ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಸುಂಕ ತಪ್ಪಿಸಲು ಮಾರ್ಗ ಬದಲು

Last Updated 9 ನವೆಂಬರ್ 2017, 5:33 IST
ಅಕ್ಷರ ಗಾತ್ರ

ಚಿಟಗುಪ್ಪ:‌ ಹುಮನಾಬಾದ್ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 65ರ ಟೋಲ್ ಗೇಟ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಶುಲ್ಕ ವಸೂಲಿ ಆರಂಭಿಸಲಾಗಿದ್ದು, ಇದರಿಂದ ಸಾರಿಗೆ ಬಸ್‌ಗಳ ಪ್ರಯಾಣಿಕರಿಗೆ ಹೆಚ್ಚುವರಿ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸ್ಥಳೀಯ ಬಸ್‌ಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಟೋಲ್ ಶುಲ್ಕ ಒಂದು ಬಾರಿ ಸಂಚರಿಸಲು ಪ್ರತಿ ಬಸ್‌ಗೆ ₹ 265 ಮತ್ತು ಹೋಗುವ ಹಾಗೂ ಬರುವ ಮಾರ್ಗ ಎರಡು ಸೇರಿ ₹ 400 ದರ ನಿಗದಿ ಮಾಡಲಾಗಿದೆ. ಈ ಹೊರೆಯನ್ನು ಈ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಂದ ಹೆಚ್ಚುವರಿ ₹ 8 ದರ ನಿಗದಿ ಪಡಿಸಿ ವಸೂಲಿ ಮಾಡುತ್ತಿತ್ತು. ನಿಗಮದ ಈ ನಿರ್ಧಾರಕ್ಕೆ ನಾಗರಿಕರಿಂದ ವಿರೋಧ ಬಂದ ಹಿನ್ನೆಲೆಯಲ್ಲಿ ಟೋಲ್‌ ಮಾರ್ಗವನ್ನು ಬದಲಾಯಿಸಲಾಗಿದೆ.

ವೇಗದೂತ ಬಸ್‌ಗಳು ಹೆದ್ದಾರಿ ಮೂಲಕವೇ ಹಾದು ಹೋಗುತ್ತಿದ್ದು, ಈ ಮಾರ್ಗದ ಪ್ರಯಾಣಿಕರಿಗೆ ಈಗಾಗಲೇ ಹೆಚ್ಚುವರಿಯಾಗಿ ಟೋಲ್‌ ಶುಲ್ಕವನ್ನು ₹8 ನಿಗದಿ ಪಡಿಸಲಾಗಿದೆ.

ಸ್ಥಳೀಯ ಮಾರ್ಗಗಳ ಬಸ್‌ಗಳಲ್ಲಿ ಗ್ರಾಮೀಣ ಮಧ್ಯಮ ವರ್ಗದ ನಾಗರಿಕರು ಸಂಚರಿಸುವುದರಿಂದ ಅವರಿಗೆ ಟೋಲ್ ಶುಲ್ಕ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಇಲಾಖೆ ಬಸ್ ಮಾರ್ಗವನ್ನೇ ಬದಲಾಯಿಸಿದೆ. ಹುಮನಾಬಾದ್‌ದಿಂದ ಬರುವ ಬಸ್‌ಗಳು ಮಂಗಲಗಿ ಹತ್ತಿರದ ಉಡಬಾಳ ಕ್ರಾಸ್‌ದಿಂದ ನಾಗನಕೇರಾ ಗ್ರಾಮದಿಂದ ಮನ್ನಾ ಏಖ್ಖೇಳಿ ಗ್ರಾಮಕ್ಕೆ ಬರುತ್ತಿವೆ. ಈ ಮಾರ್ಗಕ್ಕೆ ₹ 3 ಹೆಚ್ಚುವರಿ ಟಿಕೆಟ್‌ ದರ ನಿಗದಿ ಪಡಿಸಲಾಗಿದೆ.

‘ಪ್ರಯಾಣಿಕರಿಗೆ ಟೋಲ್ ಶುಲ್ಕದ ಹೊರೆ ತಪ್ಪಿಸಲು ಮಾರ್ಗ ಬದಲಾವಣೆ ಮಾಡಿದ್ದರಿಂದ 15 ನಿಮಿಷದ ಸಂಚಾರ ಅವಧಿ ಹೆಚ್ಚಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ’ ಎಂದು ಪ್ರಯಾಣಿಕರಾದ ಗುರಲಿಂಗಪ್ಪ, ಶಿವಕುಮಾರ್, ರಾಜಕುಮಾರ್ ಹೇಳಿದರು.

‘ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಎಲ್ ಅಂಡ್ ಟಿ ಕಂಪೆನಿ ಟೋಲ್ ಶುಲ್ಕ ವಸೂಲಿ ಮಾಡುತ್ತಿದೆ. ಸರ್ಕಾರ ತಕ್ಷಣ ಹೆದ್ದಾರಿ ಮೇಲೆ ಬರುವ ಎಲ್ಲ ಗ್ರಾಮಗಳ ಸರ್ವಿಸ್ ರಸ್ತೆಗಳ ಎರಡು ಬದಿಗಳಲ್ಲಿ ಪ್ರಯಾಣಿಕರ ತಂಗುದಾಣ, ಶೌಚಾಲಯ, ಕುಡಿಯುವ ನೀರು, ರಸ್ತೆ ದೀಪಗಳ ಸೌಲಭ್ಯ ಕಲ್ಪಿಸಬೇಕು’ ಎಂದು ರೇವಣಸಿದ್ದಪ್ಪ ಡೊಂಗರಗಾಂವ್, ಮಾರುತಿ, ಬಸವರಾಜ್ ಒತ್ತಾಯಿಸಿದ್ದಾರೆ.

ವಿರೇಶ ಮಠಪತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT