ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಕುಟುಂಬ : ತೀರದ ಅಳಲು ಮೌನ

Last Updated 8 ನವೆಂಬರ್ 2017, 9:17 IST
ಅಕ್ಷರ ಗಾತ್ರ

ಬಂಟ್ವಾಳ: ಆ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು. ಗಮನವೆಲ್ಲವೂ ನದಿ ಕಡೆ ಇತ್ತು. ಅಲ್ಲಿಂದ ಸಾವಿನ ಸಂದೇಶ ಬರದಿರಲಿ.. ಮಕ್ಕಳು ಬದುಕಿ ಬರಲಿ ಎಂದೇ ಎಲ್ಲರೂ ಅಲ್ಲಿ ಪ್ರಾರ್ಥಿಸುತ್ತಿದ್ದರು. ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಅದು. ಎಲ್ಲರೂ ಹದಿ ಹರೆಯದವರು. ಸೋಮವಾರ ರಾತ್ರಿ ಸಂಭವಿಸಿದ ದುರಂತ ಮನೆಮಂದಿಗೆ ತಿಳಿದು, ಹುಡುಕಾಟ ನಡೆದಾಗ ಕಾಲ ಮಿಂಚಿತ್ತು. ಆದರೂ ಅವರೆಲ್ಲರೂ ಪ್ರಯತ್ನ ಮುಂದುವರಿಸಿದ್ದರು.

ಬಾಲಕರೆಲ್ಲರೂ ಬಡ ಕುಟುಂಬದ ಕರುಳ ಬಳ್ಳಿಗಳು. ಅಸ್ಲಾಂ, ನವಗ್ರಾಮ ನಿವಾಸಿ ಕೂಲಿ ಕಾರ್ಮಿಕ ಆಶ್ರಪ್ ಇವರ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೇ ಪುತ್ರ , ಮುದಸಿರ್ ಗೂಡಂಗಡಿ ನಡೆಸುತ್ತಿರುವ ಶರೀಫ್ ಇವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ ದೇರಳಕಟ್ಟೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ, ಸವಾದ್ ಶುಂಠಿಹಿತ್ಲು ಕಲ್ಲಗುಡ್ಡೆ ನಿವಾಸಿ ಜಿ. ಮಹಮ್ಮದ್ ಇವರ ಎಂಟು ಮಕ್ಕಳಲ್ಲಿ ನಾಲ್ಕನೇ ಪುತ್ರ , ರಮೀಝ್ ಕೆ. ಎಂಬ ಬಾಲಕ ಶರೀಫ್ ಇವರ ಐದು ಮಕ್ಕಳಲ್ಲಿ ಮೂರನೇಯವ. ಅಜ್ಮಲ್ ಎಂಬಾತ ಗುಜರಿ ವ್ಯಾಪಾರಿ ಹಕೀಂ ಇವರ ನಾಲ್ಕು ಮಕ್ಕಳಲ್ಲಿ ಮೂರನೇಯವ. ಇವರಲ್ಲಿ ರಮೀಝ್ ಮತ್ತು ಮುದಸಿರ್ ಹೊರತುಪಡಿಸಿ ಉಳಿದಂತೆ ಎಲ್ಲರೂ ಸ್ಥಳೀಯ ಮುತ್ತೂರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳು ಎಂದು ಸ್ಥಳೀಯರು ತಿಳಿಸುತ್ತಾರೆ.

ಸೋಮವಾರ ಕನಕ ಜಯಂತಿ ಪ್ರಯುಕ್ತ ಶಾಲಾ ಕಾಲೇಜಿಗೆ ರಜೆ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆಗೆ ಇವರೆಲ್ಲರೂ ಒಟ್ಟಾಗಿ ‘ಗುರುಪುರ ಕೈಕಂಬದಲ್ಲಿ ಮಿತ್ರರೊಬ್ಬರ ವಿವಾಹ’ ಎಂದು ಮನೆಯಲ್ಲಿ ತಿಳಿಸಿ ಹೋಗಿದ್ದರು. ಆದರೆ ರಾತ್ರಿ ಯಾದರೂ  ಮಕ್ಕಳು ಬಾರದಿದ್ದುದು ಹೆತ್ತವರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹುಡುಕಾಟ ಆರಂಭಿಸಿದ್ದರು.

‘ಸೋಮವಾರ ಬೆಳಿಗ್ಗೆ ಸುಮಾರು 11.30 ಗಂಟೆಗೆ ಇಲ್ಲಿನ ಸೇತುವೆ ಬಳಿ ನದಿಯಲ್ಲಿ ಸ್ನಾನಕ್ಕೆ ಬಂದಿವರನ್ನು ವಾಪಸ್‌ ಕಳುಹಿದೆ’ ಎಂದು ಮುಲಾರಪಟ್ನ ಮುಹಿಯುದ್ದೀನ್ ಜುಮ್ಮಾ ಮಸೀದಿ ಖತೀಬ ತಿಳಿಸಿದ್ದಾರೆ. ಆತಂಕಗೊಂಡ ಮಕ್ಕಳ ಹೆತ್ತವರು ಮತ್ತು ಸ್ಥಳೀಯರು ಒಟ್ಟಾಗಿ ಇರೇಂದಿಲು ಎಂಬಲ್ಲಿ ಫಲ್ಗುಣಿ ನದಿಗೆ ಇಳಿದು ಹುಡುಕಾಡಿದಾಗ ಮಕ್ಕಳು ಧರಿಸಿದ್ದ ಬಟ್ಟಬರೆ ಮತ್ತು, ಚಪ್ಪಲಿ, ಮೊಬೈಲ್ ಪತ್ತೆಯಾಗಿತ್ತು.

‘ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿ ರಾತ್ರಿ ಸುಮಾರು 12ಗಂಟೆತನಕ ಬಾಲಕರಿಗಾಘಿ ಹುಡುಕಲಾಗಿದೆ’ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಆಶ್ರಫ್ ಮುಲಾರಪಟ್ನ ತಿಳಿಸಿದ್ದಾರೆ.

ಮೃತ ದೇಹ ಪತ್ತೆ: ಮಂಗಳವಾರ ಹುಡುಕಾಟದಲ್ಲಿ ಮುಲಾರಪಟ್ನ ಸೇತುವೆ ಸಮೀಪದಲ್ಲಿ ಸವಾದ್ ಮೃತದೇಹ ದೊರೆತಿದೆ. ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಸ್ಥಳೀಯ ಈಜುಗಾರರಾದ ಜಬ್ಬಾರ್, ಸಲಾಂ, ಸಾದತ್ ಹುಡುಕಾಟ ನಡೆಸಿದ್ದಾರೆ. ರಮೀಝ್, ಅಸ್ಲಾಂ, ಅಜ್ಮಲ್ ಇವರ ಮೃತ ದೇಹವು ಮುಲಾರಪಟ್ನ ಮತ್ತು ಇರೇಂದಿಲು ನಡುವಿನ ಛತ್ರ ಶಾಲೆ ಎದುರಿನ ನದಿ ಗುಂಡಿಯಲ್ಲಿ ಪತ್ತೆಯಾಗಿದೆ. ಮುದಸಿರ್‌ಗಾಗಿ ಹುಡುಕಾಟ ಮುಂದುವರಿದಿದೆ.

ಎಚ್ಚರಿಕೆ ಫಲಕ ಇಲ್ಲ: ಇಲ್ಲಿನ ಮುಲಾರಪಟ್ನ ಸೇತುವೆ ಬದಿ ಫಲ್ಗುಣಿ ನದಿಯಲ್ಲಿ ಈ ಹಿದೆಯೂ ಹಲವು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೂ ಇಲ್ಲಿ ಯಾವುದೇ ಎಚ್ಚರಿಕೆ ನಾಮಫಲಕ ಇಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ಸಚಿವ ರೈ ಸೂಚನೆ: ಸಚಿವ ಬಿ.ರಮಾನಾಥ ರೈ ಅವರು ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮೃತ ದೇಹ ಹುಡುಕಿ ಮೇಲೆತ್ತಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಸಂಜೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಮಂಗಳೂರು ಸಹಾಯಕ ಕಮಿಷನರ್ ಎ.ಸಿ.ರೇಣುಕಾ ಪ್ರಸಾದ್, ಬಂಟ್ವಾಳ ಎಎಸ್ಪಿ ಡಾ. ಅರುಣ್, ಇನ್‌ಸ್ಪೆಕ್ಟರ್‌ ಪ್ರಕಾಶ್, ಎಸ್‌ಐ ಪ್ರಸನ್ನ, ಎಎಸ್‌ಐ ರಮೇಶ್, ಬಂಟ್ವಾಳ ಅಗ್ನಿ ಶಾಮಕದಳ ಎಎಸೈ ರಾಜೀವ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ನವೀನ್ ಕುಮಾರ್, ಗ್ರಾಮ ಕರಣಿಕ ಅಮೃತಾಂಶು, ರಾಜು ಲಂಬಾಣಿ, ಸಂದೀಪ್. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT