ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಬಡವರಿಗೆ ಇನ್ನೂ ಭಯ!

Last Updated 8 ನವೆಂಬರ್ 2017, 9:08 IST
ಅಕ್ಷರ ಗಾತ್ರ

ಮಂಡ್ಯ: ಭಾನುವಾರವೂ ತೆರೆದಿದ್ದ ಬ್ಯಾಂಕ್‌ಗಳು, ರಾತ್ರಿಯಾದರೂ ಸಿಬ್ಬಂದಿಯ ಕಾರ್ಯನಿರ್ವಹಣೆ, ಉದ್ದುದ್ದ ಸರತಿ ಸಾಲು, ಕೂಡಿಟ್ಟಿದ್ದ ಹಳೆಯ ನೋಟು ಕೊಟ್ಟು ಹೊಸ ನೋಟು ಪಡೆಯುವ ದುಗುಡ, ಆತಂಕ, ಜೇಬಲ್ಲಿ ಹಣ ಇದ್ದರೂ ಖರ್ಚು ಮಾಡಲಾಗದ ಸ್ಥಿತಿ, ಹೊಸ ನೋಟಿನ ವಿನ್ಯಾಸ, ಬಣ್ಣ, ನೋಟಿನ ಜೊತೆಗೊಂದು ಸೆಲ್ಫಿ!
ಕಳೆದ ವರ್ಷ ನ.8ರ ರಾತ್ರಿ ಕಳೆದ ನಂತರ ರಾಷ್ಟ್ರದಾದ್ಯಂತ ಬದಲಾದ ಚಿತ್ರಣವಿದು.

ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟು ರದ್ದತಿ ವಿಷಯ ಪ್ರಕಟಿಸಿ ವರ್ಷ ಉರುಳಿದೆ. ಆರಂಭದಲ್ಲಿ ಅಪಾರ ಸಮಸ್ಯೆ ಎದುರಿಸಿದ ಜನರು ಈಗ ಹೊಸ ನೋಟುಗಳೊಂದಿಗೆ ಹಣಕಾಸು ಚಟುವಟಿಕೆ ನಡೆಸುತ್ತಿದ್ದಾರೆ.

‘ನೋಟು ರದ್ದತಿಯಿಂದ ಬಡವರು ಹಾಗೂ ಮಧ್ಯಮವರ್ಗದ ಜನರು ಅಪಾರ ಸಮಸ್ಯೆ ಅನುಭವಿಸಿದರು. ಈ ಬಗ್ಗೆ ಬಡವರಿಗೆ ಇನ್ನೂ ಭಯವಿದೆ. ಮತ್ತೆ ನೋಟು ರದ್ದಾಗುವ ಭೀತಿ ಬಡವರನ್ನು ಕಾಡುತ್ತಿದೆ. ಎಷ್ಟೋ ಜನರಿಗೆ ಬ್ಯಾಂಕ್‌ ಖಾತೆ ಇರಲಿಲ್ಲ. ಕಷ್ಟ ಪಟ್ಟು ಕೂಡಿಟ್ಟಿದ್ದ ಹಣವನ್ನು ಬದಲಾಯಿಸಿಕೊಳ್ಳಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ.

ಹಣವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಬಡವರು ಕಷ್ಟ ಪಡಬೇಕಾಯಿತು. ಶ್ರೀಮಂತರು ಬಡ ಕೂಲಿಕಾರರಿಗೆ ವರ್ಷದ ಸಂಬಳವನ್ನು ಮುಂಗಡವಾಗಿ ಕೊಟ್ಟು ತಮ್ಮ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದಾರೆ. ನಗರದಲ್ಲಿ ಹಲವು ಗಾರ್ಮೆಂಟ್‌ಗಳು, ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ನೋಟು ರದ್ದತಿಯ ಕರಾಳ ಮುಖವಿದು ’ ಎನ್ನುತ್ತಾರೆ ಕಾರ್ಮಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ.

‘ಶ್ರೀಮಂತರ ಬಳಿ ಇರುವ ಕಪ್ಪು ಹಣ ಸರ್ಕಾರಕ್ಕೆ ಬರುತ್ತದೆ, ಇದರಿಂದ ನಮ್ಮ ದೇಶ ಶ್ರೀಮಂತವಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಯಾವ ಕಪ್ಪು ಕುಳಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ, ಎಷ್ಟು ಕಪ್ಪು ಹಣ ವಶಪಡಿಸಿಕೊಂಡರು ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಆರಂಭದಲ್ಲಿ ಜನರು ಪ್ರಧಾನಿ ನಿರ್ಧಾರಕ್ಕೆ ಬೆಂಬಲ ಕೊಟ್ಟರು. ಆದರೆ ಕ್ರಮೇಣ ಇದರಿಂದ ಯಾವ ಅನುಕೂಲವೂ ಆಗಲಿಲ್ಲ’ ಎಂದು ಶಿಕ್ಷಕ ಕೃಷ್ಣೇಗೌಡ ಹೇಳುತ್ತಾರೆ.

ಮುಂದುವರಿದ ಭ್ರಷ್ಟಾಚಾರ: ನೋಟು ರದ್ದತಿಯ ಉದ್ದೇಶ ಈಡೇರಲಿಲ್ಲ ಎಂಬ ವಾದ ಎಲ್ಲೆಡೆ ಇದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನೋಟು ರದ್ದತಿ ಮಾಡಲಾಯಿತು. ಆದರೆ ಪ್ರಧಾನ ಮಂತ್ರಿಗಳ ಉದ್ದೇಶ ಈಡೇರಲಿಲ್ಲ ಎಂಬ ಮಾತು ಮುಖ್ಯವಾಗಿ ಕೇಳಿ ಬರುತ್ತಿದೆ. ‘ನೋಟು ರದ್ದತಿಯಿಂದ ರಿಯಲ್‌ ಎಸ್ಟೇಟ್‌ ಹಾಗೂ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರಬೇಕಾಗಿತ್ತು. ಆದರೆ ಅದು ನಿರಂತರ ವಾಗಿ ಮುಂದುವರಿದಿದೆ.

ನಿವೇಶನಗಳ ನೋಂದಣಿ ಶುಲ್ಕ ಹಾಗೂ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಇರುವ ಕಾರಣ ಕಪ್ಪು ಹಣ ಬಿಳಿಯಾಗುತ್ತಿದೆ. ರಿಯಲ್‌ ಎಸ್ಟೇಟ್‌ ಎನ್ನುವುದು ಮಾಫಿಯಾ ರೂಪ ತಾಳಿದೆ. ಹೀಗಾಗಿ ನೋಟು ರದ್ದತಿಯ ಮೂಲ ಉದ್ದೇಶವೇ ಈಡೇರಲಿಲ್ಲ’ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಮಹೇಂದ್ರಬಾಬು ಹೇಳಿದರು.

‘ಆರಂಭದಲ್ಲಿ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಸಮಸ್ಯೆಯಾಯಿತು. ಹಣದ ಸಮಸ್ಯೆಯುಂಟಾಗಿ ಎಷ್ಟೋ ಜನರು ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಮುಂದೂಡಿದರು. ಈಗ ಎಲ್ಲಾ ಸಮಸ್ಯೆಗಳು ಮಾಯವಾಗಿದೆ. ಚಿನ್ನದಂಗಡಿಯ ವಹಿವಾಟು ನಿರಾತಂಕವಾಗಿ ನಡೆಯುತ್ತಿದೆ’ ಎಂದು ನಗರದ ಮಹಾಲಕ್ಷ್ಮಿ ಜ್ಯುವಲರಿ ಮಾರ್ಟ್‌ ಮಾಲೀಕ ಹರಿಪ್ರಸಾದ್‌ ಹೇಳಿದರು.

ಬ್ಯಾಂಕ್‌ ಸಿಬ್ಬಂದಿ ಅಭಿನಂದನಾರ್ಹರು: ‘ಗ್ರಾಮೀಣ ಪ್ರದೇಶಗಳ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ರಜೆ ತೆಗೆದುಕೊಳ್ಳದೆ ಜನರಿಗೆ ಹಣ ಕೊಟ್ಟಿದ್ದಾರೆ.
ಊಟವನ್ನು ಬಿಟ್ಟು ಕೆಲಸ ಮಾಡಿದ್ದಾರೆ. ಸಾಕಷ್ಟು ಮಾನಸಿಕ ಒತ್ತಡಗಳ ನಡುವೆ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆ ದೊಡ್ಡ ಅನುಭವವನ್ನು ಯಾವ ಸಿಬ್ಬಂದಿಯೂ ಮರೆಯಲು ಸಾಧ್ಯವಿಲ್ಲ’ ಎಂದು ಕೆನರಾಬ್ಯಾಂಕ್ ಪ್ರದೇಶಿಕ ಕಚೇರಿ ಹಿರಿಯ ವ್ಯವಸ್ಥಾಪಕ ಎಚ್‌.ಕೆ.ಚಂದ್ರಹಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT