ವಿಶ್ವಕಪ್ ಜಯಕ್ಕೆ ಏಣಿಯಾಗಲಿ ಏಷ್ಯಾ ಕಪ್

ಭಾರತದಲ್ಲಿ ಮಹಿಳೆಯರು ಕ್ರೀಡಾಕ್ಷೇತ್ರದಲ್ಲಿ ಬೆಳೆಯುವುದು ಸುಲಭದ ಮಾತಲ್ಲ. ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಂಡದಲ್ಲಿರುವ ಆಟಗಾರ್ತಿಯರು ಇಂತಹ ಅಡೆತಡೆಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿದ್ದಾರೆ

ವಿಶ್ವಕಪ್ ಜಯಕ್ಕೆ ಏಣಿಯಾಗಲಿ ಏಷ್ಯಾ ಕಪ್

ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆಯನ್ನು ಭಾರತದ ಮಹಿಳಾ ಹಾಕಿಪಟುಗಳು ಮಾಡಿದ್ದಾರೆ. ರಾಣಿ ರಾಂಪಾಲ್ ನಾಯಕತ್ವದ ತಂಡವು ಮೂರು ದಿನಗಳ ಹಿಂದೆ ಜಪಾನ್‌ನಲ್ಲಿ ನಡೆದ ವನಿತೆಯರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬಂದಿದೆ. 13 ವರ್ಷಗಳ ನಂತರ ಭಾರತ ತಂಡ ಈ ಸಾಧನೆ ಮಾಡಿದೆ. ಇದರೊಂದಿಗೆ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಹೋದ ತಿಂಗಳು ಪುರುಷರ ತಂಡವು ಢಾಕಾದಲ್ಲಿ ಏಷ್ಯಾ ಕಪ್ ಗೆದ್ದಿತ್ತು. ಇದೀಗ ಮಹಿಳೆಯರೂ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಅದರಲ್ಲೂ ಲೀಗ್ ಮತ್ತು ನಾಕೌಟ್ ಹಂತದ ಎಲ್ಲ ಪಂದ್ಯಗಳನ್ನೂ ಗೆದ್ದು ಫೈನಲ್ ತಲುಪಿದ್ದ ತಂಡದ ಸಾಧನೆ ಸಣ್ಣದಲ್ಲ. ಅಂತಿಮ ಸುತ್ತಿನಲ್ಲಿ ತನಗಿಂತ ಬಲಿಷ್ಠವಾದ ಚೀನಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿದ್ದು ಕೂಡ ಮಹತ್ಸಾಧನೆ.

ಭಾರತದಲ್ಲಿ ಮಹಿಳೆಯರು ಕ್ರೀಡಾಕ್ಷೇತ್ರದಲ್ಲಿ ಬೆಳೆಯುವುದು ಸುಲಭದ ಮಾತಲ್ಲ. ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಂಡದಲ್ಲಿರುವ ಆಟಗಾರ್ತಿಯರು ಇಂತಹ ಅಡೆತಡೆಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿದ್ದಾರೆ. ತಂಡವು ಟೂರ್ನಿಗೆ ತೆರಳುವ ಒಂದು ತಿಂಗಳ ಮುನ್ನ ಕೋಚ್ ಬದಲಾವಣೆ ಮಾಡಲಾಗಿತ್ತು. ಪುರುಷರ ಹಾಕಿ ತಂಡದ ಕೋಚ್ ಸ್ಥಾನದಿಂದ ರೋಲಂಟ್ ಓಲ್ಟಮನ್ಸ್‌ ಅವರನ್ನು ಹಾಕಿ ಇಂಡಿಯಾ ವಜಾಗೊಳಿಸಿತ್ತು. ಮಹಿಳಾ ತಂಡದ ಕೋಚ್ ಆಗಿದ್ದ ಶೋರ್ಡ್ ಮ್ಯಾರಿಜ್ ಅವರನ್ನು ಪುರುಷರ ತಂಡಕ್ಕೆ ನೇಮಕ ಮಾಡಲಾಯಿತು. ಆ ಸ್ಥಾನಕ್ಕೆ ಹರೇಂದ್ರಸಿಂಗ್ ನೇಮಕವಾಗಿದ್ದರು. ಈ ಪ್ರಕರಣದಿಂದ ತಂಡವು ವಿಚಲಿತವಾಗಲಿಲ್ಲ. ಹರೇಂದ್ರ ಕೂಡ ಹೆಚ್ಚಿನ ಬದಲಾವಣೆ ಮಾಡದೇ ಇದ್ದದ್ದು ಫಲ ನೀಡಿದೆ. ಈ ವಿಜಯವು ಉನ್ನತ ಸಾಧನೆಗೆ ಏಣಿಯಾಗಬೇಕು.

ಈಗ ತಂಡದ ಮುಂದೆ ನಿಜವಾದ ಸವಾಲು ಇದೆ. ವಿಶ್ವಕಪ್ ಗೆಲುವಿನ ಕನಸು ಸಾಕಾರಗೊಳಿಸಿಕೊಳ್ಳುವ ಅವಕಾಶ ಇದೆ. ಆದರೆ, ಏಷ್ಯಾ ಕಪ್ ಟೂರ್ನಿಗೂ, ವಿಶ್ವ ಟೂರ್ನಿಗೂ ಅಪಾರ ವ್ಯತ್ಯಾಸವಿರುತ್ತದೆ. ಯುರೋಪ್ ದೇಶಗಳ ಕಠಿಣ ಸವಾಲನ್ನು ಮೆಟ್ಟಿ ನಿಲ್ಲಬೇಕು. ಆ ತಂಡಗಳ ಆಟಗಾರ್ತಿಯರಿಗೆ ಸರಿಸಮನಾಗಿ ದೈಹಿಕ, ಮಾನಸಿಕ ಸಾಮರ್ಥ್ಯ ಬೆಳೆಸಿಕೊಳ್ಳುವ ಅಗತ್ಯವಿದೆ. ಆ ನಿಟ್ಟಿನಲ್ಲಿ ತರಬೇತಿ ಸೌಲಭ್ಯಗಳು ಬೆಳೆಯಬೇಕು. ಏಷ್ಯಾ ಕಪ್ ಟೂರ್ನಿಯ ನಂತರ ಹಾಕಿ ತಂಡವು ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಜನರ ಜಯಘೋಷಗಳನ್ನು ಕೇಳಿದ ಆಟಗಾರ್ತಿಯರು ಪುಳಕಿತರಾದರು.

‘ಭಾರತ ಸರ್ಕಾರ, ಹಾಕಿ ಇಂಡಿಯಾ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನೀಡಿರುವ ಸೌಲಭ್ಯಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ನಾಯಕಿ ರಾಣಿ ಹೇಳಿದ್ದರು. ಅದೇ ಸಂದರ್ಭದಲ್ಲಿ  ಆಟಗಾರ್ತಿಯರಿಗೆ ತಲಾ ₹ 1 ಲಕ್ಷ ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿತ್ತು. ಇದೇನೂ ದೊಡ್ಡ ಮೊತ್ತವಲ್ಲ. ಅಗತ್ಯವಿರುವ ಆಟಗಾರ್ತಿಯರಿಗೆ ಉದ್ಯೋಗ ನೀಡುವ ಹೊಣೆಯನ್ನು ಸರ್ಕಾರ ನಿಭಾಯಿಸಬೇಕು. ಭಾರತವು ಫೈನಲ್ ಪಂದ್ಯದ ಶೂಟೌಟ್‌ನಲ್ಲಿ ಜಯಿಸಲು ಪ್ರಮುಖ ಕಾರಣರಾಗಿದ್ದ ಗೋಲ್‌ಕೀಪರ್ ಸವಿತಾ ಒಂಬತ್ತು ವರ್ಷಗಳಿಂದ ತಂಡದಲ್ಲಿದ್ದಾರೆ. ಆದರೆ ಅವರಿಗೆ ಇದುವರೆಗೆ ಉದ್ಯೋಗ ಲಭಿಸಿಲ್ಲ.

ಹಾಕಿಯ ಬೆಳವಣಿಗೆಗೆ ಉತ್ತೇಜನ ಕ್ರಮಗಳನ್ನು ಕೈಗೊಳ್ಳಲು ಕೂಡ ಇದು ಸಕಾಲ. ಶಾಲೆ, ಕಾಲೇಜುಗಳಲ್ಲಿ ಬಾಲಕಿಯರು ಮತ್ತು ಮಹಿಳೆಯರ ಹಾಕಿ ತಂಡಗಳನ್ನು ಬೆಳೆಸಬೇಕು. ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ಜಾರ್ಖಂಡ್, ಛತ್ತೀಸಗಡ, ಒಡಿಶಾದ ಬುಡಕಟ್ಟು ಸಮುದಾಯಗಳಿಂದ ಹಾಗೂ ಹರಿಯಾಣ, ಪಂಜಾಬ್‌ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರ್ತಿಯರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.  ಆದರೆ ಕರ್ನಾಟಕದ ಯಾರೂ ಈ ಬಾರಿ ತಂಡದಲ್ಲಿರಲಿಲ್ಲ. ರಾಜ್ಯದ ಕ್ರೀಡಾ ಆಡಳಿತ ವ್ಯವಸ್ಥೆಯು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿಭಾವಂತರನ್ನು ಶೋಧ ಮಾಡಿ ಬೆಳೆಸುವತ್ತ ಚಿತ್ತ ಹರಿಸಬೇಕು.

Comments
ಈ ವಿಭಾಗದಿಂದ ಇನ್ನಷ್ಟು
ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

ಸಂಪಾದಕೀಯ
ಸಿ‍‍ಪಿಎಂ ರಾಜಕೀಯ ನಡೆ ಮರುಚಿಂತನೆಯ ದಿಕ್ಸೂಚಿ

25 Apr, 2018
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

ಸಂಪಾದಕೀಯ
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

23 Apr, 2018
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

ಅತ್ಯಾಚಾರಕ್ಕೆ ಮರಣ ದಂಡನೆ
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

22 Apr, 2018
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಸಂಪಾದಕೀಯ
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

20 Apr, 2018
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಸಂಪಾದಕೀಯ
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

19 Apr, 2018