ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರಿನಲ್ಲಿ ಚೊಚ್ಚಲ ರಣಜಿ ಸಂಭ್ರಮ

ಇಂದಿನಿಂದ ಕರ್ನಾಟಕ–ದೆಹಲಿ ನಡುವಣ ಪಂದ್ಯ; ಮಯಂಕ್‌ ಅಗರವಾಲ್‌; ಸಮರ್ಥ್‌ ಮೇಲೆ ಕಣ್ಣು
Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಆಲೂರಿನ ಎರಡನೇ ಮೈದಾನದಲ್ಲಿ ಈಗ ಚೊಚ್ಚಲ ರಣಜಿ ಪಂದ್ಯದ ಸಂಭ್ರಮ ಗರಿಗೆದರಿದೆ.

ಗುರುವಾರದಿಂದ ನಾಲ್ಕು ದಿನಗಳ ಕಾಲ ನಡೆಯುವ ಹಣಾಹಣಿಯಲ್ಲಿ ಆತಿಥೇಯ ಕರ್ನಾಟಕ ತಂಡ ದೆಹಲಿ ಸವಾಲಿಗೆ ಎದೆಯೊಡ್ಡಲಿದೆ.

ಹೊಸ ಕೋಚ್‌ಗಳಾದ ಪಿ.ವಿ.ಶಶಿಕಾಂತ್‌ ಮತ್ತು ಜಿ.ಕೆ.ಅನಿಲ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ
ಆರ್‌.ವಿನಯ್‌ ಕುಮಾರ್‌ ಪಡೆ ಹಿಂದಿನ ಮೂರು ಪಂದ್ಯಗಳಲ್ಲೂ ಗೆದ್ದು ಬೀಗುತ್ತಿದೆ. ಹೀಗಾಗಿ ದೆಹಲಿ ತಂಡವನ್ನೂ ಸುಲಭವಾಗಿ ಹಣಿದು ಜಯದ ಓಟ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ.

ವಿನಯ್‌ ಸಾರಥ್ಯದ ರಾಜ್ಯ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಶಕ್ತಿಯುತವಾಗಿದೆ. ಹಿಂದಿನ ಪಂದ್ಯಗಳ ಫಲಿತಾಂಶ ಇದಕ್ಕೆ ನಿದರ್ಶನ. ಮಹಾರಾಷ್ಟ್ರ ವಿರುದ್ಧ ಗೆದ್ದ ನಂತರ ತಂಡ ಇನ್ನಷ್ಟು ಕಠಿಣ ತಾಲೀಮು ನಡೆಸಿದೆ. ಹೀಗಾಗಿ ಆಟಗಾರರ ಮನೋಬಲವೂ ಹೆಚ್ಚಿದೆ.

ಮಯಂಕ್‌ ಅಗರವಾಲ್‌ ಮತ್ತು ಆರ್‌.ಸಮರ್ಥ್‌ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರೆ, ಅದರ ಮೇಲೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು  ರನ್‌ ಗೋಪುರ ಕಟ್ಟುತ್ತಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.ಮಯಂಕ್‌ ಅಮೋಘ ಲಯದಲ್ಲಿದ್ದಾರೆ. ಮಹಾರಾಷ್ಟ್ರ ವಿರುದ್ಧ ತ್ರಿಶತಕ ಸಿಡಿಸಿದ್ದ ಅವರು ಈ ಬಾರಿ ಹೆಚ್ಚು ರನ್‌ ಗಳಿಸಿದ (335) ರಾಜ್ಯದ ಆಟಗಾರ ಎನಿಸಿದ್ದಾರೆ. ಸಮರ್ಥ್‌ ಕೂಡ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಬಲ್ಲವರಾಗಿದ್ದಾರೆ. ಅವರ ಖಾತೆಯಲ್ಲಿ 300ರನ್‌ಗಳಿವೆ.

ನ್ಯೂಜಿಲೆಂಡ್‌ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಆತಿಥೇಯರ ಬಲ ಇನ್ನಷ್ಟು ಹೆಚ್ಚಿದಂತಾಗಿದೆ. ಈ ಪಂದ್ಯದಲ್ಲಿ ರಾಹುಲ್‌ ಇನಿಂಗ್ಸ್‌ ಆರಂಭಿಸಿದರೆ, ಮಯಂಕ್‌ ಅಥವಾ ಸಮರ್ಥ್‌ ಮೊದಲ ಕ್ರಮಾಂಕದಲ್ಲಿ ಆಡಬೇಕಾಗಬಹುದು.

ಕರುಣ್‌ ನಾಯರ್‌, ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌ ಮತ್ತು ನಾಯಕ ವಿನಯ್‌ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು. ಆದರೆ ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ ಲಯಕ್ಕೆ ಮರಳಿದರೆ ತಂಡದ ಬಲ ಮತ್ತಷ್ಟು ಹೆಚ್ಚಲಿದೆ.

ಬೌಲಿಂಗ್‌ನಲ್ಲೂ ಆತಿಥೇಯರು ಶಕ್ತಿಯುತವಾಗಿದ್ದಾರೆ. ಆಲೂರಿನ ಅಂಗಳದಲ್ಲಿ ಬೆಳಿಗ್ಗೆ ಇಬ್ಬನಿ ಬೀಳುವುದರಿಂದ ದಿನದ ಮೊದಲ ಒಂದು ಗಂಟೆ ಪಿಚ್‌ ವೇಗಿಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇರುತ್ತದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ವಿನಯ್‌ ಮತ್ತು ಅಭಿಮನ್ಯು ಮಿಥುನ್‌ ಇದರ ಲಾಭ ಎತ್ತಿಕೊಂಡರೆ ರಾಜ್ಯ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಬಹುದು.

ಸ್ಪಿನ್ನರ್‌ಗಳಾದ ಕೆ.ಗೌತಮ್‌,ಶ್ರೇಯಸ್‌ ಗೋಪಾಲ್‌ ಅವರೂ ತಮ್ಮ ಬತ್ತಳಿಕೆಯಲ್ಲಿರುವ ಸ್ಪಿನ್‌ ಅಸ್ತ್ರವನ್ನು ಪ್ರಯೋಗಿಸಿ ಎದುರಾಳಿಗಳು ತೋಳರಳಿಸದ ಹಾಗೆ ಕಟ್ಟಿಹಾಕಬಲ್ಲ ಸಮರ್ಥರಾಗಿದ್ದಾರೆ. ಇವರ ದಾಳಿಯನ್ನು ದೆಹಲಿ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

‌ಮಿಂಚುವ ತವಕ: ದೆಹಲಿ ತಂಡ ಕೂಡ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.

ಈ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದಿದೆ.  ರಿಷಭ್‌ ಬಳಗದ ಖಾತೆಯಲ್ಲಿ 16 ಪಾಯಿಂಟ್ಸ್‌ ಇದ್ದು ‘ಎ’ ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಕರ್ನಾಟಕ (20) ಅಗ್ರಸ್ಥಾನದಲ್ಲಿದೆ.

ಹೋದ ವರ್ಷ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ದೆಹಲಿ ತಂಡ ಇನಿಂಗ್ಸ್‌ ಮತ್ತು 160ರನ್‌ಗಳಿಂದ ಕರ್ನಾಟಕಕ್ಕೆ ಶರಣಾಗಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 90ರನ್‌ಗಳಿಗೆ ಆಲೌಟ್‌ ಆಗಿತ್ತು. ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ರಿಷಭ್‌ ಪಡೆಗೆ ಈಗ ಉತ್ತಮ ಅವಕಾಶ ಸಿಕ್ಕಿದೆ.

ಗೌತಮ್‌ ಗಂಭೀರ್‌, ಉನ್ಮುಕ್ತ್‌ ಚಾಂದ್, ಪಂತ್‌ ಮತ್ತು ನಿತೀಶ್‌ ರಾಣಾ ಬ್ಯಾಟಿಂಗ್‌ ವಿಭಾಗದಲ್ಲಿ ತಂಡದ ಆಧಾರ ಸ್ತಂಭಗಳಾಗಿದ್ದಾರೆ. ಬೌಲಿಂಗ್‌ನಲ್ಲಿ ನವದೀಪ್‌ ಸೈನಿ, ಮನನ್‌ ಶರ್ಮಾ ಮತ್ತು ಕುಲವಂತ್‌ ಖೇಜ್ರೋಲಿಯಾ ಅವರ ಬಲ ತಂಡದ ಬೆನ್ನಿಗಿದೆ.

ಉಭಯ ತಂಡಗಳ ಬಲಾಬಲವನ್ನು ಅವಲೋಕಿಸಿದರೆ, ಕರ್ನಾಟಕ ತಂಡ ದೆಹಲಿ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಹೀಗಾಗಿ ತವರಿನಲ್ಲಿ ಆತಿಥೇಯರಿಗೆ ಜಯದ ತೋರಣ ಕಟ್ಟುವ ಅವಕಾಶ ಹೆಚ್ಚು.

‘ಎರಡೂ ತಂಡಗಳಿಗೂ ಪಿಚ್‌ ನೆರವಾಗಲಿದೆ’

‘ಆಲೂರಿನ ಎರಡನೇ ಮೈದಾನದ ಪಿಚ್‌ ಎರಡೂ ತಂಡಗಳಿಗೂ ನೆರವಾಗಲಿದೆ’ ಎಂದು ಕೆಎಸ್‌ಸಿಎ ಮುಖ್ಯ ಪಿಚ್‌ ಕ್ಯುರೇಟರ್‌ ಕೆ.ಶ್ರೀರಾಮ್‌ ತಿಳಿಸಿದ್ದಾರೆ.

ಬುಧವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಆಲೂರಿನಲ್ಲಿ ಬೆಳಿಗ್ಗೆ ಇಬ್ಬನಿ ಬೀಳುವುದರಿಂದ ದಿನದ ಮೊದಲ ಒಂದು ಗಂಟೆ ವೇಗಿಗಳಿಗೆ ಹೆಚ್ಚು ನೆರವಾಗಲಿದೆ. ಆ ನಂತರ ಬ್ಯಾಟ್ಸ್‌ಮನ್‌ಗಳು ಮೇಲುಗೈ ಸಾಧಿಸಬಹುದು. ಕೊನೆಯ ಎರಡು ದಿನ ಪಿಚ್‌ ತಿರುವು ‍ಪಡೆಯಲಿದೆ. ಪಿಚ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಹುಲ್ಲು ಬೆಳೆದಿರುವುದರಿಂದ ಚೆಂಡು ಹೆಚ್ಚು ಪುಟಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT