ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರದಲ್ಲಿ ಪಕ್ಷಪಾತ ಮಾಡಿದ ಅಧಿಕಾರಿಗಳು?

Last Updated 8 ನವೆಂಬರ್ 2017, 6:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಗರದಲ್ಲಿ ನಡೆದ ಕನಕದಾಸರ ಜಯಂತಿಯ ವೇದಿಕೆ ಕಾರ್ಯಕ್ರಮದ ಶಿಷ್ಟಾಚಾರ ಪಾಲಿಸುವಲ್ಲಿ ಜಿಲ್ಲಾಡಳಿತ ತಾರತಮ್ಯ ಮಾಡಿದೆ. ಪೊಲೀಸರು ಕೂಡ ತಮ್ಮ ಕರ್ತವ್ಯ ಮಾಡುವ ಬದಲು ರಾಜಕೀಯ ‘ಸೂತ್ರಧಾರ’ರ ಆಣತಿಯಂತೆ ಕುರುಬ ಸಮುದಾಯಕ್ಕೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ’ ಎನ್ನುವ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತುಕೊಳ್ಳಲು ಕುರುಬ ಸಮುದಾಯ ಮತ್ತು ಕಾಂಗ್ರೆಸ್‌ ಮುಖಂಡ ಗಂಗರೇಕಾಲುವೆ ನಾರಾಯಣಸ್ವಾಮಿ ಅವರಿಗೆ ಶಿಷ್ಟಾಚಾರದ ಹೆಸರಿನಲ್ಲಿ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಕುರುಬ ಸಮುದಾಯದವರು ಕಾರ್ಯಕ್ರಮವನ್ನೇ ಬಹಿಷ್ಕರಿಸಿದರು. ಬಳಿಕ ಅಧಿಕಾರಿಗಳು ಖಾಲಿ ಕುರ್ಚಿಗಳು, ಬೆರಳೆಣಿಕೆ ಜನರ ನಡುವೆಯೇ ಕಾರ್ಯಕ್ರಮದ ‘ಶಾಸ್ತ್ರ’ ಮುಗಿಸಬೇಕಾಯಿತು.

‘ಜಯಂತಿಯ ಮೆರವಣಿಗೆ ಅಚ್ಚುಕಟ್ಟಾಗಿ, ಅದ್ಧೂರಿಯಾಗಿ ನಡೆಯುವುದಕ್ಕೆ ಶ್ರಮಿಸಿದ ನಾರಾಯಣಸ್ವಾಮಿ ಅವರು ವೇದಿಕೆಯಲ್ಲಿರಬೇಕು ಎಂದು ಅವರ ಸಮುದಾಯದವರು ಬಯಸುವುದರಲ್ಲಿ ನ್ಯಾಯವಿದೆ. ಆದರೆ ಶಿಷ್ಟಾಚಾರದ ಹೆಸರಿನಲ್ಲಿ ಅವರಿಗೆ ತಡೆದ ಅಧಿಕಾರಿಗಳು, ವೇದಿಕೆ ಮೇಲೆ ಕುಳಿತಿದ್ದ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್‌ ಕುಮಾರ್‌ ಸೇರಿದಂತೆ ಶಾಸಕರ ಕೆಲ ಬೆಂಬಲಿಗರನ್ನು ಏಕೆ ಅಲ್ಲಿಂದ ಕಳುಹಿಸಲಿಲ್ಲ’ ಎಂದು ಅಧಿಕಾರಿಗಳ ಧೋರಣೆಯನ್ನು ಖಂಡಿಸುವವರು ಪ್ರಶ್ನಿಸುತ್ತಿದ್ದಾರೆ.

ಮೆರವಣಿಗೆಯಲ್ಲಿ ನಾರಾಯಣಸ್ವಾಮಿ ಅವರನ್ನು ಅವರ ಸಮುದಾಯದ ಯುವಕರು ಹೊತ್ತು ಸಾಗುವುದಕ್ಕೆ ಅಡ್ಡಿಪಡಿಸಿದ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾರಾಯಣಸ್ವಾಮಿ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿರುವ ಕಾರಣಕ್ಕೆ ‘ರಾಜಕೀಯ ಷಡ್ಯಂತ್ರ’ದ ಭಾಗವಾಗಿ ಇಂತಹ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

‘ಅನೇಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳಿಗೆ ಕೂಡ ಜಾಗವಿಲ್ಲದಂತೆ ಶಾಸಕರ ಬೆಂಬಲಿಗರು ಕುಳಿತುಕೊಂಡದ್ದನ್ನು ನಾವೆಲ್ಲ ಪತ್ರಿಕೆಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಕನಕ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂಡ ಅದು ಕಂಡುಬಂತು. ಆದರೆ ನಾರಾಯಣಸ್ವಾಮಿ ಅವರು ವೇದಿಕೆ ಮೇಲಿರಬೇಕು ಎಂದು ಅವರ ಸಮುದಾಯದವರು ಬಯಸಿದರೆ ಅದಕ್ಕೆ ಅಧಿಕಾರಿಗಳು ತಡೆ ಒಡ್ಡುವುದು ಯಾವ ನ್ಯಾಯ? ಇವತ್ತು ಜಿಲ್ಲೆಯಲ್ಲಿ ಅಧಿಕಾರಿಗಳ ಕೈ–ಬಾಯಿ ಕಟ್ಟಿ ಹಾಕಿ, ಹೀಗೆಲ್ಲ ಮಾಡಿಸಲಾಗುತ್ತಿದೆ’ ಎಂದು ಜೆಡಿಎಸ್‌ ಮುಖಂಡ ಕೆ.ಪಿ. ಬಚ್ಚೇಗೌಡ ಆರೋಪಿಸಿದರು.

‘ಜಿಲ್ಲಾಡಳಿತವನ್ನು ಕೈಗೊಂಬೆಯಾಗಿ ಇಟ್ಟುಕೊಂಡವರು ಇದನ್ನು ವ್ಯವಸ್ಥಿತವಾಗಿ ಮಾಡಿಸಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಇದರಿಂದ ಸಮುದಾಯದ ಜನರು ತುಂಬಾ ನೊಂದುಕೊಂಡಿದ್ದಾರೆ. ಕನಕದಾಸರು ಶಾಂತಿ ಪ್ರಿಯರು. ಹೀಗಾಗಿ ಅದನ್ನು ನಾವು ಒಂದು ವಿವಾದ ಮಾಡಲು ಹೋಗಿಲ್ಲ. ನಾವೆಲ್ಲ ಸ್ವಾಭಿಮಾನದಿಂದ ಬದುಕುವ ಜನ. ಅದಕ್ಕೆ ಧಕ್ಕೆ ಬಂದರೆ ನಾವು ಅಲ್ಲಿ ಒಂದು ಕ್ಷಣ ಇರುವುದಿಲ್ಲ’ ಎಂದು ಗಂಗರೇಕಾಲುವೆ ನಾರಾಯಣಸ್ವಾಮಿ ತಿಳಿಸಿದರು.

‘ಸಮುದಾಯದ ಜನರು ನನ್ನನ್ನು ಪ್ರೀತಿಯಿಂದ ಎತ್ತಿಕೊಂಡು ನಡೆದರೆ ಪೊಲೀಸರು ಅದನ್ನು ಅಡ್ಡಹಾಕಿ ತಡೆದರು. ನಾವೇನು ಅಲ್ಲಿ ಗಲಾಟೆ ಮಾಡುತ್ತಿರಲಿಲ್ಲ. ಗುಂಪು ಘರ್ಷಣೆಯ ಸನ್ನಿವೇಶ ಇರಲಿಲ್ಲ. ಆದರೂ ಇಂತಹ ಅಧಿಕಾರ ಪೊಲೀಸರಿಗೆ ಯಾರು ಕೊಟ್ಟರು? ನಾನು ಸಮುದಾಯದ ಮುಖಂಡ ಎನ್ನುವ ಜತೆಗೆ ಮಾಜಿ ಜನಪ್ರತಿನಿಧಿ ಕೂಡ ಹೌದು. ನಮ್ಮನ್ನೇ ಸೌಜನ್ಯದಿಂದ ನಡೆಸಿಕೊಳ್ಳದ ಅಧಿಕಾರಿಗಳಿಂದ ಜನಸಾಮಾನ್ಯರು ಗೌರವ ನಿರೀಕ್ಷೆ ಮಾಡಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

‘ಹಿಂದೆ ಎಲ್ಲ ಪಕ್ಷದವರು ಪರಸ್ಪರ ಗೌರವಿಸುವ ಸಂಪ್ರದಾಯವಿಟ್ಟುಕೊಂಡಿದ್ದರು. ಅಂತಹ ವಾತಾವರಣವಿದ್ದ ಚಿಕ್ಕಬಳ್ಳಾಪುರದಲ್ಲಿ ಸಣ್ಣತನ ತೋರುವ ಮನಸ್ಥಿತಿ ಬೆಳೆಸುತ್ತಿರುವುದು, ರಾಜಕೀಯ ವೈಷಮ್ಯ ಕಟ್ಟಿಕೊಳ್ಳುವ ಪರಿಸ್ಥಿತಿಯನ್ನು ಯಾರು, ಯಾಕೆ ಹುಟ್ಟು ಹಾಕುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.

ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಅಂತಿಮವಾಗಿ ಜನರೇ ಪ್ರಭುಗಳು ಅವರ ನಿರ್ಧಾರಕ್ಕೆ ಎಲ್ಲರೂ ಕೆಲವೇ ದಿನ ಕಾಯೋಣ’ ಎನ್ನುತ್ತಾರೆ ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು, ವಿಧಾಸಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜುಗೊಳ್ಳುತ್ತಿರುವ ಕೆ.ವಿ.ನವೀನ್‌ಕಿರಣ್‌.

‘ಇಷ್ಟು ವರ್ಷ ಕನಕ ಜಯಂತಿ ಮಾಡದವರಿಗೆ ಇವತ್ತು ಮಾಡುವ ಅಗತ್ಯವೇನಿದೆ? ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮುಂದೆ ಬರುವವರಿಗೆ ಜಯಂತಿ ಬಗ್ಗೆ ಯಾವ ಬದ್ಧತೆ ಇದೆ? ಮೊನ್ನೆಯ ಘಟನೆ ನೋಡಿದರೆ ರಾಜಕೀಯ ಉದ್ದೇಶದಿಂದ ಕೂಡಿದ ಪೂರ್ವ ನಿಯೋಜಿತ ಯೋಜನೆಯಂತೆ ಕಾಣುತ್ತದೆ. ಅಷ್ಟಕ್ಕೂ ನಾನು ನಾರಾಯಣಸ್ವಾಮಿ ಅವರನ್ನು ವೇದಿಕೆ ಕರೆಯಿರಿ ಎಂದು ಅಧಿಕಾರಿಗಳಿಗೆ ಹೇಳಿದೆ. ಅಷ್ಟರಲ್ಲಿ ಅವರು ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಇದರಲ್ಲಿ ಯಾವ ಷಡ್ಯಂತ್ರವೂ ಇಲ್ಲ’ ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT