ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಬಲವರ್ಧನೆಗೆ ಜಯಂತಿ’

Last Updated 8 ನವೆಂಬರ್ 2017, 5:32 IST
ಅಕ್ಷರ ಗಾತ್ರ

ವಿಜಯಪುರ: ಜಯಂತಿಗಳು ರಾಜಕೀಯ ಬಲವರ್ಧನೆ ಹಾಗೂ ಜಾತಿಗಳ ಸಮೀಕರಣಕ್ಕಾಗಿ ಮಾಡಲಾಗುತ್ತಿದೆಯೇ ಹೊರತು ದಾಸ ಶ್ರೇಷ್ಠರು ರಚನೆ ಮಾಡಿರುವ ಸಾಹಿತ್ಯದ ಒಳಮರ್ಮವನ್ನು ಅರ್ಥ ಮಾಡಿಕೊಳ್ಳುವ ಕಾರ್ಯವಾಗುತ್ತಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚೀ.ಮಾ.ಸುಧಾಕರ್ ಹೇಳಿದರು.

ಇಲ್ಲಿನ 4ನೇ ವಾರ್ಡಿನ ಮುನಿರಾಜು ಅವರ ಮನೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲಾ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ. ಮಾನವೀಯ ನೆಲೆಗಟ್ಟಿನಲ್ಲಿ ದಾಸಶ್ರೇಷ್ಠರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ತಪ್ಪುದಾರಿಯಲ್ಲಿ ಸಾಗುತ್ತಿರುವ ಸಮಾಜವನ್ನು ಸರಿದಾರಿಗೆ ತರಬೇಕಾದಂತಹ ಬೋಧನೆಗಳಿಗಿಂತ ವಿವಿಧ ಜಾತಿ ಸಮುದಾಯಗಳನ್ನು ಓಲೈಕೆ ಮಾಡುವಂತಹ ರಾಜಕೀಯ ಸಮಾವೇಶಗಳಾಗುತ್ತಿವೆ ಎಂದರು.

ದಾಸರು ರಚನೆ ಮಾಡಿರುವ ಸಾಹಿತ್ಯದಲ್ಲಿ ಉತ್ತಮ ಸಂದೇಶಗಳಿದ್ದರೂ ಅವುಗಳನ್ನು ಮರೆ ಮಾಚಲಾಗುತ್ತಿದೆ. ಈಗಿನ ಪೀಳಿಗೆಗೆ ಅಗತ್ಯವಾಗಿರುವ ಸಂದೇಶಗಳು ಸಿಕ್ಕುತ್ತಿಲ್ಲ. ಸರ್ಕಾರಗಳು ಜಯಂತಿಗಳನ್ನು ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜಕ್ಕೆ ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಮುಖಂಡ ಮುನಿರಾಜು ಮಾತನಾಡಿ, ದಾಸಶ್ರೇಷ್ಠ ಕನಕದಾಸರು, ಸಮಾಜದಲ್ಲಿನ ಅಸ್ಪೃಶ್ಯತೆ ತೊಡೆದು ಹಾಕುವುದು, ಜಾತಿ ವ್ಯವಸ್ಥೆ ಹೋಗಲಾಡಿಸುವುದನ್ನು ಮೂಲ ಉದ್ದೇಶವಾಗಿಸಿಕೊಂಡಿದ್ದರು. ಅವರ ಉದ್ದೇಶಗಳನ್ನು ನೆರವೇರಿಸಲು ಪ್ರಾಮಾಣಿಕ ಪ್ರಯತ್ನಗಳಾಗುತ್ತಿಲ್ಲ ಎಂದರು.

ಶಿಕ್ಷಕ ಕೆ.ಎಚ್.ಚಂದ್ರಶೇಖರ್, ನಾರಾಯಣಸ್ವಾಮಿ, ಕೃಷ್ಣಪ್ಪ ಅವರ ತಂಡ ಕನಕದಾಸರ ಕೀರ್ತನೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಡಾ.ಶಿವಕುಮಾರ್, ಮುನಿರಾಜು, ಮುರಳಿ, ಮುನಿವೆಂಕಟರವಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT