ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಕ್ಸಿ ಮಾಲೀಕರು, ಚಾಲಕರ ಪ್ರತಿಭಟನೆ

Last Updated 8 ನವೆಂಬರ್ 2017, 9:14 IST
ಅಕ್ಷರ ಗಾತ್ರ

ಮಂಗಳೂರು: ಮಾರುಕಟ್ಟೆಯಲ್ಲಿ ಕಡಿಮೆ ದರದ ವೇಗ ನಿಯಂತ್ರಕ ಸಾಧನಗಳು ಲಭ್ಯವಿದ್ದರೂ ರಾಜ್ಯ ಸರ್ಕಾರ ದುಬಾರಿ ಬೆಲೆಯ ವೇಗ ನಿಯಂತ್ರಕಗಳ ಅಳವಡಿಕೆ ಕಡ್ಡಾಯಗೊಳಿಸಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಟ್ಯಾಕ್ಸಿ ಮೆನ್ಸ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಷನ್‌ ಸದಸ್ಯರು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಳೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸುವ ಆದೇಶವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಮತ್ತು ರಾಜ್ಯದಲ್ಲಿ ಅನಧಿಕೃತವಾಗಿ ಬಾಡಿಗೆಗೆ ವಾಹನಗಳನ್ನು ಓಡಿಸುತ್ತಿರುವ ಮಾಲೀಕರು, ಚಾಲಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯದ ಸಾರಿಗೆ ಇಲಾಖೆ ಕೆಲವು ಖಾಸಗಿ ಕಂಪೆನಿಗಳ ಜೊತೆ ಷಾಮೀಲಾಗಿ ವಾಹನ ಮಾಲೀಕರು ಮತ್ತು ಚಾಲಕರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಸೋಸಿಯೇಷನ್‌ ಅಧ್ಯಕ್ಷ ಕೆ.ಮೋನಪ್ಪ ಭಂಡಾರಿ ಮಾತನಾಡಿ, ‘ದುಬಾರಿ ದರದ ವಾಹನ ವಿಮೆ, ರಸ್ತೆ ತೆರಿಗೆ, ಬ್ಯಾಂಕ್‌ ಸಾಲದಿಂದ ವಾಹನ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈಗ ಹಳೆಯ ವಾಹನಗಳಿಗೂ ದುಬಾರಿ ದರದ ವೇಗ ನಿಯಂತ್ರಕಗಳನ್ನೇ ಅಳವಡಿಸಬೇಕೆಂಬ ಆದೇಶದ ಮೂಲಕ ವಾಹನಗಳ ಮಾಲೀಕರು ಮತ್ತು ಚಾಲಕರ ಮೇಲೆ ರಾಜ್ಯ ಸರ್ಕಾರ ಸವಾರಿ ಮಾಡುತ್ತಿದೆ’ ಎಂದು ದೂರಿದರು.

‘ಕಡಿಮೆ ದರದ ಹಲವು ವೇಗ ನಿಯಂತ್ರಕಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಅವುಗಳನ್ನು ಅಳವಡಿಸಲು ಸುಪ್ರೀಂಕೋರ್ಟ್‌ ಆದೇಶದಲ್ಲಿ ಅವಕಾಶವಿದೆ. ಆದರೆ, ₹ 15,000 ದರದ ರೋಸ್‌ ಮಾರ್ಟ್‌ ಮತ್ತು ಪ್ರಿಕಾಲ್‌ ಎಂಬ ವೇಗ ನಿಯಂತ್ರಕಗಳನ್ನೇ ಅಳವಡಿಸುವಂತೆ ಸಾರಿಗೆ ಇಲಾಖೆ ಕಡ್ಡಾಯ ಮಾಡುತ್ತಿದೆ. ಈ ಎರಡೂ ಕಂಪೆನಿಗಳ ವೇಗ ನಿಯಂತ್ರಕಗಳು ರಾಜ್ಯದಲ್ಲಿ ದೊರೆಯುತ್ತಿಲ್ಲ. ಇಂತಹ ಆದೇಶದ ಹಿಂದೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಈ ನಿರ್ಧಾರದಿಂದ 20 ಲಕ್ಷ ಬಡ ವಾಹನ ಮಾಲೀಕರು ಮತ್ತು ಚಾಲಕರಿಗೆ ಅನ್ಯಾಯವಾಗುತ್ತಿದೆ. ತಕ್ಷಣವೇ ಈ ಆದೇಶವನ್ನು ವಾಪಸು ಪಡೆಯಬೇಕು. ಅನಧಿಕೃತ ಬಾಡಿಗೆ ವಾಹನಗಳ ವಿರುದ್ಧ ಕ್ರಮ ಜರುಗಿಸಬೇಕು.

ಕೇರಳ ರಾಜ್ಯ ಸರ್ಕಾರವು ಕರ್ನಾಟಕದ ಪ್ರವಾಸಿ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಕಡಿತ ಮಾಡಬೇಕು. ರಾಜ್ಯದ ಎಲ್ಲ ಟ್ಯಾಕ್ಸಿಗಳಿಗೆ ರಾಷ್ಟ್ರೀಯ ಪರವಾನಗಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಮದುವೆ ಮತ್ತಿತರ ಖಾಸಗಿ ಸಮಾರಂಭಗಳ ಬಾಡಿಗೆಗೆ ತೆರಳುವ ಬಸ್‌ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸಂಘದ ಕಾರ್ಯಾಧ್ಯಕ್ಷ ಯು.ಎನ್‌.ಪ್ರಮೋದ್‌ಕುಮಾರ್‌ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಎಂ.ಕಮಲಾಕ್ಷ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT