ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮಕ್ಕೆ ಒತ್ತಾಯಿಸುತ್ತಿರುವುದು ಸಂಕುಚಿತ ಮನೋಭಾವಕ್ಕೆ ಸಾಕ್ಷಿ

Last Updated 8 ನವೆಂಬರ್ 2017, 6:55 IST
ಅಕ್ಷರ ಗಾತ್ರ

ಧಾರವಾಡ: ‘ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೆಲವು ಜನ ಸ್ವಾರ್ಥ ಸಾಧನೆಗಾಗಿ ಒತ್ತಾಯಿಸುತ್ತಿರುವುದು ಅವರ ಸಂಕುಚಿತ ಮನೋಭಾವನೆಗೆ ಸಾಕ್ಷಿಯಾಗಿದೆ’ ಎಂದು ವೀರಶೈವ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಯ ಸಂಚಾಲಕರಾದ ಬಾಳೆಹೊನ್ನೂರು ರಂಭಾಪುರಿಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಮತ್ತು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಜಂಟಿ ಹೇಳಿಕೆ ನೀಡಿದ್ದಾರೆ.

‘ವೀರಶೈವ ಹಾಗೂ ಲಿಂಗಾಯತ ಎರಡೂ ಒಂದೇ ಹೊರತು ಬೇರೆಯಲ್ಲ. ಈ ನಿಟ್ಟಿನಲ್ಲಿ ಡಿ.24ರಂದು ಗದಗನಲ್ಲಿ ವೀರಶೈವ ಲಿಂಗಾಯತ ಬೃಹತ್ ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹುಬ್ಬಳ್ಳಿಯಲ್ಲಿ ಭಾನುವಾರ ಜರುಗಿದ ಸ್ವತಂತ್ರ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವೀರಶೈವರ ಕುರಿತು ತಮ್ಮ ಮೂಗಿನ ನೇರಕ್ಕೆ ಮಾತನಾಡಿದ್ದಾರೆ. ಧರ್ಮ, ಸಂಸ್ಕೃತಿ, ಸದ್ವಿಚಾರಗಳಿಗೆ ಸಲ್ಲದ ಅಸಂಬದ್ಧವಾದ ಅವರ ಮಾತು ಘನತೆ ಹಾಗೂ ಕಾವಿಗೆ ತಕ್ಕುದಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದಿದ್ದಾರೆ.

‘ಅಸತ್ಯವನ್ನೇ ಹಲವಾರು ಬಾರಿ ಹೇಳಿ ಸತ್ಯ ಮಾಡಬಹುದು ಎಂಬ ಭ್ರಮೆ ಕೆಲವರಿಗೆ ಇದೆ. ಸಚಿವ ಎಂ.ಬಿ.ಪಾಟೀಲ ಅವರು ರೇಣುಕಾಚಾರ್ಯರು ಕಲ್ಲಿನಲ್ಲಿ ಹುಟ್ಟಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ಆದರೆ, ಸೋಮೇಶ್ವರ ಶಿವಲಿಂಗದಿಂದ ಅವತರಿಸಿದರೇ ಹೊರತು ಕಲ್ಲಿನಿಂದಲ್ಲ. ವೀರಶೈವರೇ ಆಗಲಿ, ಲಿಂಗಾಯತರೇ ಆಗಲಿ ಪೂಜಿಸುವ ಲಿಂಗ ಶಿಲೆಯಿಂದಲೇ ನಿರ್ಮಾಣಗೊಂಡಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

‘ಬಸವಣ್ಣನವರಿಗಿಂತಲೂ ಪೂರ್ವದಲ್ಲಿದ್ದ ವೀರಶೈವ ಧರ್ಮದ ಉದಾತ್ತ ಮೌಲ್ಯಗಳನ್ನು ಅವರೂ ಅನುಸರಿಸಿ ಬಾಳಿದ್ದಾರೆ. ಬಸವಣ್ಣನವರು ಎಲ್ಲಿಯೂ ತಾವು ಧರ್ಮ ಸ್ಥಾಪಕ ಎಂದಾಗಲೀ ಅಥವಾ ಲಿಂಗಾಯತ ಧರ್ಮದ ಗುರು ಎಂದು ಹೇಳಿಕೊಂಡಿಲ್ಲ.

ಆದರೆ, ವಿಶ್ವಮಾನವ ವ್ಯಕ್ತಿತ್ವಕ್ಕೆ ಸಮಾನರಾದ ಬಸವಣ್ಣನನ್ನು ಜಾತಿ, ಧರ್ಮಕ್ಕೆ ಕಟ್ಟಿಹಾಕುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದೊಮ್ಮೆ ಅವರಿಗೆ ಅಷ್ಟೊಂದು ಅಭಿಮಾನವಿದ್ದರೆ ‘ಬಸವ ಧರ್ಮ’ ಹುಟ್ಟುಹಾಕಲಿ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT