ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ಆಚರಣೆ ಖಂಡಿಸಿ ಪ್ರತಿಭಟನೆ

Last Updated 8 ನವೆಂಬರ್ 2017, 9:01 IST
ಅಕ್ಷರ ಗಾತ್ರ

ಕೋಲಾರ: ಟಿಪ್ಪು ಜಯಂತಿ ಆಚರಣೆ ಖಂಡಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಕಪ್ಪುಪಟ್ಟಿ ಧರಿಸಿ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಕೋರ್ಟ್‌ ವೃತ್ತದಿಂದ ಮೆರವಣಿಗೆ ಬಂದ ಪ್ರತಿಭಟನಾಕಾರರು, ‘ರಾಜ್ಯವು ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವ ಮೂಲಕ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಹಿಂದಿನ ವರ್ಷಗಳಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ರಾಜ್ಯದ ವಿವಿಧೆಡೆ ಅಹಿತಕರ ಘಟನೆಗಳು ನಡೆದರೂ ಸರ್ಕಾರ ಪಾಠ ಕಲಿತಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ದೂರಿದರು.

ಟಿಪ್ಪು ಸುಲ್ತಾನ್‌ ಒಬ್ಬ ದೇಶದ್ರೋಹಿ. ದೇಶ ಅಥವಾ ರಾಜ್ಯದ ಅಭಿವೃದ್ಧಿಗೆ ಆತನ ಕೊಡುಗೆ ಶೂನ್ಯ. ಆದರೆ ಸರ್ಕಾರ ಟಿಪ್ಪುವನ್ನು ಮಹಾನ್‌ ವ್ಯಕ್ತಿಯ ತರಹ ಬಿಂಬಿಸಿ ಜಯಂತಿ ಆಚರಿಸಲು ಮುಂದಾಗಿದೆ. ಟಿಪ್ಪುವಿನ ದ್ರೋಹಗಳ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ಇಲ್ಲದಿದ್ದರೆ ಇತಿಹಾಸ ತಜ್ಞರ ಪುಸ್ತಕ ಓದಿ ತಿಳಿದುಕೊಳ್ಳಲಿ ಎಂದು ಹೇಳಿದರು.

ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿರುವುದು ಕನ್ನಡಿಗರು ಹಾಗೂ ಹಿಂದುಳಿದ ವರ್ಗಗಳಿಗೆ ಮಾಡಿದ ದೊಡ್ಡ ದ್ರೋಹ. ನಾಲ್ಕೂವರೆ ವರ್ಷದಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್‌ ಜನರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಮುಸ್ಲಿಮ್‌ ಸಮುದಾಯದ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಟೀಕಿಸಿದರು.

ನಾಡ ವಿರೋಧಿ: ಟಿಪ್ಪು ಸುಲ್ತಾನ್‌ ಕುತಂತ್ರದಿಂದ ಕಿತ್ತೂರು ರಾಣಿ ಚೆನ್ನಮ್ಮನ ಹತ್ಯೆಯಾಯಿತು. ಆತ ಮತಾಂಧ ಮತ್ತು ಸರ್ವಾಧಿಕಾರಿ. ಮೇಲುಕೋಟೆಯಲ್ಲಿ ದೀಪಾವಳಿಯ ದಿನ ಹಿಂದೂಗಳ ಮಾರಣ ಹೋಮ ನಡೆಸಿದ್ದ. ಅಲ್ಲದೆ ಕನ್ನಡ ಭಾಷೆ ಬದಲಿಗೆ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿಕೊಂಡಿದ್ದ. ಅಂತಹ ನಾಡ ವಿರೋಧಿಯ ಜಯಂತಿ ಆಚರಿಸಬೇಕೆ ಎಂದು ಜಾಗೋ ಭಾರತ್ ಸಂಘಟನೆ ಸಂಚಾಲಕ ಯಶಸ್ ಪ್ರಶ್ನಿಸಿದರು.

ಅಶಾಂತಿ ಸೃಷ್ಟಿಸುತ್ತಿದೆ: ಅನೇಕ ಮಹನೀಯರು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬೇಕಿದ್ದರೆ ಅವರ ಜಯಂತಿ ಆಚರಿಸಲಿ. ಟಿಪ್ಪು ಜಯಂತಿ ಆಚರಣೆಯಿಂದ ಸರ್ಕಾರಕ್ಕೆ ಏನು ಲಾಭ. ಸರ್ಕಾರ ಟಿಪ್ಪು ಜಯಂತಿ ನೆಪ ಮಾಡಿಕೊಂಡು ಹಿಂದೂ ಮತ್ತು ಮುಸ್ಲಿಮ್‌ರ ನಡುವೆ ದ್ವೇಷದ ಭಾವನೆ ಮೂಡಿಸುತ್ತಿದೆ. ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಟಿಪ್ಪು ಜಯಂತಿ ಆಚರಣೆ ವಿರುದ್ಧ ಈಗಾಗಲೇ ಜನ ಬೀದಿಗಿಳಿದು ಒನಕೆ ಪ್ರತಿಭಟನೆ, ಪಂಜಿನ ಮೆರವಣಿಗೆ, ಕಪ್ಪು ಬಾವುಟ ಪ್ರದರ್ಶನದ ಮೂಲಕ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಆದರೂ ಜಯಂತಿ ಆಚರಿಸುತ್ತಿರುವುದು ನಾಚಿಕೆಗೇಡು.

ಇನ್ನಾದರೂ ಸರ್ಕಾರ ಜಯಂತಿ ಆಚರಣೆ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಜಯಂತಿ ಲಾಲ್‌ ಜೈನ್‌, ಸದಸ್ಯರಾದ ಡಾ.ಸಿ.ಕೆ.ಶಿವಣ್ಣ, ರಾಜೇಂದ್ರ, ಬಾಲಾಜಿ, ಮಮತಾ, ಎಬಿವಿಪಿ ಸಂಘಟಕ ನವೀನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT