ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಸಲು ಸಿದ್ಧವಾಗಿದೆ ‘ಶಂಕ್ರಣ್ಣ ಸ್ಟುಡಿಯೊ’

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಿನಿಮಾರಂಗ ಯಾವ ಕಾಲದಲ್ಲೂ ಹೊಸ ಕಲಾವಿದರ ಪಾಲಿಗೆ ಹೂವಿನ ಹಾಸಿಗೆಯಾಗಿದ್ದ ಉದಾಹರಣೆ ಇಲ್ಲ. ಇಲ್ಲಿ ಕಾಲಿಟ್ಟವರೆಲ್ಲ ಕನಸುಗಳ ಸಾಕಾರಕ್ಕಾಗಿ ಸಾಕಷ್ಟು ನೀರು ಕುಡಿದಿದ್ದಾರೆ. ಅವಕಾಶಗಳ ಕೊರತೆ, ಸೌಲಭ್ಯಗಳ ಅಲಭ್ಯತೆಯ ಕಾರಣಕ್ಕೆ ಸಾಕಷ್ಟು ಮಂದಿ ಇಲ್ಲಿಂದ ಕಾಲ್ಕಿತ್ತಿದ್ದಾರೆ. ಸಮಸ್ಯೆಗಳನ್ನು ಮೀರಿ ನಿಲ್ಲುವ ಪ್ರಯತ್ನ ಮಾಡಿದವರು ಮಾತ್ರ ಇಲ್ಲಿ ಆಳವಾಗಿ ಬೇರಿಳಿಸಿ ಉಳಿದುಕೊಳ್ಳುತ್ತಾರೆ.

ಸದ್ಯ ಸಿನಿಮಾರಂಗದ ಇಂತಹ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಮೂವರು ಯುವಕರು ಶಂಕರ್‌ನಾಗ್ ಅವರ ಹೆಸರಿನಲ್ಲಿ ಸಿನಿಮಾ ಸ್ಟುಡಿಯೋ ಆರಂಭಿಸಲು ಹೊರಟಿದ್ದಾರೆ. ಅದಕ್ಕೆ ಅವರು ಇರಿಸಿರುವ ಹೆಸರು 'ಶಂಕ್ರಣ್ಣ ಸ್ಟುಡಿಯೊ ಆವಿರ್ಭವ'.

ಟಿ.ಎಚ್‌.ವಿಶ್ವನಾಥ್‌ ಅವರ 'ಸುಳಿ' ಸೇರಿದಂತೆ ಹಲವು ಚಿತ್ರತಂಡಗಳೊಂದಿಗೆ ಕೆಲಸ ಮಾಡಿರುವ ಜೀವನ್‌, ಪ್ರಶಾಂತ್‌ ಹಾಗೂ ಪುನೀತ್‌ ಈ ಪ್ರಯತ್ನಕ್ಕೆ ಕೈ ಹಾಕಿರುವವರು. ಹಲವು ಕಿರುಚಿತ್ರಗಳನ್ನೂ ನಿರ್ದೇಶಿಸಿರುವ ಇವರಿಗೆ, ಆ ವೇಳೆ ಎದುರಾದ ಸಮಸ್ಯೆಗಳೇ ಸ್ಟುಡಿಯೋ ಕಟ್ಟುವ ನಿರ್ಧಾರಕ್ಕೆ ಕಾರಣ.

ಸಿನಿಮಾ ನಿರ್ಮಾಣಕ್ಕಾಗಿ ಬೇರೆ ರಾಜ್ಯಗಳನ್ನು ಆಶ್ರಯಿಸುವುದನ್ನು ಬಿಟ್ಟು ರಾಜ್ಯದಲ್ಲೇ ಸ್ಟುಡಿಯೋ ಆರಂಭಿಸುವ ಸಾಹಸ ಮಾಡಿದ್ದ 'ಶಂಕರ್‌ ನಾಗ್‌' ಇವರಿಗೆ ಸ್ಫೂರ್ತಿ. ಅವರ ಹೆಜ್ಜೆ ಅನುಸರಿಸುವ ಸಣ್ಣ ಪ್ರಯತ್ನ ಇವರದು.

ಇತ್ತೀಚಿಗೆ ನಮ್ಮಲ್ಲಿ ಅಧಿಕ ಸಂಖ್ಯೆಯಲ್ಲಿ ಕಿರುಚಿತ್ರಗಳು ನಿರ್ಮಾಣವಾಗುತ್ತಿವೆ. ಅದ್ಭುತವಾದ ಕಥೆ ಇರುತ್ತದೆಯಾದರೂ, ತಾಂತ್ರಿಕ ಗುಣಮಟ್ಟ ಹೇಳಿಕೊಳ್ಳುವಂತಿರುವುದಿಲ್ಲ. ನಮ್ಮಲ್ಲಿ ಶ್ರಮಿಸುವವರಿದ್ದಾರೆ. ಆದರೆ ಸೌಲಭ್ಯಗಳ ಕೊರತೆಯಿದೆ. ಹೊಸಬರ ಪಾಲಿಗೆ ಶಂಕ್ರಣ್ಣನ ಕಾಲದಲ್ಲಿದ್ದ ಸಮಸ್ಯೆಗಳು ಈಗಲೂ ಇವೆ. ಅವುಗಳನ್ನು ಮೀರಬೇಕಿದೆ. ಜತೆಗೆ ಬೇರೆ ಭಾಷೆಗಳಲ್ಲಿ ಅಂತರ್ಜಾಲ ಟಿ.ವಿ. ಧಾರಾವಾಹಿಗಳು, ವೆಬ್‌ ಸೀರಿಯಲ್‌ಗಳು ಜನಪ್ರಿಯವಾಗಿವೆ. ಕನ್ನಡದಲ್ಲಿ ಅಂತಹ ಪ್ರಯತ್ನಗಳು ಕಡಿಮೆ. ಅವನ್ನೂ ಮೇಲೆತ್ತುವ ಉದ್ದೇಶವಿದೆ. ಮುಂದೆ ಬರುವವರೊಟ್ಟಿಗೆ ಕೈಜೋಡಿಸಲಿದ್ದೇವೆ. ಇದರಿಂದ ನಾವೂ ಬೆಳೆದು ಇತರರನ್ನೂ ಬೆಳೆಸಿದಂತಾಗುತ್ತದೆ. ಅದಕ್ಕಾಗಿ ಸ್ಟುಡಿಯೋ ಕಟ್ಟುತ್ತಿದ್ದೇವೆ ಎಂಬುದು ಈ ಯುವಕರ ವಿವರಣೆ.

(ಶಂಕ್ರಣ್ಣ ಸ್ಟುಡಿಯೋ ನಿರ್ಮಿಸುತ್ತಿರುವ ಪುನೀತ್‌ ಶ್ರೀನಾಥ್‌, ಪ್ರಶಾಂತ್‌ ಪೈ ಹಾಗೂ ಜೀವನ್‌ ಗಂಗಾಧರಯ್ಯ)

'...ಆವಿರ್ಭವ'ದಲ್ಲಿ ಯಾವುದೇ ಹೊಸ ನಿರ್ದೇಶಕರ ಕಿರುಚಿತ್ರ, ಸಿನಿಮಾ, ಅಂತರ್ಜಾಲ ಧಾರಾವಾಹಿಗಳಿಗೆ ಅಗತ್ಯವಿರುವ ಆಧುನಿಕ ಕ್ಯಾಮೆರಾಗಳು, ಲೈಟಿಂಗ್, ರೆಕಾರ್ಡಿಂಗ್ ವ್ಯವಸ್ಥೆ, ಸಂಕಲನಕ್ಕೆ ಬೇಕಾದ ತಾಂತ್ರಿಕ ಸೌಲಭ್ಯಗಳು ದೊರೆಯುತ್ತವೆ. ಅಗತ್ಯವೆನಿಸಿದರೆ ಸಂಗೀತ ನಿರ್ದೇಶಕರ ಸಹಕಾರವನ್ನೂ ಒದಗಿಸಲಾಗುತ್ತದೆ. ಒಟ್ಟಾರೆ ಒಂದು ಸಿನಿಮಾ ಮಾಡಲು ಬೇಕಾದ ಎಲ್ಲವೂ ಇಲ್ಲಿ ಲಭ್ಯ.

ಇದಕ್ಕಾಗಿ ಕೈಯಲ್ಲಿದ್ದ ಒಂದಿಷ್ಟು ಹಣದ ಜತೆಗೆ ಬ್ಯಾಂಕ್‌ ಹಾಗು ಇತರ ಮೂಲಗಳಿಂದ ₹18ಲಕ್ಷ ಹಣ ಹೊಂದಿಸಿದ್ದಾರೆ. ಹಿರಿಯ ನಟ ಪ್ರಣಯರಾಜ ಶ್ರೀನಾಥ್ ಸೇರಿದಂತೆ ಕೆಲ ಕಲಾವಿದರ ಪ್ರೋತ್ಸಾಹವೂ ಇವರ ಬೆನ್ನಿಗಿದೆ. ಸ್ಟುಡಿಯೋ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಶಂಕರ್‌ ನಾಗ್‌ ಅವರ ಜನ್ಮದಿನದಂದು (ನ.9) ಉದ್ಘಾಟನೆಗೊಳ್ಳಲಿದೆ.

ಸ್ಟುಡಿಯೋ ಕನಸಿಗೆ ನೆರವಾಗಲು ಕಡಿಮೆ ಬಾಡಿಗೆಗೆ ಕಟ್ಟಡ ನೀಡಿದ ಮಾಲಿಕರನ್ನೂ ಸ್ನೇಹಿತರನ್ನೂ ಸ್ಮರಿಸುವ ಈ ಯುವಕರು, ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ತಂಡಗಳಿಗೆ ಇಂತಿಷ್ಟೇ ಹಣ ನೀಡಬೇಕೆಂಬ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಸಾಧ್ಯವಾದಷ್ಟು ನೀಡಿ ಸ್ಟುಡಿಯೋ ಬೆಳವಣಿಗೆಗೆ ಕೈ ಜೋಡಿಸಬಹುದು ಎಂಬುದಷ್ಟೇ ಇವರ ವಿನಂತಿ.

ಸಂಧಿಸಿದ ಮೂರು ದಾರಿ: ಅಭಿಮನ್ಯು ಭೂಪತಿ ನೇತೃತ್ವದ 'ಬೆಂಗಳೂರು ಥಿಯೇಟರ್‌ ಆನ್ಸಂಬಲ್‌' ತಂಡದ ಮೂಲಕ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಜೀವನ್ ಗಂಗಾಧರಯ್ಯ, ನಂತರ 'ಲೈವ್‌ ಆನ್‌ ಸ್ಟೇಜ್‌ ಬೆಂಗಳೂರು' ಹೆಸರಿನ ತಮ್ಮದೇ ತಂಡ ಕಟ್ಟಿಕೊಂಡರು. ಇದರ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಂಗ ಹಾಗೂ ನೃತ್ಯ ಶಿಕ್ಷಣ ನೀಡಲಾರಂಭಿಸಿದರು.

ಬಿಸಿಎ ಓದಿಕೊಂಡಿರುವ ಇವರಿಗೆ ಸಿನಿಮಾವೊಂದರ ಚಿತ್ರೀಕರಣ ಸಂದರ್ಭದಲ್ಲಿ, ಉದ್ಯಮಿ ಪ್ರಶಾಂತ್ ಪೈ ಹಾಗೂ ಕೆಎಎಸ್ ಪ್ರಿಲಿಮ್ಸ್ ಮುಗಿಸಿ ಮುಖ್ಯ ಪರೀಕ್ಷೆಯ ಸಿದ್ಧತೆಯಲ್ಲಿರುವ ಪುನೀತ್ ಶ್ರೀನಾಥ್ ಪರಿಚಯವಾದರು. ತೊಡಗಿಕೊಂಡಿರುವ ಕ್ಷೇತ್ರಗಳ ದೃಷ್ಟಿಯಿಂದ ಮೂವರದೂ ಭಿನ್ನ ದಾರಿ. ವಯಸ್ಸಿನ ನಡುವೆಯೂ ಅಂತರವಿದೆ. ಒಂದೇ ಆಸಕ್ತಿಯವರಾದ ಕಾರಣ ಒಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ.

ವಿಳಾಸ: #41/53, 4ನೆ ಮುಖ್ಯ ರಸ್ತೆ, 4ನೆ ಬ್ಲಾಕ್, ನಂದಿನಿ ಲೇಔಟ್, ಬೆಂಗಳೂರು 560096. ಮೊ.ಸಂಖ್ಯೆ +91 8123771049

**

ಸಿನಿಮಾ ಬಗೆಗಿನ ವ್ಯಾಮೋಹ ಮೂಡಿದ್ದೇ ಶಂಕರ್‌ ನಾಗ್‌ ಅವರಿಂದ. ಅವರ ಹೆಸರಿಗೆ ಎಲ್ಲರನ್ನೂ ಸೆಳೆಯುವ, ಎಲ್ಲವನ್ನೂ ಗೆಲ್ಲುವ ಶಕ್ತಿಯಿದೆ. ನಾವು ಮೂವರೂ ಶಂಕ್ರಣ್ಣನ ಹುಟ್ಟಾ ಅಭಿಮಾನಿಗಳು. ಹಾಗಾಗಿ ಅವರ ಹೆಸರನ್ನೇ ಇಟ್ಟಿದ್ದೇವೆ.
- ಜೀವನ್‌ ಗಂಗಾಧರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT