ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಕೃಷಿ ಪರಿಕರಗಳ ಮಾಹಿತಿ ಇಲ್ಲ

Last Updated 8 ನವೆಂಬರ್ 2017, 5:33 IST
ಅಕ್ಷರ ಗಾತ್ರ

ವಿಜಯಪುರ: ಕೃಷಿ ಸರಕು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊರತೆ, ಸರ್ಕಾರದ ನಿಲುವು ಹಾಗೂ ಸರಿಯಾದ ಮಾರ್ಗದರ್ಶನದ ಇಲ್ಲದೆ ಹತಾಶರಾಗುತ್ತಿರುವ ರೈತರ ಸಂಖ್ಯೆ ಹೆಚ್ಚಾಗಿದೆ. ರೈತರು ಸಂಘಟಿತರಾಗಿ ಹೋರಾಟ ಮಾಡಿ ನ್ಯಾಯ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಹೇಳಿದರು.

ಹೋಬಳಿಯ ಪಿ.ರಂಗನಾಥಪುರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಸಂಘದ ಗ್ರಾಮಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಮೇಲೆ ಗುಂಡು ಹಾರಿಸದ ಸರ್ಕಾರಗಳು ಕಾಣಿಸುವುದು ಅಪರೂಪವಾಗಿವೆ.

ರೈತರ ಏಳಿಗೆಯ ಬಗ್ಗೆ ಆರೋಗ್ಯಕರವಾದ ಚರ್ಚೆಗಳಾಗಬೇಕು. ಸ್ವಾತಂತ್ರ್ಯದ ನಂತರ ಬಂದ ಎಲ್ಲಾ ಸರ್ಕಾರಗಳು ಬ್ರಿಟಿಷರ ಕಾನೂನು ಪಾಲನೆ ಮಾಡುತ್ತಿದ್ದಾರೆ. ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡಿದಂತಹ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರಗಳು ಚಿಂತನೆ ನಡೆಸಲಿಲ್ಲ ಎಂದರು.

ರೈತರಿಗೆ ಯಾವ ಬ್ಯಾಂಕುಗಳಲ್ಲೂ ಸಾಲ ಸಿಗುತ್ತಿಲ್ಲ, ರೈತರಿಗೆ ಸಾಲ ಕೊಟ್ಟರೂ ಸಾವಿರಗಳಲ್ಲಿ ಕೊಡುತ್ತಾರೆ. ಬೆಳೆಗಳು ಹಾಳಾದರೆ ಬಿಡಿಗಾಸಿನ ಪರಿಹಾರ ಕೊಡುತ್ತಾರೆ. ಸರ್ಕಾರಿ ಭೂಮಿಗಳು ಮಾಯವಾಗಿವೆ. ಸಾರ್ವಜನಿಕರ ಆಸ್ತಿಗಳ‌ ರಕ್ಷಣೆಯಾಗಬೇಕು ಎಂದರು.

ಭೂಮಿಯ ಫಲವತ್ತತೆ ಕಾಪಾಡಬೇಕು. ಆಶ್ರಯ ಸಮಿತಿಗಳಿಂದ ನಿವೇಶನಗಳು ವಿತರಣೆ ಮಾಡಲು ಭೂಮಿ ಇಲ್ಲ, ರಾಜಕಾಲುವೆಗಳು ಒತ್ತುವರಿಯಾಗಿವೆ. ಬಡವರ ಭೂಮಿ ಸ್ವಾಧೀನವಾಗುತ್ತಿದೆ. ಅಧಿಕಾರಿಗಳ ದರ್ಪಕ್ಕೆ ರೈತರು ಒಳಗಾಗುತ್ತಿದ್ದಾರೆ. ಲಂಚಾವತಾರ ತಾಂಡವವಾಡುತ್ತಿದೆ. ಮಧ್ಯವರ್ತಿಗಳ ಕೆಲಸಗಳು ಬೇಗ ಆಗುತ್ತಿವೆ. ಸರ್ಕಾರದ ಸೌಲಭ್ಯ ಪಡೆಯಲು ಅಲೆದಾಡಬೇಕಾಗಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆಯೇ ಪರಿಹಾರ ಎಂದು ರೈತರು ಭಾವಿಸುತ್ತಿದ್ದಾರೆ. ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆಯೂ ಯೋಚಿಸದೆ ಆತ್ಮಹತ್ಯೆಯ ಹಾದಿ ತುಳಿಯುತ್ತಾರೆ. ಆತ್ಮಹತ್ಯೆ ಮಾಡಿಕೊಂಡಾಗ ರೈತ ಕುಟುಂಬಕ್ಕೆ ಸರ್ಕಾರ ಸ್ವಲ್ಪ ಹಣ ನೀಡುತ್ತದೆ. ಇವುಗಳಿಂದಾಗಿ ಸಮಸ್ಯೆ ಸಂಕೀರ್ಣವಾಗುತ್ತದೆಯೇ ಹೊರತು ಉತ್ತರ ಸಿಗುವುದಿಲ್ಲ ಎಂದರು.

ಸಾಲ ಮನ್ನಾ ಆಗಬೇಕು. ರಾಜಕೀಯ ಹಿತಾಸಕ್ತಿಗಾಗಿ ರೈತ ಸಂಘಟನೆಗಳನ್ನು ಒಡೆಯಲಾಗಿದೆ. ನ್ಯಾಯಬದ್ಧವಾದ ಹೋರಾಟಗಳಾಗಬೇಕು. ಸಂಘಟಕರು ಶುದ್ಧಹಸ್ತವುಳ್ಳವರಾಗಬೇಕು ಎಂದರು.

ರಾಜ್ಯ ಘಟಕದ ಮುಖಂಡ ಹರೀಶ್ ಮಾತನಾಡಿ, ಭಾಯಿಯೋ ಬೆಹೆನೋ ಎನ್ನುವ ಓಲೈಕೆ ಮಾತುಗಳಿಂದ ರೈತರ ಉದ್ಧಾರ ಆಗುವುದಿಲ್ಲ. ರಾಜಕೀಯದಿಂದ ನ್ಯಾಯ ಸಿಗುತ್ತಿಲ್ಲ. ಹೋರಾಟದಿಂದ ಮಾತ್ರ ನ್ಯಾಯ ಸಾಧ್ಯ. ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ಲಕ್ಷಾಂತರ ರೈತರ ಆತ್ಮಹತ್ಯೆಗಳಾಗಿವೆ. ಇದಕ್ಕೆ ಕಾರಣ ಕಂಡು ಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಬೆಳೆಗಳಿಗೆ ವೈಜ್ಞಾನಿಕ ಬೆಲೆಗಳು ನಿಗದಿ ಪಡಿಸಬೇಕು. ರೈತ ಪರವಾದ ಕಾನೂನುಗಳು ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಹೋರಾಟಗಳು ಸಾಗಬೇಕು ಎಂದರು.
ರೈತ ಮುಖಂಡರಾದ ಸತೀಶ್, ವಿರೂಪಾಕ್ಷಿ, ವಿಜಯಪುರ ಹೋಬಳಿ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಕಲ್ಯಾಣ್ ಕುಮಾರ್ ಬಾಬು, ಗ್ರಾಮ ಘಟಕದ ಅಧ್ಯಕ್ಷ ಸಿ.ನಟರಾಜ್, ಮುನಿಶಾಮಪ್ಪ, ರಮೇಶ್, ಅರುಣ್ ಕುಮಾರ್, ಚಂದೇನಹಳ್ಳಿ ಮುನಿಯಪ್ಪ, ಮಂಜುನಾಥ್, ಕೇಶವ, ಗೋವಿಂದರಾಜು, ವಿ.ಎಸ್.ನಾಗರಾಜು, ಶಿವಕುಮಾರ್, ಗೋಣೂರು ವೆಂಕಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT