ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಂದ್ರಶೇಖರ, ವಿಜಯಪುರ

ವಯಸ್ಸು 63. ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿ ನಿವೃತ್ತಿ. ಪಿಂಚಣಿ ಇಲ್ಲ. ನಿವೃತ್ತಿಯಿಂದ ₹ 18 ಲಕ್ಷ  ಬಂದಿದೆ. ಇದರಿಂದ ಗೃಹಸಾಲ, ಮಕ್ಕಳ ಶಿಕ್ಷಣ ಪೂರೈಸಿದೆ. ನನಗೆ ಬೇರಾವ ಆದಾಯವಿಲ್ಲ. ಎರಡು ಗಂಡು, ಎರಡು ಹೆಣ್ಣು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ. ಒಬ್ಬ ಮಗ ವೈದ್ಯ. ತಿಂಗಳ ಸಂಬಳ ₹2.50 ಲಕ್ಷ. ಇನ್ನೊಬ್ಬ ಮಗ ಎಂಜಿನಿಯರ್, ತಿಂಗಳ ಸಂಬಳ ₹ 60, 000. ನನ್ನ ಪ್ರಶ್ನೆ: ನನ್ನ ಭವಿಷ್ಯ ಅನಿಶ್ಚಿತ. ಯಾವ ಸಮಯದಲ್ಲಿ ಯಾವ ಸಮಸ್ಯೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ನನಗೆ ಪ್ರತೀ ತಿಂಗಳು ₹ 20,000 ಬರುವ ಹಾಗೆ ಯಾವ ಯೋಜನೆ ಸಾಧ್ಯ. ಇಬ್ಬರೂ ಮಕ್ಕಳಿಂದ ನನಗೆ ತಿಂಗಳ ಹಣ ಬರಲು ಸರಿಯಾದ ಮಾರ್ಗದರ್ಶನ ನೀಡಿ. ಹಣ ನನ್ನ ಖಾತೆಗೆ ಜಮಾ ಆಗಬೇಕು?

ಉತ್ತರ: ನಿಮಗೆ ಪಿಂಚಣಿ ಇಲ್ಲವಾದರೂ ನಿಮಗೆ ಉದ್ಯೋಗದಲ್ಲಿ ಇರುವ ಮಕ್ಕಳಿರುವುದರಿಂದ ಏನೂ ಭಯಪಡುವ ಅಗತ್ಯ ಇಲ್ಲ. ನೀವು ವಿಜಯಪುರದಲ್ಲಿ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಿರಿ. ಈಗಾಗಲೇ ಖಾತೆ ಹೊಂದಿದ್ದರೆ ಅದೇ ಖಾತೆ ಸಾಕು. ಬೇರೆ ಖಾತೆ ತೆರೆಯುವ ಅವಕಶ್ಯವಿಲ್ಲ. ನಿಮ್ಮ ಹೆಸರು, ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು, ಶಾಖೆ ಹೆಸರು IFSC Code ಇವಿಷ್ಟನ್ನೂ ನಿಮ್ಮ ಮಕ್ಕಳಿಗೆ ತಿಳಿಸಿ. ನಿಮ್ಮ ಡಾಕ್ಟರ್‌ ಮಗ ₹15,000 ಹಾಗೂ ಎಂಜಿನಿಯರ್ ಮಗ ₹ 5,000 ಕ್ರಮವಾಗಿ ಪ್ರತಿ ತಿಂಗಳೂ ನಿಮ್ಮ ಖಾತೆಗೆ ಬೆಂಗಳೂರಿನಿಂದ ಜಮಾ ಮಾಡಲು ಹೇಳಿ. NEFT ಮೂಖಾಂತರ ಹಣ ಕಳುಹಿಸಿದ ಒಂದು ತಾಸಿನಲ್ಲಿ ನೀವು ವಿಜಯಪುರದಲ್ಲಿ ಹಣ ಪಡೆಯಬಹುದು. NEFT ಯಿಂದ ಯಾವ ಬ್ಯಾಂಕ್‌ನಿಂದ ಯಾವ ಬ್ಯಾಂಕ್‌ಗೂ ಹಣ ಕಳುಹಿಸಬಹುದು. ಈ ವಿಚಾರ ನಿಮ್ಮ ಮಕ್ಕಳಿಗೆ ತಿಳಿದಿದೆ.

ನಿಮ್ಮ ಇಂದಿನ ಪರಿಸರಕ್ಕೆ ಅನುಕೂಲವಾಗಲು ನಿಮಗೆ ಕನಿಷ್ಠ ₹5 ಲಕ್ಷದ ಆರೋಗ್ಯ ವಿಮೆಯ ಅಗತ್ಯವಿದೆ. ಈ ವಿಮೆ 65 ದಾಟಿದ ನಂತರ ಮಾಡಲು ಬರುವುದಿಲ್ಲ. ತಕ್ಷಣ ಮಾಡಲು ಮಕ್ಕಳಿಗೆ ತಿಳಿಸಿ. ಸಿಂಡಿಕೇಟ್‌ ಬ್ಯಾಂಕ್‌ನ ‘ಸಿಂಡ್‌ ಆರೋಗ್ಯ ವಿಮೆ’ ಮಾಡಿರಿ. ಅಲ್ಲಿಯೇ ಉಳಿತಾಯ ಖಾತೆ ತೆರೆಯಿರಿ. ಆರೋಗ್ಯ ವಿಮೆ ಹಾಗೂ ಪ್ರತೀ ತಿಂಗಳು ಮಕ್ಕಳಿಂದ ಹಣ ತರಿಸಲು ಆ ಖಾತೆ ಅನುಕೂಲವಾಗುತ್ತದೆ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.

**

ಅಬ್ದಲ್ ಸುಹೀಲ್, ಊರುಬೇಡ

ನನ್ನ ಸಂಬಳದಲ್ಲಿ ಎಲ್ಲಾ ಖರ್ಚು ಕಳೆದು ₹ 4,000 ತಿಂಗಳಿಗೆ ಉಳಿಯುತ್ತದೆ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸರಿಯಾದ ಉಳಿತಾಯದ ಮಾರ್ಗ ತಿಳಿಸಿ.

ಉತ್ತರ: ನಿಮ್ಮ ಇಬ್ಬರೂ ಮಕ್ಕಳು 10 ವರ್ಷದೊಳಗಿರುವಲ್ಲಿ ‘ಸುಕನ್ಯಾ ಸಮೃದ್ಧಿ ಖಾತೆ’ಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ತಲಾ ₹ 2,000 ತಿಂಗಳಿಗೆ ತುಂಬಿರಿ. ಇದು ಭಾರತ ಸರ್ಕಾರದ, ಹೆಣ್ಣು ಮಕ್ಕಳಿಗಾಗಿಯೇ ಪ್ರಾಯೋಜಿಸಿದ ಉತ್ತಮ ಉಳಿತಾಯ ಯೋಜನೆ. ಇಲ್ಲಿ ಠೇವಣಿಯ ವಾರ್ಷಿಕ ಕನಿಷ್ಠ ಮೊತ್ತ ₹ 100, ಗರಿಷ್ಠ ಮೊತ್ತ ₹ 1.50 ಲಕ್ಷ. ಖಾತೆ ಪ್ರಾರಂಭಗೊಂಡ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬಹುದು. ಠೇವಣಿ ಮೊತ್ತದ ಶೇ 50ನ್ನು ಹೆಣ್ಣು ಮಗಳಿಗೆ 18 ವರ್ಷ ತುಂಬಿದಾಗ ವಿದ್ಯಾಭ್ಯಾಸ ಅಥವಾ ಮದುವೆ ಸಲುವಾಗಿ ಹಿಂದೆ ಪಡೆಯಬಹುದು.

ಖಾತೆಯ ಪೂರ್ಣಾವಧಿಯು, ಖಾತೆ ಪ್ರಾರಂಭಗೊಂಡ ದಿನದಿಂದ 21 ವರ್ಷಗಳವರೆಗೆ ಇರುತ್ತದೆ. ಬಡ್ಡಿ ದರ ಬದಲಾಗುತ್ತಿರುತ್ತದೆ. ತೆರಿಗೆ ವಿನಾಯ್ತಿ ಕೂಡಾ ಇದೆ (ನಿಮಗೆ ಆದಾಯ ತೆರಿಗೆ ಬರಲಾರದು) ನಿಮ್ಮ ಇಬ್ಬರು ಹೆಣ್ಣು ಮಕ್ಕಳು 10 ವರ್ಷದೊಳಗಿರುವಲ್ಲಿ, ನಿಮ್ಮ ಇಂದಿನ ಉಳಿತಾಯ ಪರಿಗಣಿಸುವಾಗ ಇದಕ್ಕೂ ಸುರಕ್ಷಿತ, ಲಾಭದಾಯಕ ಹಾಗೂ ಉತ್ತಮ ಉಳಿತಾಯ ಬೇರೊಂದಿರಲಾರದು. ಒಂದು ವೇಳೆ ನಿಮ್ಮ ಹೆಣ್ಣು ಮಕ್ಕಳು 10 ವರ್ಷದಾಟಿರುವಲ್ಲಿ ತಲಾ ₹ 2,000ಗಳ 10 ವರ್ಷಗಳ ಅವಧಿಗೆ ಆರ್.ಡಿ. ಮಾಡಿರಿ. ಶೇ 8ರ ಬಡ್ಡಿ ದರದಲ್ಲಿ ಅವಧಿ ಮುಗಿಯುತ್ತಲೇ ತಲಾ ₹ 3,67,232  ಪಡೆಯುವಿರಿ.

**

ಆರ್. ರಾಜಶೇಖರ.ಪಿ.ಜಿ., ಬೆಂಗಳೂರು

ನಾನು ರಾಜ್ಯ ಸರ್ಕಾರದ ನೌಕರ, ಬೆಂಗಳೂರಿನಲ್ಲಿ ಉದ್ಯೋಗ. ನನಗೆ ದಾವಣಗೆರೆಯಲ್ಲಿ ಸ್ವಂತ ಮನೆ ಹಾಗೂ ನಿವೇಶನ ಇದೆ. ನಾನು ಆದಾಯ ತೆರಿಗೆಗೆ ಒಳಗಾಗುತ್ತೇನೆ. ನಾನು ನನ್ನ ಮಗನಿಗೆ ನಿವೇಶನ ದಾನ ಪತ್ರದಿಂದ (By Way Of Gift) ವರ್ಗಾಯಿಸ ಬಯಸುತ್ತೇನೆ. ಮುಂದೆ ನನ್ನ ಮಗ ನಾನು ಕೊಟ್ಟ ನಿವೇಶನ ಮಾರಾಟ ಮಾಡಿ ಮನೆ ಕಟ್ಟಿಸುವಲ್ಲಿ ಅವನಿಗೆ ತೆರಿಗೆ ಬರುತ್ತದೆಯೇ ತಿಳಿಸಿರಿ.

ಉತ್ತರ: ಪ್ರಪ್ರಥಮವಾಗಿ ನೀವು ಮಗನಿಗೆ  ನಿಮ್ಮ ನಿವೇಶನ ದಾನವಾಗಿ ಕೊಟ್ಟಾಗ ನಿಮಗೂ ನಿಮ್ಮ ಮಗನಿಗೂ ಯಾವ ತರಹದ ತೆರಿಗೆಯೂ ಬರುವುದಿಲ್ಲ. ನಿಮ್ಮ ಮಗ ನಿಮ್ಮಿಂದ ದಾನವಾಗಿ ಪಡೆದ ನಿವೇಶನ ಮುಂದೆ ಮಾರಾಟ ಮಾಡಿ, ಮಾರಾಟ ಮಾಡಿದ  ಮೂರು ವರ್ಷಗಳೊಳಗೆ, ಮಾರಾಟ ಮಾಡಿ ಬಂದ ಹಣಕ್ಕೆ ಕಡಿಮೆಯಾಗದ ರೀತಿಯಲ್ಲಿ ಮನೆ ಕಟ್ಟಿಸಿದರೆ, ಸೆಕ್ಷನ್ 54ಎಫ್ ಆಧಾರದ ಮೇಲೆ ಬಂಡವಾಳವೃದ್ಧಿ ತೆರಿಗೆ ಕೊಡುವ ಅವಶ್ಯವಿಲ್ಲ.

**

ವಿರೇಶ್. ಕೆ.ಟಿ., ಮಾಡ್ಲಾಕನಹಳ್ಳಿ, ಕೂಡಲಗಿ

ವಯಸ್ಸು 30. ಪ್ರಾಥಮಿಕ ಶಾಲಾ ಶಿಕ್ಷಕ. ಮೂಲ ವೇತನ ₹ 14,550–26,700. ಇಬ್ಬರು ಗಂಡು ಮಕ್ಕಳು. ಎಲ್.ಕೆ.ಜಿ., ಇನ್ನೊಬ್ಬ ಎರಡು ವರ್ಷ. KGID ₹ 2500 ಕಟ್ಟುತ್ತೇನೆ. ಮಕ್ಕಳ ಸಲುವಾಗಿ ಹೇಗೆ ಉಳಿತಾಯ ಮಾಡಲಿ ತಿಳಿಸಿರಿ. ಇಷ್ಟು ವರ್ಷ ಒಂದು ನಯಾ ಪೈಸೆ ಉಳಿಸಿಲ್ಲ.

ಉತ್ತರ: ಉಳಿತಾಯಕ್ಕೆ ಸ್ವಲ್ಪ ಮಟ್ಟಿನ ತ್ಯಾಗದ ಮನೋಭಾವನೆ ಗಂಡ–ಹೆಂಡಿರಲ್ಲಿ ಇರಬೇಕಾಗುತ್ತದೆ. ಎಷ್ಟೇ ಆದಾಯವಿದ್ದರೂ,   ಹಣ ತಾನಾಗಿ ಉಳಿಯುವುದಿಲ್ಲ. ಅದೇ ರೀತಿ ಎಷ್ಟು ಹಣವಿದ್ದರೂ ತಾನಾಗಿ ಖರ್ಚಾಗುತ್ತಿರುತ್ತದೆ. ಹಣ ಉಳಿಸಲು ಒಂದೇ ಒಂದು ಮಾರ್ಗ ವ್ಯಕ್ತಿಯ ‘ದೃಢ ಸಂಕಲ್ಪ’.  ಎಲ್ಲಾ ಖರ್ಚು ಕಳೆದು ಉಳಿಸುವುದು, ಸಮುದ್ರದಲ್ಲಿ ತೆರೆ ನಿಂತ ಮೇಲೆ ಸ್ನಾನ ಮಾಡುವ ಉದಾಹರಣೆಯಂತಿರುತ್ತದೆ. ನೀವು ನಿಮ್ಮ ಇಬ್ಬರು ಗಂಡು ಮಕ್ಕಳ ಸಲುವಾಗಿ ಕನಿಷ್ಠ ₹ 5,000 ತಿಂಗಳಿಗೆ ಉಳಿಸಲೇಬೇಕು. ಸಂಬಳದಲ್ಲಿ ₹ 5,000 ಸಂಬಳ ಪಡೆಯುವ ಬ್ಯಾಂಕಿನಲ್ಲಿ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಜಂಟಿಯಾಗಿ, 10 ವರ್ಷಗಳ ಆರ್.ಡಿ. ಮಾಡಿ ನಿಶ್ಚಿಂತರಾಗಿರಿ. ಉಳಿದ ಹಣ ಮಾತ್ರ ಖರ್ಚು ಮಾಡಿರಿ. ಲಕ್ಷ್ಮಿ ಚಂಚಲೆ, ನೀವು ಪ್ರೀತಿಯಿಂದ ಆಕೆಯನ್ನು ಉಳಿಸಿ ಆರಾಧಿಸಿದಾಗ ಮಾತ್ರ ಬಾಳು ಹಸನಾಗುತ್ತದೆ. ಇಲ್ಲವಾದಲ್ಲಿ ಹಣ ಪೆಟ್ರೋಲ್‌ನಂತೆ ನಿಮಗೆ ತಿಳಿಯದೇ ಆವಿಯಾಗುತ್ತದೆ. ತಡಮಾಡಬೇಡಿ, ಕಾರ್ಯಪ್ರವರ್ತರಾಗಿ ಮಕ್ಕಳ ಮುಂದಿನ ಜೀವನಕ್ಕೆ ನೆರವಾಗಿರಿ.

**

ಹೆಸರು ಬೇಡ, ಚಿಂಚೋಳಿ

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ. 28–04–2016 ರಂದು ಕೆಲಸಕ್ಕೆ ಸೇರಿದ್ದೇನೆ. ನನ್ನ ಮೂಲ ವೇತನ ₹13,600. KGID ₹ 2,000 ಕಡಿತವಾಗಿ ಕೈಗೆ ತುಟ್ಟಿಭತ್ಯೆ ಸೇರಿ ₹ 18,307 ಬರುತ್ತದೆ. ನಾನು ಅವಿವಾಹಿತ. ಅಕ್ಕನಿಗೆ ಮದುವೆಯಾಗಿದೆ, ತಮ್ಮ ಪದವಿ ಓದುತ್ತಿದ್ದಾನೆ. ತಾಯಿ ಗೃಹಿಣಿ, ತಂದೆ ವ್ಯವಸಾಯ ಮಾಡುತ್ತಾರೆ. 8 ಎಕರೆ 20 ಗುಂಟೆ ಜಮೀನಿದೆ. ನೀರಾವರಿ ಇದೆ. ಕೃಷಿ ಆದಾಯ ವಾರ್ಷಿಕ ₹ 2 ಲಕ್ಷ. ಹಳ್ಳಿಯಲ್ಲಿ ಸ್ವಂತ ಮನೆ ಇದೆ. ನಾನು ಎಂ.ಎ. ಸಮಾಜಶಾಸ್ತ್ರ ಪದವೀಧರ. ನನ್ನ ಮೊದಲ ಆರು ತಿಂಗಳ ವೇತನದಿಂದ ತಾಯಿಗೆ ಬಂಗಾರ ಮಾಡಿಸಿದ್ದೇನೆ. ನನ್ನ ಕುಟುಂಬದ ಸದಸ್ಯರಿಗೆ ಹೇಗೆ ನೆರವಾಗಬಹುದು. ನನ್ನ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿ.

ಉತ್ತರ: ‘ಮಾತೃದೇವೋ ಭವ’ ಎನ್ನುವ ವೇದದ ಸಾರ ನಿಜವಾಗಿ ಅರಿತು ಪ್ರಥಮ ಆರು ತಿಂಗಳ ಸಂಬಳ ತಾಯಿಯ ಬಂಗಾರಕ್ಕೆಂದೇ ಮುಡುಪಾಗಿಟ್ಟ ನಿಮಗೆ ಅಭಿನಂದನೆಗಳು. ಇದೇ ವೇಳೆ ಕುಟುಂಬದ ಉಳಿದ ಸದಸ್ಯರ ಏಳಿಗೆ ಕೂಡಾ ನಿಮ್ಮ ಆದ್ಯತಾ ಪಟ್ಟಿಯಲ್ಲಿರುವುದು ನಿಮ್ಮ ಉತ್ತಮ ಸಂಸ್ಕಾರದ ಫಲವೆಂದು ಭಾವಿಸುತ್ತೇನೆ. ನೀವು ಎಂ.ಎ. ಪದವೀಧರರಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿಯುವುದು ಆಶ್ಚರ್ಯದ ಸಂಗತಿ. ಆದಷ್ಟು ಬೇಗ ಬಿ.ಎಡ್. ಪದವಿ ಪಡೆದು ಪ್ರೌಢಶಾಲಾ ಶಿಕ್ಷಕರಾಗಿ ಬಡ್ತಿ ಹೊಂದಿರಿ. ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯಲ್ಲಿ ಮನೆಯಲ್ಲಿಯೇ ಇದ್ದು ಹಾಗೂ ಉದ್ಯೋಗ ನಿರತರಾಗಿ ಕೂಡಾ ಬಿ.ಎಡ್. ಪದವಿ ಪಡೆಯುವ ಅವಕಾಶವಿದೆ. ನಿಮ್ಮ ಮದುವೆಯ ತನಕ ವಾರ್ಷಿಕ ಕನಿಷ್ಠ 15 ಗ್ರಾಂ. ಬಂಗಾರದ ನಾಣ್ಯ ಕೊಂಡುಕೊಳ್ಳಿ. ಸಾಧ್ಯವಾದರೆ ಇದನ್ನು ಮುಂದೂ ಕೂಡಾ ಮುಂದುವರೆಸಿರಿ.

ಉಳಿದ ಹಣ ಅಂದರೆ ತಿಂಗಳು ಉಳಿಸಬಹುದಾದ ಮೊತ್ತ ಸಂಬಳ ಪಡೆಯುವ ಬ್ಯಾಂಕಿನಲ್ಲಿ 2 ವರ್ಷಗಳ ಅವಧಿಗೆ ಆರ್.ಡಿ. ಮಾಡಿರಿ. ನಿಮ್ಮ ಕುಟುಂಬಕ್ಕೆ ಉತ್ತಮ ಜಮೀನಿದ್ದು, ಅಲ್ಲಿ ವಾರ್ಷಿಕ ಬರುವ ಆದಾಯದ ಶೇ 50 ರಷ್ಟು ನಿಮ್ಮ ತಂದೆ ತಾಯಿ ಜಂಟಿ ಹೆಸರಿನಲ್ಲಿ, 5 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸುತ್ತಾ ಬನ್ನಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ನಿಮಗೊಂದು ಕಿವಿ ಮಾತು– ಸ್ಥಿರ ಆಸ್ತಿ, ಯಾವಾಗಲೂ ಸ್ಥಿರವಾಗಿ ಉಳಿಯುವ ಆಸ್ತಿ. ದೇವರ ಕೃಪೆಯಿಂದ ನಿಮ್ಮ ಕುಟುಂಬಕ್ಕೆ 8 ಎಕರೆ 20 ಗುಂಟೆ ಜಮೀನು ಇದೆ. ಎಲ್ಲಕ್ಕೂ ಮುಖ್ಯವಾಗಿ ಈ ಜಮೀನು ನೀರಾವರಿಯಾಗಿದ್ದು, ಉತ್ತಮ ಬೆಳೆ ಬರುವ ಸಾಧ್ಯತೆ ಸದಾ ಇದೆ. ಅನ್ನ ನೀಡುವ ಜಮೀನನ್ನು ಪ್ರೀತಿಯಿಂದ ವ್ಯವಸಾಯ ಮಾಡಿ ಬೆಳೆ ಬೆಳೆದು ಸಮೃದ್ಧಿಯತ್ತ ಸಾಗಿರಿ. ಯಾವುದೇ ಕಾರಣಕ್ಕೂ ಎಷ್ಟೇ ಬೆಲೆ ಬಂದರೂ ಮಾರಾಟ ಮಾಡಬೇಡಿ. ನಿಮ್ಮ ಜೀವನದ ಸಂಜೆ ಹಸನಾಗಿರಲಿ ಎಂದು ಬಯಸುತ್ತೇನೆ.

**

ದಿನಕರ ಗೌಡ, ದೇವಳಿವಾಡ, ಕಾರವಾರ

ವಯಸ್ಸು 46, ಸಣ್ಣ ವ್ಯಾಪಾರಿ. ಸಿಂಡಿಕೇಟ್ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದೆ. ನನ್ನ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಗುಂಟೆ ಭೂಪರಿವರ್ತನೆಯಾದ ಜಾಗ ಇದೆ. ಗುಂಟೆಗೆ ₹ 7 ಲಕ್ಷ ಬೆಲೆ ಇದೆ. ಇಲ್ಲಿ ಬ್ಯಾಂಕಿನಿಂದ ಸಾಲಪಡೆದು ಕಲ್ಯಾಣಮಂಟಪ ಕಟ್ಟಿಸಬೇಕು. ಎಷ್ಟು ಸಾಲ ಸಿಗಬಹುದು.

ಉತ್ತರ: ನಿಮ್ಮ 25 ಗುಂಟೆಗೆ ಸುಮಾರು 1.75 ಕೋಟಿ ಬೆಲೆ ಬಾಳುವುದಾದರೂ, ಬ್ಯಾಂಕುಗಳು ಸಾಲ ನೀಡುವಾಗ, ಜಾಗದ ಭದ್ರತೆ ಪಡೆಯುವುದರ ಜೊತೆಗೆ, ವ್ಯಕ್ತಿಯ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ನಿಮ್ಮ ಊರು ಕಾರವಾರಕ್ಕೆ ಸಮೀಪವಿದ್ದರೂ, ಇಂದಿನ ವಾತಾವರಣದಲ್ಲಿ, ಮದುವೆ ಶುಭ ಕಾರ್ಯಕ್ಕೆ ಜನರು ಪಟ್ಟಣವನ್ನೇ ಆರಿಸಿಕೊಳ್ಳುತ್ತಾರೆ. ಹಣದುಬ್ಬರದ ಪರಿಸ್ಥಿತಿಯಲ್ಲಿ ಕನಿಷ್ಠ ₹ 40 ಲಕ್ಷ ವಾದರೂ ಕಲ್ಯಾಣ ಮಂಟಪ ನಿರ್ಮಿಸಲು ಬೇಕಾಗಬಹುದು. ಈ ವಿಚಾರದಲ್ಲಿ ದುಡುಕುವುದು ಜಾಣತನವಲ್ಲ. ಇದೇ ವೇಳೆ ನಿಮ್ಮ ಜಾಗ ಬೇರೆಯವರಿಗೆ ಭೋಗ್ಯವಾಗಿ ಅಥವಾ ಮಾರಾಟಮಾಡುವ ಯತ್ನಕ್ಕೆ ಹೋಗಬೇಡಿ. ಇಂತಹ ಜಮೀನು ಮುಂದೆ ಎಂದಿಗೂ ಪಡೆಯಲಾರಿರಿ.

**

ಎಂ.ಬಿ. ಶಿವಮೂರ್ತಿ, ಬೆಳಗಾವಿ

ನಾನು 7 ವರ್ಷಗಳ ಹಿಂದೆ, ₹ 2 ಲಕ್ಷ ಬೇರೆ ಬೇರೆ ಕಂಪೆನಿಗಳ ಷೇರಿನಲ್ಲಿ ಹಾಕಿದ್ದೇನೆ. ಅವುಗಳ ಬೆಲೆ ಈಗ ₹ 35000ಕ್ಕೆ ಇಳಿದಿದೆ. ಷೇರು ಮಾರುಕಟ್ಟೆಯ ಯಾವ ವಿಭಾಗದಲ್ಲಿ  ಹಣ ಹೂಡಿ ಲಾಭಗಳಿಸಬಹುದು.

ಉತ್ತರ: ನಿಮ್ಮ 7 ವರ್ಷಗಳ ಅನುಭವ, ನಿಮಗೆ ಒಂದು ಪಾಠ ಕಲಿಸಿರಬೇಕು ಎಂದು ಭಾವಿಸುವೆ.  ಷೇರು ಮಾರುಕಟ್ಟೆ ಊಹಾ ಪೋಹಗಳಿಂದ  ಕೂಡಿದ ಹೂಡಿಕೆಯಾಗಿದ್ದು ಸಂವೇದಿ ಸೂಚ್ಯಾಂಕ  ಯಾವಾಗಲಾದರೂ ಮೇಲಕ್ಕೆ–ಕೆಳಗೆ ಹೋಗಬಹುದು ಎನ್ನುದನ್ನು  ಪರಿಣತರಿಂದಲೂ ಸ್ಪಷ್ಟವಾಗಿ ಹೇಳಲು ಬರುವುದಿಲ್ಲ. 7 ವರ್ಷಗಳ ಹಿಂದೆ ಸೂಚ್ಯಂಕ 20,000ಕ್ಕೂ ಕೆಳಗಿದ್ದು, ಈಗ ಅದು 30,000 ಗಡಿ ದಾಟಿದರೂ ನೀವು ಹಾಕಿದ ಹಣ ₹ 2 ಲಕ್ಷದಿಂದ ₹ 35000ಕ್ಕೆ ಇಳಿದಿರುವುದು ಸೋಜಿಗ! ಸದ್ಯದ ಪರಿಸ್ಥಿತಿಯಲ್ಲಿ ನಿಮಗೆ ಈ ವಹಿವಾಟು ತರವಲ್ಲ. ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಊರಿನ ಷೇರ್‌ ಬ್ರೋಕರ್ಸ್‌ ವಿಚಾರಿಸಿ.

–ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್‌ ಹಾಗೂ ಹಣಕಾಸು ತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT