ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ, ಮೆಣಸಿನಕಾಯಿ ರಫ್ತಿನ ಮೇಲೆ ಹೂಡಿಕೆ!

ಆರೋಪಿ ಪತ್ನಿಯೂ ನಿರ್ದೇಶಕಿ
Last Updated 13 ಮಾರ್ಚ್ 2018, 4:46 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ ಕಂಪನಿ ನಿರ್ದೇಶಕ ರಾಘವೇಂದ್ರ ಶ್ರೀನಾಥ್‌, ಈರುಳ್ಳಿ, ಮೆಣಸಿನಕಾಯಿ, ತಾಮ್ರ, ಸತು ಲೋಹಗಳ ರಫ್ತು ವಹಿವಾಟಿನ ಮೇಲೆ ಹೂಡಿಕೆ ಮಾಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದಿದ್ದ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

‘ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಮಳಿಗೆಯೊಂದರಲ್ಲಿ ವಿಕ್ರಮ್‌ ಗ್ಲೋಬಲ್‌ ಕಮಾಡಿಟಿಸ್‌ ಹೆಸರಿನ ಕಂಪನಿ ಆರಂಭಿಸಿದ್ದ ರಾಘವೇಂದ್ರ, ಈರುಳ್ಳಿ ಹಾಗೂ ಮೆಣಸಿನಕಾಯಿಯನ್ನು ಮಲೇಷ್ಯಾಕ್ಕೆ ರಫ್ತು ಮಾಡುತ್ತಿದ್ದ. ಅದೇ ಮಳಿಗೆಯಲ್ಲೇ 2008ರಲ್ಲಿ ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿಯನ್ನೂ ಶುರು ಮಾಡಿದ್ದ. ನಂತರ, ಕೆ.ಸಿ.ನಾಗರಾಜ್‌ ಹಾಗೂ ಎಲ್‌ಐಸಿ ಏಜೆಂಟರಾದ ಸೂತ್ರಂ ಸುರೇಶ್‌, ನರಸಿಂಹಮೂರ್ತಿ, ಪ್ರಹ್ಲಾದ್‌ ಅವರನ್ನು ‘ವೆಲ್ತ್‌ ಮ್ಯಾನೇಜರ್‌’ ಎಂದು ನೇಮಕ ಮಾಡಿಕೊಂಡಿದ್ದ. ಅವರ ಮೂಲಕವೇ ಸಾರ್ವಜನಿಕರನ್ನು ಸಂಪರ್ಕಿಸಿ ಹಣ ಸಂಗ್ರಹಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯ ಪತ್ನಿ ಸುನೀತಾ ಕಂಪನಿಯ ಎರಡನೇ ನಿರ್ದೇಶಕಿ. ಕಂಪನಿ ವ್ಯವಹಾರವೆಲ್ಲ ಅವರಿಬ್ಬರ ಸಹಿ ಮೂಲಕ ನಡೆಯುತ್ತಿತ್ತು. ಜತೆಗೆ ಗ್ರಾಹಕರಿಂದ ಚೆಕ್‌ ಮೂಲಕವೇ ಹಣವನ್ನು ಪಡೆಯುತ್ತಿದ್ದರು.

ಅದೇ ಕಾರಣಕ್ಕೆ ಅವರಿಬ್ಬರ ಹಾಗೂ ಕಂಪನಿ ಹೆಸರಿನಲ್ಲಿದ್ದ 12 ಬ್ಯಾಂಕ್‌ ಖಾತೆಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಸ್ಕಾರ್ಪಿಯೊ ಹಾಗೂ ವ್ಯಾಗನಾರ್‌ ಕಾರು ಜಪ್ತಿ ಮಾಡಿದ್ದೇವೆ. ಸುನೀತಾ ತಲೆಮರೆಸಿಕೊಂಡಿದ್ದಾಳೆ.

‘ಕಂಪನಿ ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಿದ್ದೇವೆ. ಲೆಕ್ಕ ಪರಿಶೀಲನೆ ನಡೆಯುತ್ತಿದೆ. ಆರೋಪಿಗಳಿಂದ ಮಾಹಿತಿ ಪಡೆದು ವಂಚಿತರ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ಇದುವರೆಗಿನ ಮಾಹಿತಿಯಂತೆ, ಸುಮಾರು ₹350 ಕೋಟಿಯಿಂದ ₹400 ಕೋಟಿಯಷ್ಟು ವಂಚನೆ ನಡೆದಿದೆ. ತನಿಖೆಗಾಗಿ ಎಸಿಪಿ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ನಿಖರ ಮಾಹಿತಿ ದೊರೆಯಲಿದೆ.’

‘ಆರೋಪಿಗಳಿಂದ ವಂಚನೆಗೆ ಒಳಗಾದ 66 ಗ್ರಾಹಕರು ಸೋಮವಾರ ಠಾಣೆಗೆ ಬಂದು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಲೂಬಹುದು. ಅವರು ನೀಡಿರುವ ಮಾಹಿತಿ ಆಧರಿಸಿ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕೋ ಅಥವಾ ಸದ್ಯ ದಾಖಲಾಗಿರುವ ಎಫ್‌ಐಆರ್‌ನ ನೊಂದವರ ಪಟ್ಟಿಯಲ್ಲೇ ಇವರ ಹೆಸರು ಸೇರಿಸಿಕೊಳ್ಳಬೇಕೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೋರಿದ್ದೇವೆ’ ಎಂದು ಮಾಹಿತಿ ನೀಡಿದರು.

ಸಂಬಂಧಿಕರು, ಪರಿಚಯಸ್ಥರೇ ಹೆಚ್ಚು: ವಂಚನೆಗೆ ಒಳಗಾದವರಲ್ಲಿ ಬಹುಪಾಲು ಮಂದಿ, ಆರೋಪಿಗಳ ಸಂಬಂಧಿಕರು ಹಾಗೂ ಪರಿಚಯಸ್ಥರೇ ಆಗಿದ್ದಾರೆ. ಆದರೆ, ಈಗ ಅವರೆಲ್ಲರೂ ಆರೋಪಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಧ್ಯವರ್ತಿಗಳಾಗಿ ಹಣ ಕೊಡಿಸಿದವರ ಸಂಖ್ಯೆಯೂ ಹೆಚ್ಚಿದ್ದು, ಅವರೆಲ್ಲರನ್ನೂ ಪೊಲೀಸರು ಸಾಕ್ಷಿಯನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ.

‘ಸಂಬಂಧಿಕರ ಮೂಲಕ ಜಯನಗರದ 7ನೇ ಹಂತದಲ್ಲಿ ನರಸಿಂಹ ಮೂರ್ತಿ ಪರಿಚಯವಾಗಿತ್ತು. ಹೂಡಿಕೆಯಿಂದ ಭಾರಿ ಲಾಭ ಬರಲಿದೆ ಎಂದು ಆತ ಹೇಳಿದ್ದ. ಕಂಪನಿಯಿಂದ ಕೆಲವು ಗ್ರಾಹಕರು ಪಡೆದುಕೊಂಡಿದ್ದ ಲಾಭಾಂಶದ ದಾಖಲೆಗಳನ್ನು ತೋರಿಸಿದ್ದ. ಅದನ್ನೇ ನಂಬಿ 2016ರಲ್ಲಿ ₹5 ಲಕ್ಷವನ್ನು ಚೆಕ್‌ ಮೂಲಕ ಕಂಪನಿ ಖಾತೆಗೆ ಜಮೆ ಮಾಡಿದ್ದೆ. ಒಂದು ರೂಪಾಯಿಯೂ ವಾಪಸ್‌ ಬಂದಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಗ್ರಾಹಕರೊಬ್ಬರು ತಿಳಿಸಿದರು.

ಇನ್ನೊಬ್ಬ ಗ್ರಾಹಕ, ‘ನರಸಿಂಹಮೂರ್ತಿಯ ಸಂಬಂಧಿ ನನ್ನ ಕಚೇರಿಯಲ್ಲೇ ಕೆಲಸ ಮಾಡುತ್ತಾರೆ. ಅವರೇ ಆತನನ್ನು ಪರಿಚಯಿಸಿದ್ದರು. ತಮಗೂ ಉತ್ತಮ ಲಾಭ ಬಂದಿರುವುದಾಗಿ ಹೇಳಿದ್ದರು. ಅದನ್ನು ನಂಬಿ ₹25 ಲಕ್ಷ ಕಟ್ಟಿ ಮೋಸ ಹೋದೆ’ ಎಂದು ಅಳಲು ತೋಡಿಕೊಂಡರು.

ನಿವೃತ್ತ ಪೊಲೀಸ್‌ ಅಧಿಕಾರಿ ಮೋಹನ್, ‘2011ರಲ್ಲಿ ನನ್ನ ಮಗಳು ₹1 ಲಕ್ಷ ಹೂಡಿಕೆ ಮಾಡಿದ್ದಳು. ಲಾಭಾಂಶ ಸಮೇತ ಅದನ್ನು ಆರೋಪಿಗಳು ವಾಪಸ್‌ ಕೊಟ್ಟಿದ್ದರು. ಅದನ್ನೇ ನಂಬಿ ಪುನಃ 5 ಲಕ್ಷ ಹಾಕಿದ್ದಳು. ಅದು ವಾಪಸ್‌ ಬರಲಿಲ್ಲ. ತಿಂಗಳಿನಿಂದ ಆರೋಪಿಗಳ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಠಾಣೆಗೆ ಬಂದು ಮಾಹಿತಿ ನೀಡಿದ್ದೇವೆ’ ಎಂದು ತಿಳಿಸಿದರು.

ದ್ರಾವಿಡ್‌, ಸೈನಾ ಫೋಟೊ ತೋರಿಸಿ ಹೂಡಿಕೆ: ರಾಹುಲ್‌ ದ್ರಾವಿಡ್‌, ಸೈನಾ ನೆಹ್ವಾಲ್ ಹಾಗೂ ಪ್ರಕಾಶ್ ಪಡುಕೋಣೆ ಸಹ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದ ರಾಘವೇಂದ್ರ, ಈ ಕ್ರೀಡಾಪಟುಗಳ ಫೋಟೊ ಇರುವ ಮಾಹಿತಿಪತ್ರ ಮುದ್ರಿಸಿದ್ದ.

ಅದನ್ನೇ ಗ್ರಾಹಕರಿಗೆ ತೋರಿಸಿ, ‘ಈ ಕ್ರೀಡಾಪಟುಗಳೇ ನಮ್ಮ ಮೇಲೆ ನಂಬಿಕೆ ಇಟ್ಟು ಕೋಟಿಗಟ್ಟಲೇ ಹಣ ಹೂಡಿದ್ದಾರೆ. ಅವರೆಲ್ಲರಿಗೂ ಉತ್ತಮ ಲಾಭಾಂಶ ಸಿಕ್ಕಿದೆ. ನಿಮಗೂ ವಂಚನೆ ಆಗದು’ ಎಂದು ನಂಬಿಸುತ್ತಿದ್ದ. ಅದನ್ನು ನಂಬಿ ಹಲವು ಗ್ರಾಹಕರು ಹಣ ಹೂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.  

ಮಲೇಷ್ಯಾದಿಂದ ಸಲಹೆ: ರಾಘವೇಂದ್ರ ಆಗಾಗ ಮಲೇಷ್ಯಾಕ್ಕೆ ಹೋಗಿ ಬರುತ್ತಿದ್ದ. ಅದೇ ವೇಳೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ನಿರ್ವಹಣೆ ಮಾಡುವ ಕಂಪನಿಯೊಂದರ ಮಾಲೀಕರ ಪರಿಚಯ ಅವನಿಗಾಗಿತ್ತು. ಅವರು ನೀಡಿದ ಸಲಹೆ ಆಧರಿಸಿ ಆತ, ಸ್ವಂತ ಕಂಪನಿ ಆರಂಭಿಸಿದ್ದ. ‘ಅಗತ್ಯ ವಸ್ತುಗಳ ಮೇಲೆ ಹಣ ಹೂಡಿಕೆ ಮಾಡಿದರೆ, ಲಾಭಾಂಶ ಹೆಚ್ಚು ಬರುತ್ತದೆ. ನನಗೆ ಕಮಿಷನ್‌ ನೀಡಿದರೂ ಸಾಕು’ ಎಂದು ಗ್ರಾಹಕರಿಗೆ ಹೇಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು. 

’ಮಲೇಷ್ಯಾದಲ್ಲಿರುವ ಕಂಪನಿ ಬಗ್ಗೆ ಆರೋಪಿ ಬಾಯ್ಬಿಡುತ್ತಿಲ್ಲ. ಉಳಿದ ಆರೋಪಿಗಳು, ಆ ಕಂಪನಿ ಬಗ್ಗೆ ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ’ ಎಂದರು.

ಗ್ರಾಹಕರೊಬ್ಬರು, ‘ನಮ್ಮ ಹಣದಲ್ಲೇ ಆರೋಪಿಯು ಮಲೇಷ್ಯಾದಲ್ಲಿ ಆಸ್ತಿ ಮಾಡಿರುವ ಮಾಹಿತಿ ಇದೆ. ಅದನ್ನು ಪೊಲೀಸರು ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.

ಹೋರಾಟಕ್ಕೆ ವಾಟ್ಸ್‌ಆ್ಯಪ್‌ ಬಳಗ: ವಂಚನೆಗೊಳಗಾದವರು, ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇದಕ್ಕಾಗಿ ವಾಟ್ಸ್‌ಆ್ಯಪ್‌
ನಲ್ಲಿ ‘ವಿಕ್ರಮ್ ಲೀಗಲ್ ಗ್ರೂಪ್‌’  ರಚಿಸಿಕೊಂಡಿದ್ದಾರೆ. ಅದರಲ್ಲಿ ಈಗಾಗಲೇ 200 ಸದಸ್ಯರಿದ್ದಾರೆ. ಹೋರಾಟದ ರೂಪರೇಷೆ ಬಗ್ಗೆ ಇದರಲ್ಲಿ ಚರ್ಚೆ
ನಡೆಸುತ್ತಿದ್ದಾರೆ.
*

’ಟಾಪ್‌–10’ ಏಜೆಂಟರ ಪಟ್ಟಿಯಲ್ಲಿ ಸೂತ್ರಂ ಸುರೇಶ್‌
ಬಂಧಿತ ಆರೋಪಿಗಳಾದ ಸೂತ್ರಂ ಸುರೇಶ್‌, ಪ್ರಹ್ಲಾದ್‌ ಹಾಗೂ ನರಸಿಂಹಮೂರ್ತಿ ಎಲ್‌ಐಸಿಯ ದೇಶದ ’ಟಾಪ್‌–10’ ಏಜೆಂಟರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ಈ ಮೂವರು ಜೊತೆ ಚರ್ಚಿಸಿಯೇ ರಾಘವೇಂದ್ರ ಕಂಪನಿ ಆರಂಭಿಸಿದ್ದ. ಅದರಲ್ಲೂ ಸೂತ್ರಂ ಸುರೇಶ್, ತನಗೆ ಹೆಚ್ಚಿನ ಕಮಿಷನರ್ ನೀಡಿದರೆ ಕೋಟಿಗಟ್ಟಲೇ ಹಣವನ್ನು ಹೂಡಿಕೆ ಮಾಡಿಸುವುದಾಗಿ ಹೇಳಿದ್ದ. ಅದಕ್ಕೆ ರಾಘವೇಂದ್ರ ಸಹ ಒಪ್ಪಿಕೊಂಡಿದ್ದ ಎಂದರು.

ರಾಷ್ಟ್ರಮಟ್ಟದ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಕ್ರೀಡಾ ವಿಭಾಗದ ಪತ್ರಕರ್ತನಾಗಿ ವೃತ್ತಿ ಆರಂಭಿಸಿದ್ದ ಸುರೇಶ್, ಅದರೊಂದಿಗೆ ಎಲ್‌ಐಸಿ ಏಜೆಂಟ್‌ ಆಗಿಯೂ ಕೆಲಸ ಮಾಡುತ್ತಿದ್ದ. ಪರಿಚಯವಾದ ಕ್ರೀಡಾಪಟುಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ವಿಮೆ ಮಾಡಿಸುತ್ತಿದ್ದ. ವಿಮೆಯಲ್ಲೇ ಹೆಚ್ಚಿನ ಲಾಭ ಬರಲಾರಂಭಿಸುತ್ತಿದ್ದಂತೆ ಪತ್ರಿಕೆಗೆ ರಾಜೀನಾಮೆ ನೀಡಿದ್ದ.

ಎಲ್‌ಐಸಿ ಜತೆಗೆ ಹಲವು ವಿಮಾ ಕಂಪನಿಗಳಿಗೂ ಏಜೆಂಟನಾದ. ರಾಘವೇಂದ್ರ ಪರಿಚಯವಾದ ನಂತರ, ಆತನ ಕಂಪನಿಗೂ ಪರಿಚಯಸ್ಥರಿಂದ ಹಣ ಹೂಡಿಕೆ ಮಾಡಿಸಲು ಆರಂಭಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

‘ದ್ರಾವಿಡ್‌, ಸೈನಾ ಹಾಗೂ ಪಡುಕೋಣೆ ಅವರಿಂದಲೇ ಸುರೇಶ್ ₹100 ಕೋಟಿಗೂ ಹೆಚ್ಚು ಹೂಡಿಕೆ ಮಾಡಿಸಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಇದಕ್ಕೆ ಸೂಕ್ತ ದಾಖಲೆ ಸಿಕ್ಕಿಲ್ಲ. ಹಾಗಾಗಿ ನಿಖರ ಮೊತ್ತ ಹೇಳಲಾಗದು’ ಎಂದರು.

‘ಕ್ರೀಡಾಪಟುಗಳು ಹಾಗೂ ಗಣ್ಯವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದ ಕಾರ್ಯಕ್ರಮಗಳಲ್ಲಿ ಸುರೇಶ್‌ ನಿರೂಪಣೆ ಮಾಡುತ್ತಿದ್ದ. ಅದನ್ನು ಮೆಚ್ಚಿ ಹಲವರು ಆತನಿಗೆ ಆತ್ಮೀಯರಾಗುತ್ತಿದ್ದರು. ಜತೆಗೆ, ಎಲ್‌ಐಸಿ ಏಜೆಂಟನಾಗಿದ್ದರಿಂದ ಜನರೂ ಆತನ ಮೇಲೆ ನಂಬಿಕೆ ಇಟ್ಟಿದ್ದರು. ಆತನಿಗೆ ಹಲವು ಪ್ರಶಸ್ತಿಗಳೂ ಬಂದಿದ್ದವು. ಅದನ್ನು ಆತ ದುರುಪಯೋಗಪಡಿಸಿಕೊಂಡಿದ್ದಾನೆ’ ಎಂದರು.

ಇ–ಮೇಲ್‌ ಮೂಲಕವೇ ₹59 ಲಕ್ಷ ಹೂಡಿಕೆ!
ಕಂಪನಿ ವಿಳಾಸ, ಅದರ ನಿರ್ದೇಶಕರು ಹಾಗೂ ಏಜೆಂಟರು ಯಾರು ಎಂಬುದನ್ನು ತಿಳಿದುಕೊಳ್ಳದೆ ಮಹಿಳಾ ಉದ್ಯಮಿಯೊಬ್ಬರು, ₹59 ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ನೀಡುವುದಾಗಿ ಇ–ಮೇಲ್‌ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದೆ. ಕಂಪನಿ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, ಹಣ ಹೂಡಿಕೆ ಮಾಡುವಂತೆ ಎರಡನೇ ಬಾರಿ ಇ–ಮೇಲ್‌ ಮಾಡಿದ್ದ. ಅದನ್ನು ನಂಬಿ, ಆತ ಸೂಚಿಸಿದ್ದ ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ಖಾತೆಗೆ ಹಣ ಜಮೆ ಮಾಡಿದ್ದೆ’ ಎಂದು ಹೆಸರು ಹೇಳಲಿಚ್ಛಿಸದ ಉದ್ಯಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಗತ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದರು. ಹೀಗಾಗಿ ಹಣ ಕೊಟ್ಟಿದ್ದೆ. ಆದರೆ, ಎರಡು ವರ್ಷಗಳಿಂದ ಹಣ ವಾಪಸ್‌ ಕೊಟ್ಟಿಲ್ಲ. ಮುಂದೊಂದು ದಿನ ಕೊಡಬಹುದು ಎಂದೇ ಭಾವಿಸಿದ್ದೆ. ಆದರೆ, ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ ನೋಡಿ ಠಾಣೆಗೆ ಬಂದಿದ್ದೇನೆ’ ಎಂದರು.

‘ಠಾಣೆಗೆ ದೂರು ನೀಡಲು ಬಂದಾಗಲೇ ಸೆಲ್‌ನಲ್ಲಿದ್ದ ಆರೋಪಿಗಳನ್ನು ನೋಡಿದೆ. ಈ ಮೊದಲು ಅವರನ್ನು ಎಲ್ಲಿಯೂ ನೋಡಿಲ್ಲ’ ಎಂದು ಉದ್ಯಮಿ ಹೇಳಿದರು.

ತನಿಖೆ ಹೊಣೆ ಸಿಐಡಿಗೆ?
ಧಾರವಾಡ ಜಿಲ್ಲೆಯ ಕಲಘಟಗಿಯ ಖಾಸನೀಸ ಸಹೋದರರು ‘ಹರ್ಷ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ’ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ್ದರು. ಅದೇ ರೀತಿಯಲ್ಲೇ ರಾಘವೇಂದ್ರ ಸಹ ವಂಚಿಸಿದ್ದಾನೆ. ಖಾಸನೀಸ ಸಹೋದರರ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್‌ ಕಂಪನಿ’ ಪ್ರಕರಣವನ್ನೂ ಸಿಐಡಿಗೆ ವಹಿಸುವ ಸಾಧ್ಯತೆ ಇದೆ.

ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು, ‘ಪ್ರತಿಯೊಬ್ಬ ವಂಚಿತರಿಂದ ದೂರು ಪಡೆಯುವಂತೆ  ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ವಂಚನೆ ಮೊತ್ತದ ಬಗ್ಗೆ ದಾಖಲೆ ಸಮೇತ ಮಾಹಿತಿ ಕೋರಿದ್ದಾರೆ. ಪ್ರಾಥಮಿಕ ತನಿಖಾ ವರದಿಯನ್ನು ಮಂಗಳವಾರ ಸಲ್ಲಿಸಲಿದ್ದೇವೆ. ಸಿಐಡಿಗೆ ವಹಿಸುವ ಸಂಬಂಧ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ವಂಚನೆಗೊಳಗಾದ ಗ್ರಾಹಕರು, ತಾವು ವಾಸವಿರುವ ಸ್ಥಳದ ವ್ಯಾಪ್ತಿಯ ಠಾಣೆಯಲ್ಲೇ ದೂರು ದಾಖಲಿಸಬಹುದು. ಮಾಹಿತಿಗೆ 080–22942564, 9480801527 ಸಂಪರ್ಕಿಸುವಂತೆ ಬನಶಂಕರಿ ಪೊಲೀಸರು ಕೋರಿದ್ದಾರೆ.

*


-ಜಪ್ತಿ ಮಾಡಲಾದ ಕಾರುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT