ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ ₹ 5.25 ಲಕ್ಷ ಪರಿಹಾರ ನಿಗದಿ

Last Updated 9 ನವೆಂಬರ್ 2017, 5:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಳ್ಯಾಪುರದಿಂದ ಕಾಚಳ್ಳಿವರೆಗೆ ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ‘ಪಾವರ್‌ ಗ್ರಿಡ್‌ ಕಾರ್ಪೊರೇಷನ್‌ ಆಫ್ ಇಂಡಿಯಾ’ ನಿರ್ಮಿಸುತ್ತಿರುವ ಹೈಟೆನ್ಷನ್‌ ವಿದ್ಯುತ್‌ ಮಾರ್ಗಕ್ಕೆ ಭೂಮಿ ಕೊಟ್ಟ ರೈತರಿಗೆ ಪ್ರತಿ ಎಕರೆಗೆ ₹ 5.25 ಲಕ್ಷ ಪರಿಹಾರ ನೀಡಲು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನ ತೆಗೆದು ಕೊಳ್ಳಲಾಯಿತು.

ಶಿಡ್ಲಘಟ್ಟ ತಾಲ್ಲೂಕಿನ ರೈತ ಮುಖಂಡರು, ಪವರ್ ಗ್ರಿಡ್‌ನ ಉಪ ಪ್ರಧಾನ ವ್ಯವಸ್ಥಾಪಕರಾದ ಕಿಶೋರ್‌ ಮತ್ತು ಯು.ಪಿ.ಸಿಂಗ್ ಅವರ ಉಪಸ್ಥಿತಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಅನುರಾಧಾ ಅವರು ಮುಖಂಡರು ಮತ್ತು ಅಧಿಕಾರಿಗಳ ವಾದಗಳನ್ನು ಆಲಿಸಿದರು.

ರೈತ ಮುಖಂಡರು ಸಭೆಯಲ್ಲಿ ಪ್ರತಿ ಎಕರೆಗೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅದಕ್ಕೆ ಅಧಿಕಾರಿಗಳು ಒಪ್ಪಲಿಲ್ಲ. ಅಂತಿಮವಾಗಿ ಅನುರಾಧಾ ಅವರು ಪ್ರತಿ ಎಕರೆಗೆ ₹ 5.25 ಲಕ್ಷ ಪರಿಹಾರ ನಿಗದಿ ಮಾಡಿ ಎರಡು ಕಡೆಯವರನ್ನು ಒಪ್ಪಿಸಿದರು. ಇದೇ ವೇಳೆ ಅವರು ಅಧಿಕಾರಿಗಳಿಗೆ ಈಗಾಗಲೇ ಪರಿಹಾರ ಪಡೆದ ರೈತರಿಗೆ ಬಾಕಿ ಹಣ ನೀಡಬೇಕು ಎಂದು ಸೂಚಿಸಿದರು. ಅದಕ್ಕೆ ಅಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಶಿಡ್ಲಘಟ್ಟ ತಹಶೀಲ್ದಾರ್ ಅಜೀತ್ ಕುಮಾರ್ ರೈ, ರೈತ ಮುಖಂಡರಾದ ಸತ್ಯಪ್ಪ, ರಮಣರೆಡ್ಡಿ, ಮಂಜುನಾಥ್, ರಾಮದಾಸ್, ಬೈರಪ್ಪ, ಶ್ರೀನಿವಾಸ್ ಸಭೆಯಲ್ಲಿ ಉಪಸ್ಥಿತರಿದ್ದರು.

ಏನಿದು ಪ್ರಕರಣ?
ತಮಿಳುನಾಡಿನ ಸೇಲಂನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಾರ್ಗವಾಗಿ ತುಮಕೂರು ಬಳಿಯ ನರಸಾಪುರದ ಉಪ ಕೇಂದ್ರ ವರೆಗೆ ನಿರ್ಮಿಸುತ್ತಿರುವ ಹೈಟೆನ್ಷನ್‌ ಟವರ್‌ ವಿದ್ಯುತ್‌ ಮಾರ್ಗ ಶಿಡ್ಲಘಟ್ಟ ತಾಲೂಕಿನಲ್ಲಿ 11 ಗ್ರಾಮಗಳಲ್ಲಿ 14 ಕಿ.ಮೀ.ನಷ್ಟು ಹಾಯ್ದು ಹೋಗಿದೆ.

ಕಳ್ಯಾಪುರ, ಸುಂಡ್ರಹಳ್ಳಿ, ಚಿಕ್ಕಬಲ್ಲಾ, ದೇವಗಾನಹಳ್ಳಿ, ಹೊಸಪೇಟೆ, ಯಣ್ಣಂ ಗೂರು, ನಾಗಮಂಗಲ, ಚೊಕ್ಕಂಡಹಳ್ಳಿ, ಕಾಕಚೊಕ್ಕಂಡಹಳ್ಳಿ, ಭಕ್ತರಹಳ್ಳಿ, ಕಾಚೆಳ್ಳಿ ಹಾಯ್ದು ಹೋಗಿರುವ ಈ ಮಾರ್ಗದಲ್ಲಿ ಈಗಾಗಲೇ ಸುಂಡ್ರ ಹಳ್ಳಿಯಿಂದ ಭಕ್ತರಹಳ್ಳಿ ವರೆಗೆ 10 ಕಿ.ಮಿ ವಿದ್ಯುತ್‌ ಮಾರ್ಗ ಅಳವಡಿಸುವ ಕಾರ್ಯ ಮುಗಿದಿದೆ. ಸದ್ಯ 4 ಕಿ.ಮೀ ಮಾರ್ಗ ನಿರ್ಮಾಣ ಬಾಕಿ ಉಳಿದಿದೆ.

ಮೂರು ವರ್ಷಗಳ ಹಿಂದೆ ಈ ಕಾಮಗಾರಿ ಆರಂಭಗೊಂಡಾಗ ರೈತರಿಗೆ ಪ್ರತಿ ಎಕರೆಗೆ ₹ 2 ಲಕ್ಷದಂತೆ ಪರಿಹಾರ ನಿಗದಿ ಮಾಡಲಾಗಿತ್ತು. ಅದನ್ನು ಕಳೆದ ವರ್ಷ ಶೇ 90 ರೈತರು ಪಡೆದುಕೊಂಡಿದ್ದರು. ಜತೆಗೆ ಪರಿಹಾರ ತುಂಬಾ ಕಡಿಮೆಯಾಗಿದೆ, ಹೆಚ್ಚಿಸಬೇಕು ಎಂದು ರೈತಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಒತ್ತಾಯ ಹೇರುತ್ತ ಪ್ರತಿಭಟನೆ ಕೂಡ ನಡೆಸುತ್ತ ಬಂದಿದ್ದರು.

ಈ ಹಿಂದೆ ರೈತರು ರಾಜ್ಯ ಸರ್ಕಾರ ಮತ್ತು ಇಂಧನ ಸಚಿವರಿಗೆ ಪರಿಹಾರ ಮೊತ್ತ ಏರಿಕೆ ಮಾಡುವಂತೆ ಒತ್ತಾಯಿಸಿ ಮನವಿಗಳನ್ನು ಕೂಡ ಸಲ್ಲಿಸಿದ್ದರು. ಕಳೆದ ಜೂನ್‌ನಲ್ಲಿ ಜಿಲ್ಲಾಡಳಿತ ಭವನದ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಬ್ಬರು ರೈತರು ವಿಷ ಸೇವಿಸಲು ಮುಂದಾಗಿದ್ದರು. ಸಕಾಲಕ್ಕೆ ಪೊಲೀಸರು ರೈತರಿಂದ ವಿಷದ ಬಾಟಲಿ ಕಸಿದುಕೊಂಡು ಅನಾಹುತ ತಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT