ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಚೇತರಿಸದ ಮಾರುಕಟ್ಟೆ!

Last Updated 8 ನವೆಂಬರ್ 2017, 7:26 IST
ಅಕ್ಷರ ಗಾತ್ರ

ಹಾವೇರಿ: ₹500 ಮತ್ತು ₹1,000 ಮುಖಬೆಲೆಯ ನೋಟು ರದ್ದುಗೊಂಡು ಇಂದಿಗೆ (2016ರ ನವೆಂಬರ್ 8ರಂದು ರದ್ದುಗೊಂಡಿದ್ದವು) ವರ್ಷ ತುಂಬಿದೆ. ಈ ನಿರ್ಧಾರದಿಂದ ಜಿಲ್ಲೆಯಲ್ಲಿ ನಗದು ರಹಿತ ವಹಿವಾಟಿನಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಆದರೆ, ಮಾರುಕಟ್ಟೆ ವಹಿವಾಟು ಕುಸಿದಿದೆ ಎಂಬುದು ವಿವಿಧ ವಲಯಗಳ ಮಾತು. ‘ತೀವ್ರ ಕಷ್ಟ ಅನುಭವಿಸಿದವರು ನಾವು’ ಎಂಬುದು ಶ್ರೀಸಾಮಾನ್ಯರು, ಸಣ್ಣ ವ್ಯಾಪಾರಿಗಳು, ಕೂಲಿಕಾರ್ಮಿಕರ ಅಸಮಾಧಾನ.

‘ಅಂದು ಸಾಮಾನ್ಯ ಜನತೆ, ಬಡವರು ಕಷ್ಟಕ್ಕೆ ಸಿಲುಕಿದರು. ಹಲವು ಕಾರ್ಯಕ್ರಮಗಳನ್ನು ಮುಂದೂಡಿದ್ದರು. ಸಣ್ಣ ಪುಟ್ಟ ವ್ಯವಹಾರಗಳಿಗೂ ಕಷ್ಟ ಬಂದಿತ್ತು’ ಎಂದು ಬಸವೇಶ್ವರ ನಗರದ ಸಣ್ಣ ವ್ಯಾಪಾರಿ ಮಂಜುನಾಥ ಶಿವಸಾಲಿ ಮೆಲುಕು ಹಾಕಿದರು. ‘ಕಪ್ಪು ಹಣಕ್ಕೆ ಕಡಿವಾಣ ಹಾಕಲು ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್‌ ತರಬೇಕು’ ಎಂದು ಅಭಿಪ್ರಾಯಪಟ್ಟರು.

‘ಇದು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಅಂದು ಕುಸಿತ ಕಂಡ ಮಾರುಕಟ್ಟೆ ಇನ್ನೂ ಚೇತರಿಸಿಲ್ಲ. ಗ್ರಾಮೀಣ ಭಾಗದಲ್ಲಿ ನಗದು ವ್ಯವಹಾರವೇ ಪ್ರಮುಖವಾಗಿದ್ದು, ತೀವ್ರ ಹಿನ್ನಡೆ ಉಂಟಾಗಿತ್ತು. ಬ್ಯಾಂಕ್‌ಗಳಲ್ಲೂ ದಟ್ಟಣೆ ಹೆಚ್ಚಿತ್ತು’ ಎನ್ನುತ್ತಾರೆ ಎಪಿಎಂಸಿಯ ವರ್ತಕ ನಿಜಗುಣಪ್ಪಗೌಡ್ರ ಬಸವನಗೌಡ್ರ ಆಲದಕಟ್ಟಿ.
‘ಆ ಬಳಿಕ ಪದೇ ಪದೇ ಬದಲಾದ ನಿಯಮಾವಳಿಗಳಿಂದ ವ್ಯಾಪಾರಿಗಳು, ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ, ಜನರಿಗೆ ಮನವರಿಕೆ ಮಾಡುವುದೇ ಕಷ್ಟವಾಗಿದೆ. ರಿಯಲ್ ಎಸ್ಟೇಟ್ ಮತ್ತಿತರ ಉದ್ಯಮಗಳು ಕುಸಿತ ಕಂಡಿವೆ’ ಎನ್ನುತ್ತಾರೆ ಅವರು.

‘ಈ ವರ್ಷ ವಹಿವಾಟು ಕುಸಿತ ಕಂಡಿದೆ. ‘ಹೈ ಎಂಡ್’ (ಉನ್ನತ ತಾಂತ್ರಿಕತೆಯ) ಉತ್ಪನ್ನಗಳನ್ನು ಖರೀದಿಸುವವರು ಹಾಗೂ ಹಳ್ಳಿಯಿಂದ ಬರುವ ಗ್ರಾಹಕರು ಕಡಿಮೆಯಾಗಿದ್ದಾರೆ. ಇತ್ತ ಕಂಪೆನಿಗಳೂ ನೀಡುವ ಉಡುಗೊರೆಗಳನ್ನು ಕಡಿತ ಮಾಡಿವೆ’ ಎಂದು ಈಶ್ವರ ಡಿಜಿಟ್ರಾನಿಕ್ಸ್‌ನ ಮನು ಈಳಿಗೇರ ತಿಳಿಸಿದರು. ‘ಗ್ರಾಹಕರ ಕಾರ್ಡ್ ಹಾಗೂ ಚೆಕ್‌ಗಳ ಬಳಕೆ ಹೆಚ್ಚಿದೆ. ಪಿಒಎಸ್ ವಹಿವಾಟಿನ ಕಮಿಷನ್‌, ಆಫರ್‌ ಮತ್ತಿತರ ಹೊರೆಗಳೆಲ್ಲ ವ್ಯಾಪಾರಿಗಳ ಮೇಲೆ ಬಿದ್ದಿದ್ದು, ಸಣ್ಣ ವ್ಯಾಪಾರಿಗಳು ಬದುಕುವುದೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

‘ರಿಯಲ್ ಎಸ್ಟೇಟ್ ಕುಸಿತದಿಂದ ಶ್ರೀಮಂತರಿಗೆ ಮಾತ್ರವಲ್ಲ, ಬಡ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೂ ಸಮಸ್ಯೆ ಉಂಟಾಗಿದೆ. ನೋಟು ರದ್ದತಿ ಬಳಿಕವೂ ಮರಳು ಅಕ್ರಮ ಸಾಗಾಣಿಕೆ ಅವ್ಯಾಹತವಾಗಿದೆ. ಹೀಗಾಗಿ ನೋಟು ರದ್ದತಿಯು ಬಡವರ ಜೀವನಕ್ಕೆ ಹೊಡೆತ ನೀಡಿದೆಯೇ ಹೊರತು, ಶ್ರೀಮಂತ ಕಪ್ಪುಕುಳಗಳ ಅವ್ಯವಹಾರಗಳು ಹಿಂದಿನಂತೆಯೇ ಇವೆ’ ಎನ್ನುತ್ತಾರೆ ಕೃಷಿಕ ಶಿವಯೋಗಿ ಬೆನ್ನೂರ.

ನಗದು ರಹಿತ ವ್ಯವಹಾರ ಹೆಚ್ಚಳ: ಜಿಲ್ಲೆಯಲ್ಲಿ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌, ಪಿಒಎಸ್‌ (ಸ್ವೈಪಿಂಗ್ ಮೆಶಿನ್), ಮೊಬೈಲ್ ಬ್ಯಾಂಕಿಂಗ್, ಪೇಟಿಯಂ, ಆನ್‌ಲೈನ್‌ ಬುಕ್ಕಿಂಗ್ ಇತ್ಯಾದಿಗಳು ಹೆಚ್ಚಿವೆ. ‘ಎಟಿಎಂ, ಇಂಟರ್‌ನೆಟ್ ಬ್ಯಾಂಕಿಂಗ್ ಸ್ವಲ್ಪ ಹೆಚ್ಚಿದೆ. ಇಲ್ಲಿ ಇನ್ನೂ ತಂತ್ರಜ್ಞಾನದ ಮೇಲೆ ವಿಶ್ವಾಸ ಕಡಿಮೆ. ಹೀಗಾಗಿ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ. ಆದರೆ, ಎಟಿಎಂ ಬಳಕೆ ಹಾಗೂ ಒಟ್ಟಾರೆ ಬ್ಯಾಂಕ್‌ ವಹಿವಾಟು ಹೆಚ್ಚಾಗಿದೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕ ಸಿ.ಆರ್. ನಾರಾಯಣಮೂರ್ತಿ ತಿಳಿಸಿದರು.

‘ಒಂದೇ ಬಾರಿಗೆ ಗರಿಷ್ಠ ನಗದು ವ್ಯವಹಾರವನ್ನು ಯಾರೂ ನಡೆಸುತ್ತಿಲ್ಲ. ಬ್ಯಾಂಕ್‌ಗಳಲ್ಲಿ ವಹಿವಾಟು ಹೆಚ್ಚಳದ ಕಾರಣ, ತೆರಿಗೆ ವ್ಯಾಪ್ತಿ ಹೆಚ್ಚಿದೆ. ಇದರಿಂದ ಸಾಲ, ಠೇವಣಿಯೂ ಏರಿಕೆಯಾಗುತ್ತದೆ’ ಎಂದರು. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿ ಬಳಿಕ ಲೆಕ್ಕ ಪರಿಶೋಧಕರಿಗೆ ಬೇಡಿಕೆ ಹೆಚ್ಚಿದೆ. ಆದರೆ, ಸರ್ವರ್ ಸಮಸ್ಯೆ ಹಾಗೂ ನಿಯಮಾವಳಿ ಬಗ್ಗೆ ಇಲಾಖಾ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದ ಕಾರಣ ಗೊಂದಲಗಳೇ ಅಧಿಕ ಎಂದು ಲೆಕ್ಕಪರಿಶೋಧಕರು ಹೇಳುತ್ತಾರೆ.

ಅಂದು: ಆರಂಭದಲ್ಲಿ ಜನತೆ ಬ್ಯಾಂಕ್‌ಗಳ ಮುಂದೆ ಸರದಿ ಸಾಲು ನಿಂತಿದ್ದರು. ಅಲ್ಲದೇ, ನಗದು ತೆಗೆಯಲು ಎಟಿಎಂ ಮುಂದೆ ಸರದಿ ಕಾದಿದ್ದರು. ಹಣ ತೆಗೆಯುವ ಮಿತಿ ನಿಗದಿ ಪಡಿಸಲಾಗಿದ್ದ ಕಾರಣ ಹಲವರು ಕಾರ್ಯಕ್ರಮಗಳನ್ನು ಮುಂದೂಡಿದ್ದರು. ಜನತೆ ಪಡಿಪಾಟಿಲು ಪಟ್ಟಿದ್ದರು. ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾದಲ್ಲಿ ಹಲವಾರು ಬಾರಿ ಚಿಲ್ಲರೆಗಾಗಿ ಹೊಡೆದಾಟಗಳೇ ನಡೆದು ಹೋಯಿತು. ಆ ಬಳಿಕ ಬಂದ ₹2 ಸಾವಿರ ಮುಖಬೆಲೆಯ ನೋಟಿಗೆ ಚಿಲ್ಲರೆ ಸಿಗದೇ ಜನತೆ ಇನ್ನಷ್ಟು ಪರದಾಡಿದರು. ಆದರೆ, ಪಾಸ್‌  ಟ್ಯಾಗ್ ಮತ್ತಿತರ ವ್ಯವಸ್ಥೆಗಳೂ ಜಾರಿಗೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT