ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶನಿ’ ತಾಯಿ ಜತೆ ಕುಶಲೋಪರಿ

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರಾಣ ಕಥೆಗಳ ಬಗೆಗೆ ಆಸಕ್ತಿ ಇರುವ ಅನೇಕ ನೋಡುಗರ ಮನಸ್ಸನ್ನು ಸೆಳೆದಿರುವ ಧಾರಾವಾಹಿ 'ಶನಿ'. ಅದ್ಭುತ ಸೆಟ್‌ಗಳು, ಚಿತ್ರೀಕರಣದ ಶ್ರೀಮಂತಿಕೆಯ ನಡುವೆ ಆಕರ್ಷಿಸುವ ನಾನಾ ಪಾತ್ರಗಳಲ್ಲಿ ಸನ್ಯಾದೇವಿ ಪಾತ್ರವೂ ಒಂದು.

ಸೂರ್ಯದೇವನ ಮಡದಿ ಸನ್ಯಾದೇವಿ, ಆಕೆಯ ಪ್ರತಿರೂಪ ಛಾಯಾ ಪಾತ್ರದಲ್ಲಿ ನಟಿಸುತ್ತಿರುವವರು ನಿಖಿಲಾ ರಾವ್‌. ದ್ವಿಪಾತ್ರಾಭಿನಯಕ್ಕೆ ಒಗ್ಗಿಕೊಂಡು ತಾಯಿಯ ಮಮತೆಯನ್ನು ಅಭಿನಯದಲ್ಲಿ ಧಾರಾಕಾರವಾಗಿ ಹರಿಬಿಡುತ್ತಿರುವ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಮಿಂಚಿದ ತಾರೆ.

ನಿಖಿಲಾ ಅವರ ತವರೂರು ಮೈಸೂರು. ಮನಶಾಸ್ತ್ರದಲ್ಲಿ ಅವರು ಪದವಿ ಪಡೆದಿದ್ದಾರೆ. ಎಳವೆಯಿಂದಲೂ ನಟನಾ ಕ್ಷೇತ್ರದ ಬಗೆಗೆ ಅಂಥ ಒಲವಿದ್ದವರೇನೂ ಆಗಿರಲಿಲ್ಲ ನಿಖಿಲಾ. ಆದರೆ ಬೇಸಿಗೆ ರಜೆಯಲ್ಲಿ ವಿಭಿನ್ನ ಕ್ಯಾಂಪ್‌ಗಳಲ್ಲಿ ಅವರು ತಪ್ಪದೇ ಭಾಗವಹಿಸುತ್ತಿದ್ದರು. ಹೀಗೆ ಭಾಗವಹಿಸಿದ ಕ್ಯಾಂಪ್‌ಗಳಲ್ಲಿ ಅವರನ್ನು ಹೆಚ್ಚು ಆಕರ್ಷಿಸಿದ್ದು ರಂಗಭೂಮಿ ತರಬೇತಿ. ರಂಗಭೂಮಿಯ ಬಗೆಗೆ ಒಲವು ಬೆಳೆಸಿಕೊಂಡ ನಿಖಿಲಾ ಮಂಡ್ಯ ರಮೇಶ್‌ ಅವರ ‘ನಟನಾ ಮೈಸೂರು’ ಗರಡಿಯಲ್ಲಿ ಪಳಗಿದವರು. ‘ನಟನೆಯಷ್ಟೇ ಅಲ್ಲ, ಬದುಕಿನ ನಾನಾ ಘಟ್ಟಕ್ಕೆ ಬೇಕಾಗುವ ಅನೇಕ ಪಾಠಗಳನ್ನು ರಂಗಭೂಮಿ ಕಲಿಸುತ್ತದೆ. ನನ್ನೆಲ್ಲಾ ಸಾಧನೆಗೆ ರಂಗಭೂಮಿ ನೀಡಿದ ಪಾಠವೇ ಕಾರಣ’ ಎಂದು ವಿನಯವಂತಿಕೆ ಮೆರೆಯುತ್ತಾರೆ ನಿಖಿಲಾ. ಅಂದಹಾಗೆ ಬೆಂಗಳೂರಿಗೆ ಬಂದಮೇಲೆ ನಿಖಿಲಾ ಬೆನಕ ರಂಗತಂಡದಲ್ಲಿಯೂ ಅಭಿನಯಿಸಿದ್ದಾರೆ. ಹಯವದನ ನಾಟಕದ ಪದ್ಮಿನಿ ಪಾತ್ರ ಅವರಿಗೆ ಹೆಚ್ಚು ಖುಷಿ ಕೊಟ್ಟಿದೆ.

‘ನಟನಾ ಮೈಸೂರು’ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿರುವ ನಿಖಿಲಾ, ಟೀವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದು ಬಿ.ಸುರೇಶ್‌ ನಿರ್ದೇಶನದ ಪ್ರೀತಿ ಪ್ರೇಮ ಧಾರಾವಾಹಿ ಮೂಲಕ. ಅಲ್ಲಿಂದ ದೇವಿ, ಚಿ.ಸೌ.ಸಾವಿತ್ರಿ, ಸೊಸೆ, ಶನಿ ಹೀಗೆ ಬೇರೆ ಬೇರೆ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದಾರೆ. ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿಯೂ ಅವರು ಅಭಿನಯಿಸಿದ್ದಾರೆ. ಅಲ್ಲದೆ ತೆಲುಗು, ತಮಿಳು ಭಾಷೆಯಲ್ಲಿ ಸಾಕಷ್ಟು ಅವಕಾಶ ಗಿಟ್ಟಿಸಿಕೊಂಡು ಅಲ್ಲಿಯೂ ಸೈ ಎನಿಸಿಕೊಂಡಿರುವ ನಿಖಿಲಾ ಶ್ರೀಲಂಕಾ ವಾಹಿನಿಯೊಂದರ ಧಾರಾವಾಹಿಯಲ್ಲೂ ಅಭಿನಯಿಸಿದ ಅನುಭವ ಹೊಂದಿದ್ದಾರೆ.

‘ನಾನು ಆಯ್ದುಕೊಳ್ಳುವ ಪ್ರತಿ ಪಾತ್ರ ವಿಭಿನ್ನವಾಗಿರಬೇಕು ಎನ್ನುವುದಷ್ಟೇ ನನ್ನ ಮಾನದಂಡ. ಹೀಗಾಗಿ ಹಳ್ಳಿ ಹುಡುಗಿ, ಆಧುನಿಕ ಮಹಿಳೆ, ಗೃಹಿಣಿ, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಸೊಸೆ ಧಾರಾವಾಹಿಯಲ್ಲಿ ನನ್ನದು ಖಳ ನಾಯಕಿ ಪಾತ್ರ. ನಾನು ಅಭಿನಯಿಸಿದ ಎಲ್ಲಾ ಪಾತ್ರಗಳನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡು ಹರಸಿದ್ದಾರೆ. ಶನಿ ಧಾರಾವಾಹಿಯ ಪಾತ್ರವೂ ನನ್ನ ಪ್ರತಿಭೆಗೆ ಸವಾಲೊಡ್ಡುವಂಥ ಪಾತ್ರವೇ. ಹೀಗಾಗಿ ಒಪ್ಪಿಕೊಂಡಿದ್ದೇನೆ. 13 ಸಿನಿಮಾ ಚಿತ್ರಕಥೆ ಓದಿದೆ. ಯಾವುದೂ ಇಷ್ಟವಾಗಲಿಲ್ಲ ಎನ್ನುವ ಕಾರಣಕ್ಕೆ ಬೇರೆ ಸಿನಿಮಾ ಮಾಡಿಲ್ಲ’ ಎನ್ನುತ್ತಾರೆ ನಿಖಿಲಾ.

ಸದ್ಯ ಶನಿ ಧಾರಾವಾಹಿಯಲ್ಲಿ ಬ್ಯುಸಿ ಆಗಿರುವ ನಿಖಿಲಾ ಹೇಳುವುದು ಹೀಗೆ. ‘ನಾವು ಮಾಡುವ ಪಾತ್ರ ಮೊದಲು ನಮಗೆ ಇಷ್ಟವಾಗಬೇಕು. ನಾವು ಏನೇ ಮಾಡಿದರೂ ಖುಷಿ ಬಹುಮುಖ್ಯ. ಸನ್ಯಾದೇವಿ ಹಾಗೂ ಛಾಯಾ ದ್ವಿಪಾತ್ರ ಕಷ್ಟ ಎನಿಸಿದರೂ ನನಗೆ ಖುಷಿ ಕೊಡುತ್ತಿದೆ. ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸೆಟ್ಟಿಂಗ್‌ಗಳು ಅದ್ದೂರಿಯಾಗಿವೆ. ಹಾಗೆಯೇ ನಾವು ತೊಡುವ ಆಭರಣಗಳು ಕೂಡ. ನಾನು ಅಭಿನಯದುದ್ದಕ್ಕೂ ಸುಮಾರು ಹತ್ತು ಕೆ.ಜಿ.ಯನ್ನು ಮೈಮೇಲೆ ಹೊತ್ತುಕೊಂಡು ಅಭಿನಯಿಸಬೇಕು. ಇದರಿಂದ ಸುಸ್ತೆನಿಸಿದರೂ ನಟನೆ ಖುಷಿ ನೀಡುತ್ತದೆ’.

ಫಿಟ್‌ನೆಸ್‌ ಬಗೆಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದ ನಿಖಿಲಾ ಅವರಿಗೆ ಚೆಲುವು ದೇವರು ಕೊಟ್ಟ ವರ. ‘ನಾನು ತಿನ್ನೋದು ಕಮ್ಮಿನೇ. ಎರಡು ದಿನ ತಿಂದಿಲ್ಲ ಎಂದರೂ ಏನೂ ಆಗುವುದಿಲ್ಲ’ ಎಂದು ನಗುವ ಅವರು ದೇಹ ಹಾಗೂ ಮಾನಸಿಕ ಸೌಂದರ್ಯಕ್ಕಾಗಿ ನಿತ್ಯ ಸೂರ್ಯ ನಮಸ್ಕಾರದ ಮೊರೆ ಹೋಗಿದ್ದಾರೆ. ‘ನನ್ನ ಮುಖವನ್ನು ನಾನು ಯಾರ ಕೈಯಲ್ಲೂ ನೀಡಲಾರೆ’ ಎನ್ನುವ ಮನೋಧರ್ಮ ಅವರದ್ದು. ಅಲ್ಲದೆ ರಂಗಭೂಮಿಯವರಾದ್ದರಿಂದ ಮೇಕಪ್‌ ಕಲೆಯನ್ನು ತಕ್ಕಮಟ್ಟಿಗೆ ಕಲಿತಿದ್ದಾರೆ. ನಟನಾ ಸಂದರ್ಭದಲ್ಲಿಯೂ ನಿಖಿಲಾ ತಾವೇ ಮೇಕಪ್‌ ಮಾಡಿಕೊಂಡು ತಯಾರಾಗುತ್ತಾರೆ.

* ‘ಶನಿ’ ಎನ್ನುವುದು ಕೆಲವರಿಗೆ ಭೀತಿ ಹುಟ್ಟಿಸುವ ಗ್ರಹ. ಹಲವರಿಗೆ ಅಭಯ ಕೊಡುವ ದೇವರು. ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಈ ಪುರಾಣ ಪ್ರಸಿದ್ಧ ದೇವತೆಯ ತಾಯಿ ‘ಸನ್ಯಾದೇವಿ’ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

-ನಿಖಿಲಾ ರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT