ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇವ ನಮ್ಮವ’ ಎನ್ನುವ ಬಿಜೆಪಿಗೆ, ಕುಂದಾಪುರ ಶಾಸಕ ಕೊಟ್ಟ ಉತ್ತರ ‘ನಾನವನಲ್ಲ’

Last Updated 8 ನವೆಂಬರ್ 2017, 9:59 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈಗಲೂ ಸ್ವತಂತ್ರವಾಗಿದ್ದಾರ? ಬಿಜೆಪಿಯಲ್ಲಿದ್ದಾರಾ ಅಥವಾ ಕಾಂಗ್ರೆಸ್ ಸೇರುವರೇ ಎಂಬುದು ಸದ್ಯ ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಷಯ.

ಬಿಜೆಪಿ ಜಿಲ್ಲಾಧ್ಯಕ್ಷರೂ ಸೇರಿದಂತೆ ಎಲ್ಲ ಮುಖಂಡರು ಹಾಲಾಡಿ ಅವರೂ ಈಗಾಗಲೇ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದೇ ಪ್ರತಿಪಾದಿಸುತ್ತಾರೆ. ಆದರೆ, ಹಾಲಾಡಿ ಅವರು ಮಾತ್ರ ‘ನಾನಿನ್ನೂ ಸ್ವತಂತ್ರವಾಗಿದ್ದೇನೆ. ಬೆಂಬಲಿಗರು ಹಾಗೂ ಜನರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎನ್ನುತ್ತಿದ್ದಾರೆ.

ಇದು ಗೊಂದಲಕ್ಕೆ ಕಾರಣವಾಗಿದೆ. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಷಯವೂ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಹರಿದಾಡಿದೆ.ಬಿಜೆಪಿ ಪರಿವರ್ತನಾ ಯಾತ್ರೆ ಇದೇ 13ರಂದು ಕುಂದಾಪುರ ತಲುಪಲಿದ್ದು ಆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರೇ ಎಂಬ ಕುತೂಹಲ ಸಹ ಇದೆ.

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಸಚಿವ ಸ್ಥಾನ ನೀಡುವುದಾಗಿ ಬೆಂಗಳೂರಿಗೆ ಆಹ್ವಾನಿಸಿದ್ದ ಬಿಜೆಪಿಯ ಹಿರಿಯ ಮುಖಂಡರು, ಕೊನೆಯ ಕ್ಷಣದಲ್ಲಿ ಅವರಿಗೆ ಕೈ ಕೊಟ್ಟಿದ್ದರು. ಪಕ್ಷ ಮಾಡಿದ ಮೋಸ ನೆನೆದು ಕಣ್ಣೀರಿಟ್ಟಿದ್ದ ಹಾಲಾಡಿ ಪಕ್ಷ ತೊರೆದಿದ್ದರು. ಆ ನಂತರ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಿಲ್ಲೆಯಲ್ಲಿಯೇ ಅತ್ಯಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಆ ನಂತರ ಮತ್ತೆ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಹಿರಿಯ ಮುಖಂಡರು ಮಾಡಿದ್ದರು. ಅವರು ಪಕ್ಷಕ್ಕೆ ಸೇರಿದ್ದಾರೆ, ಕಚೇರಿಗೂ ಬಂದು ಹೋಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷರೇ ಹೇಳುತ್ತಿದ್ದಾರೆ. ಅದನ್ನು ಸಾರಾಸಗಟಾಗಿ ಶ್ರೀನಿವಾಸ ಶೆಟ್ಟರು ನಿರಾಕರಿಸಿದ್ದಾರೆ.

ಪಕ್ಷೇತರರಾಗಿ ಗೆದ್ದರೂ ಆ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಾಲಾಡಿ ಅವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿಯೂ ಅದು ಮುಂದುವರೆದಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ಸೇರಿದ್ದಾರೆ.

ವಾಸ್ತವವಾಗಿ ಹೆಗ್ಡೆ ಮತ್ತು ಹಾಲಾಡಿ ಅವರು ರಾಜಕೀಯ ಸ್ಪರ್ಧಿಗಳು. ಬಿಜೆಪಿ ಸೇರುವ ನಿರ್ಧಾರವನ್ನು ಪುನರ್ ಪರಿಶೀಲಿಸಲು ಇದೂ ಒಂದು ಕಾರಣ ಇರಬಹುದು. ಅಲ್ಲದೆ ರಾಜ್ಯ ಬಿಜೆಪಿಯ ಒಳ ಜಗಳ ಹಾಗೂ ನಕಾರಾತ್ಮಕ ಬೆಳವಣಿಗೆ ಸಹ ಅವರು ಉತ್ಸುಕತೆ ತೋರದಿರಲು ಕಾರಣ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಅಲ್ಲದೆ ಅವರನ್ನು ಪಕ್ಷಕ್ಕೆ ಕರೆತರುವುದರ ಬಗ್ಗೆ ಬಿಜೆಪಿಯ ಕೆಲವು ಸ್ಥಳೀಯ ಮುಖಂಡರ ಆಕ್ಷೇಪ ಸಹ ಇದೆ. ಹಾಲಾಡಿ ಅವರೇ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಶೋಭಾ ಕರಂದ್ಲಾಜೆ ಅವರು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಅದಕ್ಕೆ ಸ್ಥಳೀಯ ಕೆಲವು ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದರು.

ಏನೇ ಆಗಲಿ ‘ಬುದ್ಧಿವಂತ’ ರಾಜಕಾರಣಿಯಾಗಿರುವ ಹಾಲಾಡಿ ಅವರು ಎಲ್ಲ ವಿಷಯಗಳನ್ನು ಅಳೆದು ತೂಗಿಯೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮತ್ತೆ ಪಕ್ಷೇತರರಾಗಿ ಕಣಕ್ಕಿಳಿದರೂ ಆಶ್ಚರ್ಯ ಇಲ್ಲ ಎನ್ನುತ್ತಾರೆ ಬಲ್ಲವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT