆದರೆ ಅದಕ್ಕೊಂದು ಮಿತಿ ಕೂಡ ಇರಬೇಕು. ಈ ಸಮಾನತೆಯ ರೇಖೆ ಅಗತ್ಯ ಬಿದ್ದಲ್ಲಿ ಒಂದೆಡೆ ಬಾಗಿ ಒಂದಾಗುವಂತಿರಬೇಕು. ಏಕೆಂದರೆ, ಸಮಾನಾಂತರ ರೇಖೆಗಳು ಎಷ್ಟೇ ಹತ್ತಿರವಿದ್ದರೂ ಅವು ಒಂದಾಗಿರುವುದಿಲ್ಲ. ಬಂಧಗಳು ಹತ್ತಿರವಿದ್ದರೆ ಮಾತ್ರ ಸಾಲದು ಒಟ್ಟಿಗೆ ಇರಬೇಕು. ಸಂಬಂಧ ಒಂದೆಡೆ ಗಟ್ಟಿಯಾಗಬೇಕಾದರೆ, ಒಪ್ಪಂದ ಬಹಳ ಮುಖ್ಯ. ಪರಿಪೂರ್ಣ ಬಂಧವೆಂದರೆ, ಕೋಪ, ಅಸಹನೆ, ಮುನಿಸು, ಬೇಸರ, ಅಸಮಾಧಾನ ಇವೆಲ್ಲವೂ ಇಲ್ಲದಿರುವ ಸಂಬಂಧ ಎಂದಲ್ಲ.

ಚೆನ್ನಾಗಿರುವ, ಶುದ್ಧ, ಯಥೋಚಿತ ಸಂಬಂಧವೆಂದರೆ, ಈ ಕೋಪ, ಅಸಹನೆ, ಅಸಮಾಧಾನ, ಕಿರಿಕಿರಿ ಉಂಟಾದಾಗ, ಅದನ್ನು ಎಷ್ಟು ಬೇಗ ಪರಿಹರಿಸಿ ಮತ್ತೆ ಮೊದಲಿನ ಸ್ಥಿತಿಗೆ ತರುತ್ತಾರೋ, ಆ ಸಂಬಂಧ ಪರಿಪೂರ್ಣ ಸಂಬಂಧವೆನಿಸಿಕೊಳ್ಳುತ್ತದೆ. ಮಾನವರೆಂದ ಮೇಲೆ ಎಲ್ಲ ರೀತಿಯ ಭಾವನೆಗಳೂ ಇರುತ್ತವೆ. ಸಂಬಂಧ ಹತ್ತಿರವಾದಷ್ಟೂ ಭಾವನೆಗಳ ತೋರ್ಪಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದ ಮೇಲೆ ಬರೀ ಪ್ರೀತಿ, ಸಂತೋಷದ ಭಾವನೆಯನ್ನು ಮಾತ್ರ ತೋರಿಸಿದರೆ ಸಾಕೆ? ಕೋಪವೂ ಕೂಡ ಒಂದು ಭಾವನೆ. ಯೋಚಿಸಿ ನೋಡಿ, ಅಪರಿಚಿತರೆದುರು ನಮ್ಮ ಅನಿಸಿಕೆಗಳನ್ನು ತೋರಿಸುತ್ತೇವೆಯೇ? ಇಲ್ಲ. ಅದೇ ಹತ್ತಿರದವರೊಡನೆ ಮಾತ್ರ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ತೋರಿಸಿಕೊಳ್ಳಲು ಸಾಧ್ಯ. ಸಲಿಗೆ ಹೆಚ್ಚಿದಷ್ಟೂ ಸಂಬಂಧ ಹತ್ತಿರವಾಗುತ್ತದೆ.

ಸ್ವಾರ್ಥವಿದ್ದಲ್ಲಿ ಸಂಧಾನ ಸಾಧ್ಯವಿಲ್ಲ. ವಿಶಾಲ ಮನೋಭಾವನೆ ಹೆಚ್ಚಾದಷ್ಟೂ ಸಂಬಂಧ ಉಳಿಯುತ್ತದೆ. ಸಂಧಾನ ಮಾಡಿಕೊಳ್ಳುವುದನ್ನು ಸೋಲು ಎಂದು ಭಾವಿಸುವವರು ನೀವಾದರೆ, ಒಮ್ಮೆ ಜೀವನದಲ್ಲಿ ಸೋತು ಗೆಲ್ಲಿ. ಆಗ ಗೆಲುವಿನ ರುಚಿ ಏನೆಂದು ನಿಮಗೇ ತಿಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT