ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ವಿದ್ಯಾರ್ಥಿಯಿಂದಲೇ ಕೊಲೆ?

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಗುರುಗ್ರಾಮ: ನಗರದ ರಿಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯ ಏಳು ವರ್ಷದ ಬಾಲಕ ಪ್ರದ್ಯುಮ್ನ ಠಾಕೂರ್‌ ಕೊಲೆ ಪ್ರಕರಣವೀಗ ಕುತೂಹಲ ತಿರುವು ಪಡೆದುಕೊಂಡಿದೆ.

ಕಳೆದ ಸೆ.8ರಂದು ಶಾಲೆಯ ಶೌಚಾಲಯದಲ್ಲಿ ಕತ್ತುಸೀಳಿ ಈ ಬಾಲಕನನ್ನು ಕೊಲೆ ಮಾಡಲಾಗಿತ್ತು. ಶಾಲೆಯ ಬಸ್‌ ಕಂಡಕ್ಟರ್‌ ಅಶೋಕ್ ಕುಮಾರ್‌ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಈ ಕೊಲೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಹೇಳಿದ್ದರು. ಆದರೆ ಇದುವರೆಗೆ ಸಿಬಿಐಗೆ ಅಶೋಕ್‌ ಕುಮಾರ್‌ ವಿರುದ್ಧ ಸಾಕ್ಷ್ಯಾಧಾರಗಳು ದೊರೆತಿಲ್ಲ. ಬದಲಿಗೆ 11ನೇ ತರಗತಿಯ ವಿದ್ಯಾರ್ಥಿ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ನಡೆಯಬೇಕಿದ್ದ ಪೋಷಕರು ಮತ್ತು ಶಿಕ್ಷಕರ ಸಭೆ ಹಾಗೂ ಪರೀಕ್ಷೆಯನ್ನು ಮುಂದೂಡುವ ಸಲುವಾಗಿ ವಿದ್ಯಾರ್ಥಿ ಈ ಕೃತ್ಯ ಎಸಗಿರುವ ಶಂಕೆಯನ್ನು ಸಿಬಿಐ ವ್ಯಕ್ತಪಡಿಸಿದೆ. ಈ ಸಂಬಂಧ 16ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ಹೇಳಿದ್ದಾರೆ.

‘11ನೇ ತರಗತಿಯ ವಿದ್ಯಾರ್ಥಿ ಅಭ್ಯಾಸದಲ್ಲಿ ತುಂಬಾ ಹಿಂದೆ ಇದ್ದಾನೆ. ಅದೇ ವಾರದಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆ ಹಾಗೂ ಪರೀಕ್ಷೆ ಕೂಡ ಇತ್ತು. ಬಾಲಕನ ಕೊಲೆ ಮಾಡಿದರೆ ಶಾಲೆಗೆ ರಜೆ ಸಿಗುತ್ತದೆ ಹಾಗೂ ಪರೀಕ್ಷೆ ಮುಂದಕ್ಕೆ ಹೋಗುತ್ತದೆ ಎಂಬ ಕಾರಣದಿಂದ ಈ ಕೃತ್ಯ ಎಸಗಿರುವ ಶಂಕೆ ಇದೆ. ಆದ್ದರಿಂದ ಬಾಲನ್ಯಾಯ ಕಾಯ್ದೆ ಅಡಿ ಆತನ ವಿರುದ್ಧ ದೂರು ದಾಖಲು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ಶಾಲೆಯ ಸಿಸಿಟಿವಿ ಫುಟೇಜ್‌ ಪರಿಶೀಲನೆ ಮಾಡಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ ಓಡಾಡುತ್ತಿದ್ದ ಸಂದೇಹಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದರು.

ಪ್ರಕರಣವನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಸೇರಿದಂತೆ ಸಾರ್ವಜನಿಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿ ಕೊಲೆ ಪ್ರಕರಣದ ತನಿಖೆಯನ್ನು ಹರಿಯಾಣ ಸರ್ಕಾರ ವಿಶೇಷ ತನಿಖಾ ತಂಡಕ್ಕೆ(ಎಸ್‌ಐಟಿ) ವಹಿಸಿತ್ತು. ಆದರೆ, ಬಾಲಕನ ತಂದೆ ವರುಣ್ ಠಾಕೂರ್‌ ಮತ್ತು ಕುಟುಂಬ ಸದಸ್ಯರು ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಮಾನಸಿಕ ಸಮಸ್ಯೆಯ ಬಾಲಕ?: ಆರೋಪಿ ವಿದ್ಯಾರ್ಥಿಯು ಕಳೆದ ಕೆಲವು ತಿಂಗಳಿಂದ ಮಾನಸಿಕ ಚಿಕಿತ್ಸೆ ಪಡೆಯುತ್ತಿದ್ದ. ಆತನಿಗೆ ಸಿಟ್ಟು ನಿಯಂತ್ರಿಸಲು ಸಾಧ್ಯವಾಗದ ಸಮಸ್ಯೆಯೂ ಇದೆ. ಕಲಿಕೆಯಲ್ಲಿಯೂ ಆತ ಉತ್ತಮವಾಗಿರಲಿಲ್ಲ ಎಂದು ಸಿಬಿಐ ಹೇಳಿದೆ.

ಪೂರ್ವಯೋಜಿತ ಅಲ್ಲ: ಪ್ರದ್ಯುಮ್ನನ ಕೊಲೆ ಪೂರ್ವಯೋಜಿತ ಅಲ್ಲ. ಆದರೆ ಕೊಲೆ ನಡೆದ ದಿನ ಶಾಲೆಗೆ ಬರುವಾಗ ವಿದ್ಯಾರ್ಥಿ ಚೂರಿಯೊಂದನ್ನು ತಂದಿದ್ದ. ಅದು ಶಾಲೆಯ ಶೌಚಾಲಯದಲ್ಲಿ ಸಿಕ್ಕಿದೆ. ಸೆಪ್ಟೆಂಬರ್‌ 8ರಂದು ಕೊಲೆ ಮಾಡಲು ಆರೋಪಿ ನಿರ್ಧರಿಸಿದ್ದ. ಆದರೆ ಯಾರನ್ನು ಕೊಲೆ ಮಾಡಬೇಕು ಎಂಬುದನ್ನು ನಿರ್ಧರಿಸಿರಲಿಲ್ಲ ಎಂದು ಸಿಬಿಐ ತಿಳಿಸಿದೆ.

ಸುಳಿವು ಸಿಕ್ಕಿದ್ದು ಹೇಗೆ

ವೈಜ್ಞಾನಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ. ಕೊಲೆ ನಡೆದ ಸ್ಥಳದ ಪರೀಕ್ಷೆ, ವಿಧಿವಿಜ್ಞಾನ ವಿಶ್ಲೇಷಣೆ, ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಗಳು ಮತ್ತು ಕರೆ ದಾಖಲೆಗಳ ಪರಿಶೀಲನೆ ಬಳಿಕ ಆರೋಪಿಯ ಬಂಧನ

* ಎಲ್ಲ ಶಂಕಿತರ ಕರೆ ದಾಖಲೆ ಪರಿಶೀಲನೆ.

* ಪ್ರದ್ಯುಮ್ನ ಕೊಲೆಯಾಗಿ ಬಿದ್ದಿದ್ದ ಶೌಚಾಲಯದಿಂದ ಆರೋಪಿ ಹೊರಗೆ ಬರುವುದು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿದೆ. ಪ್ರದ್ಯುಮ್ನ ಶೌಚಾಲಯದಲ್ಲಿ ಇದ್ದಾಗ ಅಲ್ಲಿಗೆ ಆರು ಮಂದಿ ಹೋಗಿದ್ದರು.

* ಕಳೆದ ಕೆಲವು ದಿನಗಳಿಂದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪದೇ ಪದೇ ಹೇಳಿಕೆ ಬದಲಿಸುತ್ತಿದ್ದುದರಿಂದ ಆತನ ಮೇಲಿನ ಸಂಶಯ ಬಲವಾಯಿತು

* ಆರೋಪಿಗೆ ಇನ್ನೂ 18 ವರ್ಷ ತುಂಬಿಲ್ಲ. ಹಾಗಾಗಿ ಬಾಲನ್ಯಾಯ ಕಾಯ್ದೆ ನಿಯಮದಂತೆ ಆತನ ಗುರುತು ಬಹಿರಂಗ ಮಾಡಲಾಗಿಲ್ಲ.
*
ಬಲವಂತದ ತಪ್ಪೊಪ್ಪಿಗೆ: ತಂದೆಯ ಆರೋಪ
ತಮ್ಮ ಮಗನಿಗೆ ತನಿಖಾಧಿಕಾರಿಗಳು ಥಳಿಸಿದ್ದಾರೆ. ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿಸಿದ್ದಾರೆ ಎಂದು ಆರೋಪಿ ಬಾಲಕನ ತಂದೆ ಹೇಳಿದ್ದಾರೆ. ಪೊಲೀಸರ ತನಿಖೆಯ ಬಗ್ಗೆ ತಮಗೆ ಮೊದಲೇ ಇದ್ದ ಅನುಮಾನ ಈಗ ಸಾಬೀತಾಗಿದೆ. ಈಗ ಅವರು ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಪ್ರದ್ಯುಮ್ನನ ತಂದೆ ವರುಣ್‌ ಠಾಕೂರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT